ಇಡೀ ಸರಣಿ ಒಮ್ಮೆಯೂ ಒಂದು ಸಂಚಿಕೆಯಲ್ಲೂ ನೋಡುಗರಿಗೆ ಬೋರ್ ಹೊಡೆಸುವುದಿಲ್ಲ. ಎಲ್ಲ ಸಂಚಿಕೆಗಳೂ ಕೇವಲ 24 ನಿಮಿಷಗಳ ಅವಧಿ ಆದ್ದರಿಂದ ಸರಣಿ ಬೇಗ ಬೇಗ ಮುಂದಕ್ಕೆ ಹೋಗುತ್ತದೆ. ಸಂಭಾಷಣೆ, ಅನಿಮೇಷನ್ ಎಲ್ಲವೂ ಬಹಳ ಉತ್ತಮ ಗುಣಮಟ್ಟವನ್ನು ಹೊಂದಿವೆ. ಮೇಲ್ನೋಟಕ್ಕೆ ಕುಂಗ್ ಫು ಪಾಂಡಾ ಮಕ್ಕಳ ಸರಣಿ ಎನಿಸಿದರೂ ದೊಡ್ಡವರನ್ನೂ ಹಿಡಿದು ಕೂರಿಸುವಂತ ಶಕ್ತಿ ಇರುವ ಸರಣಿ. ‘ಕುಂಗ್ ಫು ಪಾಂಡಾ : ದ ಡ್ರಾಗನ್ ನೈಟ್ಸ್’ ಸೀಸನ್ 3 ನೆಟ್‌ಫ್ಲಿಕ್ಸ್‌ನಲ್ಲಿ stream ಆಗುತ್ತಿದೆ.

ಕುಂಗ್ ಫು ಪಾಂಡಾ ಅಭಿಮಾನಿಗಳಿಗೆ ಪೋ ಹೊಸಬನಲ್ಲ. ಕಳೆದ ಎರಡು ಜನಪ್ರಿಯ ಸೀಸನ್ನುಗಳ ಬಳಿಕ ಕಾತರದಲ್ಲಿ ಅಭಿಮಾನಿಗಳು ಕಾಯುತ್ತಿದ್ದ ಮೂರನೇ ಸೀಸನ್ ಬಿಡುಗಡೆಯಾಗಿದೆ. ‘ಕುಂಗ್ ಫು ಪಾಂಡಾ : ದ ಡ್ರಾಗನ್ ನೈಟ್’ ಈ ಸರಣಿಯ ಮೂರನೇ ಸೀಸನ್. ಇದರಲ್ಲಿ ಡ್ರಾಗನ್ ನೈಟುಗಳು ತಮ್ಮ ವಿರೋಧಿಗಳನ್ನು ಮಟ್ಟಹಾಕಿ ಪ್ರಬಲವಾದ ಟಯಾನಶಾಂಗ್ ಶಸ್ತ್ರ ಪಡೆಯನ್ನು ನಿರ್ಮೂಲನೆ ಮಾಡುವ ಕಥಾನಕವಿದೆ.
ಈ ಮೂರನೇ ಸೀಸನ್ ‘ಕುಂಗ್ ಫು ಪಾಂಡಾ : ದ ಡ್ರಾಗನ್ ನೈಟ್’ ಇಂಗ್ಲೆಂಡ್‌ಗೆ ಪ್ರಯಾಣ ಮಾಡುವ ಪೋ ಮತ್ತು ಡ್ರಾಗನ್ ನೈಟ್ಸ್ ಬಗೆಗಿನ ಕಥೆ. ವಾಂಡರಿಂಗ್ ಬ್ಲೇಡಿಗೆ ರೀಟಾ ಒರಾ ದನಿಯಾಗಿದ್ದರೆ, ಪೋಗೆ ಜಾಕ್ ಬ್ಲಾಕ್ ದನಿಯಾಗಿದ್ದಾರೆ.

