ಮಿಂಚಿಹೋದದಕ್ಕೆ ಚಿಂತಿಸಿ ಫಲವಿಲ್ಲ ಎನ್ನುವ ಸೂಚ್ಯ ಸಂದೇಶ ನೀಡುತ್ತಲೇ ‘ಲೀವ್ ದ ವರ್ಲ್ಡ್ ಬಿಹೈಂಡ್‌’ ಒಂದು ಗಾಢವಾದ ಆದರೆ ನೆಮ್ಮದಿ ನೀಡುವ ವಿಷಾದದೊಂದಿಗೆ ಮುಗಿಯುತ್ತದೆ. ಒಳ್ಳೆಯ ಚಿತ್ರವೀಕ್ಷಣೆಯ ಅನುಭವ ಕೊಟ್ಟು ಚಿಂತನೆಗೆ ಹಚ್ಚುವ ಚಿತ್ರವಿದು. ‘ಲೀವ್ ದ ವರ್ಲ್ಡ್ ಬಿಹೈಂಡ್‌’ Netflixನಲ್ಲಿ ಲಭ್ಯವಿದೆ.

ವಿಷಾದದಲ್ಲೂ ಹಲವು ಬಗೆಗಳು ಇರುತ್ತವೆ. ಮನಸ್ಸಲ್ಲಿ ಒಂದು ಥರದ ನೆಮ್ಮದಿ ಅಥವಾ ಸಂತೋಷವನ್ನು ಉಳಿಸಿ ಹೋಗುವ ವಿಷಾದವೂ ಒಂದು ಬಗೆ. ಆ ಬಗೆಯ ವಿಷಾದವನ್ನು ಉಳಿಸಿ ಹೋಗುವ ಚಿತ್ರ ‘ಲೀವ್ ದ ವರ್ಲ್ಡ್ ಬಿಹೈಂಡ್‌’ ಎಂದು ಹೇಳಬಹುದು. ಕೆಲವೊಮ್ಮೆ ಯಾರಾದರೂ ಚಿಂತೆ ಒಳ್ಳೆಯದು ಎಂದು ಹೇಳುವುದು ನೋಡಿದಾಗ ಒಂದು ಬಗೆಯ ಸಮಾಧಾನವಾಗುತ್ತದೆ. ನಮಗೆ ಒತ್ತಡ ಉಂಟುಮಾಡುವ ವಿಷಯಗಳು, ಯೋಚನೆಗಳು ಕೇವಲ ನಮ್ಮ ಕಲ್ಪನೆಗಳಲ್ಲಿ ಮಾತ್ರ ಇಲ್ಲ ಎಂದು ತಿಳಿಯುವುದು ಸಮಾಧಾನ ನೀಡುತ್ತದೆ. ‘ಲೀವ್ ದ ವರ್ಲ್ಡ್ ಬಿಹೈಂಡ್‌’ ಚಿತ್ರ ಕೂಡ ಇದೇ ಲಹರಿಯಲ್ಲಿ ಸಾಗುತ್ತದೆ. ರುಮಾನ್ ಆಲಂ ಅವರ ಜನಪ್ರಿಯ ಕಾದಂಬರಿಯನ್ನು ಆಧರಿಸಿ ಮಾಡಿರುವ ಚಿತ್ರವಿದು. ಸ್ಯಾಮ್ ಇಸ್ಮಾಯಿಲ್ ನಿರ್ದೇಶನದ ಈ ಚಿತ್ರ ಕತ್ತಲು ಮತ್ತು ವಿಷಾದದ ಸುತ್ತ ಹೆಣೆದಿರುವ ಚಿತ್ರ.

