ದೊಡ್ಡ ವ್ಯಕ್ತಿಯೊಬ್ಬನ ಕತೆಯನ್ನು ತೆರೆಯ ಮೇಲೆ ತರಲು ಹೆಚ್ಚಾಗಿ ಬಯೋಪಿಕ್ ಮಾಡುತ್ತಾರೆ. ಆದರೆ ಇಲ್ಲೊಂದು ಹೇಳಲೇಬೇಕಾದ ಕತೆಯಿದೆ. ನೋಡಿ ಸ್ಫೂರ್ತಿ ಪಡೆಯುವ ಅಂಶವಿದೆ. ಇವೆಲ್ಲದರ ಮಧ್ಯೆ ಸಿನಿಮಾದ ತಯಾರಿಯಲ್ಲೊಂದು ಅಚ್ಚುಕಟ್ಟುತನವಿದೆ. ‘ಕೌನ್ ಪ್ರವೀಣ್ ತಾಂಬೆ?’ ಸಿನಿಮಾ DisneyPlus Hotstarನಲ್ಲಿ ಸ್ಟ್ರೀಮ್ ಆಗುತ್ತಿದೆ.
ತನ್ನದೇ ಜೀವನಚಿತ್ರದ ವಿಶೇಷ ಪ್ರದರ್ಶನದಲ್ಲಿ ಪ್ರವೀಣ್ ತಾಂಬೆ ಭಾವುಕರಾದರು ಎಂದಿತ್ತು ಆ ಸುದ್ದಿ. ಸಿನಿಮಾ ತಯಾರಕರು ಪ್ರತಿ ಬಾರಿ ಪ್ರಚಾರಕ್ಕೆ ಇಂಥದ್ದೇ ತಂತ್ರ ಮಾಡುತ್ತಾರೆ ಅಂದುಕೊಂಡೆ. ಆದರೆ ‘ಕೌನ್ ಪ್ರವೀಣ್ ತಾಂಬೆ’ ಸಿನಿಮಾದ ಕೊನೆಗೆ ನನ್ನ ಕಣ್ಣೂ ತೇವವಾದಾಗ ಆ ಸುದ್ದಿ ಪ್ರಚಾರ ತಂತ್ರವಲ್ಲ ಎಂಬುದು ಸ್ಪಷ್ಟವಾಯಿತು. ವೈಯಕ್ತಿಕವಾಗಿ ನನಗೆ ’83’ ಭಾರಿ ಹಿಡಿಸಿದ ಸಿನಿಮಾವಲ್ಲ. ಗ್ರೀನ್ ಸ್ಕ್ರೀನ್ ಬಳಸಿ ಚಿತ್ರಿಸಿ, ನಂತರ ವಿಎಫ್ಎಕ್ಸ್‌ನಲ್ಲಿ ಹಿನ್ನೆಲೆ ಬದಲಿಸಿದ ದೃಶ್ಯವೊಂದು ಆರಂಭದಲ್ಲಿ ಬಂದಾಗಲೇ ಅದರ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಲಿಲ್ಲ. ಅದುವರೆಗೂ ಅನೇಕ ವೇದಿಕೆಗಳಲ್ಲಿ ಕಪಿಲ್ ದೇವ್ ಹಾಗೂ ತಂಡ ಹೇಳಿದ್ದ ವಿಚಾರಗಳನ್ನು ತುರುಕುವ ಉದ್ದೇಶದಿಂದಲೇ ಹೆಣೆದ ಚಿತ್ರಕಥೆ ಎಂದು ಕೊನೆಗೆ ಅನಿಸಿತ್ತು. ಇದೇ ಭಾವದಲ್ಲಿ ಮತ್ತೊಂದು ಕ್ರಿಕೆಟ್ ಸಿನಿಮಾ ನೋಡಲು ಕೂತವನ ಭಾವ ಕಲಕಿದ್ದು ‘ಕೌನ್ ಪ್ರವೀಣ್ ತಾಂಬೆ?’
