ಚಿತ್ರರಂಗದಲ್ಲಿ ಶಿಸ್ತಿನ ನಟ ಎಂದೇ ಕರೆಸಿಕೊಂಡಿದ್ದ ರಾಜೇಶ್‌ (89 ವರ್ಷ) ಅಗಲಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗಿನ ಜಾವ ಅವರು ಇಹಲೋಕ ತ್ಯಜಿಸಿದ್ದಾರೆ.

ಶುಭ್ರ ಶ್ವೇತವಸ್ತ್ರ ಇಲ್ಲವೇ ಸೂಟ್‌, ಕಪ್ಪು ಕನ್ನಡಕ, ಒಪ್ಪವಾಗಿ ಬಾಚಿದ ತಲೆಗೂದಲ ವಿಗ್‌… ನಟ ರಾಜೇಶ್‌ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದುದೇ ಹಾಗೆ. ಕನ್ನಡ ಚಿತ್ರರಂಗದಲ್ಲಿ ಶಿಸ್ತಿನ ನಟ, ಜಂಟಲ್‌ಮ್ಯಾನ್‌ ಆಕ್ಟರ್‌ ಎಂದೇ ಕರೆಸಿಕೊಂಡಿದ್ದವರು ರಾಜೇಶ್‌. ವಿವಾದಗಳಿಂದ ದೂರವೇ ಇದ್ದ ನಟ ಸಮಯಪಾಲನೆಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದರು. ತಾವು ನಿರ್ವಹಿಸುವ ಪಾತ್ರಗಳು ಜನರಿಗೆ ಮಾದರಿ ಆಗುವಂತಿರಬೇಕು ಎಂದು ಬಲವಾಗಿ ನಂಬಿದ್ದ ಅವರು ನಟಿಸಿದ ಕೊನೆಯ ಸಿನಿಮಾದವರೆಗೂ ಇದೇ ನಿಯಮ ಪಾಲಿಸಿದರು. ತೆರೆಯ ಮೇಲಿನ ಪಾತ್ರಗಳಲ್ಲೂ ಅವರ ಶಿಸ್ತು, ಸಂಯಮ ಕಾಣಿಸುತ್ತಿತ್ತು. ಅವರ ಕನ್ನಡವೂ ಸೊಗಸು. ಇಂಥದ್ದೊಂದು ಸುಂದರ ಇಮೇಜಿನ ನಾಯಕನಟ, ಪೋಷಕ ಕಲಾವಿದ ರಾಜೇಶ್‌ ಇನ್ನಿಲ್ಲ. ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗದ ಕಪ್ಪು – ಬಿಳುಪು ಸಿನಿಮಾ ಯುಗದ ಪ್ರಮುಖ ಕೊಂಡಿಯೊಂದು ಕಳಚಿದೆ.

ಬೆಂಗಳೂರಿನ ಅವೆನ್ಯೂ ರಸ್ತೆಯ ಬದಿಯಲ್ಲಿರುವ ಅಂಚೆಪೇಟೆಯಲ್ಲಿ ವಾಸವಿದ್ದ ಮದ್ಯಮ ವರ್ಗದ ಕುಟುಂಬ ಯಲ್ಲಪ್ಪ – ಮನಿಯಮ್ಮ ದಂಪತಿಗೆ ಜನಿಸಿದರು ರಾಜೇಶ್‌. ರಾಮನವಮಿಯಂದು ಜನಿಸಿದ್ದರಿಂದ ಅಪ್ಪ – ಅಮ್ಮ ಅವರನ್ನು ಶ್ರೀರಾಮ್‌ ಎಂದು ಕರೆದಿದ್ದರು. ಅದು ಅವರ ಜನ್ಮನಾಮ. ಅಂಚೆಪೇಟೆ ಸಮೀಪವೇ ಇದ್ದ ಆರ್ಯ ವಿದ್ಯಾಶಾಲೆ, ಸೆಂಟ್ರಲ್‌ ಹೈಸ್ಕೂಲ್‌ನಲ್ಲಿ ಅವರ ಶಾಲಾ ವಿದ್ಯಾಭ್ಯಾಸ ನಡೆಯಿತು. ಅಂಚೆಪೇಟೆಯಲ್ಲಿದ್ದ ಚಿಕ್ಕಗರಡಿಯಲ್ಲಿ ಅವರ ತಂದೆ ನಿತ್ಯ ಸಾಮು ಮಾಡುತ್ತಿದ್ದರು. ರಾಜೇಶ್‌ ಕೂಡ ಗರಡಿಮನೆಯನ್ನು ಪರಿಚಯಿಸಿಕೊಂಡರು. ಅಲ್ಲಿಂದಲೇ ಅವರ ಬದುಕಿನಲ್ಲಿ ಶಿಸ್ತು ರೂಢಿಗೆ ಬಂತು.

