ತನ್ನ ಸುತ್ತಲಿನ ಎಲ್ಲರನ್ನೂ ವಂಚಿಸಿದ್ದ ಸುಕುಮಾರ ಕುರುಪ್ನ ಜೀವನ ಆಧರಿಸಿದ ‘ಕುರುಪ್’ ಸಿನಿಮಾ ಬಯೋಪಿಕ್ನ ಫಾರ್ಮುಲಾವನ್ನು ಮೀರಿ ಸಿನಿಮೀಯ ನಿರೂಪಣೆಯನ್ನು ನೆಚ್ಚಿಕೊಂಡಿದೆ. ದಂತಕತೆಯಾದ ಕ್ರಿಮಿನಲ್ ಒಬ್ಬನ ಕತೆಯನ್ನು ತೆರೆಗೆ ತರಲು ಬಹುಶಃ ಇದುವೇ ಸೂಕ್ತ ಸೂತ್ರ ಅನಿಸುತ್ತದೆ. ಪ್ರಸ್ತುತ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗುತ್ತಿದೆ ದುಲ್ಕರ್ ಸಲ್ಮಾನ್ ‘ಕುರುಪ್’.
ಮದ್ರಾಸಿನ ಏರ್ಫೋರ್ಸ್ ತರಬೇತಿ ಶಾಲೆಯಲ್ಲಿ ಇದ್ದ ಅಷ್ಟೂ ಮಂದಿಯ ಪೈಕಿ ಆತನೊಬ್ಬ ಸ್ನೇಹಮಯಿ, ಸದಾ ಉಲ್ಲಾಸದ ಚಿಲುಮೆ. ರಾತ್ರಿ ಕಾಂಪೌಂಡ್ ಹಾರಿ ರಾಕ್ಬ್ಯಾಂಡ್ನಲ್ಲಿ ಹಾಡಿ ಮತ್ತೆ ಬಂದು ಗೂಡು ಸೇರುವ ಚಾಣಾಕ್ಷ. ತನ್ನದೇ ರಾಜ್ಯದ ಪೀಟರ್ ಒಬ್ಬನನ್ನು ಬಿಟ್ಟರೆ ಅವನನ್ನು ಅಷ್ಟು ಹತ್ತಿರದಿಂದ ಬಲ್ಲ ಬೇರೊಬ್ಬನಿಲ್ಲ. ಇಂಥ ಹುಡುಗ ಬಾಂಬೆಯಲ್ಲಿ ನಿಯೋಜನೆಗೊಂಡ ನಂತರ ಪೀಟರ್ಗೆ ಸಿಗುವುದೇ ಅಪರೂಪ ಎಂಬಷ್ಟು ಕೆಲಸದಲ್ಲಿ ತಲ್ಲೀನನಾದ. ಹೀಗೇ ಸಾಗುತ್ತಿದ್ದಾಗ ಆತನಿಗೆ ಆರೋಗ್ಯದಲ್ಲಿ ಕೊಂಚ ಏರುಪೇರಾಗುತ್ತದೆ. ತನ್ನ ಮೇಲಾಧಿಕಾರಿ ವಿಪರೀತ ಕಿರುಕುಳ ಕೊಡುತ್ತಿದ್ದಾರೆ ಎಂದು ಆತ ಪೀಟರ್ಗೆ ಆಗೊಮ್ಮೆ ಈಗೊಮ್ಮೆ ಹೇಳಿದ್ದ. ಆರೋಗ್ಯ ಸಿಕ್ಕಾಪಟ್ಟೆ ಹದಗೆಟ್ಟ ಕಾರಣ ಒಂದು ತಿಂಗಳು ಊರಿಗೆ ಹೋಗಿ ಬರುವುದಾಗಿ ಹೇಳಿ ಹೋದ ಅವನ ಬಗ್ಗೆ ಪೀಟರ್ ಮತ್ತೊಮ್ಮೆ ಕೇಳುವುದು ಆ ಗೆಳೆಯನ ಆತ್ಮಹತ್ಯೆ ಸುದ್ದಿ ಬಂದಾಗಲೇ. ಹೀಗೆ ಹೇಳದೇ ಕೇಳದೆ ಹೊರಟು ಹೋಗುವವ ಕುರುಪ್.
