ಲಾಲಿ ರಾಘವ ನಿರ್ದೇಶನದಲ್ಲಿ ರಾಘವೇಂದ್ರ ರಾಜಕುಮಾರ್, ಪ್ರತಾಪ್ ಸಿಂಹ ಹರ್ಷಿಕಾ ಪೂಣಚ್ಚ ನಟಿಸುತ್ತಿರುವ ‘ಸ್ತಬ್ಧ’ ಸಿನಿಮಾ ಸೆಟ್ಟೇರಿದೆ. ಮನೋವೈಜ್ಞಾನಿಕ ವಿಷಯದ ಮೇಲೆ ಬೆಳಕು ಚೆಲ್ಲಲಿರುವ ಕತೆಯಿದು.
“ಮನುಷ್ಯನ ಮನಸ್ಸು ಸ್ಥಿಮಿತತೆ ಕಳೆದುಕೊಂಡು ಭ್ರಮಾಲೋಕಕ್ಕೆ ಪಯಣಿಸಿದಾಗ ಆಗುವಂತಹ ಪರಿಣಾಮಗಳನ್ನು ಮತ್ತು ಅದರಿಂದ ಹೊರಬರಲು ನಾಯಕ ನಡೆಸುವ ಹೋರಾಟ ಚಿತ್ರದ ಕಥಾವಸ್ತು. ಈ ಸಂಕೀರ್ಣವಾದ ಕತೆಯನ್ನು ಮನೋವೈಜ್ಞಾನಿಕ ತಳಹದಿಯ ಮೇಲೆ ರಂಜನೆಯ ನಿರೂಪಣೆಯೊಂದಿಗೆ ಹೇಳಿದ್ದೇವೆ” ಎನ್ನುತ್ತಾರೆ ನಿರ್ದೇಶಕ ಲಾಲಿ ರಾಘವ. ತಮಿಳು ಚಿತ್ರದ ಮೂಲಕ ಸ್ವತಂತ್ರ್ಯ ನಿರ್ದೇಶಕರಾದ ಅವರಿಗೆ ‘ಸ್ತಬ್ಧ’ ಎರಡನೇ ಸಿನಿಮಾ. ರಾಘವೇಂದ್ರ ರಾಜಕುಮಾರ್ ಮತ್ತು ಹರ್ಷಿಕಾ ಪೂಣಚ್ಚ ಚಿತ್ರದಲ್ಲಿ ತಂದೆ – ಮಗಳ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಪ್ರತಾಪ್ ಸಿಂಹ ಚಿತ್ರದ ಹೀರೋ.
ಚಿತ್ರದ ಕುರಿತು ಮಾತನಾಡಿದ ರಾಘವೇಂದ್ರ ರಾಜಕುಮಾರ್, “ಈ ಚಿತ್ರದಲ್ಲಿ ಕಥೆಯೇ ಒಂದು ಪಾತ್ರ. ನಾವೆಲ್ಲ ಚಿಕ್ಕ ಚಿಕ್ಕ ಪಾತ್ರ ಮಾಡಿದ್ದೇವೆ ಅಷ್ಟೆ. ಸಸ್ಪೆನ್ಸ್ ಚಿತ್ರವಾಗಿರುವುದರಿಂದ ಕಥೆಯ ಬಗ್ಗೆ ಹೆಚ್ಚು ಹೇಳುವಂತಿಲ್ಲ” ಎಂದರು. ಈ ಚಿತ್ರದ ಹೀರೋ ಪ್ರತಾಪ್ ಸಿಂಹ ಈ ಹಿಂದೆ ರಾಘವೇಂದ್ರ ರಾಜಕುಮಾರ್ ಅವರೊಂದಿಗೆ ‘ರಾಜತಂತ್ರ’, ‘ರಾಜಿ’ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಮತ್ತೊಮ್ಮೆ ಅವರೊಂದಿಗೆ ಅಭಿನಯಿಸುತ್ತಿರುವ ಖುಷಿ ಅವರದು. ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಡಿ.ವಿ.ವಿದ್ಯಾಸಾಗರ್ ಚಿತ್ರ ನಿರ್ಮಿಸುತ್ತಿದ್ದು, ಹಂಸಲೇಖ ಗೀತೆಗಳನ್ನು ರಚಿಸುತ್ತಿದ್ಧಾರೆ.
ನಟಿ ಹರ್ಷಿಕಾ ಪೂಣಚ್ಚ ಮಾತನಾಡಿ, “ನನ್ನ ಮೊದಲ ಚಿತ್ರದ ನಂತರ ರಾಘಣ್ಣ ಫೋನ್ ಮಾಡಿದ್ದರು. ತಮ್ಮ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ‘ಜಾಕಿ’ ಚಿತ್ರದಲ್ಲಿ ನಟಿಸಬೇಕೆಂದರು. ಆಗ ನನ್ನಗಾದ ಆನಂದಕ್ಕೆ ಪಾರವೇ ಇಲ್ಲ. ಶಿವಣ್ಣ, ಪುನೀತ್ ಸರ್ ಜೊತೆ ನಟಿಸಿದ್ದೆ. ಈ ಚಿತ್ರದಲ್ಲಿ ರಾಘಣ್ಣ ಅವರ ಮಗಳಾಗಿ ಅಭಿನಯಿಸುತ್ತಿದ್ದೇನೆ. ಡಾ.ರಾಜಕುಮಾರ್ ಅವರ ಮೂರೂ ಮಕ್ಕಳ ಜೊತೆ ನಟಿಸುವ ಭಾಗ್ಯ ನನಗೆ ಸಿಕ್ಕಿದ ಸಂತೋಷವಿದೆ” ಎಂದರು. ಪ್ರಶಾಂತ್ ಸಿದ್ದಿ, ಶ್ರುತಿ ರಾಜ್, ಬೇಬಿ ಅಂಕಿತ, ಮಾ.ಚಿನ್ಮಯ್ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ಧಾರೆ. 35ಕ್ಕೂ ಹೆಚ್ಚಿನ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಕ್ರಿಯಾಶೀಲ ತಂತ್ರಜ್ಞ ಪಿ.ವಿ. ಆರ್ ಸ್ವಾಮಿ ಛಾಯಾಗ್ರಹಣ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಆರವ್ ರಿಷಿಕ್ (ಹಂಸಲೇಖ) ಸಂಗೀತ ಸಂಯೋಜನೆ ಚಿತ್ರಕ್ಕೆ ಇರಲಿದೆ.