ನಟ ಧನಂಜಯ ನಿರ್ಮಾಣದ ಮೂರನೇ ಸಿನಿಮಾ ‘ಟಗರು ಪಲ್ಯ’. ಈ ಚಿತ್ರದ ನಾಯಕಿಯಾಗಿ ನಟ ಪ್ರೇಮ್‌ ಪುತ್ರಿ ಅಮೃತಾ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಚಿತ್ರದಲ್ಲಿ ಅವರಿಗೆ ಹಳ್ಳಿ ಹುಡುಗಿ ಪಾತ್ರ. ನಾಗಭೂಷಣ್‌ ಚಿತ್ರದ ಹೀರೋ.

ಚಿತ್ರರಂಗದ ನಂಟು ಇರುವ ಕಲಾವಿದರು ಹಾಗೂ ತಂತ್ರಜ್ಞರು ತಮ್ಮ ಮಕ್ಕಳನ್ನು ಸಿನಿಮಾಗೆ ಪರಿಚಯಿಸುವ ಜಾಯಮಾನ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದಕ್ಕಾಗಿ ಸಾಕಷ್ಟು ತಯಾರಿಯೂ ನಡೆಯುತ್ತದೆ. ಇದೀಗ ‘ನೆನಪಿರಲಿ’ ಸಿನಿಮಾ ಖ್ಯಾತಿಯ ನಟ ಪ್ರೇಮ್‌ ಪುತ್ರಿ ಅಮೃತಾ ಸಿನಿಮಾಗೆ ಬರುತ್ತಿದ್ದಾರೆ. ನಟ ಧನಂಜಯ ನಿರ್ಮಾಣದ ವಿಶಿಷ್ಟ ಶೀರ್ಷಿಕೆಯ ‘ಟಗರು ಪಲ್ಯ’ ಚಿತ್ರದ ನಾಯಕಿಯಾಗಿ ಅಮೃತಾ ಸಿನಿಮಾಗೆ ಪರಿಚಯವಾಗುತ್ತಿದ್ದಾರೆ. ಈ ಬಗ್ಗೆ ಖುಷಿಯಾಗಿರುವ ನಟ ಪ್ರೇಮ್‌, “ಮಗಳು ಚಿತ್ರರಂಗಕ್ಕೆ ಬರುತ್ತಿರೋದು ಖುಷಿ ಇದೆ. ಆಕೆ ಓದುವುದರಲ್ಲೂ ಮುಂದಿದ್ದಾಳೆ. ಈಗ ಸಿನಿಮಾಗೂ ಬರುತ್ತಿದ್ದಾಳೆ. ಚಿತ್ರದ ಪಾತ್ರಕ್ಕಾಗಿ ಹಲವು ದಿನಗಳಿಂದ ಸಿದ್ಧತೆ ನಡೆಸುತ್ತಿದ್ದಾಳೆ. ನಿರ್ದೇಶಕ ಉಮೇಶ್‌ ಕೆ. ಕೃಪ ತಾವು ಮಾಡಿಕೊಂಡ ಕತೆ ಹೇಳಿದಾಗ ಬೇಡವೆಂದು ಹೇಳಲಾಗಲಿಲ್ಲ. ಕನ್ನಡಿಗರು ಬೆಂಬಲಿಸುವ ವಿಶ್ವಾಸವಿದೆ” ಎಂದಿದ್ದಾರೆ.

‘ಟಗರು ಪಲ್ಯ’ ಚಿತ್ರದಲ್ಲಿನ ಅಮೃತಾ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಬಟ್ಟಲುಗಣ್ಣಿನ ಹುಡುಗಿ ಇಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. “ಸಿನಿಮಾಗೆ ಫ್ರೆಶ್ ಫೇಸ್‌ನ ಹುಡುಕಾಟದಲ್ಲಿದ್ದೆವು. ಕಾರ್ಯಕ್ರಮವೊಂದರಲ್ಲಿ ಪ್ರೇಮ್ ಪುತ್ರಿ ಭೇಟಿಯಾದಾಗ ಈ ಸಿನಿಮಾ ಬಗ್ಗೆ ಹೇಳಿದೆ. ಕಥೆ ಕೇಳಿ ಹೇಳುತ್ತೇನೆ ಎಂದಿದ್ದರು. ಅವರಿಗೂ ಈ ಕತೆ ಇಷ್ಟವಾಗಿ ಸಿನಿಮಾ ಮಾಡಲು ಒಪ್ಪಿಕೊಂಡರು. ಪಾತ್ರಕ್ಕಾಗಿ ಕಳೆದ 20 ದಿನಗಳಿಂದ ಅವರಿಗೆ ವರ್ಕ್‌ಶಾಪ್‌ ಮಾಡುತ್ತಿದ್ದೇವೆ” ಎನ್ನುತ್ತಾರೆ ಚಿತ್ರದ ನಿರ್ದೇಶಕ ಉಮೇಶ್‌ ಕೆ. ಕೃಪ. ಬಯೋ ಮೆಡಿಕಲ್ ಇಂಜಿನಿಯರಿಂಗ್ ಓದುತ್ತಿರುವ ಅಮೃತಾ ಓದಿನ ಜೊತೆ ನಟನೆಯಲ್ಲೂ ತೊಡಗಿಸಿಕೊಳ್ಳುವ ಇರಾದೆ ಹೊಂದಿದ್ದಾರೆ. ‘ಟಗರು ಪಲ್ಯ’ ಚಿತ್ರದೊಂದಿಗೆ ಉಮೇಶ್‌ ಕೆ. ಕೃಪ ನಿರ್ದೇಶಕರಾಗುತ್ತಿದ್ದಾರೆ. ನಾಗಭೂಷಣ್‌ ಚಿತ್ರದ ಹೀರೋ. ವಾಸುಕಿ ವೈಭವ್ ಸಂಗೀತ, ಎಸ್‌.ಕೆ.ರಾವ್‌ ಛಾಯಾಗ್ರಹಣ, ವಿನೋದ್ ಮಾಸ್ಟರ್ ಸಾಹಸ ಚಿತ್ರಕ್ಕಿದೆ. ಡಿಸೆಂಬರ್‌ ಮೊದಲ ವಾರದಿಂದ ಶೂಟಿಂಗ್‌ ಶುರು.

LEAVE A REPLY

Connect with

Please enter your comment!
Please enter your name here