ಇದೊಂದು ವಿಶಿಷ್ಟ ಲವ್‌ಸ್ಟೋರಿ. ತರಹೇವಾರಿ ತಿನಿಸುಗಳ ಮೂಲಕ ಪ್ರೀತಿ ಬೆಸೆಯವ ವಿಶಿಷ್ಟ ಕಥಾನಕ. ‘ಆಮಿಸ್‌’ ಅಸ್ಸಾಮಿ ಸಿನಿಮಾ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ. ಭಾಸ್ಕರ್ ಹಝಾರಿಕಾ ನಿರ್ದೇಶನದ ಸಿನಿಮಾ ಪ್ರಸ್ತುತ SonyLIV ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

ಈ ಚಿತ್ರದ ಕಥೆ ವಿಚಿತ್ರವಾಗಿದೆ. ಕಥೆಯನ್ನು ಯೋಚಿಸಿ ಸಿನಿಮಾ ಮಾಡಿದ ನಿರ್ದೇಶಕರ ಧೈರ್ಯ ಮೆಚ್ಚುವಂತದ್ದು. ಆಕೆಯ ಹೆಸರು ನಿರ್ಮಲಾ. ಪತಿ, ಏಳು ವರ್ಷದ ಮಗು ಇರುವ ಸುಖ ಸಂಸಾರ. ವೃತ್ತಿಯಲ್ಲಿ ಆಕೆ ವೈದ್ಯೆ. ಒಮ್ಮೆ ಹೀಗೆ ಆಸ್ಪತ್ರೆಗೆ ಬರುವ ಒಬ್ಬ ರೋಗಿಯ ಪರಿಚಯವಾಗುತ್ತದೆ. ಆತನ ಹೆಸರು ಸುಮನ್. ಕಾಲೇಜಿಗೆ  ಹೋಗುತ್ತಿರುವ ಪಿಎಚ್‌ಡಿ ವಿದ್ಯಾರ್ಥಿ. ಪರಿಚಯ ಸ್ನೇಹಕ್ಕೆ ತಿರುಗುತ್ತದೆ. ಆತ ನಾನ್‌ವೆಜ್‌ ಅಡುಗೆ ಮಾಡುವುದರಲ್ಲಿ ಪರಿಣಿತ. ಒಮ್ಮೆ ಮೊಲದ ಮಾಂಸದ ತಿನಿಸು ಮಾಡಿಕೊಂಡು ಬಂದು ನಿರ್ಮಲಾಗೆ ಕೊಡುತ್ತಾನೆ. ಆಕೆಗೆ ಈ ಅಡುಗೆ ತುಂಬಾ ಇಷ್ಟವಾಗುತ್ತದೆ. ಇದಕ್ಕಿಂತ ಬೇರೆ ಬೇರೆ ರೀತಿಯ ಮಾಂಸಾಹಾರಿ ತಿನಿಸುಗಳನ್ನು ತಿನ್ನಿಸುತ್ತೇನೆ ಎಂದು ಆತ ತಾನು ಹಿಂದೆ ಟೇಸ್ಟ್ ಮಾಡಿದ್ದ ಹಲವೆಡೆ ಕರೆದುಕೊಂಡು ಹೋಗಿ ತಿನಿಸುತ್ತಾನೆ.