ದೊಡ್ಡ ವ್ಯಕ್ತಿಯೊಬ್ಬನ ಕತೆಯನ್ನು ತೆರೆಯ ಮೇಲೆ ತರಲು ಹೆಚ್ಚಾಗಿ ಬಯೋಪಿಕ್ ಮಾಡುತ್ತಾರೆ. ಯಾವುದೇ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಬಿಡಿ, ರಾಜ್ಯಮಟ್ಟದ ತಂಡಕ್ಕೂ ಆಡದೆ 41ರ ವಯಸ್ಸಿನಲ್ಲಿ ನೇರವಾಗಿ ಐಪಿಎಲ್‌ಗೆ ಕಾಲಿಟ್ಟ ಪ್ರವೀಣ್ ತಾಂಬೆ ದೊಡ್ಡ ವ್ಯಕ್ತಿಯೇ, ನಿಜ. ಆದರೆ ಆ 41 ವರ್ಷದವರೆಗಿನ ಜೀವನಗಾಥೆ ಮತ್ತೂ ದೊಡ್ಡದಿದೆ. ಅಲ್ಲೊಂದು ಹೇಳಲೇಬೇಕಾದ ಕತೆಯಿದೆ. ನೋಡಿ ಸ್ಫೂರ್ತಿ ಪಡೆಯುವ ಅಂಶವಿದೆ. ಇವೆಲ್ಲದರ ಮಧ್ಯೆ ಸಿನಿಮಾದ ತಯಾರಿಯಲ್ಲೊಂದು ಅಚ್ಚುಕಟ್ಟುತನವಿದೆ.
ಪ್ರವೀಣ್ ತಾಂಬೆ ಮುಂಬೈನ ಮಧ್ಯಮ ವರ್ಗದ ವ್ಯಕ್ತಿ. ಒಂದಲ್ಲಾ ಒಂದು ದಿನ ರಣಜಿ ಪಂದ್ಯವಾಡಬೇಕು, ಅದನ್ನು ತನ್ನ ಅಪ್ಪ ಅಮ್ಮ ವಿಐಪಿ ಸೀಟಲ್ಲಿ ಕೂತು ನೋಡಬೇಕು ಎಂದು ಬಾಲ್ಯದಲ್ಲೇ ಆಸೆ ಪಟ್ಟವ. ಬಾಲ್ಯದಲ್ಲಿ ಹಾಗೆ ಆಸೆ ಪಟ್ಟ ಲಕ್ಷಾಂತರ ಮಂದಿ ಇದ್ದಾರೆ. ಆದರೆ ಜೀವನ ಜಗ್ಗಾಟಗಳ ನಡುವೆ ನಾಲ್ಕು ದಶಕ ಒಂದೇ ಆಸೆಯ ಏಣಿ ಹಿಡಿದು ಸಾಗುವುದು ಬಹುಶಃ ಪ್ರವೀಣ್ ತಾಂಬೆಯಂಥ ಕೆಲವೇ ಕೆಲವರಿಗೆ ಸಾಧ್ಯ. ಹುಚ್ಚುಪ್ರೇಮದ ಕ್ರಿಕೆಟ್ ಆಟಗಾರ ತಾಂಬೆಗೆ ಕ್ರಿಕೆಟ್ ಹೊರತಾಗಿ ಬೇರೇನೂ ಕಾಣುವುದಿಲ್ಲ. ಕೆಲಸ ಹುಡುಕುವಾಗಲೂ ಆತ ಹುಡುಕುವುದು ವೃತ್ತಿಯ ಜತೆಗೆ ಕ್ರಿಕೆಟ್ ಆಡಲು ಅವಕಾಶ ಕೊಡುವ ಕಂಪೆನಿಯನ್ನೇ.