ಈ ರೀತಿ ಆರಂಭವಾಗುವ ‘ಕುರುಪ್’ ಸಿನಿಮಾ ನಂತರ ಜಟಿಲವಾಗುತ್ತಾ ಸಾಗುತ್ತದೆ. ಏಕೆಂದರೆ ಗೋಪಿಕೃಷ್ಣನ್ ಅಲಿಯಾಸ್ ಸುಧಾಕರ ಕುರುಪ್ ಭಾರತೀಯ ವಾಯುಸೇನೆಯಲ್ಲಿ ಕಿತಾಪತಿ ಮಾಡಿ ಸಿಕ್ಕಿ ಹಾಕಿಕೊಳ್ಳುವ ಮುನ್ನ ಆತ್ಮಹತ್ಯೆಯ ನಾಟಕವಾಡಿ ತಪ್ಪಿಸಿಕೊಂಡಾತ. 1984ರಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಇಂದಿನವರೆಗೂ ಸಿಗದಿರುವ ಸುಕುಮಾರ ಕುರುಪ್ ಎಂಬ ಮಹಾ ವಂಚಕನ ಜೀವನ ಕತೆ ಆಧರಿಸಿ ಚಿತ್ರಿಸಿದ ಈ ಸಿನಿಮಾದ ಚಿತ್ರಕತೆ ಆತನಂತೆಯೇ ಎಲ್ಲವನ್ನೂ ಒಮ್ಮೆಗೇ ಬಿಟ್ಟುಕೊಡದೆ ಒಮ್ಮೊಮ್ಮೆ ಮುಂದಕ್ಕೂ ಮತ್ತೊಮ್ಮೆ ಹಿಂದಕ್ಕೂ ಹುಟ್ಟು ಹಾಕುತ್ತಾ ಸಾಗುತ್ತದೆ. ಕೊಲೆ ಆರೋಪ ಬಂದ ಮೇಲೆ ಅಜ್ಞಾತನಾದ ಸುಕುಮಾರ ಕುರುಪ್ ಓರ್ವ ಚಾಣಾಕ್ಷ ಕ್ರಿಮಿನಲ್. ಪೊಲೀಸ್ ಬಲೆಯಿಂದ ಆತ ತಪ್ಪಿಸಿಕೊಳ್ಳಲು ಹೆಣೆದದ್ದೆಲ್ಲಾ ನವೀನ ತಂತ್ರಗಳು. ಹಾಗಾಗಿ 37 ವರ್ಷಗಳ ನಂತರ ಇಂದಿಗೂ ಕೇರಳ ಪೊಲೀಸರ ಪಾಲಿನ ಮರೀಚಿಕೆ ಆತ. ಇದೇ ಕಾರಣಕ್ಕೆ ಮಲೆಯಾಳಿ ಮಂದಿಯ ಪಾಲಿಗೆ ಕುರುಪ್ ಎಂಬ ಹೆಸರು ಅತಿಚಾಣಾಕ್ಷ ಕಳ್ಳನಿಗೆ ಅನ್ವರ್ಥ.