ಕಾದಂಬರಿಯನ್ನು ತೆರೆಯ ಮೇಲೆ ಅಳವಡಿಸುವಾಗ ನಿರ್ದೇಶಕರು ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಪುಸ್ತಕದಲ್ಲಿರುವ ಎಷ್ಟೋ ಗೊಂದಲಗಳಿಗೆ ಚಿತ್ರದಲ್ಲಿ ನೈಜ ಉತ್ತರಗಳನ್ನು ನೀಡುವ, ಅದರಲ್ಲೂ ಬದುಕಿನ ಕೊನೆಯ ದಿನಗಳಲ್ಲಿ ಏನಾಗುತ್ತಿದೆ ಎನ್ನುವುದರ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ ಈ ಪ್ರಕ್ರಿಯೆಯಲ್ಲಿ ಕಾದಂಬರಿಯ ಆಂತರಿಕ ಕಾವ್ಯಾತ್ಮಕತೆಗೆ ಸ್ವಲ್ಪ ಧಕ್ಕೆಯಾಗಿರುವುದೂ ಹೌದು. ಬದುಕಿನ ಅಂತ್ಯದ ದಿನಗಳ ಕುರಿತಾದ ರೋಚಕ ಚಿತ್ರಣವಿರುವ ಈ ಕಾದಂಬರಿ ಬಹಳ ಲಲಿತವಾದ ಮಾನಸಿಕತೆ ಮತ್ತು ಸಾಮಾಜಿಕತೆಯ ಸುತ್ತ ಹೆಣೆದ ಕಾದಂಬರಿ. ಆದರೆ ಚಿತ್ರದ ನಿರ್ದೇಶಕರು ರೋಚಕತೆಯ ಕಡೆಗಷ್ಟೇ ಮಹತ್ವ ಕೊಟ್ಟು ಕಾದಂಬರಿಯ ಲಾಲಿತ್ಯವನ್ನು ತುಸುಮಟ್ಟಿಗೆ ಕಿತ್ತುಕೊಂಡಿದ್ದಾರೆ. ಚಿತ್ರದಲ್ಲಿ ಹಿಡಿತ ಇದ್ದರೂ ಲಾಲಿತ್ಯವಿಲ್ಲ ಎನಿಸುವುದು ಇದೇ ಕಾರಣಕ್ಕೆ.

ಜೂಲಿಯ ರಾಬರ್ಟ್ಸ್ ಮತ್ತು ಈತನ್ ಹಾಕ್ ಅಮಂಡ ಮತ್ತು ಕ್ಲೇ ಪಾತ್ರ ಮಾಡಿದ್ದಾರೆ. ಇವರು ಮೇಲ್ಮಧ್ಯಮ ವರ್ಗವನ್ನು ಪ್ರತಿನಿಧಿಸುವ ದಂಪತಿ. ಹದಿಹರೆಯದ ಮಕ್ಕಳು ಮತ್ತು ಜೀವನದ ಜಂಜಡಗಳಲ್ಲಿ ಇಬ್ಬರ ನಡುವೆಯೂ ತುಸು ಸಂಘರ್ಷಗಳು ಎದುರಾಗಿ ಇಬ್ಬರೂ ಒಂದು ಪ್ರವಾಸಕ್ಕಾಗಿ, ವಿಶ್ರಾಂತಿಗಾಗಿ ಎದುರು ನೋಡುತ್ತಿದ್ದಾರೆ. ಅಮಂಡ ತನಗೆ ತೋರಿದ ರೀತಿ ಲಾಂಗ್ ಐಲೆಂಡ್ ಅಲ್ಲಿ ಒಂದು ಸ್ಥಳವನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾಳೆ. ಕುಟುಂಬದ ಮಂದಿ ತಮ್ಮೊಳಗೆ ಮಾತನಾಡುತ್ತಾ, ಬಗೆಹರಿಸಿಕೊಳ್ಳುತ್ತಾ ಸಮಯ ಕಳೆಯುತ್ತಿರುವಾಗಲೇ ಆ ಮನೆಯ ಮಾಲೀಕ ಮತ್ತು ಆತನ ಮಗಳು ಉಳಿದುಕೊಳ್ಳಲು ಸ್ಥಳ ಹುಡುಕುತ್ತಾ ಮಧ್ಯರಾತ್ರಿ ಆ ಮನೆಯ ಬಾಗಿಲು ತಟ್ಟುತ್ತಾರೆ.

ಅಮಂಡಳಿಗೆ ಅಪ್ಪ ಮತ್ತು ಮಗಳು ಹೇಳುವ ಕಥೆಯ ಮೇಲೂ, ಅವರ ಹಿನ್ನಲೆಯ ಬಗ್ಗೆಯೂ ಮತ್ತು ಆ ಮನೆಯ ಅವರ ಮಾಲೀಕತ್ವದ ಬಗ್ಗೆಯೂ ಸಂಶಯ ಬರುತ್ತದೆ. ಈ ಹಂತದಲ್ಲಿ ನಮಗೆ ಚಿತ್ರದಲ್ಲಿ ಕೆಲವು ಪೂರ್ವಗ್ರಹಗಳು ಇರಬಹುದು ಎಂದು ಎನಿಸಿದರೂ ಕಥೆ ಮುಂದೆ ಸಾಗುತ್ತಾ ವಿಷಯ ಇನ್ನೂ ಗಾಢವಾಗಿದೆ ಮತ್ತು ಗಂಭೀರವಾಗಿದೆ ಎಂದು ಅರಿವಿಗೆ ಬರುತ್ತಾ ಹೋಗುತ್ತದೆ. ಮೊಬೈಲ್ ಸಿಗ್ನಲ್ ಹೋಗುತ್ತದೆ. ಇಂಟರ್‌ನೆಟ್‌ ಹೋಗುತ್ತದೆ. ಪ್ರಾಣಿಗಳು ವಿಚಿತ್ರವಾಗಿ ವರ್ತಿಸಲು ಶುರುಮಾಡುತ್ತವೆ. ಆಕಾಶದಿಂದ ವಿಲಕ್ಷಣವಾಗಿ ತೂರಿಬಂದ ಜೋರಾದ ಶಬ್ದವೊಂದು ಎರಡೂ ಕುಟುಂಬಗಳನ್ನು ದಿಕ್ಕೆಡುವಂತೆ ಮಾಡುತ್ತವೆ.

