ರಾಜಕುಮಾರ್‌ ರಾವ್‌ ಮತ್ತು ಭೂಮಿ ಪೆಡ್ನೇಕರ್‌ ಜೋಡಿಯ ‘ಬಧಾಯಿ ದೋ’ ಹಿಂದಿ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದೆ. ಸಲಿಂಗಕಾಮಿ ನಾಯಕ – ನಾಯಕಿ ಪೋಷಕರನ್ನು ದಾರಿ ತಪ್ಪಿಸಲು ಮದುವೆಯಾಗುವ ಕತೆಯಿದು. ಫೆಬ್ರವರಿ 11ರಂದು ಸಿನಿಮಾ ಥಿಯೇಟರ್‌ಗೆ ಬರಲಿದೆ.

‘spiritual successor to Badhaai Ho’ ಎಂದು 2018ರ ಸಿನಿಮಾ ‘ಬಧಾಯಿ ಹೋ’ ನೆನಪಿನೊಂದಿಗೆ ತೆರೆಗೆ ಬರುತ್ತಿದೆ ‘ಬಧಾಯಿ ದೋ’. ಹರ್ಷವರ್ಧನ್‌ ಕುಲಕರ್ಣಿ ನಿರ್ದೇಶನದ ಹಿಂದಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಾಜಕುಮಾರ್‌ ರಾವ್‌ ಮತ್ತು ಭೂಮಿ ಪೆಡ್ನೇಕರ್‌ ನಟಿಸಿದ್ದಾರೆ. ಈ ಹಿಂದಿನ ‘ಬಧಾಯಿ ಹೋ’ ಹಿಂದಿ ಚಿತ್ರಕ್ಕೆ ಚಿತ್ರಕಥೆ ಹೆಣೆದಿದ್ದ ಸುಮನ್‌ ಅಧಿಕಾರಿ ಮತ್ತು ಅಕ್ಷತ್‌ ಈ ಸಿನಿಮಾಗೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದ್ದು, “Arre yaar, ab toh ye secret kal out ho jayega ! Kyuki kal aa raha hai hamara trailer aur hum aa rahe hai theatres main. Hey bhagwan, I am very excited,” ಎನ್ನುವ ಒಕ್ಕಣಿಯೊಂದಿಗೆ ನಾಯಕನಟಿ ಭೂಮಿ ಪೆಡ್ನೇಕರ್‌ ಟ್ರೈಲರ್‌ ಶೇರ್‌ ಮಾಡಿದ್ದಾರೆ.

ಚಿತ್ರದಲ್ಲಿ ರಾಜಕುಮಾರ್‌ ರಾವ್‌ ಅವರು ಪೊಲೀಸ್‌ ಅಧಿಕಾರಿ ‘ಶಾರ್ದೂಲ್‌ ಠಾಕೂರ್‌’ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಭೂಮಿ ಪೆಡ್ನೇಕರ್‌ ಪಿಟಿ ಟೀಚರ್‌ ‘ಸುಮನ್‌’ ಪಾತ್ರದಲ್ಲಿದ್ದಾರೆ. ಮೂರು ನಿಮಿಷಗಳ ಟ್ರೈಲರ್‌ ಇಬರಿಬ್ಬರ ಪಾತ್ರಗಳನ್ನು ಪರಿಚಯಿಸುತ್ತದೆ. ಶಾರ್ದೂಲ್‌, ನಾಲ್ಕು ವರ್ಷದಿಂದ ಮದುವೆಯಾಗುವಂತೆ ಸುಮನ್‌ಳ ಹಿಂದೆ ಬಿದ್ದಿದ್ದಾನೆ. ಆದರೆ ಇದು ಪ್ರೀತಿ ಅಲ್ಲ! ಸುಮನ್‌ ಅದಾಗಲೇ ಗೆಳತಿಯೊಬ್ಬಳ ಜೊತೆ ಡೇಟಿಂಗ್‌ನಲ್ಲಿದ್ದಾಳೆ. ಶಾರ್ದೂಲ್‌ಗೆ ಪುರುಷರ ಮೇಲೆ ಮೋಹ! ಇದು ಪೋಷಕರಿಗೆ ಗೊತ್ತಾಗುವಂತಿಲ್ಲ. ಕೊನೆಗೆ ಇಬ್ಬರೂ ನೆಪಮಾತ್ರಕ್ಕೆ ಮದುವೆಯಾಗಿ ಸಲಿಂಗಕಾಮದ ಗುಟ್ಟು ಕಾಪಾಡಿಕೊಳ್ಳುತ್ತಾರೆ. ಈ ಹಂತದಲ್ಲಿ ನಡೆಯುವ ಕಾಮಿಡಿ ಆಫ್‌ ಎರರ್ಸ್‌ಗಳು ಟ್ರೈಲರ್‌ನಲ್ಲಿವೆ. ಫೆಬ್ರವರಿ 11ರಂದು ಸಿನಿಮಾ ತೆರೆಕಾಣುತ್ತಿದೆ.

LEAVE A REPLY

Connect with

Please enter your comment!
Please enter your name here