ಸುಕುಮಾರ ಕುರುಪ್ ಕತೆಯ ಅಂಶಗಳನ್ನೇ ಆಧರಿಸಿ ಈಗಾಗಲೇ ‘ಎನ್ಎಚ್ 47′ (1984),’ಪಿನ್ನೆಯುಂ’ (2016) ಹಾಗೂ ಹಿಂದಿಯ ‘ಮೋಹ್ ಮಾಯಾ ಮನಿ’ (2016) ಸಿನಿಮಾಗಳು ಬಂದಿವೆ. ದುಲ್ಕರ್ ಸಲ್ಮಾನ್ ನಟನೆಯ ‘ಕುರುಪ್’ ದಂತಕತೆಯಾದ ಸುಕುಮಾರ ಕುರುಪ್ನ ಜೀವನ ಚರಿತ್ರೆಗೆ ಹತ್ತಿರವಾದದ್ದು ಎನ್ನಬಹುದು. ಹಾಗಿದ್ದೂ ಇಲ್ಲಿ ಮೂಲಪುರುಷನ ಕತೆಯನ್ನೇ ತೋರಿಸುತ್ತಿದ್ದೇವೆ ಎಂದು ನಿರ್ದೇಶಕರು ಹೇಳಿಕೊಂಡಿಲ್ಲ. ಹೆಸರುಗಳೂ ನೈಜ ಘಟನೆಗಿಂತ ಕೊಂಚ ಭಿನ್ನವಾಗಿದೆ. ಬಯೋಪಿಕ್ನ ಸಿದ್ಧ ಸೂತ್ರಕ್ಕೆ ಜೋತುಬೀಳದೆ ಕರೆದೊಯ್ಯುವ ಕಥನ ಶೈಲಿಗೆ ಕುತೂಹಲ ಇಮ್ಮಡಿಗೊಳಿಸುತ್ತ ಕರೆದೊಯ್ಯುವ ಶಕ್ತಿಯಿದೆ.
ವಾಯುಸೇನೆಯಲ್ಲಿ ಈತನನ್ನು ದಂಡಿಸಲೇಬೇಕು ಎಂದು ಪಣ ತೊಟ್ಟ ಮೇಲಾಧಿಕಾರಿಯ ಮೀಸೆಯ ಕೆಳಗೇ ಮೋಸದಾಟ ಆಡುವ ಕುರುಪ್ಗೆ ವಂಚನೆ ಎಂಬುದು ಎಡಗೈಯಲ್ಲಿ ಸಲೀಸಾಗಿ ಆಡುವ ಆಟ. 1971ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಮತ್ತು ಅದರ ತರುವಾಯ ಕುರುಪ್ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿದ್ದ ವಿಚಾರ ಈ ಸಿನಿಮಾದಲ್ಲಿಯೂ ಬಂದಿದೆ. ಅಲ್ಲಿಂದ ಪರ್ಷಿಯಾಕ್ಕೆ ಹಾರುತ್ತಾನೆ. ಅಲ್ಲಿಯೂ ಗಲ್ಫ್ ವಾರ್ ಸಂದರ್ಭ ಆತ ಸಿಕ್ಕಾಪಟ್ಟೆ ಲಾಭ ಮಾಡಿಕೊಂಡಿದ್ದ ಎನ್ನುತ್ತದೆ ದಂತಕತೆ. ಆದರೆ ಸಿನಿಮಾದಲ್ಲಿ ಆ ಬಗ್ಗೆ ಹೇಳಿಲ್ಲ. ಬದಲಾಗಿ ಕತೆ ಮತ್ತೊಂದು ಪಥವನ್ನು ಆಯ್ಕೆ ಮಾಡಿದೆ.
