ಅನೀಶ್‌ ತೇಜೇಶ್ವರ್‌ ನಟನೆಯ ‘ಮಾಯಾನಗರಿ’, ‘ಸೈಕಿಕ್‌’ ಕ್ರೈಂ ಥ್ರಿಲ್ಲರ್‌ ಕನ್ನಡ ಚಿತ್ರಗಳು ಈ ವಾರ ತೆರೆಕಂಡಿವೆ. ಕನ್ನಡತಿ ಖುಷಿ ರವಿ ನಟಿಸಿರುವ ‘ಪಿಂಡಂ’ ಹಾರರ್‌ ತೆಲುಗು ಸಿನಿಮಾ, ಕೀರ್ತಿ ಪಾಂಡಿಯನ್, ಅಮ್ಮು ಅಭಿರಾಮಿ, ವಿದ್ಯಾ ಪ್ರದೀಪ್ ಮತ್ತು ಶಾಲಿನ್ ಜೋಯಾ ನಟಿಸಿರುವ ‘ಕನ್ನಗಿ’ ತಮಿಳು ಸಿನಿಮಾ ಈ ವಾರ ತೆರೆಗೆ ಬಂದಿವೆ.

ಸೈಕಿಕ್‌ | ಕನ್ನಡ | ಸಿನಿಮಾದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಖ್ಯಾತಿಯ ನಟಿ ಹಂಸಾ ಪ್ರತಾಪ್‌ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರೈಂ ಥ್ರಿಲ್ಲರ್‌ ಶೈಲಿಯ ಹಲವು ವಿಶೇಷತೆಗಳನ್ನು ಹೇಳುವ ನಿಟ್ಟಿನಲ್ಲಿ ಒಂದಷ್ಟು ಹೊಸ ಪ್ರಯೋಗವನ್ನೂ ಈ ಸಿನಿಮಾದಲ್ಲಿ ಮಾಡಲಾಗಿದೆ. ಮೂರು ರೀತಿಯ ಲವ್ ಸ್ಟೋರಿಗಳನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾವನ್ನು Silk Cinemas ಬ್ಯಾನರ್‌ ಅಡಿಯಲ್ಲಿ ಚೇತನ್ ಮಂಜುನಾಥ್ ನಿರ್ಮಾಣ ಮಾಡಿದ್ದು, ವೈ ಎಸ್ ಶ್ರೀಧರ್ ಸಂಕಲನ, ಪ್ರಸನ್ನ ಶೆಟ್ಟಿ ಸಂಭಾಷಣೆ ಹಾಗೂ ಗೋಪಿ ಜಾ ಸಾಹಸ ಸಂಯೋಜನೆ, ಎಂ ಎಸ್ ತ್ಯಾಗರಾಜ್ ಸಂಗೀತ, ಸಿನಿಟೆಕ್ ಸೂರಿ ಛಾಯಾಗ್ರಹಣ ಚಿತ್ರಕ್ಕಿದೆ. ಕೈಲಾಸ್ ದೇವ್, ನಿಕಿತಾ ದೋರ್ಥೋಡಿ, ರೇಷ್ಮಾ ಲಿಂಗರಾಜಪ್ಪ, ರೋಹಿತ್ ನಾಗೇಶ್, ಅರವಿಂದ್, ರಮೇಶ್ ಭಟ್, ನಿಶಿತಾ ಗೌಡ, ಪ್ರಸನ್ನ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಸ್ನೇಹರ್ಷಿ | ಕನ್ನಡ | ಚಿತ್ರದಲ್ಲಿ ಸ್ನೇಹವೇ ಪ್ರಮುಖ ಕಥಾವಸ್ತು ಆದರ ಜೊತೆಗೆ ಸಾಮಾಜಿಕ ಕಳಕಳಿಯೂ ಇದೆ. ಪ್ರತಿ ದಿನ ನಾವು ಸಮಾಜದಲ್ಲಿ ಸಾಕಷ್ಟು ಶ್ರಮಜೀವಿಗಳನ್ನು ದಿನನಿತ್ಯದ ನಮ್ಮ ಜೀವನದಲ್ಲಿ ಗಮನಿಸುತ್ತಿರುತ್ತೇವೆ. ಆದರೆ ಅವರ ಸಮಸ್ಯೆ ಏನು? ಅವರ ಬದುಕು ಹೇಗೆ? ಅನ್ನೋದು ಗಮನಕ್ಕೆ ಬರುವುದಿಲ್ಲ ಅಂಥವರ ಕುರಿತು ಈ ಸಿನಿಮಾ ಮೂಡಿ ಬಂದಿದೆ. ಚಿತ್ರದಲ್ಲಿ ಕಿರಣ್ ನಾರಾಯಣ್‌ ಅವರಿಗೆ ನಾಯಕಿಯಾಗಿ ಸಂಜನಾ ನಟಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ಸುಧಾ ಬೆಳವಾಡಿ, ಹಿರಿಯ ನಟ ಉಮೇಶ್, ನಾಗತಿಹಳ್ಳಿ ಜಯಪ್ರಕಾಶ್, ಚಕ್ರವರ್ತಿ, ನವೀನ್, ದೇವಕಿ, ರಂಗನಾಥ್, ಮಾರುತಿ, ಸೌಮ್ಯ ಕಾಣಿಕೊಂಡಿದ್ದಾರೆ. ಚಿತ್ರಕ್ಕೆ ರವಿ ಕಿಶೋರ್ ಛಾಯಾಗ್ರಹಣ, ಆಕಾಶ್ ಅಯ್ಯಪ್ಪ ಸಂಗೀತ ಸಂಯೋಜನೆ, ಮೋಹನ್ ಭಜರಂಗಿ ನೃತ್ಯ ಸಂಯೋಜನೆಯಿದೆ.

ಯೂಸ್‌ ಲೆಸ್‌ ಫೆಲೋ | ಕನ್ನಡ | ಆಕ್ಷನ್‌ – ಥ್ರಿಲ್ಲರ್‌ ಮತ್ತು ಪ್ರೇಮಕಥಾಹಂದರ ಹೊಂದಿರುವ ಸಿನಿಮಾ. ಚಿತ್ರದಲ್ಲಿ ಮನು ನಾಯಕನಾಗಿ ಕಾಣಿಸಿಕೊಂಡಿದ್ದು, ಮನುಗೆ ಜೋಡಿಯಾಗಿ ದಿವ್ಯಾ ಗೌಡ ನಟಿಸಿದ್ದಾರೆ. ‘ಅಗ್ನಿಸಾಕ್ಷಿ’ ಖ್ಯಾತಿಯ ವಿಜಯ್ ಸೂರ್ಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿನೋದ್ ಗೊಬ್ಬರಗಾಲ, ಜೆಕೆ ಮೈಸೂರು, ಸುರೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. Rajaratna Productions ಬ್ಯಾನರ್‌ ಅಡಿ ಮನು ತಾಯಿ ರತ್ನ ಬಸವರಾಜು ಚಿತ್ರ ನಿರ್ಮಾಣ ಮಾಡಿದ್ದಾರೆ. ಹರಿವು, ಪಿಂಗಾರ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಿರ್ಮಾಪಕ ಅವಿನಾಶ್ ಶೆಟ್ಟಿ ಸಹ ನಿರ್ಮಾಪಕರು. ಚಿತ್ರಕ್ಕೆ ಶ್ಯಾಮ್ ಸಿಂಧನೂರು ಛಾಯಾಗ್ರಹಣ, ವಿಜಯ್ ಸಿಂದಿಗಿ ಸಂಕಲನ, ಶಿವಪ್ರಸಾದ್ ಸಂಗೀತ ಸಂಯೋಜನೆಯಿದೆ. ಸಿನಿಮಾವನ್ನು ಹಾಸನ, ಸಕಲೇಶಪುರ, ಹುಬ್ಬಳ್ಳಿ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.

