ಕ್ಷೀರಸಾಗರ ಅವರ ‘ಜೇನು: ಆಕಾಶದ ಅರಮನೆ’ ಕಾದಂಬರಿಯ ಎಳೆಯೊಂದನ್ನು ಆಧರಿಸಿ ತಯಾರಾಗಿರುವ ‘ಕನ್ನೇರಿ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಕಾದಂಬರಿಯ ವಸ್ತು ಜೊತೆ ನೈಜ ಘಟನಾವಗಳಗೂ ಚಿತ್ರಕ್ಕೆ ಸ್ಫೂರ್ತಿಯಾಗಿವೆ. ಮಾರ್ಚ್ 4ರಂದು ಸಿನಿಮಾ ತೆರೆಕಾಣಲಿದೆ.
‘ಮೂಕಹಕ್ಕಿ’ ಸಿನಿಮಾ ಖ್ಯಾತಿಯ ನಿರ್ದೇಶಕ ನೀನಾಸಂ ಮಂಜು ನಿರ್ದೇಶನದ ‘ಕನ್ನೇರಿ’ ಸಿನಿಮಾ ಇತ್ತೀಚೆಗೆ ಹಾಡುಗಳ ಮೂಲಕ ಸುದ್ದಿಯಾಗಿತ್ತು. ಈಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ನಟಿ ತಾರಾ ಅವರು ಟ್ರೈಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ. ಟ್ರೈಲರ್ನಲ್ಲಿ ಹೆಣ್ಣುಮಗಳೊಬ್ಬಳ ಮೇಲೆ ನಡೆಯುವ ದೌರ್ಜನ್ಯ, ಸಂತ್ರಸ್ತರ ನೋವು, ಅಧಿಕಾರದ ದರ್ಪದ ದೃಶ್ಯಗಳಿವೆ. ಇದು ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರ ಎಂದೂ ನಿರ್ದೇಶಕರು ಹೇಳಿಕೊಳ್ಳುತ್ತಾರೆ. ಕೊಡಗಿನಲ್ಲಿ ಭಾರೀ ಸದ್ದು ಮಾಡಿದ್ದ ದಿಡ್ಡಳ್ಳಿ ಸಂತ್ರಸ್ತರ ಹೋರಾಟ ಚಿತ್ರದ ದೃಶ್ಯಗಳ ಹೆಣಿಗೆಗೆ ಪ್ರೇರಣೆ. ಕೋಟಿಗಾನಹಳ್ಳಿ ರಾಮಯ್ಯ ಕತೆ ರಚಿಸಿದ್ದು, ನೀನಾಸಂ ಮಂಜು ಅವರು ಚಿತ್ರಕಥೆ ರಚಿಸಿ ನಿರ್ದೇಶಿಸಿದ್ದಾರೆ.
“ಪ್ರಕೃತಿಯ ಮಡಿಲಲ್ಲಿ ಬದುಕು ಕಟ್ಟಿಕೊಂಡಿದ್ದ ಬುಡಕಟ್ಟು ಜನಾಂಗವನ್ನು ಒಕ್ಕಲೆಬ್ಬಿಸಿದ ನಂತರ ಏನಾಯಿತು? ಅಲ್ಲಿನ ಹೆಣ್ಣು ಮಕ್ಕಳು ಹೇಗೆ ದೌರ್ಜನ್ಯಕ್ಕೆ ಒಳಗಾಗುತ್ತಾರೆ, ಅವರ ಬದುಕು ಯಾವೆಲ್ಲ ತಿರುವು ಪಡೆಯುತ್ತದೆ” ಎನ್ನುವ ಸೂಕ್ಷ್ಮ ವಿಚಾರಗಳನ್ನು ಚಿತ್ರದಲ್ಲಿ ಪ್ರಸ್ತಾಪಿಸಿದ್ದೇವೆ ಎನ್ನುತ್ತಾರೆ ನಿರ್ದೇಶಕರು. ಅರ್ಚನಾ ಮಧುಸೂಧನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಅನಿತಾ ಭಟ್, ಅರುಣ್ ಸಾಗರ್, ಎಂ.ಕೆ.ಮಠ, ಕರಿಸುಬ್ಬು ಮತ್ತಿತರರು ಅಭಿನಯಿಸಿದ್ದಾರೆ. ಬುಡ್ಡಿ ದೀಪ ಸಿನಿಮಾ ಹೌಸ್ ಬ್ಯಾನರ್ನಡಿ ಪಿ.ಪಿ ಹೆಬ್ಬಾರ್ ಸಿನಿಮಾ ನಿರ್ಮಿಸಿದ್ದು, ಗಣೇಶ್ ಹೆಗ್ಡೆ ಕ್ಯಾಮೆರಾ ವರ್ಕ್, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಸುಜಿತ್ ನಾಯಕ್ ಸಂಕಲನ ಚಿತ್ರಕ್ಕಿದೆ. ಮಾರ್ಚ್ 4ರಂದು ಸಿನಿಮಾ ತೆರೆಕಾಣಲಿದೆ.