ಹೀಗಿರುವಾಗ ಅವನು ಆಕೆಯನ್ನು ತುಂಬಾ ಗಾಢವಾಗಿ ಪ್ರೀತಿಸಲು ಆರಂಭಿಸುತ್ತಾನೆ. ಆದರೆ ಆಕೆ ಮಾತ್ರ ಗೊಂದಲದಲ್ಲಿರುತ್ತಾಳೆ. ಆತನಿಗೆ ಪ್ರೀತಿಯ ಹುಚ್ಚು ಹೆಚ್ಚಾಗಿ ಈ ಬಾರಿ ಅವಳಿಗೆ ಜಗತ್ತಲ್ಲೇ ಯಾರೂ ತಿಂದಿರಬಾರದು, ಅಂತಹ ಒಂದು ಅಡುಗೆ ಮಾಡಿ ತಿನಿಸಬೇಕು ಎಂದು ನಿರ್ಧಾರ ಮಾಡುತ್ತಾನೆ! ಅದರ ಪ್ರಕಾರ ತನ್ನ ತೊಡೆ ಭಾಗದ ಒಂದು ಪೀಸ್ ಮಾಂಸವನ್ನು ಕಟ್ ಮಾಡಿ ಅದನ್ನು ಅಡುಗೆ ಮಾಡಿ ಆಕೆಗೆ ಕೊಡುತ್ತಾನೆ. ಅದನ್ನು ಸವಿದ ಆಕೆ ಉಲ್ಲಾಸಿತಳಾಗುತ್ತಾಳೆ. ಇದು ಯಾವ ಮಾಂಸ ಎಂದು ಕೇಳಲು ಅವನು ಸಹ ನಿಜ ಹೇಳುತ್ತಾನೆ. ಮೊದಲು ಆತನ ಜೊತೆ ಕೋಪ ಮಾಡಿಕೊಳ್ಳುವ ಆಕೆ ಆ ರುಚಿಗಾಗಿ ಸುಮ್ಮನಿದ್ದು ಮತ್ತೆ ಅವಳಿಗೆ ಅದೇ ಬೇಕು ಅನಿಸುತ್ತದೆ!

ನಂತರ ಇಬ್ಬರೂ ಸೇರಿ ಮಾಡುವ ನಿರ್ಧಾರಗಳು, ಅದರ ಪರಿಣಾಮಗಳು… ಇದನ್ನು ನೀವು ಚಿತ್ರದಲ್ಲೇ ನೋಡಿದರೆ ಒಳಿತು. ಇಲ್ಲಿ ಟೆಕ್ನಿಕಲ್ ವಿಚಾರದ ಬಗ್ಗೆ ಏನು ಹೇಳೋಲ್ಲ. ಯಾಕೆಂದರೆ ಟೆಕ್ನಿಕಲ್ ಆಗಿ ನೋಡುವಂತಹ ಸಿನಿಮಾ ಇದಲ್ಲ. ಕಲಾವಿದರೆಲ್ಲರೂ ಪಾತ್ರೋಚಿತವಾಗಿ ಅಭಿನಯಿಸಿದ್ದಾರೆ. ಸಿನಿಮಾದ ಹಿನ್ನೆಲೆ ಸಂಗೀತ ತುಂಬಾ ಚೆನ್ನಾಗಿದೆ. ಇನ್ನು ಅಸ್ಸಾಮಿನ ಸೊಗಡು, ಸಂಸ್ಕೃತಿಯನ್ನು ಚಿತ್ರದಲ್ಲಿ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ. ಸಿಂಗಾಪೂರ ಸೌತ್ ಏಷಿಯನ್‌ ಇಂಟರ್‌ನ್ಯಾಷನಲ್‌ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರದರ್ಶನಗೊಂಡ ಸಿನಿಮಾಗೆ ಅತ್ಯುತ್ತಮ ನಿರ್ದೇಶಕ ಗೌರವ ಸಂದಿದೆ.

ನಿರ್ದೇಶನ : ಭಾಸ್ಕರ್ ಹಝಾರಿಕಾ | ನಿರ್ಮಾಣ: ಪೂನಂ ಡಿಯೋಲ್‌, ಶ್ಯಾಮ್ ಬೋರಾ | ಸಂಗೀತ : ಕ್ವಾನ್ ಬೇ | ತಾರಾಬಳಗ : ಲಿಮಾ ದಾಸ್‌, ಆರ್ಘದೀಪ್ ಬರುವಾ, ನೀತಾಲಿ ದಾಸ್‌

LEAVE A REPLY

Connect with

Please enter your comment!
Please enter your name here