ಸಮಾರಂಭವೊಂದರಲ್ಲಿ ಡಾ.ರಾಜಕುಮಾರ್‌ ಇತರರೊಂದಿಗೆ

ರಾಜೇಶ್‌ ಮನೆಯಿದ್ದ ವಠಾರದಲ್ಲಿ ಬಾಡಿಗೆಗಿದ್ದ ಮನೆಯ ಹುಡುಗನೊಬ್ಬ ನಾಟಕ ಕಂಪನಿಯೊಂದರಲ್ಲಿ ಪಾತ್ರ ಮಾಡುತ್ತಿದ್ದ. ಈ ಹುಡುಗನ ಮೂಲಕ ನಾಟಕಗಳತ್ತ ಆಕರ್ಷಿತರಾದರು ರಾಜೇಶ್‌. ಮನೆಪಾಠಕ್ಕೆಂದು ಮನೆಯಲ್ಲಿ ಸುಳ್ಳು ಹೇಳಿ ಶ್ರೀರಾಮ ನಾಟಕ ಸಂಸ್ಥೆಗೆ ಹೋಗುತ್ತಿದ್ದರು. ರಾಜೇಶ್‌ರ ಆಸಕ್ತಿ ಕಂಡು ಕಂಪನಿಯವರು ಹುಡುಗನಿಗೆ ಶ್ರೀರಾಮನ ಪಾತ್ರ ಕೊಟ್ಟರು. ಮಗ ಚೆನ್ನಾಗಿ ಓದಿ ಸರ್ಕಾರಿ ನೌಕರನಾಗಲಿ ಎಂದು ಅಪೇಕ್ಷೆ ಪಟ್ಟಿದ್ದ ಅಪ್ಪ – ಅಮ್ಮನಿಗೆ ಪುತ್ರನ ನಾಟಕದ ಗೀಳು ಇಷ್ಟವಿರಲಿಲ್ಲ. ಪೋಷಕರ ವಿರೋಧದ ನಡೆವೆಯೇ ಓದಿನ ಜೊತೆಗೆ ನಾಟಕದ ನಂಟನ್ನೂ ಚಾಲ್ತಿಯಲ್ಲಿಟ್ಟರು ರಾಜೇಶ್‌.

ವ್ಯಾಸಾಂಗ ಮುಗಿಸಿ ಲೋಕೋಪಯೋಗಿ ಇಲಾಖೆಯಲ್ಲಿ ಹಂಗಾಮಿ ಬೆರಳಚ್ಚುಗಾರನಾಗಿ ಕೆಲಸಕ್ಕೆ ಸೇರಿದರು. ಮುಂದೆ ಆಹಾರ ಇಲಾಖೆಯ ಬೆಂಗಳೂರು ಕಚೇರಿಯಲ್ಲಿ ಕೆಲಸ. ಹಗಲಿನಲ್ಲಿ ಸರ್ಕಾರಿ ಕೆಲಸ, ಸಂಜೆಯಿಂದ ನಡುರಾತ್ರಿವರೆಗೆ ನಾಟಕ. ಮುಂದೆ ವಿಮಾ ಇಲಾಖೆಯ ಕಬ್ಬನ್‌ ಪಾರ್ಕ್‌ ಕಚೇರಿಯಲ್ಲಿ ಅವರಿಗೆ ಕೆಲಸವಾಯ್ತು. ಅಲ್ಲಿಂದ ಮುಂದೆ ಅವರು ರಂಗಭೂಮಿಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ‘ವಿದ್ಯಾಸಾಗರ್‌’ ಹೆಸರಿನಲ್ಲಿ ನಾಟಕಗಳನ್ನು ಬರೆದರು. ಶ್ರೀಶಕ್ತಿ ಮಂಡಳಿ ಸ್ಥಾಪಿಸಿ ತಾವೇ ರಚಿಸಿದ ನಿರುದ್ಯೋಗಿಯ ಬಾಳು, ಅಣ್ಣ-ತಮ್ಮಂದಿರು, ಆತ್ಮವಂಚನೆ, ಸ್ವಪ್ನಜೀವಿ, ಗ್ರ್ಯಾಜುಯೇಟ್‌ ಗರ್ಲ್ಸ್‌, ನಿರಪರಾಧಿ, ರಕ್ತರಾತ್ರಿ, ದೇವಮಾನವ, ಆತ್ಮಸಾಕ್ಷಿ, ಕರಾಮತ್‌, ವಿಧಿವಿಲಾಸ.. ಮುಂತಾದ ನಾಟಕಗಳನ್ನು ಆಡಿಸಿದರು.

