ತಾನು ಇದುವರೆಗೂ ಕಂಡಿರದ ಒಂದು ಲೋಕವನ್ನು ಆ ಯುವತಿಯ ಮೂಲಕ ನೋಡುತ್ತಾನೆ ಗಾಂಧಿ ಬಾಬು. ಆದರೆ ಮಾಡಿದ ಪಾಪ ಇವನನ್ನು ಬೇತಾಳದಂತೆ ಬೆನ್ನು ಹತ್ತುತ್ತದೆ. ಅದರಿಂದ ಆತ ಹೊರಬರುವುದು ಹೇಗೆ? ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ ‘ಚದುರಂಗ ವೆಟ್ಟೈ’.

ಎಚ್‌.ವಿನೋದ್‌ ಚೊಚ್ಚಲ ನಿರ್ದೇಶನದ ಚಿತ್ರವಿದು. ಈ ಸಿನಿಮಾದ ನಿರ್ಮಾಪಕ ಮನೋಬಾಲ ಒಂದು ಕಾಲದಲ್ಲಿ ರಜನೀಕಾಂತ್‌ರವರ ‘ಊರ್ ಕಾವಲನ್’ ಸಿನಿಮಾ ನಿರ್ದೇಶಿಸಿದರು. ಚಿತ್ರದ ನಾಯಕ ಬಾಲಿವುಡ್‌ನ ಖ್ಯಾತ ಛಾಯಾಗ್ರಾಹಕ ನಟ್ಟಿ ಅಲಿಯಾಸ್ ನಟರಾಜನ್. ಈ ಚಿತ್ರವನ್ನು ಬಿಡುಗಡೆ ಮಾಡಿದ್ದು ಖ್ಯಾತ ನಿರ್ದೇಶಕ ಲಿಂಗುಸಾಮಿ ಅವರ ತಿರುಪತಿ ಬ್ರದರ್ಸ್ ನಿರ್ಮಾಣ ಸಂಸ್ಥೆ. ಈ ಚಿತ್ರದ ನಿರ್ದೇಶಕ ವಿನೋದ್ ಅವರನ್ನು ಬಿಟ್ಟರೆ ಇತರೆ ಎಲ್ಲರೂ ಚಿತ್ರರಂಗದಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ದಿಗ್ಗಜರು. ಆದರೂ ಈ ಸಿನಿಮಾದ ಅವಕಾಶ ವಿನೋದ್ ಅವರಿಗೆ ಕೊಡಲು ಕಾರಣ ಈ ಚಿತ್ರದ ‘ಸ್ಕ್ರಿಪ್ಟ್’.

ಹೌದು, ಅಷ್ಟು ಅದ್ಭುತವಾದ ಚಿತ್ರಕಥೆ ಹೆಣೆದಿದ್ದರು ವಿನೋದ್. ಚಿತ್ರದ ಕಥಾನಾಯಕನ ಹೆಸರು ಗಾಂಧಿ ಬಾಬು. ಎಂತಹವರನ್ನೂ ಕ್ಷಣಾರ್ಧದಲ್ಲಿ ಯಾಮಾರಿಸಬಲ್ಲ ಚಾಣಾಕ್ಷ. ತನ್ನ ಮಾತುಗಳಿಂದ ಮಣ್ಣನ್ನು ಸಹ ಹೊನ್ನು ಎಂಬಂತೆ ನಂಬಿಸಬಲ್ಲ ಪ್ರಳಯಾಂತಕ. ಮೋಸ ಮಾಡುವುದು ಕರತಲಾಮಲಕ. ಜೀವನದಲ್ಲಿ ದುಡ್ಡು ಬಿಟ್ಟರೆ ಬೇರೆ ಏನೂ ಇಲ್ಲ ಎನ್ನುವ ಮನಸ್ಥಿತಿ. ಆ ದುಡ್ಡಿಗಾಗಿ ಮಾಡುವ ಮೋಸದ ಕೆಲಸಗಳು ಒಂದೆರೆಡಲ್ಲ. ಹೀಗೆ ಸಾಗುತ್ತಿರುವ ಅವನ ಜೀವನದಲ್ಲಿ ಯುವತಿಯೊಬ್ಬಳ ಪ್ರವೇಶವಾಗುತ್ತದೆ.

ತಾನು ಇದುವರೆಗೂ ಕಂಡಿರದ ಒಂದು ಲೋಕವನ್ನು ಆ ಹುಡುಗಿಯ ಮೂಲಕ ನೋಡುತ್ತಾನೆ. ಆದರೆ ಮಾಡಿದ ಪಾಪ ಇವನನ್ನು ಬೇತಾಳದಂತೆ ಬೆನ್ನು ಹತ್ತಿ ಕುಳಿತುಕೊಳ್ಳುತ್ತದೆ. ಅದರಿಂದ ಹೊರಬರಲು ಸಾಧ್ಯವಾಯ್ತೇ? ಎನ್ನುವುದನ್ನು ನೀವು ಸಿನಿಮಾದಲ್ಲಿ ನೋಡಿದರೇ ಮಜಾ. ನಿರ್ದೇಶಕ ವಿನೋದ್ ನಮಗೆ ಗೊತ್ತಿಲ್ಲದಂತಹ ಮೋಸದ ಜಗತ್ತನ್ನು ಬಹಳ ಸೂಕ್ಷ್ಮವಾಗಿ ತೋರಿಸಿಕೊಟ್ಟಿದ್ದಾರೆ. ಅವನ್ನು ಡೀಟೈಲಿಂಗ್‌ ಮಾಡಿರುವ ರೀತಿಯೂ ಚೆನ್ನಾಗಿದೆ. ‘ಡಬಲ್ ಡೆಕ್ಕರ್’ ಎನ್ನುವ ಕೋಡ್‌ವರ್ಡ್‌ನಿಂದ ಕರೆಸಿಕೊಳ್ಳುವ ಎರಡು ತಲೆ ಹಾವಿನ ವ್ಯಾಪಾರವನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಚೈನ್‌ ಲಿಂಕ್‌ ಬ್ಯುಸಿನೆಸ್‌ ಕರಾಳ ಮುಖವನ್ನು ಬಟಾಬಯಲು ಮಾಡಿದ್ದಾರೆ.

ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಯಿಸಿರುವುದು ಸಂಭಾಷಣೆ. ಸ್ವತಃ ವಿನೋದ್ ಸಂಭಾಷಣೆ ಬರೆದಿದ್ದು, ಮಾತುಗಳು ಹರಿತವಾಗಿವೆ. ಉದಾಹರಣೆಗೆ, “ಈ ವೈಟ್ ಅಂಡ್ ವೈಟ್ ಡ್ರೆಸ್ ಹಾಕೊಂಡ್ರೆ ಮೋಸ ಮಾಡೋಕೆ ಧೈರ್ಯ ಬರುತ್ತೆ”, “ಒಬ್ಬನ್ನ ನಾವು ಮೋಸ ಮಾಡ್ಬೇಕು ಅಂದ್ರೆ ಮೊದ್ಲು ಅವನಿಗೆ ದುರಾಸೆ ಇದೆಯಾ ಅನ್ನೋದನ್ನ ನೋಡ್ಬೇಕು”, “ನಾನ್ ಹೇಳೋ ಒಂದೊಂದು ಮಾತಲ್ಲಿ ಸುಳ್ಳಿರೋ ಸತ್ಯ ಇರುತ್ತೆ, ಸತ್ಯ ಇರೋ ಸುಳ್ಳು ಇರುತ್ತೆ” ಎನ್ನುವ ಹತ್ತಾರು ಸಂಭಾಷಣೆಗಳು ನಮ್ಮನ್ನು ಯೋಚಿಸುವಂತೆ ಮಾಡುತ್ತವೆ.

ಪೋಷಕ ಪಾತ್ರಗಳಲ್ಲಿ ಇಷಾರಾ ನಾಯರ್, ಪೊನ್ ವಣ್ಣನ್, ಇಳವರಸು ಎಲ್ಲರದ್ದೂ ಚೆಂದದ ಅಭಿನಯ. ಛಾಯಾಗ್ರಾಹಕ ಕೆ.ಜಿ.ವೆಂಕಟೇಶ್, ಸಂಗೀತ ನಿರ್ದೇಶಕ ಸಿಯನ್ ರೋಲ್ದನ್ ಹಾಗೂ ಸಂಕಲನಕಾರ ರಾಜ ಸೇತುಪತಿ ಚಿತ್ರದ ಮೂರು ಆಧಾರ ಸ್ತಂಭಗಳು. ಮೂವರು ತಮ್ಮ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಚಿತ್ರದ ಯಶಸ್ಸಿಗೆ ಪಾತ್ರರಾಗಿದ್ದಾರೆ. ಸಾಂಗ್ಸ್ , ಹೀರೋಗೆ ಬಿಲ್ಡಪ್ ಇಲ್ಲದೆ ನೇರವಾಗಿ ಅಷ್ಟೇ ಧೈರ್ಯವಾಗಿ ಇರುವ ವಿಷಯವನ್ನು ನಿರ್ದೇಶಕ ವಿನೋದ್ ಆಕರ್ಷಕವಾಗಿ ನಿರೂಪಿಸಿದ್ಧಾರೆ. ಸಿನಿಮಾ ಪ್ರಸ್ತುತ ಡಿಸ್ನೀ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ. ಈ ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ವಿನೋದ್‌ ನಿರ್ದೇಶಿಸಿರುವ ‘ಚದುರಂಗ ವೆಟ್ಟೈ 2’ ಸರಣಿ ಈ ವಾರ ತೆರೆಕಾಣುತ್ತಿದೆ. ಅರವಿಂದ ಸ್ವಾಮಿ, ತ್ರಿಷಾ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಸಿನಿಮಾ : ಚದುರಂಗ ವೆಟ್ಟೈ | ನಿರ್ದೇಶನ : ಎಚ್‌.ವಿನೋದ್‌ | ಸಂಗೀತ : ಸೀನ್‌ ರೋಲ್ಡಾನ್‌ | ಛಾಯಾಗ್ರಹಣ : ಕೆ.ಜಿ.ವೆಂಕಟೇಶ್‌ | ತಾರಾಬಳಗ : ನಟರಾಜ್‌, ಇಶಾರಾ ನಾಯರ್‌, ಪೊನ್‌ವಣ್ಣನ್‌, ಇಳವರಸು

LEAVE A REPLY

Connect with

Please enter your comment!
Please enter your name here