ಕೇರಳದ ಪೊಲೀಸರಿಗೆ ಸುಕುಮಾರ ಕುರುಪ್ ಎಂಬಾತನ ವಾಸನೆ ಬಡಿಯುವುದು ಒಂದು ಕೊಲೆಯ ಕಾರಣದಿಂದ. ಈ ಮೊದಲೇ ಸಾವಿನ ಆಟವಾಡಿ ಪಳಗಿದ್ದರೂ ಕುರುಪ್ನ ಸಂಚಿನ ಜಾಡು ಹಿಡಿಯಲು ಪೊಲೀಸರು ಯಶಸ್ವಿಯಾಗುತ್ತಾರೆ. ಇಲ್ಲಿ ಪೊಲೀಸರ ಆಯಾಮ ನ್ಯಾಯಯುತವಾಗಿ ಮೂಡಿದೆ. ಪ್ರಾಮಾಣಿಕ ತನಿಖಾಧಿಕಾರಿ ಪಾತ್ರದಲ್ಲಿ ಇಂದ್ರಜಿತ್ ಸುಕುಮಾರನ್ ಉತ್ತಮ ಅಭಿನಯ ನೀಡಿದ್ದಾರೆ. ಥರ್ಡ್ ಡಿಗ್ರಿ ಟ್ರೀಟ್ಮೆಂಟ್ಗೆ ಬದಲಾಗಿ ಆರೋಪಿಗೆ ಹೊಟ್ಟೆತುಂಬಾ ಬಿರಿಯಾನಿ ತಿನ್ನಿಸಿ ನಂತರ ಹನಿ ನೀರೂ ಕೊಡದೆ ಎರಡು ದಿನ ಸತಾಯಿಸುವ ಪೊಲೀಸರ ವಾಸ್ತವವಾದಿ ತಂತ್ರ ಇಲ್ಲಿ ತೆರೆಯ ಮೇಲೆ ಬಂದಿದೆ. ಗೆಲುವು ಕಂಡೂ ಸೋಲುಂಡ ಕೇರಳ ಪೊಲೀಸರ ಪರಿಸ್ಥಿತಿಯನ್ನು ತನಿಖಾಧಿಕಾರಿ ಡಿವೈಎಸ್ಪಿ ಕೃಷ್ಣದಾಸ್ ಪಾತ್ರದ ಮೂಲಕ ಕಟ್ಟಿಕೊಡಲಾಗಿದೆ.
ಕುರುಪ್ನ ಭಾವನ ಪಾತ್ರದಲ್ಲಿ ಶೈನಿ ಟಾಮ್ ಚಕ್ಕೊ ಅಭಿನಯ ಮನೋಜ್ಞ. ಈ ಕುಡುಕ – ಬಾಯಿಬಡುಕ ಪಾತ್ರವನ್ನು ಶೈನಿ ಸಂಪೂರ್ಣ ಆವಾಹಿಸಿದಂತೆ ಭಾಸವಾಗುತ್ತದೆ. ರೈಲ್ವೇ ಸ್ಟೇಷನ್ನಿನಲ್ಲಿ ಹಾಡು ಹಗಲೇ ಕಾರಿನ ಟಯರಿಗೆ ಉಚ್ಚೆ ಹೊಯ್ಯುವ ಆ ಕುಡುಕ ತೆರೆಯ ಮೇಲೆ ಬಂದಾಗಲೇ ಮೂಗಿಗೆ ಹೆಂಡದ ವಾಸನೆ ಬಡಿದ ಅನುಭವ. 60 ರಿಂದ 80ರ ದಶಕದ ಕಾಲಮಾನವನ್ನು ನಿರ್ದೇಶಕ ಶ್ರೀನಾಥ್ ರಾಜೇಂದ್ರನ್ ಯಶಸ್ವಿಯಾಗಿ ತೆರೆಯ ಮೇಲೆ ತಂದಿದ್ದಾರೆ. ಸಿನಿಮಾದ ಕೊನೆಕೊನೆಗೆ 80ರ ದಶಕದ ಸನ್ನಿವೇಶದಲ್ಲಿ ಪೊಲೀಸ್ ತನ್ನ ಬೈಕಲ್ಲಿ ಸಾಗುವಾಗ ದೂರದಲ್ಲೊಂದು ಮಾರುತಿ 800 ಕಂಡೂ ಕಾಣದಂತೆ ನಿಂತಿರುವುದು ನಿರ್ದೇಶಕನ ಸೂಕ್ಷ್ಮಪ್ರಜ್ಞೆ ಹಾಗೂ ಮಾಡಿಕೊಂಡ ಸಿದ್ಧತೆಗೆ ಕನ್ನಡಿ. ಅದಲ್ಲದೆ ಆಯಾ ಕಾಲದ ವಸ್ತ್ರ ವಿನ್ಯಾಸ, ಬಣ್ಣಗಳು, ಗಡ್ಡ-ಮೀಸೆಯ ಫ್ಯಾಶನ್ನುಗಳೆಲ್ಲ ನೈಜತೆಗೆ ತೀರ ಹತ್ತಿರವಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಕಲಾ ನಿರ್ದೇಶಕ ವಿನೀಶ್ ಬಂಗ್ಲನ್ 80ರ ದಶಕದ ಬಾಂಬೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ.
