‘ಸಪ್ತ ಸಾಗರದಾಚೆ ಎಲ್ಲೋ’ ಸರಣಿ ಸಿನಿಮಾಗಳ ಖಳನಾಯಕನಾಗಿ ಮಿಂಚಿದವರು ರಮೇಶ್‌ ಇಂದಿರಾ. ವಿಶಿಷ್ಟ ಮ್ಯಾನರಿಸಂನಿಂದ ಗಮನ ಸೆಳೆದಿದ್ದ ಅವರು ‘ಕೋಟಿ’ ಚಿತ್ರದ ಖಳನಾಗಿ ಮತ್ತೆ ತೆರೆಗೆ ಬರುತ್ತಿದ್ದಾರೆ. ಅವರ ‘ದಿನೂ ಸವ್ಕಾರ್‌’ ಪಾತ್ರದ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ.

ಇತ್ತೀಚೆಗಷ್ಟೇ ಬಿಡುಗಡೆಯಾದ ‘ಕೋಟಿ’ ಸಿನಿಮಾದ ಟೀಸರ್‌ನಲ್ಲಿ ನಟ ರಮೇಶ್‌ ಇಂದಿರಾ ಅವರ ಪಾತ್ರ ಆಸಕ್ತಿಕರವಾಗಿ ಕಾಣಿಸಿತ್ತು. ‘ಸಪ್ತ ಸಾಗರದಾಚೆ ಎಲ್ಲೋ’ ಸರಣಿ ಚಿತ್ರಗಳಲ್ಲಿ ಮಿಂಚಿದ್ದ ಈ ನಟ ‘ಕೋಟಿ’ಯ ಖಳನೂ ಹೌದು. ಪರಮ್‌ ನಿರ್ದೇಶನದ ಸಿನಿಮಾದಲ್ಲಿ ಅವರೇ ಪ್ರಮುಖ ಖಳನಾಯಕ. ಬೆಳ್ಳಗೆ ನೆರೆತ ಕೂದಲು, ಗಡ್ಡ, ಮೀಸೆ, ಕುತ್ತಿಗೆಗೊಂದು ಚೈನು, ಬಾಯಲ್ಲೊಂದು ಸಿಗರೇಟು, ಕಣ್ಣಲ್ಲಿ ಯಾರದೋ ಜೀವನವನ್ನು ಬುಡಮೇಲು ಮಾಡುವ ಸಂಚು! – ಇದು ‘ದಿನೂ ಸಾವ್ಕಾರ್‌’ ಪಾತ್ರ. ರಮೇಶ್‌ ಇಂದಿರಾ ಅವರು ಈ ಪಾತ್ರದಲ್ಲಿ ನಟಿಸುತ್ತಿದ್ದು, ಪಾತ್ರದ ಫಸ್ಟ್‌ಲುಕ್‌ ಪೋಸ್ಟರ್‌ ಬಿಡುಗಡೆಯಾಗಿದೆ.