ಮಾಯಾನಗರಿ | ಕನ್ನಡ | ಶಂಕರ್ ಆರಾಧ್ಯ ನಿರ್ದೇಶನದ, ಅನೀಶ್ ತೇಜೇಶ್ವರ್ ನಟನೆಯ ಸಿನಿಮಾ. ಅನೀಶ್ ಜೋಡಿಯಾಗಿ ಶ್ರಾವ್ಯ ರಾವ್ ಹಾಗೂ ತೇಜು ನಟಿಸಿದ್ದಾರೆ. Sandalwood Pictures ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ತಾಂತ್ರಿಕವಾಗಿಯೂ ವಿಶೇಷವಾಗಿದೆ. ಮಾಸ್ ಮಾದ, ವಿಕ್ರಮ್ ಮೋರ್ ಫೈಟ್ ಕಂಪೋಸ್ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತಕ್ಕೆ ಯೋಗರಾಜ್ ಭಟ್, ಹರೀಶ್ ಶೃಂಗ, ಶಿವನಂಜೇ ಗೌಡ, ಸುದರ್ಶನ್ ಸಾಹಿತ್ಯ ಬರೆದಿದ್ದಾರೆ. ಮದನ್ – ಹರಿಣಿ ಹಾಗೂ ಮುರಳಿ ನೃತ್ಯ ನಿರ್ದೇಶನ, ವಿಜಯ್ ಎಂ ಕುಮಾರ್ ಸಂಕಲನ, ಶ್ರೀನಿವಾಸ್ ಛಾಯಾಗ್ರಹಣವಿದೆ. ಶರತ್ ಲೋಹಿತಾಶ್ವ, ಅವಿನಾಶ್, ಸುಚೇಂದ್ರ ಪ್ರಸಾದ್, ಎಡಕಲ್ಲು ಗುಡ್ಡದ ಚಂದ್ರಶೇಖರ್, ಚಿಕ್ಕಣ್ಣ, ಭರತ್ ಸಾಗರ್, ಗಿರಿ ದಿನೇಶ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಬಾ ನಲ್ಲೆ ಮದುವೆಗೆ | ಕನ್ನಡ | ಗಂಡು – ಹೆಣ್ಣು ಪ್ರೀತಿಯ ಮೋಹಕ್ಕೆ ಬಿದ್ದು, ಆತುರದ ನಿರ್ಧಾರ ಕೈಗೊಳ್ಳದೇ ಎಲ್ಲ ಬಗೆಯಲ್ಲೂ ಯೋಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದು ಚಿತ್ರದ ಕಥಾವಸ್ತು. ಚಿತ್ರದ ನಾಯಕನಾಗಿ ಅರ್ಜುನ್, ನಾಯಕಿಯಾಗಿ ಶೋಭಾ ನಟಿಸಿದ್ದಾರೆ. ಅಂಜನಪ್ಪ, ಮೈಸೂರು ಮಂಜುಳಾ, ಗೋವಿಂದಪ್ಪ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಈ ಸಿನಿಮಾವನ್ನು M ಯೋಗೇಶ್‌ ನಂದನ್‌ ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ. ಪ್ರಸನ್ನ ಕುಮಾರ್‌ ಛಾಯಾಗ್ರಹಣ, ರಘು ಸಂಕಲನವಿದೆ.

ಕೈಸಿ ಯೇ ದೂರ್‌ | ಹಿಂದಿ | ರತ್ನ ನೀಲಂ ಪಾಂಡೆ ಮತ್ತು ಸಂದೀಪ್ ಎಸ್ ಚೌಧರಿ ಬರೆದು ನಿರ್ದೇಶಿಸಿರುವ ಈ ಚಿತ್ರವು ಸಣ್ಣ ಪಟ್ಟಣವಾದ ಕೊತ್ವಾಲಿ ಥಾನಾದಲ್ಲಿನ ತ್ರಿಪಾಠಿ ಜಿ ಎಂಬ ಸಬ್-ಇನ್‌ಸ್ಪೆಕ್ಟರ್ ಸುತ್ತ ಸುತ್ತುತ್ತದೆ. ಇವರು ತಮ್ಮ ಮಗ ಅಭಿಮನ್ಯುವಿಗೆ ಉನ್ನತ ಭವಿಷ್ಯವನ್ನು ಕಲ್ಪಿಸಲು ಹೋರಾಡುತ್ತಿರುತ್ತಾರೆ. ಸಿನಿಮಾದಲ್ಲಿ ನಿಖಿಲ್ ಪಾಂಡೆ, ರತ್ನ ನೀಲಂ ಪಾಂಡೆ, ಜಶ್ನ್ ಅಗ್ನಿಹೋತ್ರಿ, ಬ್ರಿಜೇಂದ್ರ ಕಲಾ, ಸುನೀತಾ ರಾಜ್ವರ್, ಅಶ್ವಥ್
ಭಟ್, ಸತ್ಯಕಾಂ ಆನಂದ್, ತುಲಿಕಾ ಬ್ಯಾನರ್ಜಿ, ಸತ್ಯಂ ಶ್ರೀವಾಸ್ತವ, ಅಲೋಕ್ ಭಾರದ್ವಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಫೈಯರ್‌ ಆಫ್‌ ಲವ್‌ ರೆಡ್‌ | ಹಿಂದಿ | ಈ ಚಲನಚಿತ್ರವನ್ನು ಅಶೋಕ್ ತ್ಯಾಗಿ ನಿರ್ದೇಶಿಸಿದ್ದಾರೆ ಮತ್ತು ಭರತ್ ದಾಭೋಲ್ಕರ್, ಪಾಯಲ್ ಘೋಷ್ ಮತ್ತು ಕಮಲೇಶ್ ಸಾವಂತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವು ಸಸ್ಪೆನ್ಸ್‌-ಥ್ರಿಲ್ಲರ್ – ಮರ್ಡರ್‌ ಮಿಸ್ಟರಿ ಕಥಾ ಹಂದರವಾಗಿದ್ದು, ಪ್ರೇಮಕಥೆಯನ್ನು ಸಹ ಒಳಗೊಂಡಿದೆ. ಚಿತ್ರದಲ್ಲಿ ಕೃಷ್ಣ ಅಭಿಷೇಕ್ ನಾಯಕನಾಗಿ ನಟಿಸಿದ್ದಾರೆ.

