‘Stone Turtle’ ಒಂದು ಬಗೆಯ ಅಸಂಗತ ಕಥೆ. ಕಥೆಯುದ್ದಕ್ಕೂ ಹಲವು ಸಾಧ್ಯತೆಗಳು ಮತ್ತು ಅದರ ಪರಿಣಾಮಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ತಂತ್ರ ಪ್ರಧಾನವಾಗಿರುವ ಈ ಚಿತ್ರ ಎಮೋಶನಲಿ ತಾಕುವಲ್ಲಿ ಸೋಲುತ್ತದೆ.

ಮತ್ತೊಂದು ವರ್ಷ, ಮತ್ತೊಂದು ಚಿತ್ರೋತ್ಸವ, ಕೆಲವೊಂದು ಬದಲಾಗಿದೆ, ಕೆಲವೊಂದು ಹಾಗೆಯೇ ಇದೆ, ಕೆಲವೊಂದು ಇನ್ನೂ ಬದಲಾಗಬೇಕಿತ್ತು ಅನ್ನಿಸುತ್ತದೆ. ಈ ಸಲ ಚಿತ್ರೋತ್ಸವಕ್ಕೆ ನೋಂದಣಿ ಮಾಡಿಸಿಕೊಳ್ಳುವಾಗ ಸ್ವಲ್ಪ Technical glitch ಆಗಿ ಪಾಸ್‌ಗಳ ಹಂಚಿಕೆಯಲ್ಲಿ ವ್ಯತ್ಯಾಸವಾಯಿತು. ಎಂದಿನಂತೆ ಚಿತ್ರೋತ್ಸವ ಶುರುವಾದ ದಿನ ಎಲ್ಲರಿಗೂ ಕಿಟ್, Screening Schedule, Synopsis ಇವೆಲ್ಲಾ ಸಿಗಲಿಲ್ಲ. ಆದರೆ ಮೊದಲ ಚಿತ್ರ ಶುರುವಾದ ಕೂಡಲೇ ಖುಷಿ ತಂದದ್ದು ಚಿತ್ರೋತ್ಸವದ ಥೀಮ್ ಮ್ಯೂಸಿಕ್! ಕನ್ನಡ ಚಲನಚಿತ್ರ ಇತಿಹಾಸದ ಮೊದಲ ತಲೆಗಳಿಂದ ಹಿಡಿದು, ಪುನೀತ್ ರಾಜಕುಮಾರ್‌ವರೆಗೂ ಹಲವಾರು ಫೋಟೋಗಳನ್ನು ಕಂಡಾಗ ಮನಸ್ಸು ಬೆಚ್ಚಗಾಯಿತು.

ನಿನ್ನೆ (24th ಮಾರ್ಚ್‌) ನಾನು ನೋಡಿದ ಚಿತ್ರಗಳು, ‘Crane Lantern’, ‘Stone Turtle’, ‘Return to Seoul’ ಮತ್ತು ‘Saint Omer’. ಆಶ್ಚರ್ಯವೆಂಬಂತೆ ನಾನು ನೋಡಿದ ಈ ನಾಲ್ಕೂ ಚಿತ್ರಗಳಲ್ಲೂ ಯಾವುದೋ ಒಂದು ರೂಪದಲ್ಲಿ ತಂದೆ-ತಾಯಿ ಮತ್ತು ಮಕ್ಕಳ ಸಂಬಂಧ ಇದ್ದದ್ದು..
ನನ್ನ ಇಂದಿನ ‘5 ಸ್ಟಾರ್‌’ ಚಿತ್ರ ‘Crane Lantern’. ಚಲನಚಿತ್ರ ಮಾಧ್ಯಮದ ಎಲ್ಲಾ ಸಾಧ್ಯತೆಗಳನ್ನೂ ಅತ್ಯಂತ ಯಶಸ್ವಿಯಾಗಿ ಬಳಸಿಕೊಂಡ ಚಿತ್ರ ಇದು. ಒಂದು ರೀತಿಯಲ್ಲಿ ತೆರೆಯ ಮೇಲಿನ ಕಾವ್ಯ. ಚಿತ್ರದ ನಡುನಡುವೆ ಬರುವ ಶಂಮ್ಸ್‌ನ ಕವಿತೆಯ ಸಾಲುಗಳು, ಕವಿತೆ ಎಂದು ಕೋಟ್ ಮಾಡದೆಯೂ ಬಂದ ಸಾಲುಗಳು ನಿಜಕ್ಕೂ ‘ಪುಟಗಳ ನಡುವಿನ ನವಿಲುಗರಿ’!