ವಿಮರ್ಶೆ ದೃಷ್ಟಿಯಲ್ಲಿ ನೋಡಿದರೆ ಸಿನಿಮಾದಲ್ಲಿ ಒಂದಷ್ಟು ತಪ್ಪುಗಳಿವೆ. ವಂಚನೆಗಳ ಮೇಲೆ ವಂಚನೆ ಮಾಡುತ್ತಾ ಸಾಗುವ ಕುರುಪ್ನ ಮನೆಯವರಿಗೆ ಆತನ ವ್ಯಕ್ತಿತ್ವದಿಂದ ಆಗುವ ಸಾಮಾಜಿಕ ಯಾತನೆ ಸಿನಿಮಾದಲ್ಲಿ ವ್ಯಕ್ತವಾಗಿಲ್ಲ. ಮೊದಲು ಪ್ರೇಯಸಿಯಾಗಿ ನಂತರ ಹೆಂಡತಿಯಾಗಿ ಬರುವ ಶೋಭಿತಾ ನಟನೆಯ ಪಾತ್ರಕ್ಕೆ ಇತಿಮಿತಿಯ ಅವಕಾಶವಷ್ಟೇ ಇದೆ, ಅವಳ ಅಂತರಂಗಕ್ಕೆ ತೋರಿಸಿದ್ದು ತೀರಾ ಕಡಿಮೆ. ಆದರೆ ವಿಮರ್ಶಕನ ಕನ್ನಡಕ ಹಾಕಿ ಅವೆಷ್ಟು ಮಂದಿ ಸಿನಿಮಾ ನೋಡುತ್ತಾರೆ? ಅಷ್ಟಕ್ಕೂ ಸಿನಿಮಾ ಇಷ್ಟವಾಗಬೇಕಾದ್ದು ಪ್ರೇಕ್ಷಕನಿಗೇ ಹೊರತು ವಿಮರ್ಶಕನಿಗಲ್ಲ. ಹಾಗಾಗಿಯೇ ‘ಕುರುಪ್’ ಈ ವರ್ಷ ತೆರೆಗೆ ಬಂದ ಮಲಯಾಳಂ ಸಿನಿಮಾಗಳ ಪೈಕಿ ಅತಿಹೆಚ್ಚು ಹಣಗಳಿಕೆ ಮಾಡಿದೆ. ಬಿಡುಗಡೆಯ ಮೊದಲ ವಾರವೇ 25 ಕೋಟಿ ರೂಪಾಯಿ ಗಳಿಸುವ ಮೂಲಕ ಗಲ್ಲಾಪೆಟ್ಟಿಗೆ ಕೊಳ್ಳೆ ಹೊಡೆದಿದೆ.
ನೆಟ್ಫ್ಲಿಕ್ಸ್ನಲ್ಲಿ ಕುರುಪ್ ಸಿನಿಮಾವನ್ನು ಕನ್ನಡ ಡಬ್ಬಿಂಗ್ ಅವತರಣಿಕೆಯಲ್ಲೂ ನೋಡಬಹುದು. ಡಬ್ಬಿಂಗ್ ಸಂಭಾಷಣೆ ಅಲ್ಲಲ್ಲಿ ಕೊಂಚ ಗ್ರಾಂಥಿಕವಾಗಿದೆ ಎಂಬುದು ಬಿಟ್ಟರೆ ಮೂಲಕ್ಕೆ ಮೋಸ ಮಾಡಿಲ್ಲ.