ಡಾರ್ಲಿಂಗ್ ಕೃಷ್ಣ, ಬೃಂದಾ ಆಚಾರ್ಯ ಮತ್ತು ಮಿಲನ ನಾಗರಾಜ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ತಮಿಳಿನಲ್ಲಿ ರೀಮೇಕ್ ಆಗಲಿದೆ. ಶಶಾಂಕ್ ನಿರ್ದೇಶನದಲ್ಲಿ ತೆರೆಗೆ ಬಂದಿದ್ದ ಚಿತ್ರಕ್ಕೆ ವಿಶ್ಲೇಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಶಶಾಂಕ್ ನಿರ್ದೇಶನದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ತಮಿಳಿನಲ್ಲಿ ರೀಮೇಕಾಗಲಿದೆ. ಕನ್ನಡ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ, ಬೃಂದಾ ಆಚಾರ್ಯ, ಮಿಲನ ನಾಗರಾಜ್ ನಟಿಸಿದ್ದರು. ತಮಿಳು ಅವತರಣಿಕೆಯಲ್ಲಿ ಡಾರ್ಲಿಂಗ್ ಕೃಷ್ಣ ಅವರ ಪಾತ್ರವನ್ನು ಶಿವಕಾರ್ತಿಕೇಯನ್ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ತಮಿಳಿನ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆ ‘ಕೌಸಲ್ಯ ಸುಪ್ರಜಾ ರಾಮ’ ರಿಮೇಕ್ ಹಕ್ಕನ್ನು ಖರೀದಿಸಿದ್ದು, ಅಲ್ಲಿನ ನೇಟಿವಿಟಿಗೆ ಹೊಂದುವಂತೆ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ಸಿನಿಮಾ ಮಾಡಲಿದೆ. ಸದ್ಯದಲ್ಲೇ ಈ ತಮಿಳು ಸಿನಿಮಾದ ಅಧಿಕೃತ ಘೋಷಣೆ ಹೊರಬೀಳಲಿದೆ. ‘ಪುರುಷ ಅಹಂ’ ಎಂದುಕೊಳ್ಳುವ ಸಾರ ಎಷ್ಟು ಸುಳ್ಳು ಎಂದು ತೋರಿಸುವ ಕತೆ ಚಿತ್ರದ್ದು. ಪುರುಷನೆಂಬ ಅಹಂನಲ್ಲಿ ಜೀವಿಸುತ್ತಿರುವ ಯುವಕ ಪರಿಸ್ಥಿತಿಗಳಿಗೆ ಎದುರಾಗಿ ಬದಲಾಗುತ್ತಾನೆ. ಚಿತ್ರದ ನಾಯಕಿಯರು, ನಾಯಕನ ತಾಯಿ ಹೇಗೆ ಅವನ ಮನಃಪರಿವರ್ತನೆಗೆ ಕಾರಣವಾಗುತ್ತಾರೆ ಎಂಬುದನ್ನು ನಿರ್ದೇಶಕ ಶಶಾಂಕ್ ಚಿತ್ರದಲ್ಲಿ ತೋರಿಸಿದ್ದಾರೆ. ಜುಲೈ 28ರಂದು ಬಿಡುಗಡೆಯಾಗಿದ್ದ ಈ ಸಿನಿಮಾದ ಇತರೆ ಪ್ರಮುಖ ಪಾತ್ರಗಳಲ್ಲಿ ಸುಧಾ ಬೆಳವಾಡಿ, ರಂಗಾಯಣ ರಘು, ಅಚ್ಯುತ್ ಕುಮಾರ್, ನಾಗಭೂಷಣ ನಟಿಸಿದ್ದರು. ಬಿ ಸಿ ಪಾಟೀಲ್ ಮತ್ತು ಶಶಾಂಕ್ ನಿರ್ಮಾಣದ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದರು.