ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಪೃಥ್ವಿ ಕೊಣನೂರು ನಿರ್ದೇಶನದ ‘ಪಿಂಕಿ ಎಲ್ಲಿ?’ ಸಿನಿಮಾ ಮೊನ್ನೆ biffes ನಲ್ಲೂ ಪ್ರಶಸ್ತಿ ಗೌರವಕ್ಕೆ ಪಾತ್ರವಾಯ್ತು. ಚಿತ್ರೋತ್ಸವದಲ್ಲಿ ಈ ಸಿನಿಮಾ ವೀಕ್ಷಿಸಿದ ಚಿತ್ರಸಾಹಿತಿ ಕವಿರಾಜ್‌ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕೊರೊನಾ ಸಂಕಷ್ಟ ಕಾಲದಲ್ಲಿ ನಮ್ಮ ಉಸಿರು ತಂಡದ ಸೇವೆಯಲ್ಲಿ ಭಾಗಿಯಾಗಿದ್ದಾಗಲೇ ಅಕ್ಷತಾ ಪಾಂಡವಪುರ ‘ಪಿಂಕಿ ಎಲ್ಲಿ?’ ಚಿತ್ರದ ಅಭಿನಯಕ್ಕಾಗಿ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಶಸ್ತಿ ಸಂದಿತ್ತು. ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಗೌರವಕ್ಕೆ ಪಾತ್ರವಾಗಿದ್ದ ಚಿತ್ರವಿದು. ಆಗಿನಿಂದ ಈ ಚಿತ್ರದ ಬಗ್ಗೆ,ಅಕ್ಷತಾ ಅವರ ಅಭಿನಯದ ಬಗ್ಗೆ ಒಂದು ಕುತೂಹಲ ಬೆಳೆದುಕೊಂಡೇ ಬಂದಿತ್ತು. ಎಲ್ಲಾ ಕೆಲಸಗಳ ಒತ್ತಡದ ನಡುವೆ ಹೇಗೋ ಬಿಡುವು ಮಾಡಿಕೊಂಡು ಇದೊಂದು ಸಿನಿಮಾವನ್ನು ನೋಡಲೇಬೇಕು ಅಂತಾ ಮೊನ್ನೆ ಬೆಂಗಳೂರು ಫಿಲ್ಮ್ ಫೆಸ್ಟಿವಲ್ ಹೋಗಿದ್ದೆ.

ಒಂದೂವರೆ ಗಂಟೆಯ ಸಿನಿಮಾ ಮುಗಿದಾಗ ಮನಸ್ಸೆಲ್ಲಾ ಒಂದು ರೀತಿ ವಿಚಲಿತವಾಗಿ ಬಿಟ್ಟಿತ್ತು. ಸಭ್ಯ ಮನಸುಗಳು ಊಹಿಸಲು ಸಾಧ್ಯವಾಗದ, ಕೇಳಿದರೆ ನಂಬಲು ಕಷ್ಟವಾಗುವ ಆದರೆ ನಮ್ಮ ಅಕ್ಕಪಕ್ಕದಲ್ಲೇ ,ನಮ್ಮ ಕಣ್ಣಡಿಯಲ್ಲೇ ಇಲ್ಲೇ ಎಲ್ಲೋ ಜರುಗುತ್ತಿರಬಹುದಾದ ಸಮಾಜದ ಕರಾಳ ಮುಖ(ಧಂದೆ)ವೊಂದರ ಅನಾವರಣ, ಮಾನವ ಸಂಬಂಧಗಳ ತಳಮಳ , ಏನೇ ಮಾಡಿದ್ದರೂ ಕೊನೆಗೆ ಯಾರು ಒಳ್ಳೆಯವರಲ್ಲ, ಯಾರೂ ಕೆಟ್ಟವರಲ್ಲ, ಎಲ್ಲರೂ ಸಮಯ ಸಂದರ್ಭಗಳ ಕೈಗೊಂಬೆಗಳು ಎನಿಸಿಬಿಡುವುದೇ ಸತ್ಯ ಘಟನೆ ಆಧಾರಿತ ‘ಪಿಂಕಿ ಎಲ್ಲಿ?’ ಸಿನಿಮಾದ ತಿರುಳು, ಸತ್ವ.