ಹೀಗೆ, ನಾಟಕ ಪ್ರದರ್ಶನವೊಂದು ನಡೆಯುತ್ತಿತ್ತು. ಚಿತ್ರಸಾಹಿತಿ ಹುಣಸೂರು ಕೃಷ್ಣಮೂರ್ತಿ ಕಣ್ಣಿಗೆ ಬಿದ್ದ ರಾಜೇಶ್‌ ‘ವೀರಸಂಕಲ್ಪ’ ಚಿತ್ರಕ್ಕೆ ಆಯ್ಕೆಯಾದರು. ನಂತರ ರಾಮಾಂಜನೇಯ ಯುದ್ಧ, ಗಂಗೆಗೌರಿ, ಸತಿಸುಕನ್ಯ ಚಿತ್ರಗಳಲ್ಲಿ ಅವಕಾಶಗಳು ಸಿಕ್ಕಿದವು. ಅಲ್ಲಿಯವರೆಗೆ ವಿದ್ಯಾಸಾಗರ್‌ ಆಗಿದ್ದವರು ‘ನಮ್ಮ ಊರು’ (1968) ಚಿತ್ರದಲ್ಲಿ ‘ರಾಜೇಶ್‌’ ಆದರು. ಸಿ.ವಿ.ಶಿವಶಂಕರ್‌ ನಿರ್ದೇಶನದ ‘ನಮ್ಮ ಊರು’ ಚಿತ್ರದ ಮೂಲಕ ನಾಯಕನಟರಾದರು ರಾಜೇಶ್‌. ಸುಂದರ ಹಾಡುಗಳಿದ್ದ ಈ ಸಿನಿಮಾ ದಾಖಲೆಯ ಪ್ರದರ್ಶನ ಕಂಡಿತು. ಮುಂದೆ ಸುವರ್ಣಭೂಮಿ, ಅರಿಶಿನ ಕುಂಕುಮ, ಮರೆಯದ ದೀಪಾವಳಿ, ಭಲೆ ಭಾಸ್ಕರ, ದೇವರ ದುಡ್ಡು, ಎರಡು ಮುಖ, ಸೊಸೆ ತಂದ ಸೌಭಾಗ್ಯ, ಬೆಳುವಲದ ಮಡಿಲಲ್ಲಿ, ಬಿಡುಗಡೆ, ಕಪ್ಪು ಬಿಳುಪು, ಪ್ರತಿಧ್ವನಿ, ಕಲಿಯುಗ, ಕಾವೇರಿ ಕರ್ಣ.. ಮುಂತಾದ ಚಿತ್ರಗಳ ಮೂಲಕ ರಾಜೇಶ್‌ ಜನರ ಮನಸ್ಸಿಗೆ ಹತ್ತಿರವಾಗಿ ಜನಪ್ರಿಯರಾದರು.

ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ‘ಕಪ್ಪು ಬಿಳುಪು’ ಚಿತ್ರದಲ್ಲಿ ನಾಯಕನಟಿ ಕಲ್ಪನಾ ಜೊತೆ (ಫೋಟೊ: ಪ್ರಗತಿ ಅಶ್ವತ್ಥ ನಾರಾಯಣ)

ಕನ್ನಡ ಚಿತ್ರರಂಗದ ಕುಮಾರತ್ರಯರಾದ ರಾಜಕುಮಾರ್‌, ಕಲ್ಯಾಣ್‌ ಕುಮಾರ್‌ ಮತ್ತು ಉದಯಕುಮಾರ್‌ ಸಮಕಾಲೀನರು ರಾಜೇಶ್‌. ಈ ಮೂವರಿಗಿಂತ ತಡವಾಗಿ ಅವರ ಬೆಳ್ಳಿತೆರೆ ಅಭಿಯಾನ ಶುರುವಾಗಿದ್ದು. ಪುಟ್ಟ ಪಾತ್ರಗಳ ಮೂಲಕ ಸಿನಿಮಾಗೆ ಪರಿಚಯವಾದ ಅವರು ನಾಯಕನಟರಾಗಿ ಆರಂಭದ ದಿನಗಳಲ್ಲಿ ಯಶಸ್ಸು ಕಂಡರು. ಕ್ರಮೇಣ ಎರಡನೇ ನಾಯಕ, ಪೋಷಕ ಕಲಾವಿದನ ಪಾತ್ರಗಳತ್ತ ಹೊರಳಿದ ರಾಜೇಶ್‌ ಒದಗಿಬಂದ ಅವಕಾಶಗಳನ್ನು ಶ್ರದ್ಧೆಯಿಂದ ನಿಭಾಯಿಸಿದರು. ರಂಗಭೂಮಿ ಅನುಭವಿಯಾದ್ದರಿಂದ ಅವರ ಸಿನಿಮಾ ನಟನಾ ಬದುಕು ಸರಾಗವಾಗಿ ಸಾಗಿತು.

ಎಂಬತ್ತರ ದಶಕದಲ್ಲಿ ಪೋಷಕ ಕಲಾವಿದನಾಗಿ ಹೆಚ್ಚು ಸಕ್ರಿಯರಾಗಿದ್ದ ರಾಜೇಶ್‌ ಕ್ರಮೇಣ ನಟನೆ ಕಡಿಮೆ ಮಾಡಿದ್ದರು. ಸಿನಿಮಾ ಕಲೆ, ಪಾತ್ರಗಳ ಬಗ್ಗೆ ತಮ್ಮದೇ ಆದ ನಿಲುವುಗಳನ್ನು ಹೊಂದಿದ್ದ ಅವರಿಗೆ ತೊಂಬತ್ತರ ದಶಕದ ನಂತರದ ಸಿನಿಮಾ ಕತೆ, ಮೇಕಿಂಗ್‌ ಬಗ್ಗೆ ಅಸಮಾಧಾನವಿತ್ತು. ತಮ್ಮ ನೀತಿ – ನಿಲುವುಗಳಿಗೆ ಸರಿಹೊಂದುವಂತಹ ಪಾತ್ರಗಳನ್ನಷ್ಟೇ ಒಪ್ಪಿಕೊಂಡು ನಟಿಸಿದರು. ಸಿನಿಮಾ ಕ್ಷೇತ್ರಕ್ಕೆ ಸಂದ ಅವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ವಿಶ್ವವಿದ್ಯಾಲಯ ರಾಜೇಶ್‌ ಅವರಿಗೆ ಗೌರವ ಡಾಕ್ಟರೇಟ್‌ ನೀಡಿ ಪುರಸ್ಕರಿಸಿದೆ. ಅಭಿಮಾನಿಗಳು ಅವರನ್ನು ‘ಕಲಾತಪಸ್ವಿ’ ಎಂದು ಕರೆದು ಹತ್ತಾರು ಪುರಸ್ಕಾರಗಳನ್ನು ನೀಡಿದರು.

“50ರ ದಶಕದಿಂದ ಆರಂಭವಾಗಿ ಸುಮಾರು ನಾಲ್ಕು ದಶಕಗಳ ಸಿನಿಮಾಯುಗ ನನಗೆ ಪ್ರೀತಿ ಪಾತ್ರವಾಗಿತ್ತು. ಒಳ್ಳೆಯ ನೀತಿ, ಆದರ್ಶ, ಸಂಸ್ಕೃತಿ, ಸಭ್ಯತೆ, ಮಾನವೀತಯ ಗುಣಗಳುಳ್ಳ ಮೌಲಿಕ ಸಿನಿಮಾಗಳು ತೆರೆಗೆ ಬಂದವು. ಸಮಾಜಕ್ಕೆ ಒಳ್ಳೆಯ ಶಿಕ್ಷಣ ಕೊಟ್ಟು, ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತಿದ್ದವು. ಒಂದು ರೀತಿ ಈ ಸಿನಿಮಾಗಳು ಪ್ರೇಕ್ಷಕರಿಗೆ ಪಾಠಶಾಲೆಯಾಗಿದ್ದವು” ಎಂದು ಸಂದರ್ಶನವೊಂದಲ್ಲಿ ಹೇಳಿಕೊಂಡಿದ್ದರು ರಾಜೇಶ್‌. ಈ ಮಾತುಗಳೇ ಅವರ ಬದುಕಿನ ರೀತಿಯೂ ಆಗಿತ್ತು. ಅವರ ಅಗಲಿಕೆಯಿಂದ ಕನ್ನಡ ಸಿನಿಮಾದ ಮೂರು ತಲೆಮಾರುಗಳನ್ನು ಬೆಸೆದಿದ್ದ ಹಿರಿಯರೊಬ್ಬರ ಅನುಪಸ್ಥಿತಿ ಕಾಡತೊಡಗಿದೆ.

ಸಿನಿಮಾವೊಂದರ ಶೂಟಿಂಗ್‌ ಸಂದರ್ಭದಲ್ಲಿ ನಟ – ನಿರ್ಮಾಪಕ ವಾದಿರಾಜ್‌, ರಾಜೇಶ್‌ (ಫೋಟೊ: ಭವಾನಿ ಲಕ್ಷ್ಮೀನಾರಾಯಣ)
Previous articleOTT ಗೆ ರವಿಚಂದ್ರನ್‌ ‘ದೃಶ್ಯ 2’; ZEE5ನಲ್ಲಿ ಸಿನಿಮಾ
Next articleಪ್ರತಿಮನಸ್ಸಿಗೂ ‌ಇಲ್ಲಿ ಅದರದೇ ಆಳ!

LEAVE A REPLY

Connect with

Please enter your comment!
Please enter your name here