ಪುತ್ರ ಆರ್ಯನ್‌ ಪ್ರಕರಣದಿಂದಾಗಿ ಶಾರುಖ್ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಾರೆ ಎಂದು ಹಿರಿಯ ನಟ ಶತ್ರುಜ್ಞ ಸಿನ್ಹಾ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮೌನ ಮುರಿಯದ ಬಾಲಿವುಡ್‌ ಮಂದಿಯನ್ನು ಅವರು ಪುಕ್ಕಲರು ಎಂದಿದ್ದಾರೆ!

ಶಾರುಖ್ ಖಾನ್ ಪುತ್ರ ಆರ್ಯನ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ನಲ್ಲಿ ಹಿರಿಯರು ಯಾರೂ ಮಾತನಾಡಿರಲಿಲ್ಲ. ದೊಡ್ಡ ಉದ್ಯಮದಲ್ಲಿ ನಾಲ್ಕಾರು ಮಂದಿ ಯುವ ನಟ-ನಟಿಯರಷ್ಟೇ ಶಾರುಖ್ ಬೆಂಬಲಕ್ಕೆ ಬಂದಿದ್ದರು. ಇದೀಗ ಹಿರಿಯ ನಟ ಶತ್ರುಜ್ಞ ಸಿನ್ಹಾ ಮೌನ ಮುರಿದಿದ್ದಾರೆ. ಶಾರುಖ್‌ ಖಾನ್ ಅವರನ್ನು ವಹಿಸಿಕೊಂಡು ಮಾತನಾಡಿರುವ ಅವರು, “ಚಿತ್ರರಂಗದಲ್ಲಿ ಎಲ್ಲರೂ ಸೇಪ್ ಜೋನ್‌ನಲ್ಲಿರಲು ಬಯಸುತ್ತಾರೆ. ಸಂಕಷ್ಟಕ್ಕೀಡಾದವರು ತಾವೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಿ ಎನ್ನುವ ಧೋರಣೆ ಅವರದು. ಚಿತ್ರರಂಗದ ತುಂಬಾ ಪುಕ್ಕಲರೇ ತುಂಬಿದ್ದಾರೆ!” ಎಂದು ದಿಟ್ಟತನದ ಹೇಳಿಕೆ ನೀಡಿದ್ದಾರೆ.

ಪ್ರಕರಣಕ್ಕೆ ಧರ್ಮದ ಲೇಪನ ನೀಡಲು ಶತ್ರುಜ್ಞ ಸಿನ್ಹಾ ಇಚ್ಛಿಸುತ್ತಿಲ್ಲ. ಆದರೆ ಅವರು ತಮ್ಮ ನಿಲುವಿನಲ್ಲಿ ಸ್ಪಷ್ಟವಾಗಿದ್ದಾರೆ. “ಶಾರುಖ್ ಖಾನ್ ಪುತ್ರ ಎನ್ನುವ ಒಂದೇ ಕಾರಣಕ್ಕೇ ಅರ್ಯನ್‌ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಇದೇ ಪ್ರಕರಣದಲ್ಲಿ ಮೂನ್ಮೂನ್ ಧಮೇಚಾ, ಅರ್ಬಾಜ್‌ ಮರ್ಚೆಂಟ್‌ ಮುಂತಾದವರು ಕೂಡ ಆರೋಪಿಗಳು. ಆದರೆ ಯಾರು ಇವರ ಬಗ್ಗೆ ಮಾತನಾಡುತ್ತಿಲ್ಲ. ಹಿಂದೊಮ್ಮೆ ಇಂತಹ ಪ್ರಕರಣಗಳಲ್ಲಿ ನಟಿ ದೀಪಿಕಾ ಪಡುಕೋಣೆ ಅವರನ್ನಷ್ಟೇ ಟಾರ್ಗೆಟ್ ಮಾಡಿದ್ದರು. ಪ್ರಕರಣದಲ್ಲಿ ಇತರೆ ಆರೊಪಿಗಳಿದ್ದರೂ ಆಕೆಯ ಸುತ್ತಲೇ ಸುದ್ದಿ ಮಾಡಿದ್ದರು. ಈ ಬಾರಿ ಶಾರುಖ್ ಪುತ್ರ ಎನ್ನುವ ಕಾರಣಕ್ಕೆ ಆರ್ಯನ್‌ ಟೀಕೆಗೆ ಗುರಿಯಾಗಿದ್ದಾನೆ” ಎಂದಿದ್ದಾರೆ ಶತ್ರುಜ್ಞ. ಆರ್ಯನ್‌ ಬಳಿ ಡ್ರಗ್ಸ್ ಪತ್ತೆಯಾಗಿಲ್ಲ ಎನ್ನುವ ಅಂಶವನ್ನೂ ಶತ್ರುಜ್ಞ ಪ್ರಸ್ತಾಪಿಸಿದ್ದಾರೆ. ಅನಗತ್ಯವಾಗಿ ಆರ್ಯನ್ ಪ್ರಕರಣಕ್ಕೆ ಹೆಚ್ಚಿನ ಆಸಕ್ತಿ ಕೊಡಲಾಗುತ್ತಿದೆ ಎನ್ನುವುದು ಅವರ ಗ್ರಹಿಕೆ.

“ಇಂತಹ ಪ್ರಕರಣಗಳಲ್ಲಿ ಆರೋಪಿಗಳ ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡಲಾಗುತ್ತದೆ. ಈ ಪ್ರಕರಣದಲ್ಲೇಕೆ ಈ ಪರೀಕ್ಷೆಗಳು ನಡೆದಿಲ್ಲ?” ಎಂದು ಅವರು ಪ್ರಶ್ನಿಸಿದ್ದಾರೆ. ಬಾಲಿವುಡ್‌ನ ಸ್ಟಾರ್ ಹೀರೋಗಳಾದ ಖಾನ್‌ಗಳು ಟ್ರೋಲಿಂಗ್‌ಗೆ ಒಳಗಾಗುವುದನ್ನು ಅವರು ಒಪ್ಪಿಕೊಳ್ಳುತ್ತಾರೆ. “ಅವರನ್ನು ಏಕಾಏಕಿ ಆಂಟಿ-ನ್ಯಾಷನಲ್‌ ಎಂದು ಕರೆದುಬಿಡುತ್ತಾರೆ. ಇಲ್ಲವೇ ಪಾಕಿಸ್ತಾನಕ್ಕೆ ತೆರಳಲಿ ಎನ್ನುತ್ತಾರೆ. ಶಾರುಖ್ ಕೂಡ ಇಂತಹ ಸಂದರ್ಭಗಳನ್ನು ಕೆಲವು ಬಾರಿ ಎದುರಿಸಿದ್ದಾರೆ” ಎಂದಿದ್ದಾರೆ ಶತ್ರುಜ್ಞ. ಹಿರಿಯ ನಟನ ಹೇಳಕೆಯೀಗ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಮುಂದಿನ ದಿನಗಳಲ್ಲಿ ಶತ್ರುಜ್ಞ ಹೇಳಿಕೆಗೆ ಯಾರು, ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎನ್ನುವ ಕುತೂಹಲ ಮನೆಮಾಡಿದೆ.

LEAVE A REPLY

Connect with

Please enter your comment!
Please enter your name here