ಅಪರಾಧಿಯನ್ನು ಹಿಡಿಯಲು ಹೆಣೆಯಲಾದ ಚಾಣಾಕ್ಷ ಬಲೆ ಎಷ್ಟೇ ರೋಚಕವಾಗಿದ್ದರೂ ವೃತ್ತಿಗೆ ಅನಿವಾರ್ಯವಾದ ರಹಸ್ಯಗಳು ಗೂಢಚಾರಿಗಳ ವೈಯಕ್ತಿಕ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವುದನ್ನು ಇಲ್ಲಿ ತೋರಿಸಲಾಗಿದೆ. ಇಡೀ ಎರಡು ಗಂಟೆ ಮೂವತ್ತೇಳು ನಿಮಿಷಗಳ ಅವಧಿಯಲ್ಲಿ ಚಿತ್ರ ತನ್ನ ಹಳಿಯನ್ನು ಬಿಟ್ಟು ಅಕ್ಕಪಕ್ಕ ಹೋಗದೇ ಬಿಗಿಯಾಗಿ ಸಾಗುತ್ತದೆ. ವಿಶಾಲ್ ಭಾರದ್ವಾಜ್ ನಿರ್ದೇಶನದ ‘ಖುಫಿಯ’ ಹಿಂದಿ ಸಿನಿಮಾ Netflixನಲ್ಲಿ ಸ್ಟ್ರೀಮ್ ಆಗುತ್ತಿದೆ.
ವಿಶಾಲ್ ಭಾರದ್ವಾಜ್ ಅವರ ಚಿತ್ರಗಳೆಂದರೆ ಅಭಿಮಾನಿಗಳಿಗೆ ಹಬ್ಬ. ಅವರದ್ದೇ ವಿಶಿಷ್ಟ ಶೈಲಿಯಿಂದ ಒಂದು ಅನೂಹ್ಯವಾದ ವೀಕ್ಷಕ ವರ್ಗವನ್ನು ಸೃಷ್ಟಿಸಿಕೊಂಡಿರುವ ವಿಶಾಲ್ ಭಾರದ್ವಾಜ್ ಅವರ ಬತ್ತಳಿಕೆಯಿಂದ ಹೊರಬಂದಿರುವ ಹೊಸ ಚಿತ್ರ ‘ಖುಫಿಯ’. ಖುಫಿಯ ಅಂದರೆ ರಹಸ್ಯ, ನಿಗೂಢ ಎನ್ನುವ ಅರ್ಥವಿದೆ. ಇದೂ ಕೂಡ ಒಂದು ಗೂಢಚಾರಿಕೆ ಥ್ರಿಲ್ಲರ್ ಮಾದರಿಯ ಚಿತ್ರ. ಒಂದು ಕೊಲೆಯ ತನಿಖೆಯ ವಿಚಾರವಾಗಿ ನೇಮಿಸಲ್ಪಡುವ RAW ಏಜೆಂಟ್‌ನ ತನಿಖೆಯ ವೈಖರಿಯ ಸುತ್ತ ಕಥೆ ಹೆಣೆಯಲಾಗಿದೆ. ಇಲ್ಲಿ ತನಿಖಾಧಿಕಾರಿ ಮತ್ತು ಪ್ರೇಮಿ ಹೀಗೆ ಎರಡೆರಡು ಪಾತ್ರಗಳನ್ನು ನಿಭಾಯಿಸಿಕೊಂಡು ಹೋಗುತ್ತಾ ಕೊಲೆಯ ರಹಸ್ಯವನ್ನು ಭೇದಿಸುವ ಸವಾಲು ಏಜೆಂಟ್‌ಗೆ ಎದುರಾಗುತ್ತದೆ.
ಈ ರೀತಿಯ ಕಥಾಮಾದರಿಯನ್ನು ಬಿಗಿಯಾಗಿ ನೇಯ್ದು ವೀಕ್ಷಕರ ಮುಂದೆ ಇಡುವಲ್ಲಿ ವಿಶಾಲ್ ಭಾರದ್ವಾಜ್ ಅವರದ್ದು ಎತ್ತಿದ ಕೈ. ಅಮರ್ ಭೂಷಣ ಅವರ 2021ರ ಕಾದಂಬರಿ ‘ಎಸ್ಕೇಪ್ ಟು ನೋವೇರ್’ ಅನ್ನು ಲಘುವಾಗಿ ಆಧರಿಸಿ ಮಾಡಲಾದ ಈ ಚಿತ್ರದಲ್ಲೂ ವಿಶಾಲ್ ಅವರ ನೈಪುಣ್ಯ ಮೆರೆದಿದ್ದಾರೆ. 2000ನೇ ಇಸವಿಯ ಆಸುಪಾಸಿನ ಕಾಲಘಟ್ಟದಲ್ಲಿ ನೇಯಲಾದ ಕಾರ್ಗಿಲ್ ಯುದ್ಧದ ಬಳಿಕದ ಸಮಯದಲ್ಲಿ ಈ ಕಾಲ್ಪನಿಕ ಕಥೆ ಒಂದು ಗೂಢಚಾರಿ ಥ್ರಿಲ್ಲರ್ ಮಾದರಿಯಲ್ಲಿ ಸಾಗುತ್ತದೆ. ಕೃಷ್ಣ ಮೆಹರ್ ಪಾತ್ರದಲ್ಲಿ ಟಬು ಧಾಕಾದಲ್ಲಿ ನಡೆಯುವ ಸಂಚೊಂದರ ಕಾರಣಕರ್ತನಾದ ದೇಶದ್ರೋಹಿ ರವಿಯನ್ನು ಬಂಧಿಸುವ ಕರ್ತವ್ಯದ ಮೇಲೆ ಇರುತ್ತಾಳೆ.