ಆರ್ಮಗೆಡಾನ್ ಮಾದರಿಯ ಕಥಾವಿನ್ಯಾಸವನ್ನು ಇಲ್ಲಿ ಗಮನಿಸಬಹುದಾದರೂ ನಿರ್ದೇಶಕರು ಇನ್ನೂ ಮನೋಜ್ಞವಾಗಿ ಅವನ್ನು ಇಲ್ಲಿ ಅಳವಡಿಸಿದ್ದಾರೆ. ತಾಂತ್ರಿಕ ಆತಂಕವನ್ನು ಬಹಳ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಯಂತ್ರಗಳ ಮೇಲೆ ನಮ್ಮ ಅವಲಂಬನೆ ಜಾಸ್ತಿ ಆದಾಗ ಮತ್ತು ಅವುಗಳು ವಿಫಲವಾದಾಗ ಉಂಟಾಗುವ ಆತಂಕ ಮತ್ತು ಹತಾಶೆಯ ಚಿತ್ರಣವನ್ನು ಪ್ರಬಲವಾಗಿ ಮಾಡಿದ್ದಾರೆ. ಆಧುನಿಕ ಬದುಕಿನ ಅವಲಂಬನೆಗಳ ವಿಡಂಬನಾತ್ಮಕ ಚಿತ್ರಣ ಕೂಡ ಇಲ್ಲಿ ಕಾಣಬಹುದು. ಕೆಲವೊಂದಷ್ಟು ದೃಶ್ಯಗಳು ಅರ್ಥಹೀನ ಎನಿಸಿದರೂ ಸಂಪೂರ್ಣ ಸುಳ್ಳು ಖಂಡಿತ ಅಲ್ಲ ಎನ್ನುವಷ್ಟು ನೈಜವಾಗಿ ಮೂಡಿಬಂದಿವೆ.

ಇಲ್ಲಿ ಜನಗಳನ್ನು ಆತಂಕಕ್ಕೆ ಈಡುಮಾಡುತ್ತಿರುವುದು ಕೇವಲ ತಂತ್ರಜ್ಞಾನದ ಅಥವಾ ಅದರ ಇಲ್ಲದಿರುವಿಕೆ ಅಲ್ಲ. ಯಾವುದೋ ಒಂದು ಆಂತರಿಕ ತಲ್ಲಣ ಎಲ್ಲರನ್ನೂ ಕಿತ್ತು ತಿನ್ನುತ್ತಿದೆ. ಆಧುನಿಕ ಯುಗದಲ್ಲಿ ಅವರವರ ಅಸ್ತಿತ್ವ ಅರ್ಥಹೀನವಾದಂತೆ ಭಾಸವಾಗುತ್ತಿದೆ. ಇಲ್ಲಿ ಎಲ್ಲರಿಗೂ ಅವರವರ ಅಸ್ತಿತ್ವದ ಬಗ್ಗೆ ಒಂದು ಕೋಪ, ಉದ್ವೇಗ, ಅಪನಂಬಿಕೆ ಮತ್ತು ಜಿಗುಪ್ಸೆ ಇರುವುದನ್ನು ಗಮನಿಸಬಹುದು. ಈ ಅಂಶ ಕಾದಂಬರಿಯಲ್ಲಿ ಎಷ್ಟು ಅರ್ಥಪೂರ್ಣವಾಗಿ ನಿರೂಪಿತವಾಗಿದೆಯೋ ಅಷ್ಟೇ ಪರಿಣಾಮಕಾರಿಯಾಗಿ ಚಿತ್ರದಲ್ಲೂ ಅಳವಡಿಸಲ್ಪಟ್ಟಿದೆ. ಎಲ್ಲ ನಟನಟಿಯರ ಅಭಿನಯ ಕೂಡ ಈ ಭಾಗಗಳಲ್ಲಿ ಬಹಳ ಪರಿಣಾಮಕಾರಿಯಾಗಿದೆ. ಜೂಲಿಯ ಮತ್ತು ಈತನ್ ನಡುವಿನ ದೃಶ್ಯಗಳಂತೂ ಬಹಳ ಸಲೀಸು ಮತ್ತು ಪರಿಣಾಮಕಾರಿ. ಅದಕ್ಕೆ ಪೂರಕವಾದ ಕ್ಯಾಮೆರಾ ವಿಭಾಗ ಚಿತ್ರವನ್ನು ಮತ್ತಷ್ಟು ಎತ್ತರಕ್ಕೇರಿಸಿದೆ.