ಡ್ರಾಗನ್ ನೈಟ್ಸ್ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ತೋರಿರುವುದನ್ನು ವೀಕ್ಷಕರು ಈ ಸೀಸನ್ನಿನಲ್ಲಿ ಕಾಣಬಹುದು. ಡ್ರಾಗನ್ ನೈಟ್ಸ್ ತಂಡ ಒಂದಷ್ಟು ಸಹಯೋಗಿಗಳನ್ನು ಮಾಡಿಕೊಳ್ಳುತ್ತಾರೆ. ಹಾಗೆಯೇ ಒಂದಷ್ಟು ಹಳೆಯ ವೈರಿಗಳನ್ನೂ ಎದುರು ಹಾಕಿಕೊಳ್ಳುವ ಪ್ರಸಂಗ ಬರುತ್ತದೆ. ಟಯಾನಶಾಂಗ್ ಶಸ್ತ್ರಗಳನ್ನು ಹುಡುಕಿ ನಾಶ ಮಾಡುವುದೇ ಇವರ ಮುಂದಿರುವ ಮುಖ್ಯವಾದ ಗುರಿ ಮತ್ತು ಸವಾಲು. ಅದು ಅಷ್ಟು ಸುಲಭಕ್ಕೆ ಆಗುವ ಕೆಲಸವಲ್ಲ ಮತ್ತು ಒಗ್ಗಟ್ಟು ಬಹಳ ಮುಖ್ಯ. ಪೋ ತನ್ನ ತಂದೆ, ಹುಟ್ಟು ಮತ್ತು ಜನ್ಮಸ್ಥಳದ ವಿವರಗಳನ್ನು ತಿಳಿದ ಬಳಿಕ ಏನೇನು ಘಟನೆಗಳು ನಡೆಯುತ್ತವೆ ಎನ್ನುವುದೇ ಈ ಮೂರನೇ ಸೀಸನ್ನಿನ ಸಾರಾಂಶ.

ಮೂರನೇ ಸೀಸನ್ ಆರಂಭದಲ್ಲೇ ಪೋ, ರುಕ್ಮಿಣಿ, ವಾಂಡೇರಿಂಗ್ ಬ್ಲೇಡ್, ಪೋ ತಂದೆ ಮತ್ತು ಅಕ್ನ ಹಡಗಿನಲ್ಲಿ ಪ್ರಯಾಣ ಮಾಡುತ್ತಾ ಸಮುದ್ರಗಳ್ಳರ ರಾಣಿ ಫಾರೂಜಾನ್ ಅನ್ನು ಎದುರಾಗುತ್ತಾರೆ. ಪೋ ತಂದೆ ಒಂದಾನೊಂದು ಕಾಲದಲ್ಲಿ ಸಮುದ್ರಗಳ್ಳ ಆಗಿದ್ದಾಗ ಈಕೆ ಆತನ ಪ್ರೇಯಸಿಯಾಗಿರುತ್ತಾಳೆ. ಪೋಗೆ ಇದಾವುದರ ಬಗ್ಗೆಯೂ ಅರಿವಿಲ್ಲದೆ ಉದ್ವೇಗಕ್ಕೆ ಒಳಗಾಗಿ ಎಲ್ಲರನ್ನೂ ಪ್ರಶ್ನಿಸಲು ತೊಡಗುತ್ತಾನೆ. ಆತನ ಉದ್ವೇಗ ಮತ್ತು ಅತಿನಾಟಕೀಯತೆ ವೀಕ್ಷಕರಲ್ಲಿ ನಗೆಯ ಬುಗ್ಗೆಯನ್ನು ಉಕ್ಕಿಸುತ್ತದೆ

ಇಡೀ ತಂಡ ಅಪಾಯದಲ್ಲಿದೆ ಎಂದು ತಿಳಿದಾಗ ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎನ್ನುವ ವಿಚಾರದಲ್ಲಿ ಡ್ರಾಗನ್ ನೈಟ್ಸ್ ಬಹಳ ಪರಿಣತರು. ಈ ತಂಡ ಎಲ್ಲೇ ಹೋದರೂ ಮೇಹಮ್ ಕೂಡ ಹಿಂಬಾಲಿಸುತ್ತಾನೆ. ಒಂದು ವಿಧಕ್ಕೆ ಅದು ಒಳ್ಳೆಯದೇ. ಯಾವುದೇ ಸಮಸ್ಯೆ ಬಂದರೂ ಕೊನೆಗೆ ಎಲ್ಲರೂ ಒಟ್ಟಾಗಿಯೇ ಪರಿಹಾರ ಕಂಡುಕೊಳ್ಳುತ್ತಾರೆ. ಸಮುದ್ರಗಳ್ಳರ ರಾಣಿಯಿಂದ ಹೇಗೋ ತಪ್ಪಿಸಿಕೊಂಡು ಮುಂದಕ್ಕೆ ಸಾಗುವಾಗ ಇಂಗ್ಲೆಂಡ್ ನೈಟ್ಸ್ ಎದುರಾಗುತ್ತಾರೆ.