ಕನ್ನಗಿ | ತಮಿಳು | ಕೀರ್ತಿ ಪಾಂಡಿಯನ್, ಅಮ್ಮು ಅಭಿರಾಮಿ, ವಿದ್ಯಾ ಪ್ರದೀಪ್ ಮತ್ತು ಶಾಲಿನ್ ಜೋಯಾ ಮುಖ್ಯ ಭೂಮಿಕೆಯಲ್ಲಿರುವ ಸಿನಿಮಾ. ಚಿತ್ರವು ನಾಲ್ಕು ಮಹಿಳಾ ಪಾತ್ರಗಳನ್ನು ಒಳಗೊಂಡಿದ್ದು, ಸಮಾಜದಲ್ಲಿ ತುಳಿತಕ್ಕೊಳಗಾದ ಗುಂಪಿನ ಸುತ್ತ ಚಿತ್ರಕಥೆ ಸುತ್ತುತ್ತದೆ.ಈ ಮಹಿಳೆಯರು ತಮ್ಮ ಮೇಲೆ ದಬ್ಬಾಳಿಕೆ ಮಾಡುವವರ ನಡುವೆಯೂ ಸಹಜವಾಗಿ ಬದುಕಲು ಪ್ರಯತ್ನಿಸುತ್ತಿರುತ್ತಾರೆ. ಸಿನಿಮಾದಲ್ಲಿ ವೆಟ್ರಿ, ಅಧೇಶ್ ಸುಧಾಕರ್, ಮೌನಿಕಾ, ಯಶವಂತ್ ಕಿಶೋರ್ ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು Skymoon Entertainment ಮತ್ತು E5 Entertainment ಬ್ಯಾನರ್‌ ಅಡಿಯಲ್ಲಿ ಎಂ ಗಣೇಶ್ ಮತ್ತು ಜೆ ಧನುಷ್ ನಿರ್ಮಿಸಿದ್ದಾರೆ. ಶಾನ್ ರೆಹಮಾನ್ ಸಂಗೀತ ಸಂಯೋಜನೆ, ರಾಮ್ಜಿ ಛಾಯಾಗ್ರಹಣ, ಕೆ ಶರತ್‌ಕುಮಾರ್ ಸಂಕಲನವಿದೆ. ಕಾರ್ತಿಕ್ ನೇತಾ ಸಾಹಿತ್ಯ ರಚಿಸಿದ್ದಾರೆ.

