‘ಲೇಡಿ ಚಾಟರ್ಲಿಸ್ ಲವರ್’ ಸಿನಿಮಾದ ಮೂಲಕ ನಿರ್ದೇಶಕಿ ಲಾರ್ಡೋ ಕ್ಲೆಮಂಟೋನೇರ್ ಕಾದಂಬರಿಯಲ್ಲಿರುವ ಎಲ್ಲಾ ವಿವಾದಿತ ದೃಶ್ಯಗಳನ್ನು ತೆರೆಯ ಮೇಲೆ ಯಾವುದೇ ಮುಚ್ಚುಮರೆ ಇಲ್ಲದಂತೆ ತಂದಿದ್ದಾರೆ. ಅದು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿದೆ ಅಥವಾ ಇಲ್ಲ ಎಂಬುದು ಚರ್ಚೆಯ ವಿಷಯ. ಆದರೆ, ಈ ಕಾದಂಬರಿಯ ಇನ್ನೊಂದು ಪ್ರಮುಖ ಅಂಶವಾದ ವರ್ಗ ಸಂಘರ್ಷದ ಬಗ್ಗೆ ಸಿನಿಮಾ ಹೆಚ್ಚೇನೂ ಮಾತನಾಡುವುದಿಲ್ಲ. ಈ ಸಿನಿಮಾ Netflixನಲ್ಲಿ ಸ್ಟ್ರೀಮ್ ಆಗುತ್ತಿದೆ.
ಕಳೆದ ಶತಮಾನದ ಪ್ರಮುಖ ಇಂಗ್ಲಿಷ್ ಲೇಖಕ ಡಿ.ಹೆಚ್.ಲಾರೆನ್ಸ್ ಅವರ ಅತ್ಯಂತ ವಿವಾದಿತ ಕಾದಂಬರಿ ಲೇಡಿ ಚಾಟರ್ಲಿಸ್ ಲವರ್ ಈಗಾಗಲೇ ಹಲವಾರು ಬಾರಿ ವಿವಿಧ ರೂಪದಲ್ಲಿ ತೆರೆಯ ಮೇಲೆ ಬಂದಿದೆ. ಇದಕ್ಕೆ ಹೊಚ್ಚ ಹೊಸ ಸೇರ್ಪಡೆ ಫ್ರಾನ್ಸಿನ ನಿರ್ದೇಶಕಿ ಲಾರ್ಡೋ ಕ್ಲೆಮಂಟೋನೇರ್ ನಿರ್ದೇಶನದ ಕಾದಂಬರಿಯ ಹೆಸರನ್ನೇ ಹೊಂದಿರುವ ಚಿತ್ರ.
ಲಾರೆನ್ಸ್‌ನ ಉಳಿದೆಲ್ಲಾ ಕಾದಂಬರಿಗಳಿಗೆ ಹೋಲಿಸದರೆ ಸಾಹಿತ್ಯಕವಾಗಿ ಉತ್ಕೃಷ್ಟ ಎನಿಸದಿದ್ದರೂ ಲೇಡಿ ಚಾಟರ್ಲಿಸ್ ಲವರ್ ಆತನ ಅತ್ಯಂತ ಜನಪ್ರಿಯ ಕಾದಂಬರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆ ಜನಪ್ರಿಯತೆಗೆ ಮುಖ್ಯ ಕಾರಣ ಆ ಕಾದಂಬರಿಯಲ್ಲಿ ಬರುವ ಬೋಲ್ಡ್ ಎನಿಸುವ ಹಲವು ಸನ್ನಿವೇಶಗಳ ವಿವರ. ಲೈಂಗಿಕತೆಯ ಬಗ್ಗೆ ತೀರಾ ಮಡಿವಂತಿಕೆ ಹೊಂದಿದ್ದ 1920ರ ಪಾಶ್ಚಾತ್ಯ ಕ್ರಿಶ್ಚಿಯನ್ ಸಮಾಜಕ್ಕೆ ಸವಾಲೆಸೆದಂತೆ ಲಾರೆನ್ಸ್ ಈ ಕಾದಂಬರಿ ಬರೆದಿದ್ದ. ಅದರಲ್ಲಿದ್ದ ಹಸಿಬಿಸಿ ಪ್ರೇಮಕಾಮದ ವರ್ಣನೆಗಳಿಂದಾಗಿ ಭಾರತವೂ ಸೇರಿದಂತೆ ಈ ಕಾದಂಬರಿ ಹಲವು ದೇಶಗಳಲ್ಲಿ ನಿಷೇಧಕ್ಕೆ ಒಳಗಾಗಿತ್ತಲ್ಲದೆ ನ್ಯಾಯಾಲಯದಲ್ಲಿ ಮೊಕದ್ದಮೆಗಳನ್ನೂ ಎದುರಿಸಬೇಕಾಯಿತು. ಇಂತಹ ವಿಷಯಗಳಿಂದಾಗಿಯೇ ಜನರಿಗೆ ಚಿರಪರಿಚಿತವಾದ ಈ ಕೃತಿಯನ್ನು ಆಧರಿಸಿದ ಚಿತ್ರ ಕನ್ನಡದಲ್ಲೂ ಬಂದಿದೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ಎಡಕಲ್ಲು ಗುಡ್ಡದ ಮೇಲೆ’ ಭಾರತೀಸುತ ಅವರ ಅದೇ ಹೆಸರಿನ ಕಾದಂಬರಿ ಆಧರಿಸಿತ್ತಾದರೂ ಅದಕ್ಕೆ ಮೂಲ ಪ್ರೇರಣೆ ಇದೇ ಲೇಡಿ ಚಾಟರ್ಲಿಸ್ ಲವರ್.
ಮೊದಲನೇ ವಿಶ್ವಯುದ್ಧದ ಉತ್ತುಂಗದ ಕಾಲದಲ್ಲಿ ಕಾನ್ಸ್ಟಾನ್ಸ್ ರೀಡ್ ಮತ್ತು ಕ್ಲಿಫರ್ಡ್ ಚಾಟರ್ಲೀ ಮದುವೆ ನಡೆಯುತ್ತದೆ. ಮದುವೆಯಾದ ಮರುದಿನವೇ ಕ್ಲಿಫರ್ಡ್ ರಣರಂಗಕ್ಕೆ ತೆರಳುತ್ತಾನೆ. ಯುದ್ಧ ಮುಗಿದು ಆತ ಗಾಯಗೊಂಡು ಮರಳಿ ಬಂದಾಗ ಆತನ ದೇಹದ ಕೆಳಗಿನ ಭಾಗ ನಿಷ್ಕ್ರಿಯವಾಗಿರುತ್ತದೆ. ಈಗ ಲೇಡಿ ಚಾಟರ್ಲಿ ಆಗಿರುವ ಕಾನ್ಸ್ಟಾನ್ಸ್ ತನ್ನ ಹೊಸ ವಾಸ್ತವದ ಜೊತೆ ಹೊಂದಾಣಿಕೆ ಮಾಡಿಕೊಂಡರೂ, ಗಂಡನ ವರ್ತನೆ, ಆತನ ಅಸಹನೆ, ಲೈಂಗಿಕ ಅಸಮರ್ಥತೆಯಿಂದಾಗಿ ಅವನಲ್ಲಿ ಹೊಸದಾಗಿ ಹುಟ್ಟಿರುವ ಕ್ರೌರ್ಯತೆ ಆಕೆಯನ್ನು ಕಾಡತೊಡಗುತ್ತದೆ. ಈ ಸಂದರ್ಭದಲ್ಲಿ ಅವರ ಎಸ್ಟೇಟ್ ನೋಡಿಕೊಳ್ಳುವ ಆಲಿವರ್ ಜೊತೆ ಕಾನ್ಸ್ಟಾನ್ಸ್ ಸಂಬಂಧ ಬೆಳೆಯುತ್ತದೆ. ಅದು ಎಲ್ಲಾ ಎಲ್ಲೆಗಳನ್ನೂ ಮೀರಿದ, ಉತ್ಕರ್ಷವಾದ ದೈಹಿಕ ಮತ್ತು ಭಾವನಾತ್ಮಕ ಸಂಬಂಧವಾಗಿ ಹೊರಹೊಮ್ಮುತ್ತದೆ. ಕ್ಲಿಫರ್ಡ್‌ಗೆ ತನ್ನ ದೈಹಿಕ ಅಸಮರ್ಥತೆಯನ್ನು