ಇವರನ್ನು ಬಂಧಿಸಿ ಇಂಗ್ಲೆಂಡ್‌ಗೆ ಕರೆದೊಯ್ಯುತ್ತಾರೆ. ಅಲ್ಲಿಂದಲೂ ಹೇಗೋ ತಪ್ಪಿಸಿಕೊಳ್ಳುವಲ್ಲಿ ಡ್ರಾಗನ್ ನೈಟ್ಸ್ ಯಶಸ್ವಿಯಾಗುತ್ತಾರೆ. ಲೂತೆರ ಸಹೋದರ ಮತ್ತು ಟಯಾನಶಾಂಗ್ ಆಯುಧಗಳ ಮೇಲೆ ಹಿಡಿತ ಇರುವ ಸೀರ್ ಆಲ್ಫ್ರೆಡ್ ಬಗ್ಗೆ ರಾಣಿಯನ್ನು ಭೇಟಿ ಮಾಡಿ ಹೆಚ್ಚಿನ ಮಾಹಿತಿ ಪಡೆಯುವ ಉದ್ದೇಶ ಇವರಿಗೆ. ಈ ಸೀಸನ್ನಿನ ಮುಖ್ಯ ಉದ್ದೇಶ ಎಂದರೆ ಆಲ್ಫ್ರೆಡ್ ಎಲ್ಲಿದ್ದಾನೆ ಎಂದು ಕಂಡುಹಿಡಿಯುವುದು ಮತ್ತು ಈ ಆಯುಧಗಳನ್ನು ನಾಶ ಮಾಡುವುದು. ಪೋ ರಾಣಿಯೊಂದಿಗೆ ಕೈಜೋಡಿಸುವ ಸನ್ನಿವೇಶ ನೋಡಲು ಬಹಳ ಪರಿಣಾಮಕಾರಿಯಾಗಿದೆ. ಚದುರಂಗದ ಆಟದ ಬಗ್ಗೆ ಏನೂ ಸುಳಿವು ಇಲ್ಲದಿದ್ದರೂ ಅವನು ರಾಣಿಯೊಂದಿಗೆ ಸ್ನೇಹ ಬೆಳೆಸುವುದು ನೋಡಲು ಮಜವಾಗಿದೆ. ಆಕೆಯನ್ನು ಪುಸಲಾಯಿಸಿ ಅರಮನೆಯಲ್ಲಿದ್ದ ಗುಪ್ತದ್ವಾರದ ಬಗ್ಗೆ ಮಾಹಿತಿ ಪಡೆದು ತನ್ನ ಸ್ನೇಹಿತರೊಂದಿಗೆ ಅಲ್ಲಿಂದ ತಪ್ಪಿಸಿಕೊಳ್ಳುವ ಮಾರ್ಗವನ್ನು ಹುಡುಕುತ್ತಾನೆ.