‘ಕೋಟಿ’ ಟೀಸರ್‌ ಬಿಡುಗಡೆಯಾದಾಗ ರಮೇಶ್‌ ಇಂದಿರಾ ಪಾತ್ರ ಗಮನ ಸೆಳೆದಿತ್ತು. ಜೋರಾಗಿ ಮಳೆ ಸುರಿಯುತ್ತಿರುವಾಗ, ಹುಡುಗರೆಲ್ಲಾ ಕೊಡೆ ಹಿಡಿದಿರುವಾಗ ಕಾರಿಂದ ಇಳಿಯುತ್ತಿರುವ ಸಾವ್ಕಾರ್‌ ಚಿತ್ರ ಮತ್ತು ಹಿನ್ನೆಲೆ ಸಂಗೀತದ ಬಗ್ಗೆ ಸಿನಿಪ್ರಿಯರು ಮಾತನಾಡಿಕೊಂಡಿದ್ದರು. ಕತೆಯಲ್ಲಿ ವಿಲನ್ನುಗಳು ಹೇಗೆ ಆಕರ್ಷಿಸುತ್ತಾರೆ ಎನ್ನುವುದರ ಬಗ್ಗೆ ಕೋಟಿ ಸಿನಿಮಾದ ಬರಹಗಾರ ಮತ್ತು ನಿರ್ದೇಶಕ ಪರಮ್‌ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ವಿವರವಾಗಿ ಬರೆದುಕೊಂಡಿದ್ದಾರೆ. ‘ಸುಯೋಧನ ಇಲ್ಲದ ಮಹಾಭಾರತ ಇಲ್ಲ. ರಾವಣನಿಲ್ಲದ ರಾಮಾಯಣವಿಲ್ಲ. ಮನಸ್ಸಿನ ಆಳದಲ್ಲಿ ಹುದುಗಿರುವ ಆಸೆಗಳನ್ನು ಈ ಪಾತ್ರಗಳು ನಮಗೆ ಭೇಟಿ ಮಾಡಿಸುತ್ತವೆ. ಇಷ್ಟ ಇಲ್ಲ ಎಂದು ಎಷ್ಟೇ ಹೇಳಿದರೂ ಖಳನಾಯಕರ ಪಾತ್ರಕ್ಕೆ ಅದೇನೋ ಸೆಳೆತ ಇದೆ. ಇಲ್ಲದಿದ್ದರೆ ರಾವಣನ ಲಂಕೆ ಸುಭಿಕ್ಷವಾಗಿತ್ತು ಎಂದು ಓದಿದಾಗ ಯಾಕೆ ಖುಷಿಯಾಗಬೇಕು? ಸುಯೋಧನ ಮತ್ತು ಕರ್ಣನ ನಡುವಿನ ಗೆಳೆತವನ್ನು ನೋಡಿ ಯಾಕೆ ನಾವು ಭಾವುಕರಾಗಬೇಕು? ಕತೆಯನ್ನು ಮುಂದೆ ತೆಗೆದುಕೊಂಡು ಹೋಗುವವನು, ನಾಯಕನ ಮೌಲ್ಯಗಳನ್ನು ಪ್ರಶ್ನಿಸುವವನು, ಕತೆಗೊಂದು ಎನರ್ಜಿ ಕೊಡುವವನು ಖಳನಾಯಕ!’ ಎಂದು ಬರೆದುಕೊಂಡಿದ್ದಾರೆ ಪರಮ್.

ತಮ್ಮ ಸಿನಿಮಾದ ಖಳನಟನ ಪಾತ್ರವನ್ನು ನಿರ್ದೇಶಕ ಪರಮ್‌ ಅವರು ವಿವರಿಸಿರುವ ರೀತಿಯಿಂದ ಈ ಪಾತ್ರದ ಬಗೆಗಿನ ಎಕ್ಸೈಟ್‌ಮೆಂಟ್‌ ಇನ್ನಷ್ಟು ಜಾಸ್ತಿಯಾಗಿದೆ. ‘ಕೋಟಿಯ ಖಳನಾಯಕನ ಹೆಸರು ದಿನೂ ಸಾವ್ಕಾರ್.‌ ರಣತಂತ್ರದಲ್ಲಿ ಎತ್ತಿದ ಕೈ. ಬುದ್ಧಿವಂತ. ಸ್ವಲ್ಪ ಅನ್‌ಸ್ಟೇಬಲ್.‌ ತಾನು ಹೇಳಿದ್ದನ್ನು ಎಲ್ಲರೂ ಕೇಳಬೇಕು ಎಂದುಕೊಂಡಿರುವ ವ್ಯಕ್ತಿ. ಮಾತು ಕೇಳದವರನ್ನು ಕೇಳಿಸುತ್ತೇನೆ ಎನ್ನುವುದನ್ನು ನಂಬಿದವನು. ಸಿಕ್ಕಾಪಟ್ಟೆ ಮಜಾ ಕೊಡುವ ಪಾತ್ರ ದಿನೂ ಸಾವ್ಕಾರನದು. ರಮೇಶ್‌ ಇಂದಿರಾ ಈ ಪಾತ್ರವನ್ನು ನಿಭಾಯಿಸಿದ ರೀತಿ ನೋಡಿ ನಾನು ಆಲ್ಮೋಸ್ಟ್‌ ಗಾಬರಿಯಾಗಿದ್ದೇನೆ’ ಎಂದು ಅವರು ಬರೆದಿದ್ದಾರೆ. ಇದೇ ಜೂನ್‌ 14ರಂದು ಸಿನಿಮಾ ಬಿಡುಗಡೆ ಆಗಲಿದೆ.

LEAVE A REPLY

Connect with

Please enter your comment!
Please enter your name here