‘KGF’ ನಿರ್ಮಾಪಕ ವಿಜಯ್ ಕಿರಗಂದೂರು ಪಾರ್ಟ್ 3 ಸಿನಿಮಾ ಬಗ್ಗೆ ಅಧಿಕೃತವಾಗಿ ಮಾತನಾಡಿದ್ದಾರೆ. ಇದು ‘Marvel style’ ನಲ್ಲಿ ತಯಾರಾಗಲಿದೆ ಎಂದಿರುವ ಅವರ ಹೇಳಿಕೆ ಸಹಜವಾಗಿಯೇ ಸಿನಿಮಾ ಕುರಿತಂತೆ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
ಕನ್ನಡದಲ್ಲಿ ತಯಾರಾಗಿ ದೇಶವಷ್ಟೇ ಅಲ್ಲದೆ ವಿದೇಶಗಳಲ್ಲೂ ಸದ್ದು ಮಾಡುತ್ತಿರುವ ‘KGF2’ ಸಿನಿಮಾ ಸೀಕ್ವೆಲ್ ಕುರಿತಂತೆ ಅಧಿಕೃತ ಸುದ್ದಿ ಹೊರಬಿದ್ದಿದೆ. ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಅವರು ‘ದೈನಿಕ್ ಭಾಸ್ಕರ್’ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸೀಕ್ವೆಲ್ ಬಗ್ಗೆ ಸ್ಪಷ್ಟವಾಗಿ ಮಾತನಾಡಿದ್ದಾರೆ. ಅಕ್ಟೋಬರ್ ನಂತರ ‘KGF3’ಗೆ ಚಿತ್ರೀಕರಣ ಶುರುವಾಗಲಿದ್ದು, 2024ರಲ್ಲಿ ಸಿನಿಮಾ ತೆರೆಗೆ ಬರಲಿದೆ ಎಂದಿದ್ದಾರವರು.
ಸೀಕ್ವೆಲ್ ಕುರಿತು ಮಾತನಾಡಿರುವ ನಿರ್ಮಾಪಕ ವಿಜಯ್ ಕಿರಗಂದೂರು, “ಸದ್ಯ ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾ ಶೂಟಿಂಗ್‌ನಲ್ಲಿದ್ದಾರೆ. ಶೇ 35ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಮುಂದಿನ ವಾರ ಮತ್ತೊಂದು ಶೆಡ್ಯೂಲ್ ಆರಂಭವಾಗಲಿದೆ. ಅಕ್ಟೋಬರ್‌ನಲ್ಲಿ ಚಿತ್ರೀಕರಣ ಮುಗಿಯಲಿದ್ದು, ತದನಂತರ ‘KGF3’ಗೆ ಚಿತ್ರೀಕರಣ ಶುರುವಾಗಲಿದೆ. 2024ರಲ್ಲಿ ಚಿತ್ರವನ್ನು ತೆರೆಗೆ ತರುವುದು ನಮ್ಮ ಯೋಜನೆ” ಎಂದಿದ್ದಾರೆ.
ಇನ್ನು ಸಿನಿಮಾ, ಮೇಕಿಂಗ್ ಹೇಗಿರಲಿದೆ ಎನ್ನುವ ಬಗ್ಗೆ ವಿಜಯ್ ಕಿರಗಂದೂರು ಅವರ ಮಾತುಗಳು ಗಮನ ಸೆಳೆಯುತ್ತವೆ. “ಸೀಕ್ವೆಲ್‌ನಲ್ಲಿ ನಾವು ಮಾರ್ವೆಲ್ ಸ್ಟೈಲ್ ತರಲಿದ್ದೇವೆ. ವಿವಿಧ ಚಿತ್ರಗಳಿಂದ ವಿಭಿನ್ನ ಪಾತ್ರಗಳನ್ನು ಚಿತ್ರಕ್ಕೆ ತರಲಿದ್ದೇವೆ. ‘ಸ್ಪೈಡರ್‌ಮ್ಯಾನ್’, ‘ಡಾಕ್ಟರ್ ಸ್ಟ್ರೇಂಜ್’ ಸಿನಿಮಾಗಳ ಪ್ರಯತ್ನ ಇಲ್ಲಿಯೂ ನಡೆಯಲಿದೆ. ಈ ಮೂಲಕ ದೊಡ್ಡ ವೀಕ್ಷಕ ಬಳಗವನ್ನು ತಲುಪುವುದು ನಮ್ಮ ಗುರಿ” ಎಂದಿದ್ದಾರೆ ನಿರ್ಮಾಪಕ ಕಿರಗಂದೂರು. ಇನ್ನು ಚಿತ್ರದ ಬಾಕ್ಸ್ ಆಫೀಸ್ ಅಬ್ಬರ ಈ ಹೊತ್ತಿಗೂ ನಿಂತಿಲ್ಲ. ಟ್ರೇಡ್ ಅನಲಿಸ್ಟ್ ಮನೋಬಲ ವಿಜಯಬಾಲನ್ ಅವರು ಟ್ವೀಟ್ ಮಾಡಿರುವಂತೆ ಮೇ 13ಕ್ಕೆ ಚಿತ್ರದ ಒಟ್ಟಾರೆ ವಹಿವಾಟು 1180 ಕೋಟಿ ರೂಪಾಯಿ ದಾಟಿದೆ. ಹಿಂದಿ ಬಾಕ್ಸ್ ಆಫೀಸ್‌ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಮೂರನೇ ಚಿತ್ರ ಎನ್ನುವುದು ‘KGF2’ನ ಸದ್ಯದ ದಾಖಲೆ.