‘Stone Turtle’ ಒಂದು ಬಗೆಯ ಅಸಂಗತ ಕಥೆ. ಕಥೆಯುದ್ದಕ್ಕೂ ಹಲವು ಸಾಧ್ಯತೆಗಳು ಮತ್ತು ಅದರ ಪರಿಣಾಮಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ತಂತ್ರ ಪ್ರಧಾನವಾಗಿರುವ ಈ ಚಿತ್ರ ಎಮೋಶನಲಿ ತಾಕುವಲ್ಲಿ ಸೋಲುತ್ತದೆ. ಅಪ್ಪ – ಅಮ್ಮ ನನ್ನನ್ನು ಹಾಗೆ ಬಿಟ್ಟುಕೊಟ್ಟರು ಯಾಕೆ, ನಾನು ಬೇಡದ ಮಗುವೆ – ಎನ್ನುವ ಪ್ರಶ್ನೆ ಹುಟ್ಟಿಸುವ ತಲ್ಲಣ, ಖಾಲಿತನ, ನಂತರ ಜೀವನದಲ್ಲಿ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೂ, ಕಟ್ಟಿಕೊಳ್ಳುವ, ಬೇಕೆಂದೇ ಹಾಳುಗೆಡವುವ, ಬಿಟ್ಟು ಹೋಗುವ ಮೊದಲು ತೊರೆದು ಗೆಲ್ಲುವೆ ಎನ್ನುವ ಮನೋಭಾವದ ಕಥೆ ‘Return to Seoul’. ಎಲ್ಲೂ ಭಾವುಕತೆ ಒತ್ತಲು ಪ್ರಯತ್ನಿಸದಿದ್ದರೂ ನಾಯಕಿಯ ಪಾತ್ರದ ದುರಂತ ನಮ್ಮ ಒಳಗನ್ನು ಕಲಕಿ ಹಾಕುತ್ತದೆ. ಈ ಚಿತ್ರದ ಫ್ರೇಂಗಳು ಮತ್ತು ಸಂಗೀತ ವಿಶಿಷ್ಟವಾದದ್ದು.

ನಾಲ್ಕನೆಯ ಚಿತ್ರ ‘Saint Omer’. ಈ ಚಿತ್ರಕ್ಕೆ ಈ ಹೆಸರು ಇಟ್ಟ ಕಾರಣ ಮತ್ತು ಹಿನ್ನೆಲೆಯನ್ನು ಇನ್ನೂ ಹುಡುಕಬೇಕು. ತಾಯಿ ಮತ್ತು ಮಗಳ ಸಂಬಂಧ ಬಹಳ ಸಂಕೀರ್ಣವಾದದ್ದು, ಅಮ್ಮ-ಮಗಳ ಸೆಂಟಿಮೆಂಟಾಲಿಟಿಯ ನಡುವೆಯೂ ಹಲವು ಬಂಧಗಳನ್ನು, ಕೆಲವು ಕಡೆ ಗಂಟುಗಳನ್ನು ಉಳಿಸುವ ಸಂಬಂಧ. ಇಲ್ಲೂ ಇಬ್ಬರು ತಾಯಿಯರಿದ್ದಾರೆ, ಇಬ್ಬರು ಮಕ್ಕಳಿದ್ದಾರೆ. ಆ ಇಬ್ಬರು ಮಕ್ಕಳೂ ತಮ್ಮ ತಮ್ಮ ತಾಯಿಯೊಂದಿಗೆ ಬಾಲ್ಯದಲ್ಲಿ, ನಂತರ ಪಡೆದ ಸಂಬಂಧ ಅಥವಾ ಭಾವರಾಹಿತ್ಯ ಮುಂದೆ ಅವರು ತಾಯಿಯಾದಾಗ ಅನುಭವಿಸುವ ತಾಕಲಾಟಗಳಿಗೆ ಕಾರಣವಾಗುತ್ತದೆ. ಸುಮಾರು ಎರಡು ಗಂಟೆಗಳ ಚಿತ್ರ. ಅತ್ಯಂತ ವಿರಳ ಸಂಗೀತ. ಆಗೊಮ್ಮೆ ಈಗೊಮ್ಮೆ ಬರುವ ಕಾಡುವ ಹಮ್ಮಿಂಗ್ ಸದ್ದು. ಹಲವು ಪ್ರಶ್ನೆಗಳನ್ನು ನಾವೇ ಕೇಳಿಕೊಳ್ಳುವಂತೆ ಮಾಡುವ ಚಿತ್ರ.

ಮೇಲೆ ಪ್ರಸ್ತಾಪಿಸಿದ ಸಿನಿಮಾಗಳ ಪೈಕಿ ಕೆಲವು ಚಿತ್ರೋತ್ಸವದಲ್ಲಿ ಮತ್ತೆ ಪ್ರದರ್ಶನಗೊಳ್ಳಲಿವೆ, ಆಸಕ್ತರು ವೀಕ್ಷಿಸಬಹುದು. ಇನ್ನು ಈ ಬಾರಿ ಭಾರತೀಯ ಚಿತ್ರಗಳೇ, ಅದರಲ್ಲೂ ಕನ್ನಡ ಚಿತ್ರಗಳೇ ಹೆಚ್ಚಾಗಿದ್ದು, ಅಂತಾರಾಷ್ಟ್ರೀಯ ಸಿನಿಮಾಗಳು ಕಡಿಮೆ ಆಗಿದ್ದೊಂದು ಕೊರತೆ. ಪ್ರತಿವರ್ಷದಂತೆ ದಿನಕ್ಕೆ 5 ಸಿನಿಮಾಗಳ ಬದಲು 4 ಇಟ್ಟಿದ್ದರೆ ಒಂದು ಲಾಭ ಸ್ನೇಹಿತರೊಂದಿಗೆ ಮಾತಿಗೆ, ಚರ್ಚೆಗೆ ಸಿಕ್ಕ ಸಮಯ!

LEAVE A REPLY

Connect with

Please enter your comment!
Please enter your name here