ಮುಚ್ಚಿಡಲು ಹಾಗು ತನ್ನ ವಂಶ ಬೆಳೆಸಲು ತನ್ನ ಹೆಂಡತಿ ತನ್ನಂತದೇ ಶ್ರೀಮಂತ ವರ್ಗದ ಯಾರಿಂದಲಾದರೋ ಗುಟ್ಟಾಗಿ ಗರ್ಭ ಧರಿಸಲಿ ಎಂಬ ಆಸೆ ಇರುತ್ತದೆ. ಆದರೆ, ಹೆಂಡತಿ ತನ್ನ ತೋಟದ ಕೆಲಸಗಾರನಿಂದ ಗರ್ಭ ಧರಿಸಿದ್ದಾಳೆಂಬುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ವರ್ಗ ವಿಭಜನೆಯನ್ನು ಸಮರ್ಥಿಸುವ ತನ್ನದು ಹೈ ಕ್ಲಾಸ್ ಸೊಸೈಟಿ ಎಂದು ನಂಬಿರುವ ಕ್ಲಿಫರ್ಡ್‌ನನ್ನೂ ಮತ್ತು ಆಗಿನ ಕಾಲದಲ್ಲಿ ಇಂತಹ ಒಂದು ಸಂಬಂಧ ತಂದೊಡ್ಡುವ ಸಮಾಜಿಕ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸಿ ಆಲಿವರ್ ಜೊತೆ ಬದುಕು ಹಂಚಿಕೊಳ್ಳಲು ಕಾನ್ಸ್ಟಾನ್ಸ್ ನಿರ್ಧರಿಸುತ್ತಾಳೆ.
ಈಗಿನ ಕಾಲಕ್ಕೆ ಈ ಕಥೆ, ಅದರಲ್ಲಿ ಬರುವ ದೃಶ್ಯಗಳು, ಕೆಲವು ಪದಗಳು ದೊಡ್ಡ ಸಂಗತಿ ಎನಿಸದಿದ್ದರೂ ಶತಮಾನದ ಹಿಂದೆ ಇವುಗಳು ಸಂಪ್ರದಾಯಸ್ಥರ ನಿದ್ದೆಗೆಡಿಸಿತ್ತು, ಮೊದಲೇ ಹೇಳಿದಂತೆ ಕನ್ನಡದ ‘ಎಡಕಲ್ಲು ಗುಡ್ಡದ ಮೇಲೆ’ ಇದೇ ಕಥೆ ಹೊಂದಿದ್ದರೂ ಅದರ ಅಂತ್ಯ ಲೇಡಿ ಚಾಟರ್ಲಿಸ್ ಲವರ್‌ಗಿಂತ ತುಂಬಾ ಭಿನ್ನವಾಗಿದೆ. ಪುಟ್ಟಣ ಕಣಗಾಲ್ ಇಲ್ಲಿ ಹೆಣ್ಣಿನ ಸಹಜ ಬಯಕೆ, ಕಾಮನೆಗಳ ಮುಂದೆ ನೈತಿಕತೆ, ಸಮಾಜದ ನೀತಿ ನಿಯಮಗಳನ್ನು ಗೆಲ್ಲಿಸುತ್ತಾರೆ. ಅಲ್ಲಿ ನಾಯಕಿಯದ್ದು ದುರಂತ ಅಂತ್ಯ. ಅಂದರೆ, ಡಿ.ಹೆಚ್.ಲಾರೆನ್ಸ್‌ನ ಆಶಯಗಳಿಗೆ ತುಂಬಾ ವಿರುದ್ಧವಾದ ರೀತಿಯಲ್ಲಿ ಎಡಕಲ್ಲು ಸಿನಿಮಾ ಇದೆ ಎಂಬುದು ವಿಶೇಷ ಮತ್ತು ಅದು ಪ್ರಾಯಶಃ ಆಗಿನ ಸಮಾಜಕ್ಕೆ ಒಪ್ಪಿತವಾಗುವ ರೀತಿಯಲ್ಲಿ ಬದಲಾವಣೆಗೊಂಡಿದೆ.