ಓರಿಯೆಂಟ್ ಶಿಪ್ಪಿಂಗ್ ಕಂಪೆನಿಯಲ್ಲಿ ಕೆಲಸ ಸಿಕ್ಕಿ ಆ ಕೆಲಸ ಹೋಗುವ ವೇಳೆಗೆ ಪ್ರವೀಣ್ ತಾಂಬೆಗೆ ಮದುವೆಯಾಗಿ ಮಕ್ಕಳಾಗಿರುತ್ತದೆ. ನಂತರ ವಜ್ರೋದ್ಯಮದಲ್ಲಿ ಮೋಸಹೋಗಿ ಅಲ್ಲಿಗೆ ವಿದಾಯ ಹೇಳುವ ಪ್ರವೀಣ್ ಚಿಂತೆ ಕೆಲಸದ್ದಲ್ಲ, ರಣಜಿಯಲ್ಲಿ ಆಯ್ಕೆಯಾಗುವುದು. ಅದಕ್ಕಾಗಿ ಹಗಲಿಡೀ ಅಭ್ಯಾಸ ಮಾಡಬೇಕು ಎಂದು ಸೇರಿಕೊಳ್ಳುವುದು ಡ್ಯಾನ್ಸ್ ಬಾರಿನಲ್ಲಿ ಸಪ್ಲೈಯರ್ ವೃತ್ತಿಗೆ. ಹೀಗೆ ರಣಜಿ ತಂಡಕ್ಕೆ ಆಯ್ಕೆಯಾಗಲು ಏನು ಬೇಕಾದರೂ ಮಾಡಲು ಸಿದ್ಧವಿದ್ದ, ಅಥವಾ ಏನೇ ಮಾಡಿಯಾದರೂ ಜೀವನ ಸಾಗಿಸಿ ಒಂದಲ್ಲಾ ಒಂದು ದಿನ ರಣಜಿಯಲ್ಲೊಮ್ಮೆ ಆಡಬೇಕು ಎಂಬ ಆಸೆ ಇಟ್ಟುಕೊಂಡಿದ್ದ ಪ್ರವೀಣ್ ತಾಂಬೆ ಕೊನೆಗೂ ರಣಜಿಗೆ ಆಯ್ಕೆಯಾಗುವುದು ಐಪಿಎಲ್‌ನಲ್ಲಿ ಆಡಿದ ನಂತರವೇ.
ಹೀಗೊಂದು ರೋಚಕ ಕತೆಯಿದ್ದ ಮಾತ್ರಕ್ಕೇ ಸಿನಿಮಾ ಇಷ್ಟವಾಗಬೇಕು ಎಂದೇನಿಲ್ಲ. ಕೇಳುವಾಗ ರೋಚಕವಾಗಿರುವ ಎಷ್ಟೋ ಕತೆಗಳು ಸಿನಿಮಾ ಆಗುವಲ್ಲಿ ಎಡವಿದ ಉದಾಹರಣೆ ಸಾಕಷ್ಟಿದೆ. ಆದರೆ ‘ಕೌನ್ ಪ್ರವೀಣ್ ತಾಂಬೆ?’ಗೆ ಆರಂಭದ ಕಾಲು ಗಂಟೆಯಲ್ಲೇ ನಿಮ್ಮನ್ನು ಸಿನಿಮಾದ ಒಳಕ್ಕೆ ಎಳೆದುಕೊಳ್ಳುವ ಗುಣವಿದೆ. ವ್ಯಕ್ತಿಯೊಬ್ಬನ ಜೀವನಕತೆಯನ್ನು ಎರಡು-ಎರಡೂವರೆ ಗಂಟೆಯಲ್ಲಿ ಹೇಳಬೇಕಾದಾಗ ಚಿತ್ರಕಥೆ ಮಾಡುವವರು ಹೆಚ್ಚಾಗಿ ಒಬ್ಬ ನಿರೂಪಕನ ಪಾತ್ರಕ್ಕೆ ಅತಿಯಾಗಿ ಜೋತುಬೀಳುತ್ತಾರೆ. ಬರಹಗಾರ ಕಿರಣ್ ಯಜ್ಞೋಪವೀತ್ ಇಲ್ಲಿ ಆರಂಭದಲ್ಲಂತೂ ಆ ತಪ್ಪು ಮಾಡಿಲ್ಲ. ಪಾತ್ರ ತಾನಾಗಿ ಬಿಚ್ಚಿಕೊಳ್ಳುತ್ತದೆ. ಪಾತ್ರದ ಜತೆಗೆ ನೋಡುಗನಿಗೆ ಅನುಬಂಧ ಕುದುರಿದ ತರುವಾಯ ಕತೆಯನ್ನು ಮುಂದಕ್ಕೋಡಿಸಲು ದೀರ್ಘ ನಿರೂಪಣೆ ಬರುವ ಕಾರಣ ಅದು ತೊಡಕಾಗಿ ಪರಿಣಮಿಸಿಲ್ಲ.
ನಿರ್ದೇಶಕ ಜೈಪ್ರದ್ ದೇಸಾಯಿ ಎಲ್ಲಾ ಪಾತ್ರಗಳಿಂದ ಉತ್ತಮ ಅಭಿನಯ ಹೊರತೆಗೆಸಿದ್ದಾರೆ. ಬಂದುಹೋಗುವ ಓರ್ವ ಹೆಡ್‌ಮಿಸ್ ಪಾತ್ರ ಪೋಷಣೆಯೂ ಬಲು ಸೊಗಸಾಗಿದೆ. ಜತೆಗೆ ಅಪ್ಪ-ಅಮ್ಮ, ಅಣ್ಣ, ಮಕ್ಕಳ ಅಭಿನಯ ಮಧ್ಯಮ ವರ್ಗದ ಕುಟುಂಬ ಮತ್ತು ಅದರ ಸೂಕ್ಷ್ಮಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದರೆ, ಮೂಲತಃ ಮರಾಠಿ ನಟಿಯಾದ ಅಂಜಲಿ ಪಾಟೀಲ್ ಅವರು ಪತ್ನಿಯ ಪಾತ್ರದಲ್ಲಿ ಹಾಸುಹೊಗ್ಗಿದ್ದಾರೆ. ಆ ಅಭಿನಯ ಎಷ್ಟು ಪರಿಣಾಮಕಾರಿ ಎಂದರೆ ಆಕೆಯೇ ಬಹುಶಃ ಪ್ರವೀಣ್ ತಾಂಬೆಯ ನಿಜಜೀವನದ ಪತ್ನಿ ಅನಿಸುವಷ್ಟರ ಮಟ್ಟಿಗೆ. ಇವೆಲ್ಲವುಗಳ ಮೇಲೆ ಇಟ್ಟ ಕಳಶ ಮತ್ತದೇ ಮರಾಠಿ ಮೂಲದ ನಟ ಶ್ರೇಯಸ್ ತಲ್ಪಡೆ. ನೀವು ಐಪಿಎಲ್‌ನಲ್ಲಿ ತಾಂಬೆಯ ಆಟ ನೋಡಿದವರಾಗಿದ್ದರೆ ಶ್ರೇಯಸ್ ತಲ್ಪಡೆಯ ಹಾವಭಾವ ಕಂಡು ಬೆರಗಾಗುತ್ತೀರಿ. ಬೌಲಿಂಗ್ ಮಾಡುವಾಗಿನ ಓಟ, ಜಿಗಿತ ಮತ್ತು ಹಾವಭಾವ ಅಷ್ಟನ್ನೂ ಹಾಗ್ಹಾಗೇ ತೆರೆಗೆ ತಂದ ಈತ ನಟನವನೀತ.
ಇಲ್ಲಿ ಕತೆಯ ನಿರೂಪಣೆಗೆ ಬಳಸಿಕೊಂಡದ್ದು ಪತ್ರಕರ್ತನ ಪಾತ್ರ. ಪರಾಂಬ್ರತಾ ಚಟರ್ಜಿ ನಿರ್ವಹಿಸಿದ ಆ ಪಾತ್ರಕ್ಕೂ ನಿರೂಪಣೆಯ ಆಚೆಗೂ ಚೌಕಟ್ಟು ಹಾಕಿರುವುದು ಚಿತ್ರತಯಾರಕರ ಹೆಚ್ಚುಗಾರಿಕೆ. ಮೂಲಕತೆಯ ಆಸ್ವಾದನೆಗೆ ಧಕ್ಕೆ ತರದ ಹಾಗೆ ರಜತ್ ಸಾನ್ಯಾಲ್ ಎಂಬ ಪಾತ್ರವೂ ಸಾಗುವುದು ಕತೆಯ ನಡುವೆ ಬೇಕಾದ ಬಿಡುವನ್ನು ಸೂಕ್ತ ರೀತಿಯಲ್ಲಿ ಕೊಟ್ಟಿದೆ. ನಡುವೆ ಕೋಚ್ ಪಾತ್ರಧಾರಿ ಆಶಿಶ್ ವಿದ್ಯಾರ್ಥಿ ಅಭಿನಯ ಕೌಶಲ್ಯ ಇಲ್ಲಿ ಹೇಳಬೇಕಾದ ಜರೂರತ್ತಿಲ್ಲ. ಹೇಳಲೇಬೇಕಿರುವುದು ಕೋಚ್ ಪಾತ್ರದ ಸುತ್ತ ಒಂದು ಹಂತದಲ್ಲಿ ಅನುಮಾನ ಮೂಡುವಂತೆ ಮಾಡುವ ಚಿತ್ರಣದ ಬಗ್ಗೆ. ಕತೆ ಮನಮುಟ್ಟಲು ಮುಖ್ಯಪಾತ್ರಕ್ಕೆ ಸವಾಲಾಗಿ ನಿಲ್ಲುವ ಮತ್ತೊಂದು ಪಾತ್ರವನ್ನಿಡಬೇಕು ಎಂದು ಸಿನಿಮಾದ ಥಿಯರಿ ಹೇಳುತ್ತದೆ. ಅಂಥ ಸೂತ್ರವನ್ನು ಸೂಕ್ತ ರೀತಿಯಲ್ಲಿ ಅಳವಡಿಸಿರುವುದು ಈ ಸಿನಿಮಾದ ಚಿತ್ರಕತೆಯ ಉತ್ತಮ ಕಸುಬುದಾರಿಕೆಗೆ ಸಾಕ್ಷಿ.
ಮತ್ತೂ ಅಚ್ಚರಿಯಾಗುವುದು ಐಪಿಎಲ್‌ನ ಆಟವನ್ನು ತೋರಿಸಿದ ಪರಿಯಲ್ಲಿ. ಥಟ್ಟನೆ ನೋಡುವಾಗ ಐಪಿಎಲ್‌ನ ಆಟದ ತುಣುಕನ್ನೇ ಬಳಸಿದ್ದಾರೆ ಅನಿಸಿತು. ಆದರೆ ತೆರೆಯ ಮೇಲೆ ಕಾಣುವುದು ಪ್ರವೀಣ್ ತಾಂಬೆಯಲ್ಲ, ಶ್ರೇಯಸ್ ತಲ್ಪಡೆ ಎಂಬುದು ಗೊತ್ತಾದಾಗಲೇ ಅದು ಮರುಸೃಷ್ಟಿ ಎಂಬುದು ಮನವರಿಕೆಯಾಗುವುದು. ಆ ಪರಿ ಈ ಸಿನಿಮಾದ ನಿರ್ಮಾಣ ಕಾರ್ಯ ನಾಜೂಕಾಗಿದೆ. ತೆರೆಯ ಮೇಲೆ ಕಾಣುವ ಇಪ್ಪತ್ತು ವರ್ಷಗಳ ಮೊದಲಿನ ಓಮ್ನಿ ಮೊದಲು ಹೊಸತಾಗಿಯೂ ನಂತರ ಹಳೆಯದಾಗಿಯೂ ಕಾಣುವುದು ನಿರ್ಮಾಣದ ಗುಣಮಟ್ಟದ ಕಾರಣದಿಂದ.
ಈ ಎಲ್ಲಾ ಉತ್ತಮ ಅಂಶಗಳು ಚಿತ್ರ ನಿರ್ಮಾಣದಲ್ಲಿಯೂ ಸುಪ್ತವಾಗಿ ಇರುವ ಕಾರಣ ಚಂದದ ಕತೆಗೊಂದು ನ್ಯಾಯ ಸಿಕ್ಕಿದೆ. ಡಿಸ್ನೀಪ್ಲಸ್ ಹಾಟ್‌ಸ್ಟಾರಿನಲ್ಲಿ ನೇರ ಬಿಡುಗಡೆಯಾದ ಈ ಚಿತ್ರ ಒಂದೊಳ್ಳೆಯ ವಿಕ್ಷಣಾನುಭವ. ಸಿನಿಮಾದ ಬಗ್ಗೆ ಇಷ್ಟು ಹೊಗಳಲು ಕಾರಣ ಆ ವೀಕ್ಷಣಾನುಭವೇ ಹೊರತು ಇದೊಂದು ಪ್ರಾಯೋಜಿತ ಬರಹವಲ್ಲ ಎಂಬುದನ್ನು ಓದುಗ ಗಮನಿಸಬೇಕು, ಅಷ್ಟಕ್ಕೂ ಈ ಮಾಧ್ಯಮದಲ್ಲಿ ಬರುವ ಯಾವ ಬರಹವೂ ಪ್ರಾಯೋಜಿತ ಬರಹಗಳಲ್ಲ. ಸದಭಿರುಚಿಯ ಪ್ರೇಕ್ಷಕರಿಗೆ ಉತ್ತಮ ಸಿನಿಮಾಗಳ ಬಗ್ಗೆ ತಿಳಿಸುವುದಷ್ಟೇ ಉದ್ದೇಶ.