RAW ವಿಭಾಗದ ಮಾಜಿ ಅಧ್ಯಕ್ಷರಾದ ಅಮರ್ ಭೂಷಣ ಅವರು ಬರೆದ ಕಾದಂಬರಿಯನ್ನು ಈ ಚಿತ್ರ ಬಹಳ ಸಶಕ್ತವಾಗಿ ತೆರೆಯ ಮೇಲೆ ತಂದಿದ್ದು ಗೂಢಚಾರಿ ವಿಭಾಗದ ಕಾರ್ಯವೈಖರಿ ಪರಿಣಾಮಕಾರಿಯಾಗಿ ಬಿಂಬಿತವಾಗಿದೆ. ಗೂಢಚಾರ ಲೋಕದ ಅನೇಕ ಭಾಷೆಗಳು, ಸಂಜ್ಞೆಗಳು, ಅಲ್ಲಿನ ರೀತಿರಿವಾಜುಗಳು, ಸಂದೇಶಗಳು ರವಾನೆಯಾಗುವ ರೀತಿ ಎಲ್ಲವನ್ನೂ ಉತ್ತಮವಾಗಿ ತೋರಿಸಲಾಗಿದೆ. ಚಿತ್ರಗಳಲ್ಲಿ ಗೂಢಚಾರ ಪಾತ್ರಗಳು ಎಂದಿನಿಂದಲೂ ಒಂದು ಬಿಗಿಯನ್ನು ಕಾಯ್ದುಕೊಂಡೇ ವೀಕ್ಷಕರನ್ನು ಹಿಡಿದಿಟ್ಟಿವೆ. ಅದು ಈ ಚಿತ್ರದಲ್ಲೂ ಮುಂದುವರೆದಿದೆ. ಕೃಷ್ಣ ಮೆಹರ್ ಮತ್ತು ಅವಳ ಬಾಸ್ ಇಬ್ಬರ ಪಾತ್ರವೂ ಕಠಿಣವಾಗಿ ತೋರಿದರೂ ಮತ್ತು ಅಂತಃಕರಣವುಳ್ಳ ಪಾತ್ರಗಳೂ ಹೌದು. ಅವರ ಕೆಲಸದ ವಿಷಯ ಬಂದಾಗ ಅವರು ಯಾವುದೇ ರೀತಿಯ ರಾಜಿಗೆ ಸಿದ್ಧರಿಲ್ಲ ಎನ್ನುವುದನ್ನು ಬಹಳ ಶಕ್ತಿಯುತವಾಗಿ ತೆರೆಯ ಮೇಲೆ ಬಿಂಬಿಸಿದ್ದಾರೆ.
ಅಪರಾಧಿಯನ್ನು ಹಿಡಿಯಲು ಹೆಣೆಯಲಾದ ಚಾಣಾಕ್ಷ ಬಲೆ ಎಷ್ಟೇ ರೋಚಕವಾಗಿದ್ದರೂ ವೃತ್ತಿಗೆ ಅನಿವಾರ್ಯವಾದ ರಹಸ್ಯಗಳು ಗೂಢಚಾರಿಗಳ ವೈಯಕ್ತಿಕ ಜೀವನದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವುದನ್ನು ಇಲ್ಲಿ ತೋರಿಸಲಾಗಿದೆ. ಇಡೀ ಎರಡು ಗಂಟೆ ಮೂವತ್ತೇಳು ನಿಮಿಷಗಳ ಅವಧಿಯಲ್ಲಿ ಚಿತ್ರ ತನ್ನ ಹಳಿಯನ್ನು ಬಿಟ್ಟು ಅಕ್ಕಪಕ್ಕ ಹೋಗದೇ ಬಿಗಿಯಾಗಿ ಸಾಗುತ್ತದೆ. ಆದರೆ ದ್ವಿತೀಯಾರ್ಧದಲ್ಲಿ ಈ ವೇಗದಲ್ಲಿ ಸ್ವಲ್ಪ ಏರುಪೇರುಗಳನ್ನು ಗಮನಿಸಬಹುದು. ಈ ಚಿತ್ರದ ಮತ್ತೊಂದು ಶಕ್ತಿ ಎಂದರೆ ಸಂಗೀತ. ಗುಲ್ಜಾರ್ ಅವರ ಅದ್ಭುತ ಸಾಹಿತ್ಯದೊಂದಿಗೆ ವಿಶಾಲ್ ಅವರ ಸಂಗೀತ ಸಂಯೋಜನೆಯ ಮೂಲಕ ಅದ್ಭುತ ಮಾಯಾಲೋಕವನ್ನು ಸೃಷ್ಟಿಸಿದ್ದಾರೆ. ರೇಖಾ ಭಾರದ್ವಾಜ್ ಅವರು ಹಾಡಿರುವ ವಿಷಾದಭರಿತ ‘ಮತ್ ಆನಾ’ ಹಾಡು ಮತ್ತು ರಾಹುಲ್ ರಾಮ್ ಹಾಡಿರುವ ‘ಮನ್ ನಾ ರಂಗಾವ್’ ಗೀತೆಗಳಂತೂ ಚಿತ್ರಕ್ಕೆ ಕಳಶಪ್ರಾಯವಾಗಿವೆ.
ಒಬ್ಬ ಚಾಣಾಕ್ಷ ಗೂಢಚಾರಿಣಿ ಹಾಗೂ ಪ್ರೇಯಸಿಯ ಪಾತ್ರಗಳ ಜವಾಬ್ದಾರಿಗಳಲ್ಲಿ ಸಿಲುಕಿ ವೃತ್ತಿ ಮತ್ತು ವೈಯಕ್ತಿಕ ಜೀವನ ಎರಡನ್ನೂ ಸಂಭಾಳಿಸಿಕೊಂಡು ಹೋಗುವ ಪಾತ್ರದಲ್ಲಿ ಟಬು ಮಿಂಚಿದ್ದಾರೆ. ಆಕೆಯ ಮಾಜಿ ಗಂಡನ ಪಾತ್ರದಲ್ಲಿ ಅತುಲ್ ಕುಲಕರ್ಣಿ ಅವರ ನಟನೆ ಚಿಕ್ಕ ಪಾತ್ರವಾದರೂ ಬಹಳ ಶಕ್ತಿಯುತವಾಗಿದೆ. ದೇಶದ್ರೋಹಿಯ ಪಾತ್ರದಲ್ಲಿ ಅಲಿ ಅವರ ನಟನೆ ಬಹಳ ಅತ್ಯುತ್ತಮ. ವಾಮಿಕಾ ಗಬ್ಬಿ ತನ್ನ ಕುಟುಂಬಕ್ಕೆ ನಿಷ್ಠವಾದ ಹೆಂಡತಿಯಾಗಿ ಒಬ್ಬ ತಾಯಿಯಾಗಿ ಆಕೆಯ ಮಗನನ್ನು ಮರಳಿ ಪಡೆಯುವ ನಿಷ್ಠುರದ ಪಾತ್ರದಲ್ಲಿ ಅತ್ಯುತ್ತಮ ನಟನೆ ನೀಡಿದ್ದಾರೆ. ಬಾಂಗ್ಲಾ ನಟಿ ಅಜ್ಮಿರಿ ಅವರ ಪಾತ್ರ ಚಿಕ್ಕದಾದರೂ ಮನಸ್ಸಲ್ಲಿ ನಿಲ್ಲುತ್ತದೆ.
ಈ ಕಾದಂಬರಿ ನೈಜ ಘಟನೆಗಳನ್ನು ಆಧರಿಸಿ ಬರೆದದ್ದು ಎಂದು ಖ್ಯಾತವಾಗಿದೆಯಾದರೂ ಅದನ್ನು ಆಧರಿಸಿದ ಈ ಚಿತ್ರವನ್ನು ಬಹಳ ಮಟ್ಟಿಗೆ ಕಾಲ್ಪನಿಕವಾಗಿ ಹೆಣೆಯಲಾಗಿದೆ ಎನ್ನುವ ಚಿತ್ರತಂಡ ಉತ್ತಮ ಸ್ಪೈ ಥ್ರಿಲ್ಲರ್ ಚಿತ್ರವನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಚಿತ್ರದುದ್ದಕ್ಕೂ ಬರುವ ಪಾತ್ರಗಳು ನಡೆಯುವ ಘಟನೆಗಳು ಬಹಳ ಹರಿತವಾಗಿದ್ದು ನೋಡುಗರನ್ನು ಕೊನೆಯವರೆಗೂ ಬಿಗಿಹಿಡಿದು ಕೂರಿಸಿ ನೋಡಿಸಿಕೊಳ್ಳುತ್ತವೆ. ಒಟ್ಟಾರೆಯಾಗಿ ‘ಖುಫಿಯ’ ಒಂದು ಉತ್ತಮ ಚಿತ್ರ ಎಂದು ಹೇಳಲಡ್ಡಿಯಿಲ್ಲ. Netflixನಲ್ಲಿ ಸ್ಟ್ರೀಮ್ ಆಗುತ್ತಿದೆ.