ಪಾತ್ರಗಳ ದುಃಖ, ವಿಷಾದ ಏನೇ ಇರಲಿ, ಪ್ರಪಂಚ ಇದಾವುದಕ್ಕೂ ತಲೆಕೆಡಿಸಿಕೊಳ್ಳದೆ ಮುಂದಕ್ಕೆ ಸಾಗುತ್ತಲೇ ಇರುತ್ತದೆ ಎಂಬ ಸತ್ಯವನ್ನು ಚಿತ್ರ ಕ್ಷಣಕ್ಷಣಕ್ಕೂ ನೆನಪಿಸುತ್ತಾ ಮುಂದಕ್ಕೆ ಸಾಗುತ್ತದೆ. ಯಾರೋ, ಎಂದೋ ಬಿಟ್ಟುಹೋದ ನಿವಾಸದ ತಾತ್ಕಾಲಿಕ ಅತಿಥಿಗಳು ಇಲ್ಲಿ ನಾವು ಅಷ್ಟೇ. ಅದಕ್ಕಿಂತ ಹೆಚ್ಚಾಗಿ ನಮ್ಮ ಪಾತ್ರ ಇಲ್ಲೇನೂ ಇಲ್ಲ ಎನ್ನುವ ಸತ್ಯದ ಅನಾವರಣ ಇಲ್ಲಿ ಆಗುತ್ತಲೇ ಹೋಗುತ್ತದೆ. ಪ್ರಕೃತಿ ಎಲ್ಲಕ್ಕಿಂತ ದೈತ್ಯ ಶಕ್ತಿ ಎನ್ನುವ ಸಾರ್ವಕಾಲಿಕ ಸತ್ಯದ ನಿರೂಪಣೆಯನ್ನು ಇಲ್ಲಿ ನೋಡಬಹುದು.

ಅಲ್ಲಲ್ಲಿ ಚಿತ್ರದಲ್ಲಿ ಬಹಳ ಕ್ಲೀಷೆ ಎನಿಸಬಹುದಾದ ಭಾಗಗಳಿದ್ದು, ನಂಬಲು ಕಷ್ಟವೆನಿಸುವ ಘಟನೆಗಳಿವೆ. ಆದರೂ ಮಿಂಚಿಹೋದದಕ್ಕೆ ಚಿಂತಿಸಿ ಫಲವಿಲ್ಲ ಎನ್ನುವ ಸೂಚ್ಯ ಸಂದೇಶದ ಒಡನೆ ಸುತ್ತ ಏನು ನಡೆಯುತ್ತಿದೆ ಎನ್ನುವುದರ ಮೇಲೆ ಗಮನ ಕೊಟ್ಟರೆ ಬಿಟ್ಟು ಹೊರಡುವುದಕ್ಕೆ ಮುನ್ನ ಒಂದಷ್ಟು ಅರ್ಥ ಕಂಡುಕೊಂಡು ಹೊರಡಬಹುದು ಎನ್ನುವ ಸಂದೇಶ ನೀಡುತ್ತಲೇ ‘ಲೀವ್ ದ ವರ್ಲ್ಡ್ ಬಿಹೈಂಡ್‌’ ಒಂದು ಗಾಢವಾದ ಆದರೆ ನೆಮ್ಮದಿ ನೀಡುವ ವಿಷಾದದೊಂದಿಗೆ ಮುಗಿಯುತ್ತದೆ. ಒಳ್ಳೆಯ ಚಿತ್ರವೀಕ್ಷಣೆಯ ಅನುಭವ ಕೊಟ್ಟು ಚಿಂತನೆಗೆ ಹಚ್ಚುವ ಚಿತ್ರವಿದು. ‘ಲೀವ್ ದ ವರ್ಲ್ಡ್ ಬಿಹೈಂಡ್‌’ Netflixನಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here