ತಮಿಳು ಸಿನಿಮಾ | ಮಾನಾಡು

ವೆಂಕಟ್‌ ಪ್ರಭು ನಿರ್ದೇಶನದ ‘ಮಾನಾಡು’ (ಬಹಿರಂಗ ಸಭೆ) ಒಂದೊಳ್ಳೆಯ ಕಮರ್ಷಿಯಲ್ ಎಂಟರ್‌ಟೇನರ್ ಆಗಿ ಇಷ್ಟವಾಗುತ್ತದೆ. ಇತ್ತೀಚೆಗೆ ತೀರಾ ವಿರಳ ಎನ್ನಬಹುದಾದ ಮುಸ್ಲಿಂ ಅನ್ನು ನಾಯಕ ಪಾತ್ರಧಾರಿಯನ್ನಾಗಿ (ಪ್ರೊಟೊಗನಾಸ್ಟ್) ಮಾಡಿರುವುದು ವಿಶೇಷ. ಈ ಸಿನಿಮಾ ಟೈಮ್‌ಲೂಪ್ ಕಾನ್ಸೆಪ್ಟ್‌ನಲ್ಲಿದ್ದರೂ ಎಡಿಟಿಂಗ್‌ ಮತ್ತು ಅಭಿನಯ ಎಲ್ಲವೂ ಒಂದು ಕಮರ್ಷಿಯಲ್‌ ಚಿತ್ರಕ್ಕೆ ಎಷ್ಟು ಬೇಕೋ ಅಷ್ಟನ್ನು ಹದವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ. ದಶಕದ ಹಿಂದೆ ವೆಂಕಟ್‌ಪ್ರಭು ಅವರು ನಟ ಅಜಿತ್‌ಗಾಗಿ ‘ಮಂಗಾತಾ’ ಸಿನಿಮಾ ನಿರ್ದೇಶಿಸಿದ್ದರು. ಆ ದೊಡ್ಡ ಗೆಲುವಿನ ನಂತರ ಅವರಿಗೆ ಮತ್ತೆ ಹೇಳಿಕೊಳ್ಳುಂತಹ ಯಶಸ್ಸು ಸಿಕ್ಕಿರಲಿಲ್ಲ. ಲಯ ಕಳೆದುಕೊಂಡಿದ್ದ ಅವರಿಗೆ ‘ಮಾನಾಡು’ ಒಂದೊಳ್ಳೆಯ ಕಮ್ ಬ್ಯಾಕ್‌ ಸಿನಿಮಾ ಆಗಿದೆ.

ಬಾಬರಿ ಮಸೀದಿ ಗಲಭೆ ಹಿನ್ನೆಲೆಯ ಸನ್ನಿವೇಶದಲ್ಲಿ ಚಿತ್ರದ ಕಥಾನಾಯಕ (ಮುಸ್ಲಿಂ ಧರ್ಮೀಯ) ದೇವಸ್ಥಾನದವೊಂದರಲ್ಲಿ ಜನಿಸುತ್ತಾನೆ. ಈ ದೃಶ್ಯದ ಕಲ್ಪನೆ, ಮೇಕಿಂಗ್‌ಗಾಗಿ ನಿರ್ದೇಶಕರಿಗೆ ಒಂದು ಶಹಬ್ಬಾ‍ಷ್ ಹೇಳಬೇಕು. ಅವರಿಲ್ಲಿ ಕೊಯಮತ್ತೂರಿನ ಬಾಂಬ್ ಬ್ಲಾಸ್ಟ್ ಪ್ರಕರಣ ತರುತ್ತಾರೆ. ಸುಳ್ಳು ಆರೋಪದಿಂದ ಅವಮಾನಿತನಾಗಿ ಮುಸ್ಲಿಂ ಜನಾಂಗದ ಮದ್ಯವಯಸ್ಕ ವ್ಯಕ್ತಿ ಅತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಮುಂದೆ ಅದೇ ಫ್ಯಾಮಿಲಿಯಲ್ಲಿ ಯುವಕ ಟೆರರಿಸ್ಟ್ ಹಾದಿ ಹಿಡಿಯಲು ವ್ಯವಸ್ಥೆಯೇ ಪರೋಕ್ಷವಾಗಿ ಕಾರಣವಾಗುವುದು, ಆತನಿಗೆ ವಿನಾಕಾರಣ ಪಾಸ್‌ಪೋರ್ಟ್ ನಿರಾಕರಿಸುವ ಸನ್ನಿವೇಶಗಳು ಮನಮುಟ್ಟುತ್ತವೆ. ಈ ಸನ್ನಿವೇಶಗಳ ಕಟ್ಟುವಿಕೆ ನಿರ್ದೇಶಕನ ಮೇಲೆ ಪ್ರೀತಿ ಮೂಡಿಸುತ್ತದೆ. ಒಂದೆಡೆ ನಾಯಕ, “ಇನ್ನಾದರೂ ನಮ್ಮ ಧರ್ಮದ ಮೇಲೆ ಅನಗತ್ಯ ಆರೋಪ ನಿಲ್ಲಿಸಿ. ಅಮೆರಿಕದಲ್ಲಿ ಅನ್ಯಧರ್ಮದವರು ಕೊಂದರೆ, ಕೊಲೆಗಾರ ಮಾನಸಿಕ ಅಸ್ವಸ್ತ ಎಂದು ಬಿಂಬಿಸಿ ಸುಮ್ಮನಾಗುತ್ತಾರೆ. ಅದೇ ಕೊಂದವನು ಮುಸ್ಲಿಂ ಆಗಿದ್ದರೆ, ಇಡೀ ಜನಾಂಗವನ್ನು ಉಗ್ರರಿಗೆ ಹೋಲಿಸಿ ಮಾತನಾಡುತ್ತಾರೆ” ಎಂದು ನೇರವಾಗಿ ಪ್ರೇಕ್ಷಕರನ್ನು ನೋಡಿ ಹೇಳುವಾಗ, ಪ್ರೇಕ್ಷಕನಿಗೆ ಅಪರಾಧಿ ಭಾವ ಕಾಡಬಹುದು.

