ವಾರಾಹಿ ಪ್ರೊಡಕ್ಷನ್ಸ್‌ನ ನೂತನ ಸಿನಿಮಾ ಮೂಲಕ ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ನಾಳೆ ಅವರ ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಸಿನಿಮಾರಂಗಕ್ಕೆ ಪರಿಚಯವಾಗುತ್ತಿರುವ ಹೊತ್ತಿನಲ್ಲಿ ಕಿರೀಟಿ ತಮ್ಮ ನೆಚ್ಚಿನ ನಟ ಅಪ್ಪುರನ್ನು ಸ್ಮರಿಸಿ ಪೋಸ್ಟ್ ಹಾಕಿದ್ದಾರೆ.
“ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸ 10 ವರ್ಷಗಳದ್ದು. ಆದರೂ ಆ ನೆನಪುಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ..” ಎಂದು ಆರಂಭವಾಗುವ ಸಂದೇಶವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ ಕಿರೀಟಿ. ತಮ್ಮ ನೆಚ್ಚಿನ ಪುನೀತ್ ರಾಜಕುಮಾರ್ ಅವರೊಂದಿಗಿನ ಫೋಟೊಗಳನ್ನು ಹಾಕಿರುವ ಕಿರೀಟಿ ಅಗಲಿದ ನಟನನ್ನು ಸ್ಮರಿಸಿದ್ದಾರೆ. ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಪುತ್ರ ಕಿರೀಟಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದು, ಅವರ ಸಿನಿಮಾಗೆ ನಾಳೆ ಮುಹೂರ್ತ ನೆರವೇರುತ್ತಿದೆ. ತಾವು ಸಿನಿಮಾಗೆ ಬರಲು ಪುನೀತ್ ಸ್ಪೂರ್ತಿ ಎಂದಿದ್ದಾರವರು. ತೆಲುಗಿನ ಪ್ರತಿಷ್ಠಿತ ವಾರಾಹಿ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಕನ್ನಡ – ತೆಲುಗು ದ್ವಿಭಾಷಾ ಸಿನಿಮಾ ಮೂಲಕ ಅವರು ಸಿನಿಮಾರಂಗ ಪ್ರವೇಶಿಸುತ್ತಿದ್ದಾರೆ.
ಕಿರೀಟಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಪೋಸ್ಟ್ ಹೀಗಿದೆ – “ಈ ಎರಡು ಚಿತ್ರಗಳ ನಡುವಿನ ವ್ಯತ್ಯಾಸ 10 ವರ್ಷಗಳದ್ದು. ಆದರೂ ಆ ನೆನಪುಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ.”2010ರಲ್ಲಿ ‘ಜಾಕಿ’ ಚಿತ್ರದ ಬಿಡುಗಡೆಯ ಸಂದರ್ಭದಲ್ಲಿ ನಾನು ಅಪ್ಪು ಸರ್ ಅವರನ್ನು ಮೊದಲ ಸಲ ಭೇಟಿಯಾದೆ. ಅವರ ಡ್ಯಾನ್ಸ್, ಆ್ಯಕ್ಷನ್, ಸ್ಕ್ರೀನ್ ಪ್ರೆಸೆನ್ಸ್ ನೋಡಿ ಅಚ್ಚರಿಗೊಂಡಿದ್ದೆ. ಆದರೆ, ಅವರು ಆಫ್‌ಸ್ಕ್ರೀನ್‌ನಲ್ಲಿದ್ದ ರೀತಿ ಮನಸ್ಸಿಗೆ ಹತ್ತಿರವಾಯಿತು. ನಾವು ಥಿಯೇಟರ್‌ನಿಂದ ನನ್ನ ಮನೆಗೆ ಹೋಗುತ್ತಿದ್ದಾಗ, ಮಳೆ ಬೀಳುತ್ತಿತ್ತು ಮತ್ತು ಪುನೀತ್ ಸರ್ ಅವರೇ ನಮ್ಮಿಬ್ಬರಿಗೂ ಕೊಡೆ ಹಿಡಿದರು. ನೃತ್ಯದ ಬಗ್ಗೆ ಮತ್ತು ಅವರ ಆಕ್ಷನ್ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದರು. ಚಿಕ್ಕ ಹುಡುಗನಿಗೆ ಕೊಡೆ ಹಿಡಿದ ಸೂಪರ್‌ಸ್ಟಾರ್. ನಮ್ಮ ಕನಸಿನಲ್ಲಿಯೂ ಊಹಿಸಲಾಗದ ಸಂಗತಿ. ಅದು ಪುನೀತ್ ಸರ್ ಅವರಿಂದ ಮಾತ್ರ ಸಾಧ್ಯ. ಆ ದಿನ ನಾನು ಸರಳತೆಯ ಮೌಲ್ಯವನ್ನು ಅರಿತೆ. ಇದು ಅಪ್ಪು ಸರ್ ಅವರಿಂದ ನಾನು ಅತ್ಯಮೂಲ್ಯವಾದ ಪಾಠ. ಜಗತ್ತಿಗೆ ನನ್ನನ್ನು ಪರಿಚಯಿಸಿಕೊಳ್ಳಲು ಕೇವಲ ಒಂದು ದಿನ ಬಾಕಿ. ಇದೆಲ್ಲಾ ಶುರುವಾಗಿದ್ದು ಪುನೀತ್ ರಾಜ್‌ಕುಮಾರ್ ಸರ್ ಅವರಿಂದ. ಸ್ಫೂರ್ತಿ, ಮಾದರಿ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಜೀವನದ ಮಾರ್ಗದರ್ಶಿ ಅವರು. ‘ನಿಮ್ಮ ಮಾತುಗಳನ್ನು ಎಂದಿಗೂ ಮರೆಯುವುದಿಲ್ಲ ಸರ್’. ನನ್ನ ಮೇಲಿನ ನಿಮ್ಮ ನಂಬಿಕೆಯೇ ರಕ್ಷಾಕವಚ. ನಾನು ಅದನ್ನು ಜವಾಬ್ದಾರಿಯಿಂದ ನಿಭಾಯಿಸುತ್ತೇನೆ. ನೀವು ಮತ್ತು ನಮ್ಮ ಜನತೆ ಯಾವಾಗಲೂ ಹೆಮ್ಮೆಪಡುವಂತೆ ಮಾಡಲು ಸದಾ ಶ್ರಮಿಸುತ್ತೇನೆ”