ಹೊಂಬಾಳೆ ಫಿಲಂಸ್‌ ಬ್ಯಾನರ್‌ನಡಿ ರಿಷಭ್‌ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ – ಅಧ್ಯಾಯ 1’ ಫಸ್ಟ್‌ಲುಕ್‌ ನವೆಂಬರ್‌ 27ರಂದು ಅನಾವರಣಗೊಳ್ಳಲಿದೆ. ‘ಕಾಂತಾರ- ಒಂದು ದಂತಕಥೆ’ ಸಿನಿಮಾ ಸೆಪ್ಟೆಂಬರ್‌ 30, 2022ರಲ್ಲಿ ತೆರೆಕಂಡು ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ರಿಷಭ್‌ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ ‘ಕಾಂತಾರ’ ಸಿನಿಮಾ ಬಿಡುಗಡೆಯಾಗಿ ವರ್ಷ ಕಳೆದಿದೆ. ಇದರ ಪ್ರೀಕ್ವೆಲ್‌ ಬರಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು. ಇದಕ್ಕೆ ಸಾಕಷ್ಟು ಪ್ರೀ ಪ್ರೊಡಕ್ಷನ್‌ ಕೂಡ ನಡೆದಿತ್ತು. ಇದೀಗ ‘ಕಾಂತಾರ – ಅಧ್ಯಾಯ 1’ ಫಸ್ಟ್‌ ಲುಕ್‌ ರಿಲೀಸ್‌ಗೆ ದಿನಾಂಕ ನಿಗಧಿಯಾಗಿದೆ. ನವೆಂಬರ್‌ 27ರ ಮಧ್ಯಾಹ್ನ 12:25ಕ್ಕೆ ಫಸ್ಟ್‌ಲುಕ್‌ ಅನಾವರಣಗೊಳ್ಳಲಿದೆ. ಚಿತ್ರದ ನಿರ್ಮಾಣ ಸಂಸ್ಥೆ Hombale Films ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಪ್ರತಿ ಕ್ಷಣವೂ ದೈವಿಕ ಸ್ಪರ್ಶವನ್ನು ಅನುಭವಿಸುವ ಜತೆ ಇತಿಹಾಸದ ನಿಗೂಢ ಸತ್ಯವನ್ನು ಅನ್ವೇಷಿಸಿ. ಹಿಂದೆಂದಿಗೂ ನೋಡದ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿ’ ಎಂದು ಕ್ಯಾಪ್ಶನ್‌ ನೀಡಿದೆ.

ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಈ ಕುರಿತು ಟ್ವೀಟ್‌ ಮಾಡಿದ್ದು, ‘ಇದು ಬರಿ ಬೆಳಕಲ್ಲ, ದರ್ಶನ, ಫಸ್ಟ್‌ ಲುಕ್‌ ಪೋಸ್ಟರ್‌ ನವೆಂಬರ್‌ 27ರ 12:25pmಕ್ಕೆ ಅನಾವರಣಗೊಳ್ಳಲಿದೆ’ ಎಂದು ಬರೆದಿದ್ದಾರೆ. ಚಿತ್ರವನ್ನು Hombale Films ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಬಿ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ, ಅರವಿಂದ್‌ ಎಸ್‌ ಕಶ್ಯಪ್‌ ಛಾಯಾಗ್ರಹಣ, ಪ್ರತೀಕ್‌ ಶೆಟ್ಟಿ ಮತ್ತು ಕೆ ಎಂ ಪ್ರಕಾಶ್ ಸಂಕಲನವಿದೆ. ‘ಕಾಂತಾರ -ಅಧ್ಯಾಯ 1’ ಸಿನಿಮಾ ಮೂಲ ಕನ್ನಡ ಸೇರಿದಂತೆ ಹಿಂದಿ, ತಮಿಳು, ತೆಲುಗು, ಮಲಯಾಳಂ, ಬೆಂಗಾಲಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ತೆರೆಕಾಣಲಿದೆ. ‘ಕಾಂತಾರ- ಒಂದು ದಂತಕಥೆ’ ಸಿನಿಮಾ ಸೆಪ್ಟೆಂಬರ್‌ 30, 2022ರಲ್ಲಿ ತೆರೆಕಂಡು ಪ್ರೇಕ್ಷಕರಿಂದ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತ್ತು.

LEAVE A REPLY

Connect with

Please enter your comment!
Please enter your name here