ಆಲ್ಫ್ರೆಡ್ ಅನ್ನು ಹುಡುಕುವುದಕ್ಕೆ ಬಹಳ ಪ್ರಯತ್ನಗಳು ನಡೆಯುತ್ತವೆ ಮತ್ತು ಆಯುಧಗಳು ಹೇಗೆ ಅವನ ಹಿಡಿತಕ್ಕೆ ಬಂದವು ಎನ್ನುವುದರ ಬಗ್ಗೆಯೂ ಪೋ ಮತ್ತು ತಂಡ ಹುಡುಕಾಟ ಶುರು ಮಾಡುತ್ತಾರೆ. ಆಲ್ಫ್ರೆಡ್ ತಾನು ಈ ಆಯುಧಗಳಿಂದ ಪ್ರಪಂಚದಲ್ಲಿ ಶಾಂತಿ ನೆಲೆಸುವ ಹಾಗೆ ಮಾಡುತ್ತೀನಿ ಎಂಬ ಭ್ರಮೆಯಲ್ಲಿ ಇರುತ್ತಾನೆ ಆದರೆ ಅದರಿಂದ ಇಡೀ ಪ್ರಪಂಚದ ವಿನಾಶ ಎಂಬ ಸುಳಿವು ಅವನಿಗೆ ಇಲ್ಲ ಎನಿಸುತ್ತದೆ. ಕೊನೆಯಲ್ಲಿ ಡ್ರಾಗನ್ ನೈಟ್ಸ್ ಮತ್ತು ಆಲ್ಫ್ರೆಡ್ ನಡುವೆ ಮಹಾಯುದ್ಧ ನಡೆದು ಆಲ್ಫ್ರೆಡ್ ಸೋಲುತ್ತಾನೆ ಮತ್ತು ಆಯುಧಗಳು ನಾಶಗೊಳ್ಳುತ್ತವೆ. ಆದರೆ ಈ ಹಂತಕ್ಕೆ ಬರಲು ಡ್ರಾಗನ್ ನೈಟ್ಸ್ ಪಟ್ಟ ಪಾಡು ಬಹಳ ದೊಡ್ಡದು. ಕೊನೆಯಲ್ಲಿ ಹೊಸ ಹೊಸ ಖಂಡಗಳು ನಿರ್ಮಾಣವಾಗುತ್ತವೆ.

ಇಡೀ ಸರಣಿ ಒಮ್ಮೆಯೂ ಒಂದು ಸಂಚಿಕೆಯಲ್ಲೂ ನೋಡುಗರಿಗೆ ಬೋರ್ ಹೊಡೆಸುವುದಿಲ್ಲ. ಎಲ್ಲ ಸಂಚಿಕೆಗಳೂ ಕೇವಲ 24 ನಿಮಿಷಗಳ ಅವಧಿ ಆದ್ದರಿಂದ ಸರಣಿ ಬೇಗ ಬೇಗ ಮುಂದಕ್ಕೆ ಹೋಗುತ್ತದೆ. ಸಂಭಾಷಣೆ, ಅನಿಮೇಷನ್ ಎಲ್ಲವೂ ಬಹಳ ಉತ್ತಮ ಗುಣಮಟ್ಟವನ್ನು ಹೊಂದಿವೆ. ಮೇಲ್ನೋಟಕ್ಕೆ ಕುಂಗ್ ಫು ಪಾಂಡಾ ಮಕ್ಕಳ ಸರಣಿ ಎನಿಸಿದರೂ ದೊಡ್ಡವರನ್ನೂ ಹಿಡಿದು ಕೂರಿಸುವಂತ ಶಕ್ತಿ ಇರುವ ಸರಣಿ. ಸ್ನೇಹದ ಮೌಲ್ಯ ಮತ್ತು ಒಗ್ಗಟ್ಟಿನಲ್ಲಿ ಇರುವ ಬಲವನ್ನು ತಿಳಿಸಿಕೊಡುವಂತ ಮಾದರಿ ಸರಣಿ ಇದು. ಕುಟುಂಬದವರೆಲ್ಲರೂ ಒಟ್ಟಾಗಿ ಕೂತು ಆಸ್ವಾದಿಸಬಲ್ಲ ಸರಣಿ ಈ ‘ಕುಂಗ್ ಫು ಪಾಂಡಾ : ದ ಡ್ರಾಗನ್ ನೈಟ್ಸ್’ ಸೀಸನ್ 3 ಎಂದು ಧಾರಾಳವಾಗಿ ಹೇಳಬಹುದು. ಸರಣಿ ನೆಟ್‌ಫ್ಲಿಕ್ಸ್‌ನಲ್ಲಿ stream ಆಗುತ್ತಿದೆ.

LEAVE A REPLY

Connect with

Please enter your comment!
Please enter your name here