ಕಿಚ್ಚ ಸುದೀಪ್ ಕೇವಲ ನಟರಷ್ಟೇ ಅಲ್ಲ, ನಿರ್ದೇಶಕರೂ ಹೌದು ಅನ್ನೋದು ಸ್ಯಾಡಲ್‌ವುಡ್‌ಗೆ ಗೊತ್ತು. ಆದರೆ ಪರಭಾಷೆಯ ಅನೇಕ ಸಿನಿಮಾಗಳಲ್ಲಿ ಅಭಿನಯ ಮಾಡಿರುವ ಸುದೀಪ್ ಈಗ ಪರಭಾಷೆಯಲ್ಲಿ ಸಿನಿಮಾ ನಿರ್ದೇಶನವನ್ನೂ ಮಾಡಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕಿಚ್ಚ ಸುದೀಪ್ ‘ಮೈ ಆಟೋಗ್ರಾಫ್’ ಚಿತ್ರದ ಮೂಲಕ ಕೇವಲ ನಟನೆ ಅಲ್ಲದೆ ತಮ್ಮ ನಿರ್ದೇಶನದಿಂದಲೂ ಗಮನ ಸೆಳೆದರು. ಅದಾದ ನಂತರ ‘ನಂ. 73 ಶಾಂತಿ ನಿವಾಸ’, ‘ಜಸ್ಟ್ ಮಾತ್ ಮಾತಲ್ಲಿ’ ಮುಂತಾದ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಆದರೆ ಇತ್ತೀಚೆಗೆ ‘ಮಾಣಿಕ್ಯ’ ಚಿತ್ರದ ನಂತರ ಸುದೀಪ್ ನಿರ್ದೇಶನದ ಬಗ್ಗೆ ಅಷ್ಟೊಂದು ಆಸಕ್ತಿ ತೋರಿಸಿರಲಿಲ್ಲ. ಆದರೆ ಈಗ ಅವರೇ ತಾವು ಸಿನಿಮಾವೊಂದನ್ನು ನಿರ್ದೇಶಿಸುವ ಬಗ್ಗೆ ಹೇಳಿಕೊಂಡಿದ್ದಾರೆ. “ನನ್ನ ನಿರ್ದೇಶನದ ಹೊಸ ಚಿತ್ರಕ್ಕೆ ಈಗಾಗಲೇ ಚಿತ್ರಕಥೆ ರೆಡಿ ಮಾಡಿಕೊಂಡಿದ್ದೇನೆ. ಇದನ್ನು ಹಿಂದಿ ಮತ್ತು ದಕ್ಷಿಣ ಭಾರತದ ಭಾಷೆಗಳಲ್ಲಿ ಮಾಡಬೇಕು ಎಂದುಕೊಂಡಿದ್ದೇನೆ. ಆದರೆ, ಹಿಂದಿಯಲ್ಲಿ ಈ ಪಾತ್ರವನ್ನು ಸಲ್ಮಾನ್ ಖಾನ್ ಮತ್ತು ದಕ್ಷಿಣ ಭಾರತದ ಭಾಷೆಗಳಲ್ಲಿ ನಾನು ಮಾಡಿದರೆ ಚೆನ್ನಾಗಿರುತ್ತೆ ಅನ್ನಿಸಿತು. ಹಾಗಾಗಿ ಸಲ್ಮಾನ್ ಖಾನ್ ಅವರನ್ನು ಸಂಪರ್ಕಿಸಿದ್ದೇನೆ” ಎನ್ನುತ್ತಾರೆ ಸುದೀಪ್.

ಸುದೀಪ್ ಅವರಿಗೆ ಬಾಲಿವುಡ್ ಹೊಸದೇನೂ ಅಲ್ಲ.ಸಲ್ಮಾನ್ ಖಾನ್ ಕೂಡ ಹೊಸಬರಲ್ಲ. ಈಗಾಗಲೇ ಸಲ್ಮಾನ್ ಖಾನ್‌ರ ಜೊತೆ ‘ದಬಾಂಗ್ 3’ ಚಿತ್ರದಲ್ಲಿ ವಿಲನ್ ಆಗಿ ಸುದೀಪ್ ಅಭಿನಯಿಸಿದ್ದರು. ಇಬ್ಬರ ನಡುವೆ ಗೆಳೆತನವೂ ಇದೆ. “ಅವರು ನನ್ನ ಗೆಳೆಯರು ಅನ್ನೋ ಕಾರಣಕ್ಕೆ ಅವರನ್ನು ಆಯ್ಕೆ ಮಾಡಿಲ್ಲ. ನನಗೋಸ್ಕರ ಈ ಕಥೆ ಬರೆದುಕೊಂಡಿದ್ದು. ಆದರೆ ಇದನ್ನು ಜಾಕ್ ಮಂಜು ಅವರ ಜೊತೆ ಚರ್ಚೆ ಮಾಡಿದಾಗ ಈ ಪಾತ್ರವನ್ನು ಹಿಂದಿಯಲ್ಲಿ ಅವರು ಮಾಡಿದರೆ ಚೆನ್ನಾಗಿರುತ್ತೆ ಅಂತ ಜಾಕ್ ಮಂಜು ಹೇಳಿದ್ರು. ನನಗೂ ಅದು ಸರಿ ಅನ್ನಿಸಿತು. ಹಾಗಾಗಿ ಅವರಿಗೆ ಹೇಳಿದ್ದೇನೆ. ಕಳೆದ ತಿಂಗಳೇ ಅವರಿಗೆ ಕಥೆ ಹೇಳಬೇಕಿತ್ತು. ಆದರೆ ಆಗಲಿಲ್ಲ. ಆದಷ್ಟು ಬೇಗ ಕಥೆ ಹೇಳುತ್ತೇನೆ. ಒಪ್ಪೋದು ಬಿಡೋದು ಅವರಿಗೆ ಬಿಟ್ಟಿದ್ದು” ಎನ್ನುತ್ತಾರೆ ಸುದೀಪ್.

LEAVE A REPLY

Connect with

Please enter your comment!
Please enter your name here