ಕನ್ನಡ ಧ್ವಜ ಸುಟ್ಟ ಪ್ರಕರಣ ಸೇರಿದಂತೆ ಕನ್ನಡ ವಿರೋಧಿ ಚಟುವಟಿಕೆಗಳನ್ನು ಖಂಡಿಸಿದ ಕನ್ನಡ ಸಂಘಟನೆಗಳು ಹಮ್ಮಿಕೊಂಡಿರುವ ಬಂದ್‌ಗೆ ಕನ್ನಡ ಚಿತ್ರರಂಗ ಬೆಂಬಲ ಸೂಚಿಸಿದೆ. ಅಂದು ಸಿನಿಮಾ ಚಿತ್ರೀಕರಣ ಸ್ಥಗಿತಗೊಳಿಸಲಾಗುವುದು ಎಂದು ವಾಣಿಜ್ಯ ಮಂಡಳಿ ಹೇಳಿದೆ.
ವಾರದ ಹಿಂದೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಕನ್ನಡ ಧ್ವಜ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ತಾರೆಯರು ಟ್ವೀಟ್‌ಗಳ ಮೂಲಕ ಆಕ್ರೋಷ ವ್ಯಕ್ತಪಡಿಸಿದ್ದರು. ಆನಂತರ ಬೆಳಗಾವಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ ಕ್ರಮಕ್ಕೂ ನಟರಿಂದ ಖಂಡನೆ ವ್ಯಕ್ತವಾಗಿತ್ತು. ಈ ಕನ್ನಡ ವಿರೋಧಿ ಚಟುವಟಿಕೆಗಳನ್ನು ಖಂಡಿಸಿ ಕನ್ನಡ ಸಂಘಟನೆಗಳು ಇದೇ ಡಿಸೆಂಬರ್ 31ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಕನ್ನಡ ಚಿತ್ರರಂಗ ಹೋರಾಟಕ್ಕೆ ಬೆಂಬಲ ಸೂಚಿಸಿದೆ. ಈ ಬಗ್ಗೆ ಮಾತನಾಡಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್, “ಕನ್ನಡ ಸಿನಿಮಾರಂಗ ಯಾವತ್ತಿಗೂ ಕನ್ನಡಪರ ಹೋರಾಟ, ಚಳವಳಿಗಳಿಗೆ ಬೆಂಬಲ ನೀಡುತ್ತಾ ಬಂದಿದೆ. ಕನ್ನಡ ವಿರೋಧಿ ಚಟುವಟಿಕೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಕನ್ನಡಪರ ಸಂಘಟನೆಗಳು ಹಮ್ಮಿಕೊಂಡಿರುವ ಕರ್ನಾಟಕ ಬಂದ್‌ಗೆ ಚಿತ್ರರಂಗ ಸಂಪೂರ್ಣ ಬೆಂಬಲ ಸೂಚಿಸಿದೆ. ಅಂದು ಸಿನಿಮಾ ಚಿತ್ರೀಕರಣ ಸ್ಥಗಿತಗೊಳಿಸಿ ಹೋರಾಟಕ್ಕೆ ನೈತಿಕ ಬೆಂಬಲ ಸೂಚಿಸಲಿದ್ದೇವೆ” ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಇಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಚಿತ್ರರಂಗದ ಹಿರಿಯ ಮುಖಂಡರು, ನಟ ಅಜಯ್ ರಾವ್ ಹಾಜರಿದ್ದರು.
ಕನ್ನಡ ಧ್ವಜ ಸುಟ್ಟ ಕಿಡಿಗೇಡಿಗಳ ವಿರುದ್ಧ ಕನ್ನಡ ಸಿನಿಮಾರಂಗದ ಹಲವು ನಟರು ಟ್ವಿಟರ್‌ನಲ್ಲಿ ಆಕ್ರೋಷ ವ್ಯಕ್ತಪಡಿಸಿದ್ದರು. ಮೊನ್ನೆ ‘ಬಡವ ರಾಸ್ಕಲ್’ ಸಿನಿಮಾ ಪ್ರೊಮೋಷನ್ ಇವೆಂಟ್‌ನಲ್ಲಿ ನಟ ಶಿವರಾಜಕುಮಾರ್, “ಇಂತಹ ಘಟನೆಗಳನ್ನು ನಾವು ಖಂಡಿಸುತ್ತೇವೆ. ಪ್ರತಿಯೊಬ್ಬರೂ ಪರಸ್ಪರರಿಗೆ ಗೌರವ ಕೊಟ್ಟು ಬದುಕಬೇಕು. ಕನ್ನಡ ಧ್ವಜವನ್ನು ಸುಡುವುದೆಂದರೆ ತಾಯಿಗೆ ಅಪಮಾನ ಮಾಡಿದಂತೆ. ಈ ಸಂಬಂಧ ನಡೆಸುವ ಹೋರಾಟದಲ್ಲಿ ಪ್ರಾಣತ್ಯಾಗಕ್ಕೂ ನಾನು ಸಿದ್ಧನಿದ್ದೇನೆ” ಎಂದಿದ್ದರು. ಶಿವರಾಜಕುಮಾರ್ ಮಾತುಗಳನ್ನು ಅನುಮೋದಿಸಿ ಹಲವು ನಟರು ಟ್ವೀಟ್ ಮಾಡಿ ಬೆಂಬಲ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ ನಡೆಸಿ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಲು ನಿರ್ಧರಿಸಿದೆ. ಚಿತ್ರಮಂದಿರ ಮಾಲೀಕರು ಕೂಡ ಸಭೆ ನಡೆಸಲಿದ್ದು, ಅಂದು ಚಿತ್ರಪ್ರದರ್ಶನ ರದ್ದು ಮಾಡುವ ವಿಚಾರವಾಗಿ ನಿರ್ಧಾರ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.