ಬಾಂಬ್‌ ಬ್ಲಾಸ್ಟ್ ಪ್ರಕರಣ, ಹಿಂದೂ – ಮುಸ್ಲಿಂ ಬಾಂಧವ್ಯ, ಮುಸ್ಲಿಂ ಜನಾಂಗದ ಮೇಲಿನ ಸುಳ್ಳು ಆರೋಪ, ಆಪಾದನೆಗಳು… ಎಲ್ಲವನ್ನೂ ಕಮರ್ಷಿಯಲ್‌ ಚೌಕಟ್ಟಿಗೆ ಹೊಂದಿಸಿರುವ ನಿರ್ದೇಶಕ ಅದನ್ನು ರಂಜನೀಯವಾಗಿ ಹೇಳಲು ಪ್ರಯತ್ನ ಪಟ್ಟಿದ್ದು, ಯಶಸ್ವಿಯೂ ಆಗಿದ್ದಾರೆ. ಭಾರತದಲ್ಲಿ ಟೈಂ ಲೂಪ್ ಚಿತ್ರಗಳು ತೀರಾ ಕಡಿಮೆ. ‘ಗ್ರೌಂಡ್‌ಹಾಗ್‌ ಡೇ’, ‘ಹ್ಯಾಪಿ ಡೆಥ್‌ ಡೇ 1’, ‘ಹ್ಯಾಪಿ ಡೆಥ್‌ ಡೇ 2’ ಸಿನಿಮಾಗಳನ್ನು ವೀಕ್ಷಿಸಿದವರಿಗೆ ‘ಮಾನಾಡು’ ಇಷ್ಟವಾಗುತ್ತದೆ. ಆ ಜಾನರ್ ಸಿನಿಮಾ ನೋಡದವರಿಗೂ ಕೂಡ ಟೈಂಲೂಪ್ ಅರ್ಥವಾಗುವಂತೆ ಸರಳವಾಗಿ, ನೇರವಾಗಿ ನಿರೂಪಿಸಿದ್ದಾರೆ ವೆಂಕಟ್‌ ಪ್ರಭು. ಸೆಕೆಂಟ್‌ ಹಾಫ್‌ನಲ್ಲಿ ಕಾಮಿಡಿ ವರ್ಕ್ಔಟ್ ಆಗಿದ್ದು, ಪ್ರೇಕ್ಷಕರನ್ನು ಎಂಗೇಜ್ ಆಗಿಡುತ್ತದೆ. ಚಿತ್ರಕಥೆ ಮತ್ತು ಸಂಕಲನದ ಕೆಲಸ ಪರ್ಫೆಕ್ಟ್‌ ಆಗಿದೆ. ಪ್ರಮುಖ ನಟರಾದ ಸಿಂಬು, ಎಸ್‌.ಜೆ.ಸೂರ್ಯ ಚೆನ್ನಾಗಿ ಅಭಿನಯಿಸಿದ್ದಾರೆ. ನಿರ್ದೇಶಕ ವೆಂಕಟ್‌ಪ್ರಭು ಅವರಂತೆಯೇ ಗೆಲುವಿನ ನಿರೀಕ್ಷೆಯಲ್ಲಿದ್ದ ಸಿಂಬು ಅವರಿಗೂ ‘ಮಾನಾಡು’ ಕೈಹಿಡಿಯುವ ಸಾಧ್ಯತೆಗಳು ದಟ್ಟವಾಗಿವೆ.

ನಿರ್ಮಾಪಕ : ಸುರೇಶ್ ಕಮಾಚ್ಚಿ | ನಿರ್ದೇಶನ : ವೆಂಕಟ್‌ ಪ್ರಭು | ಸಂಗೀತ : ಯುವನ್ ಶಂಕರ್ ರಾಜಾ | ಛಾಯಾಗ್ರಹಣ : ರಿಚರ್ಡ್‌ ಎಂ.ನಾಥನ್‌ | ತಾರಾಬಳಗ : ಸಿಂಬು, ಎಸ್‌.ಜೆ.ಸೂರ್ಯ, ಕಲ್ಯಾಣಿ ಪ್ರಿಯದರ್ಶನ್‌

LEAVE A REPLY

Connect with

Please enter your comment!
Please enter your name here