ಇನ್ನೂ ಲೇಡಿ ಚಾಟರ್ಲಿಸ್ ಲವರ್ ಸಿನಿಮಾದ ಮೂಲಕ ನಿರ್ದೇಶಕಿ ಕಾದಂಬರಿಯಲ್ಲಿರುವ ಎಲ್ಲಾ ವಿವಾದಿತ ದೃಶ್ಯಗಳನ್ನು ತೆರೆಯ ಮೇಲೆ ಯಾವುದೇ ಮುಚ್ಚುಮರೆ ಇಲ್ಲದಂತೆ ತಂದಿದ್ದಾರೆ. ಅದು ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗಿದೆ ಅಥವಾ ಇಲ್ಲ ಎಂಬುದು ಚರ್ಚೆಯ ವಿಷಯ. ಆದರೆ, ಈ ಕಾದಂಬರಿಯ ಇನ್ನೊಂದು ಪ್ರಮುಖ ಅಂಶವಾದ ವರ್ಗ ಸಂಘರ್ಷದ ಬಗ್ಗೆ ಸಿನಿಮಾ ಹೆಚ್ಚೇನೂ ಮಾತನಾಡುವುದಿಲ್ಲ. ಅಲ್ಲಲ್ಲಿ ಗಣಿ ಕಾರ್ಮಿಕರ ಪ್ರತಿರೋಧ, ಆಳುವ ವರ್ಗದ ದರ್ಪದ ಬಗ್ಗೆ ಒಂದೆರಡು ಮಾತು ಬಂದು ಹೋಗುತ್ತದೆ ಎಂಬುದು ಬಿಟ್ಟರೆ, ಆ ಆಯಾಮದ ಬಗ್ಗೆ ಸಿನಿಮಾ ಹೆಚ್ಚಿನ ಬೆಳಕು ಚೆಲ್ಲುವುದಿಲ್ಲ. ಆಲಿವರ್ ಮತ್ತು ಕಾನ್ಸ್ಟಾನ್ಸ್ ನಡುವೆ ಪ್ರೇಮ ಸಂಬಂಧವನ್ನು ಸೃಷ್ಟಿಸುವಲ್ಲಿನ ಮೂಲ ಇರಾದೆಯೇ ವರ್ಗ ತಾರತಮ್ಯವನ್ನು ಪ್ರಶ್ನಿಸುವುದು ಎಂಬುದನ್ನು ಸಿನಿಮಾ ಮರೆತಂತೆ ಕಾಣುತ್ತದೆ. ಹೀಗಾಗಿ, ಇದೊಂದು ಪ್ರೇಮ ವಂಚಿತ ಹೆಣ್ಣೊಬ್ಬಳ ವಿವಾಹೇತರ ಪ್ರೇಮ ಸಂಬಂಧವೆಂಬಂತೆ ಅನಿಸುತ್ತದೆಯೇ ಹೊರತು ಕಾರ್ಮಿಕ ಮತ್ತು ಆಳುವ ವರ್ಗದ ನಡುವೆ ಅರಳಿದ ಪ್ರೇಮ ಎಂಬ ಅಂಶ ಹೆಚ್ಚು ಗಮನಕ್ಕೆ ಬರುವುದೇ ಇಲ್ಲ.
ಲೇಡಿ ಚಾಟರ್ಲಿಯಾಗಿ ಎಮ್ಮಾ ಕಾರಿನ್ ಸಮರ್ಥವಾಗಿ ನಟಿಸಿದ್ದರೂ, ಕ್ರೌನ್ ಸೀರೀಸ್‌ನ ಹೆಲನ್ ಪಾತ್ರದಿಂದ ಅವರನ್ನು ಬೇರ್ಪಡಿಸಿ ನೋಡುವುದು ಸ್ವಲ್ಪ ಕಷ್ಚವಾಗುತ್ತದೆ. ಸಿನಿಮಾಟೋಗ್ರಫಿ ಮತ್ತು ಲೋಕೇಶನ್‌ಗಳ ಸೌಂದರ್ಯ ಚಿತ್ರವನ್ನು ಮೇಲ್ಮಟ್ಟಕ್ಕೆ ಏರಿಸಿವೆ. ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯವಿದೆ.