ರವಿ ಸಾಸನೂರು ಕತೆ ಬರೆದು ನಿರ್ದೇಶಿಸಿರುವ ‘ಲಕ್ಷ್ಯ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ನೈಜ ಘಟನೆಯೊಂದರ ಸ್ಫೂರ್ತಿಯಿಂದ ತಯಾರಾಗಿರುವ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಕಲಾವಿದರು ಹಾಗೂ ತಂತ್ರಜ್ಞರು ದೊಡ್ಡ ಸಂಖ್ಯೆಯಲ್ಲಿದ್ದಾರೆ ಎನ್ನುವುದು ವಿಶೇಷ.
“ಪ್ರತಿಯೊಬ್ಬರ ಜೀವನದಲ್ಲೂ ನಡೆಯುವಂಥ ಘಟನೆಗಳೇ ಈ ಚಿತ್ರದಲ್ಲಿವೆ. ಎಲ್ಲರಿಗೂ ಚಿತ್ರ ಕನೆಕ್ಟ್ ಆಗುತ್ತದೆ. ಕರೆಪ್ಷನ್ ಇಶ್ಯೂ ಇಟ್ಟುಕೊಂಡು ಮಾಡಿದಂಥ ಕಮರ್ಷಿಯಲ್ ಚಿತ್ರವಿದು. ಗೋಕಾಕ್ ಫಾಲ್ಸ್ ಅನ್ನು ಚಿತ್ರದಲ್ಲಿ ವಿಭಿನ್ನವಾಗಿ ತೋರಿಸಿದ್ದೇವೆ. ಬೆಳಗಾವಿ, ಸಾಂಗ್ಲಿ, ಗೋಕಾಕ್ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ” ಎಂದರು ‘ಲಕ್ಷ್ಯ’ ಚಿತ್ರದ ನಿರ್ದೇಶಕ ರವಿ ಸಾಸನೂರು. ಮೊನ್ನೆ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ‘ಗೂಗ್ಲಿ’ ಖ್ಯಾತಿಯ ನಿರ್ದೇಶಕ ಪವನ್ ಒಡೆಯರ್ ಟ್ರೈಲರ್ ಬಿಡುಗಡೆ ಮಾಡಿ ಹಾರೈಸಿದರು. ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ಮುಂದಿನ ವಾರ ನವೆಂಬರ್ 12ರಂದು ತೆರೆಕಾಣುತ್ತಿದೆ. ‘ಮೂಡಲಮನೆ’ ಧಾರಾವಾಹಿ ಖ್ಯಾತಿಯ ಸಂತೋಷ್ ರಾಜ್ ಜಾವರೆ ಈ ಚಿತ್ರದ ನಾಯಕ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.
“ಮೂಡಲಮನೆ ಸೇರಿದಂತೆ 25 ಮೆಗಾ ಸೀರಿಯಲ್‌ಗಳಲ್ಲಿ ನಟಿಸಿದ್ದೇನೆ. ದುಡ್ಡಿನ ಹಿಂದೆ ಬಿದ್ದಿರುವ ವ್ಯಕ್ತಿಯ ನಡಾವಳಿಗಳು ಇತರರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ, ಅದು ಆತನಿಗೆ ಹೇಗೆ ಎಫೆಕ್ಟ್ ಆಗುತ್ತೆ ಎಂಬುದನ್ನು ಪರಿಣಾಮಕಾರಿಯಾಗಿ ಈ ಚಿತ್ರದಲ್ಲಿ ಹೇಳಲಾಗಿದೆ” ಎಂದರು ಸಂತೋಷರಾಜ್ ಜಾವರೆ. ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ನಿತಿನಾದ್ವಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. “ನನ್ನದು ಪಿಕೆ ಎನ್ನುವ ಪಾತ್ರ, ಸಮಾಜದಲ್ಲಿ ಜವಾಬ್ದಾರಿ ಇರುವಂಥ ವ್ಯಕ್ತಿಗಳು ಅದನ್ನು ಮರೆತಾಗ ಅವರಿಗೆ ಬುದ್ದಿ ಕಲಿಸುವಂಥ ಪಾತ್ರ” ಎಂದು ಪರಿಚಯಿಸಿಕೊಂಡರು. ಉತ್ತರ ಕರ್ನಾಟಕದವರೇ ಆದ ಹಿರಿಯ ನಟಿ ಮಾಲತಿಶ್ರೀ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ. ಜುವಿನ್ ಸಿಂಗ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.