ಶ್ರೀಕಾಂತ್‌ ಕಟಗಿ ನಿರ್ದೇಶನದಲ್ಲಿ ನವೀನ್‌ ಶಂಕರ್‌ ನಟಿಸಿರುವ ‘ಕ್ಷೇತ್ರಪತಿ’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಪೋಸ್ಟರ್‌, ಟೀಸರ್‌ನಲ್ಲಿ ಗಮನ ಸೆಳೆದಿದ್ದ ಸಿನಿಮಾ ಟ್ರೈಲರ್‌ ಮೂಲಕ ನಿರೀಕ್ಷೆ ಹೆಚ್ಚಿಸಿದೆ. ರವಿ ಬಸ್ರೂರು ಸಂಗೀತ ಸಂಯೋಜನೆಯ ಸಿನಿಮಾ ಆಗಸ್ಟ್‌ 18ರಂದು ತೆರೆಕಾಣಲಿದೆ.

ಇತ್ತೀಚಿನ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿದ್ದ ‘ಕ್ಷೇತ್ರಪತಿ’ ಟ್ರೈಲರ್‌ ಬಿಡುಗಡೆಯಾಗಿದೆ. ರೈತ ಹೋರಾಟದ ಕತೆಯ ಸಿನಿಮಾದ ಟ್ರೈಲರ್‌ ಇಂಟೆನ್ಸ್‌ ದೃಶ್ಯಗಳನ್ನು ಒಳಗೊಂಡಿದ್ದು, ರವಿ ಬಸ್ರೂರು ಹಿನ್ನೆಲೆ ಸಂಗೀತದ ಜೊತೆ ಗಮನ ಸೆಳೆಯುತ್ತದೆ. ‘ಗುಳ್ಟು’, ‘ಹೊಂದಿಸಿ ಬರೆಯಿರಿ’, ‘ಧರಣಿ ಮಂಡಲ ಮಧ್ಯದೊಳಗೆ’, ‘ಗುರುದೇವ್‌ ಹೊಯ್ಸಳ’ ಸಿನಿಮಾಗಳಲ್ಲಿ ಉತ್ತಮ ನಟನೆಯಿಂದ ಮೆಚ್ಚುಗೆ ಪಡೆದ ನವೀನ್‌ ಶಂಕರ್‌ ವೃತ್ತಿ ಬದುಕಿನಲ್ಲಿ ‘ಕ್ಷೇತ್ರಪತಿ’ ಮೈಲುಗಲ್ಲಾಗುವ ಸೂಚನೆ ಸಿಗುತ್ತದೆ. ಚಿತ್ರದಲ್ಲಿ ಅವರು ‘ಬಸವ’ ಪಾತ್ರದಲ್ಲಿ ನಟಿಸಿದ್ದಾರೆ. ನಟಿ ಅರ್ಚನಾ ಜೋಯಿಸ್‌ ಅವರು ರೈತ ಹೋರಾಟಕ್ಕೆ ಬೆಂಬಲವಾಗಿ ನಿಂತ ಪತ್ರಕರ್ತೆ ‘ಭೂಮಿಕಾ’ ಆಗಿ ಕಾಣಿಸಿಕೊಂಡಿದ್ದಾರೆ.

ಟ್ರೈಲರ್‌ನಲ್ಲಿ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸುವುದು, ರೈತರ ಅಸಹಾಯಕತೆಯನ್ನು ತನ್ನ ಲಾಭಕ್ಕೆ ಬಳಕೆ ಮಾಡಿಕೊಳ್ಳುವ ಭೂಮಾಲೀಕ, ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಯುವ ರೈತ ನಾಯಕ ‘ಬಸವ’ (ನವೀನ್‌ ಶಂಕರ್‌), ರೈತರ ಹೋರಾಟವನ್ನು ಬೆಂಬಲಿಸುತ್ತಾ ರೈತ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಾ ಅವರಿಗೆ ಸ್ಥೈರ್ಯ ತುಂಬುವ ಪಾತ್ರದಲ್ಲಿ ಅರ್ಚನಾ ಜೋಯಿಸ್‌ ಅವರನ್ನು ಕಾಣಬಹುದು. ಶ್ರೀಕಾಂತ್‌ ಕಟಗಿ ಚೊಚ್ಚಲ ನಿರ್ದೇಶನದ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ಅಚ್ಯುತ್‌ ಕುಮಾರ್‌, ರಾಹುಲ್‌ ಐನಾಪುರ, ಕೃಷ್ಣ ಹೆಬ್ಬಾಳೆ, ಶೈಲಶ್ರೀ ಅರಸ್‌, ನಾಟ್ಯರಂಗ, ಹರ್ಷ ಅರ್ಜುನ್‌ ಇದ್ದಾರೆ. ‘ಚಿತ್ರದಲ್ಲಿ ನಾನು ಇಂಜಿನಿಯರ್‌ ಓದಿರುವ ಯುವಕನಾಗಿ ಕಾಣಿಸಿಕೊಂಡಿದ್ದೇನೆ. ಪ್ರಾರಂಭದಲ್ಲಿ ಅವನು ತನ್ನ ಪಾಡಿಗೆ ತಾನು ಇರುತ್ತಾನೆ. ಜೀವನದಲ್ಲಿ ನಡೆಯುವ ಅನಿರೀಕ್ಷಿತ ಘಟನೆಗಳಿಂದ ಅವನು ಹೋರಾಟದ ಮಾರ್ಗ ಹಿಡಿಯುತ್ತಾನೆ. ಈ ಬಸವ ಎಲ್ಲರೊಳಗೂ ಇದ್ದಾನೆ. ಸಮಯ ಬಂದಾಗ ಹೊರ ಬರುತ್ತಾನೆ. ಚಿತ್ರ ನೋಡಿದ ಮೇಲೆ ಅವನ ಬಗ್ಗೆ ನಿಮಗೆ ತಿಳಿಯುತ್ತದೆ’ ಎನ್ನುತ್ತಾರೆ ನವೀನ್‌ ಶಂಕರ್‌. ಆಶ್ರಯ ಕ್ರಿಯೇಷನ್ಸ್‌ ಬ್ಯಾನರ್‌ನಡಿ ತಯಾರಾಗಿರುವ ಚಿತ್ರವನ್ನು KRG ಸ್ಟುಡಿಯೋಸ್‌ ಬಿಡುಗಡೆ ಮಾಡುತ್ತಿದೆ. Y B V ಶಿವಸಾಗರ್‌ ಛಾಯಾಗ್ರಹಣ, ಮನು ಶೇಡ್ಗಾರ್‌ ಸಂಕಲನ ಚಿತ್ರಕ್ಕಿದೆ.

Previous articleರಜನಿಯನ್ನು ಸಂಭ್ರಮಿಸುವವರ ಸಿನಿಮಾ ‘ಜೈಲರ್‌’
Next article‘ಕಿಂಗ್‌ ಆಫ್‌ ಕೋಥಾ’ ಟ್ರೈಲರ್‌ | ದುಲ್ಕರ್‌ ಸಲ್ಮಾನ್‌ ಮಲಯಾಳಂ ಸಿನಿಮಾ ಆಗಸ್ಟ್‌ 24ಕ್ಕೆ

LEAVE A REPLY

Connect with

Please enter your comment!
Please enter your name here