ನಿರ್ದೇಶಕ ಪೃಥ್ವಿ ಕೊಣನೂರು ಒಂದಿಷ್ಟು ಅತಿರೇಕ ,ಅಬ್ಬರ, ಬಿಲ್ಡ್‌ಅಪ್‌ ಶಾಟ್ಸ್, ಹಿನ್ನೆಲೆ ಸಂಗೀತ, ಯಾವ್ಯಾವುದೋ ವಿಚಿತ್ರ ಕೋನಗಳಲ್ಲಿ ಕ್ಯಾಮೆರಾ ಬಳಕೆ, ಎಡಿಟಿಂಗ್ ಟೆಕ್ನಿಕ್ಸ್ , ಕಥೆಯಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಮುಂತಾದ ಯಾವ ಲೋಭಕ್ಕೂ ಲವಲೇಶವೂ ಒಳಗಾಗದೇ ತೀರಾ ಕಥೆಗೆ ನಿಷ್ಠರಾಗಿ , ಕಣ್ಣ ಮುಂದೆಯೇ ನಡೆಯುತ್ತಿದೆಯೇನೋ ಎಂಬಷ್ಟು ಸಹಜವಾಗಿ ಇಡೀ ಚಿತ್ರವನ್ನು ಮೂಡಿಸಿದ ರೀತಿಗೆ ಬೆರಗಾದೆ. ಅವರು ಆಯ್ದುಕೊಂಡ ಕಥೆಯಲ್ಲೇ ಇರುವ ರೋಚಕತೆ ಇಡೀ ಚಿತ್ರವನ್ನು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುತ್ತದೆ. ಹಾಸ್ಯಕ್ಕಂತಲೇ ನಟರು, ಸನ್ನಿವೇಶ ಯಾವುದೂ ಚಿತ್ರದಲ್ಲಿ ಇಲ್ಲವಾದರೂ ಗಂಭೀರ ಸನ್ನಿವೇಶಗಳಲ್ಲೂ ಪಾತ್ರಗಳ ಆ ಕ್ಷಣದ ಅಪ್ಪಟ ಸಹಜ ಸೊಗಡಿನ ಕ್ರಿಯೆ, ಪ್ರತಿಕ್ರಿಯೆಗಳೇ ತಾನಾಗಿ ನೋಡುಗರಿಗೆ ಕಚಗುಳಿ ಇಕ್ಕಿ ನಗು ಚಿಮ್ಮಿಸುವ ಸನ್ನಿವೇಶಗಳು ಚಿತ್ರದುದ್ದಕ್ಕೂ ಇವೆ . ಇಡೀ ಸಿನಿಮಾ ಪ್ರೇಕ್ಷಕನೆದೆಯಲ್ಲಿ ತಳಮಳದ ತರಂಗಗಳನ್ನ ಎಬ್ಬಿಸುತ್ತಲೇ ಸಾಗಿ ಸಿನಿಮಾ ಮುಗಿದ ಮೇಲೂ ಅದನ್ನು ಜಾರಿಯಲ್ಲಿಡುತ್ತದೆ.

ಚಿತ್ರದುದ್ದಕ್ಕೂ ಬರುವ ಆಯಾಯ ಜಾಗಗಳಿಂದಲೇ ಹೆಕ್ಕಿ ತೆಗೆದಂತಿರುವ, ವೃತ್ತಿಪರ ಕಲಾವಿದರಲ್ಲದ ಪಾತ್ರಧಾರಿಗಳು ತಮ್ಮೆದುರು ಕ್ಯಾಮೆರಾನೇ ಇಲ್ಲವೇನೋ ಎಂಬಂತೆ ಅಚ್ಚರಿ ಹುಟ್ಟಿಸುವಷ್ಟು ಸಹಜವಾಗಿ ತಮ್ಮ ಪಾತ್ರಗಳಲ್ಲಿ ತಲ್ಲೀನರಾಗಿದ್ದರೆ ಅದರ ಅರ್ಧಪಾಲು ಶ್ರೇಯ ನಿರ್ದೇಶಕರಿಗೆ ಸಲ್ಲಬೇಕು. ಅಕ್ಷತಾ ಅವರಂತೂ ಅಭಿನಯಿಸಿದ್ದಾರೆ ಎಂದರೆ ತಪ್ಪಾಗಿಬಿಡುವಷ್ಟು, ಪಾತ್ರವೇ ತಾವಾಗಿ, ಪಾತ್ರಕ್ಕೆ ತಮ್ಮನ್ನು ಅರ್ಪಿಸಿಕೊಂಡ ಅವರ ಶ್ರಮಕ್ಕೆ, ಪ್ರತಿಭೆಗೆ ಅವಮಾನ ಮಾಡಿದಷ್ಟು ಅದ್ಭುತವಾಗಿ ಈ ಸಿನಿಮಾದಲ್ಲಿ ತಮ್ಮ ಪಾತ್ರವನ್ನು ಜೀವಿಸಿದ್ದಾರೆ. ಈ ಸಿನಿಮಾದಿಂದ ಅವರ ಬಗೆಗಿನ ಗೌರವ, ಹೆಮ್ಮೆ ಇನ್ನಷ್ಟು ಹೆಚ್ಚಾದರೆ ಅದು ಅತ್ಯಂತ ಸಹಜವಷ್ಟೇ. ಇಂತಹ ಅಪ್ಪಟ ಪ್ರತಿಭೆಗಳನ್ನು ನಮ್ಮ ಚಿತ್ರರಂಗ ಸರಿಯಾಗಿ ಬಳಸಿಕೊಂಡರೆ ಖಂಡಿತವಾಗಿಯೂ ಅದ್ಭುತ ಕೃತಿಗಳನ್ನು ಸೃಜಿಸಬಹುದು.

ಒಟ್ಟಾರೆ ‘ಪಿಂಕಿ ಎಲ್ಲಿ?’ ತಂಡದ ಪ್ರತಿಯೊಬ್ಬರೂ ಪ್ರಶಂಸಾರ್ಹರು. ಇದೊಂದು ಒಂದು ವಿಶಿಷ್ಟ ಚಿತ್ರ. ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಅತ್ಯುತ್ತಮ ಕನ್ನಡ ಚಿತ್ರದ ಪ್ರಶಸ್ತಿ ಮುಡಿಗೇರಿದ್ದು ಇದೇ ಚಿತ್ರಕ್ಕೆ. ಎಲ್ಲೇ ವೀಕ್ಷಿಸುವ ಅವಕಾಶ ಸಿಕ್ಕರೂ ಚಿತ್ರ ಪ್ರೇಮಿಗಳು ಮಿಸ್‌ ಮಾಡಿಕೊಳ್ಳಬಾರದು ಎಂಬುದೇ ನನ್ನ ಅಭಿಮತ.

LEAVE A REPLY

Connect with

Please enter your comment!
Please enter your name here