ಮಲಯಾಳಂ ಚಿತ್ರರಂಗದ ಖ್ಯಾತ ನಟಿ KPAC ಲಲಿತಾ (74 ವರ್ಷ) ನಿನ್ನೆ ರಾತ್ರಿ ಕೊಚ್ಚಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ಧಾರೆ. ಶ್ರೇಷ್ಠ ನಟನೆಗಾಗಿ ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಲಲಿತಾ ವೃತ್ತಿ ಬದುಕಿನಲ್ಲಿ ಐನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲಯಾಳಂ ನಟಿ KPAC ಲಲಿತಾ ಅನಾರೋಗ್ಯಕ್ಕೀಡಾಗಿ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊಚ್ಚಿ ಸಮೀಪದ ತ್ರಿಪುನಿಥುರದಲ್ಲಿನ ಅವರ ಪುತ್ರ, ನಟ ಸಿದ್ದಾರ್ಥ್‌ ಮನೆಗೆ ಅವರನ್ನು ಕರೆತರಲಾಗಿತ್ತು. ಪುತ್ರನ ಮನೆಯಲ್ಲಿ ನಿನ್ನೆ ರಾತ್ರಿ ಅವರು ಕೊನೆಯುಸಿರೆಳೆದರು. ಐದು ದಶಕಗಳ ವೃತ್ತಿ ಬದುಕಿನಲ್ಲಿ ಅವರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಅಮರಂ’ (1990) ಮತ್ತು ‘ಶಾಂತಂ’ (2000) ಚಿತ್ರಗಳಲ್ಲಿನ ಉತ್ತಮ ನಟನೆಗಾಗಿ ಎರಡು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ನಟನೆಯಾಗಿ ಕೇರಳ ಸರ್ಕಾರದಿಂದ ನಾಲ್ಕು ಬಾರಿ (ನೀಲೋಪನಂ, ಆರವಂ, ಅಮರಂ, ಸಂದೇಶಂ) ಪ್ರಶಸ್ತಿ ಪಡೆದಿದ್ದಾರೆ.

ಚಿಕ್ಕಂದಿನಲ್ಲೇ ನೃತ್ಯ ಕಲಿತ ಅವರು ರಂಗಭೂಮಿಯಲ್ಲಿ ನಟನೆ ಆರಂಭಿಸಿದರು. ನಾಟಕವೊಂದನ್ನು ಆಧರಿಸಿ ತಯಾರಾದ ‘ಕೂಟುಕುಟುಂಬಂ’ (1969) ಚಿತ್ರದೊಂದಿಗೆ ಅವರ ಬೆಳ್ಳಿತೆರೆ ಅಭಿಯಾನ ಶುರುವಾಯ್ತು. 1978ರಲ್ಲಿ ಲಲಿತಾ ಅವರು ಖ್ಯಾತ ನಿರ್ದೇಶಕ ಭರತನ್‌ರನ್ನು ವರಿಸಿದರು. ಪ್ರಸ್ತುತ ಅವರು ಕೇರಳ ಸಂಗೀತ ನಾಟಕ ಅಕಾಡೆಮಿ ಅಧ್ಯಕ್ಷೆಯಾಗಿದ್ದರು. ಮಣಿಚಿತ್ರಥಾಝು, ಸನ್ಮಾನಸ್ಸುಲ್ಲವರ್ಕು ಸಮಾಧಾನಂ, ಪೊನ್‌ ಮುತ್ಯಿದುನ್ನ ತರವು, ಕಾನಲ್‌ ಕಾಟ್ಟು, ಮದಂಪಿ, ಕೊಟ್ಟಾಯಂ ಕುಂಜಾಚನ್‌, ಕನ್ಮದಂ, ದಶರಥಂ, ವೆಂಕಾಲಂ, ಸ್ಪಟಿಕಂ, ಅನಿಯತಿಪ್ರವ್‌ ಮಲಯಾಳಂ ಸಿನಿಮಾಗಳು ಮತ್ತು ಅಲೈಪಾಯುದೆ, ಕಾಧಲಕ್ಕು ಮರಿಯಾದೈ ತಮಿಳು ಚಿತ್ರಗಳಲ್ಲಿನ ಅವರ ಅಭಿನಯವನ್ನು ವಿಮರ್ಶಕರು ಬಹುವಾಗಿ ಮೆಚ್ಚಿದ್ದರು.

ಅಡೂರ್‌ ಗೋಪಾಲಕೃಷ್ಣ ನಿರ್ದೇಶನದ ‘ಮಥಿಲುಕಾಲ್‌’ ಪಾತ್ರಕ್ಕೆ ಅದರದ್ದೇ ಆದ ತೂಕವಿದೆ. ನಟ ಇನ್ನೋಸೆಂಟ್‌ ಜೋಡಿಯಾಗಿ ಲಲಿತಾರನ್ನು ಪ್ರೇಕ್ಷಕರು ಹೆಚ್ಚು ಇಷ್ಟಪಟ್ಟಿದ್ದರು. ಲಲಿತಾರ ನಿಧನಕ್ಕೆ ದಕ್ಷಿಣ ಭಾರತ ಚಿತ್ರರಂಗದ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರು ಸಿನಿಮಾಗಳ ಜೊತೆ ಕಿರುತೆರೆ ಸರಣಿಗಳಲ್ಲಿ ಅಭಿನಯಿಸುತ್ತಿದ್ದರು.

LEAVE A REPLY

Connect with

Please enter your comment!
Please enter your name here