ಟಾಲಿವುಡ್‌ ಸ್ಟಾರ್‌ ಹೀರೋ ಮಹೇಶ್‌ ಬಾಬು ಅವರಿಗೆ ಆಂಧ್ರದ ಹೊರತಾಗಿಯೂ ಅಭಿಮಾನಿಗಳಿದ್ದಾರೆ. ಕರ್ನಾಟಕದಲ್ಲೂ ಅವರ ಸಿನಿಮಾಗಳು ಭರ್ಜರಿ ಪ್ರದರ್ಶನ ಕಾಣುತ್ತವೆ. ನಟನೆಯ ಜೊತೆಗೆ ಮಲ್ಟಿಪ್ಲೆಕ್ಸ್‌ ವ್ಯವಹಾರದಲ್ಲಿ ತೊಡಗಿಕೊಂಡಿರುವ ಮಹೇಶ್‌ ಬಾಬು ಈಗ ಉದ್ಯಮಿಯಾಗಿ ಬೆಂಗಳೂರಿಗೆ ಕಾಲಿಟ್ಟಿದ್ದಾರೆ.

ಟಾಲಿವುಡ್​ ಪ್ರಿನ್ಸ್‌ ಮಹೇಶ್​ ಬಾಬು ಉದ್ಯಮಿಯೂ ಹೌದು. 2018ರಲ್ಲೇ ಮಹೇಶ್‌ ಮಲ್ಟಿಪ್ಲೆಕ್ಸ್​ ಉದ್ಯಮ ಆರಂಭಿಸಿದರು. ಹೈದರಾನಾದಿನ ಗಚ್ಚಿಬೌಲಿಯಲ್ಲಿರುವ ‘ಎಎಂಬಿ ಸಿನಿಮಾಸ್’ ಹೆಸರಿನಲ್ಲಿ ಅವರು ಆರಂಭಿಸಿದ ಮಲ್ಪಿಪ್ಲೆಕ್ಸ್​ ಸಖತ್‌ ಲಕ್ಷುರಿ ಫೀಲ್‌ ಕೊಡುವಂತಿದೆ. ಏಳು ಸ್ಕ್ರೀನ್​ ಇರುವ ಮಲ್ಪಿಪ್ಲೆಕ್ಸ್​ ಅನ್ನು ಆಗ ಮಹೇಶ್​ ಅವರ ತಂದೆ ಕೃಷ್ಣ ಉದ್ಘಾಟಿಸಿದ್ದರು. ತೆಲುಗು ನೆಲದಲ್ಲಿ ಉದ್ಯಮಿಯಾಗಿ ಯಶಸ್ಸು ಕಂಡಿರುವ ಮಹೇಶ್‌ ಬಾಬು ಈಗ ಬೆಂಗಳೂರಿನತ್ತ ಮುಖ ಮಾಡಿದ್ದಾರೆ.

ಮಹೇಶ್‌ ಬಾಬು ಹೈದರಾಬಾದಿನಲ್ಲಿ ‘ಎಎಂಬಿ ಸಿನಿಮಾಸ್‌’ ಆರಂಭಿಸಿದ ನಂತರ ಅವರು ಬೆಂಗಳೂರಿನಲ್ಲೂ ತಮ್ಮ ಮಲ್ಪಿಪ್ಲೆಕ್ಸ್‌ ಶುರು ಮಾಡಲಿದ್ದಾರೆ ಅನ್ನೋ ಸುದ್ದಿ ದಟ್ಟವಾಗಿತ್ತು. ಈಗ ಇದು ನಿಜವಾಗಿದೆ. ಏಷ್ಯನ್ ಸಿನಿಮಾಸ್‌ನ ಸುನೀಲ್ ಮತ್ತು ನಟ ಮಹೇಶ್ ಬಾಬು ಅವರು ಜಂಟಿಯಾಗಿ ಬೆಂಗಳೂರಿನಲ್ಲಿ ‘ಎಎಂಬಿ ಸಿನಿಮಾಸ್’ ಆರಂಭಿಸಲಿದ್ದಾರೆ. ಏಪ್ರಿಲ್ 24ರಂದು ಬೆಂಗಳೂರಿನಲ್ಲಿ ‘ಎಎಂಬಿ ಸಿನಿಮಾಸ್’ ವತಿಯಿಂದ ಪೂಜಾ ಕಾರ್ಯಕ್ರಮ ನೆರವೇರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್ ತಂಡಕ್ಕೆ ಶುಭ ಕೋರಿದ್ದಾರೆ. ಕಾರ್ಯಕ್ರಮದ ಫೋಟೋಗಳ ಜೊತೆಗೆ ಬೆಂಗಳೂರಿನಲ್ಲಿ ಉದ್ಯಮ ಆರಂಭಿಸುತ್ತಿರುವ ಬಗ್ಗೆ ಎಎಂಬಿ ಸಿನಿಮಾಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದೆ. ಬೆಂಗಳೂರಿನ ಹೃದಯ ಭಾಗದಲ್ಲಿರುವ ಮೆಜೆಸ್ಟಿಕ್‌ನಲ್ಲಿ ‘ಎಎಂಬಿ ಸಿನಿಮಾಸ್‌’ ತಲೆ ಎತ್ತಲಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕಪಾಲಿ ಚಿತ್ರಮಂದಿರ ಇದ್ದ ಜಾಗದಲ್ಲೇ ಮಹೇಶ್‌ ಬಾಬು ಒಡೆತನ ಮಲ್ಟಿಪ್ಲೆಕ್ಸ್‌ ಬರಲಿದೆ ಎನ್ನಲಾಗುತ್ತಿದೆ. ಆದರೆ ಈ ಕುರಿತಾಗಿ ‘ಎಎಂಬಿ ಸಿನಿಮಾಸ್‌’ ಕಡೆಯಿಂದ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

LEAVE A REPLY

Connect with

Please enter your comment!
Please enter your name here