ಆಲಂಬನ | ತಮಿಳು | ವೈಭವ್ ಮತ್ತು ಮುನಿಷ್ಕಾಂತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಫ್ಯಾಂಟಸಿ ಕಾಮಿಡಿ ಚಲನಚಿತ್ರ. ಸಿನಿಮಾದಲ್ಲಿ ರೋಬೋ ಶಂಕರ್, ಕಾಳಿ ವೆಂಕಟ್ ಮತ್ತು ಪಾರ್ವತಿ ನಾಯರ್ ಇತರೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪಾರಿ ಕೆ ವಿಜಯ್ ನಿರ್ದೇಶನದ ಚೊಚ್ಚಲ ಸಿನಿಮಾದಲ್ಲಿ ಮುನಿಶ್ ಕಾಂತ್ ‘ಜೀನಿ’ ಪಾತ್ರ ನಿರ್ವಹಿಸಿದ್ದಾರೆ. ಚಿತ್ರಕಥೆಯು ಒಂದು ಶ್ರೀಮಂತ ಮತ್ತು ಸಮೃದ್ಧ ರಾಜಮನೆತನದ ಮಗ (ವೈಭವ್)ನ ಹುಟ್ಟಿನ ನಂತರ ಅವರ ಆಸ್ತಿ ಮತ್ತು ವ್ಯವಹಾರದಲ್ಲಿ ಕುಸಿತವನ್ನು ಕಾಣುತ್ತದೆ. ಮುಖ್ಯ ಕಥಾವಸ್ತುವು ಇಬ್ಬರು ಗೂಂಡಾಗಳ ಸುತ್ತ ಸುತ್ತುತ್ತದೆ. ಅವರು ಮ್ಯಾಜಿಕ್ ದೀಪಗಳ ಮೂಲಕ ಮನಬಂದಂತೆ ತಮಗೆ ಬೇಕಾದವರನ್ನು ಆಟವಾಡಿಸುತ್ತಿರುತ್ತಾರೆ. ನಂತರ ವೈಭವ್ ಆ ಮ್ಯಾಜಿಕ್‌ ದೀಪಗಳನ್ನು ವಶಪಡಿಸಿಕೊಳ್ಳುತ್ತಾನೆ. ನಂತರ ಜಿನಿ (ಮುನಿಷ್ಕಾಂತ್) ಅವನ ಗುಲಾಮನಾಗಿ ಅವನ ಸಂಪೂರ್ಣ ಜೀವನವನ್ನು ಶಾಶ್ವತವಾಗಿ ಬದಲಾಯಿಸುತ್ತಾನೆ. ಆದರೆ ಇಬ್ಬರು ಗೂಂಡಾಗಳು ನಾಯಕನನ್ನು ಬೆನ್ನಟ್ಟಲು ಪ್ರಾರಂಭಿಸಿದಾಗ ಕಥೆಯು ಫ್ಯಾಂಟಸಿ ಹಾಸ್ಯ ರೂಪ ತಾಳಿ ವಿಷಯಗಳು ತಿರುವು ಪಡೆಯುತ್ತವೆ. ಸಿನಿಮಾದಲ್ಲಿ ಮುರಳಿ ಶರ್ಮಾ, ದಿಂಡಿಗಲ್ ಐ ಲಿಯೋನಿ, ʼವೇದಾಲಂʼ ಖ್ಯಾತಿಯ ಕಬೀರ್ ದುಹಾನ್ ಸಿಂಗ್ ಮತ್ತು ಆನಂದರಾಜ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿಪ್ ಹಾಪ್ ತಮಿಝಾ ಸಂಗೀತ ಸಂಯೋಜಿಸಿದ್ದು, ವಿನೋತ್ ರಾಮಸ್ವಾಮಿ ಛಾಯಾಗ್ರಹಣ, ಸ್ಯಾನ್ ಲೋಕೇಶ್ ಸಂಕಲನ ಮಾಡಿದ್ದಾರೆ.

ಸಭಾ ನಾಯಕನ್‌ | ತಮಿಳು | ಅಶೋಕ್ ಸೆಲ್ವನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕಥೆಯು ಅರವಿಂದ್ ಸುತ್ತ ಸುತ್ತುತ್ತದೆ. ಅವನ ಜೀವನದ ಮೂರು ವಿಭಿನ್ನ ಹಂತಗಳಲ್ಲಿ ಮೇಘಾ ಆಕಾಶ್, ಕಾರ್ತಿಕಾ ಮುರಳೀಧರನ್ ಮತ್ತು ಚಾಂದಿನಿ ಚೌಧರಿ ಈ ಮೂರು ಜನ ಹುಡುಗಿಯರನ್ನು ಪ್ರೀತಿಸುತ್ತಾನೆ. ಪ್ರೌಢ ಶಾಲಾ ಹಂತದಲ್ಲಿ ಅವರ ಸ್ನೇಹಿತರಿಗೆ ಸುಳ್ಳು ಹೇಳಿ ಮೇಘಾ ಆಕಾಶ್‌ ಜೊತೆಯಲ್ಲಿ ಸುತ್ತಾಡಲು ಹೋಗುತ್ತಾನೆ. ಕಾಲೇಜು ಹಂತದಲ್ಲಿ ಅವನ ಸೀನಿಯರ್‌ಗಳಿಗೆ ಸುಳ್ಳು ಹೇಳಿ ಕಾರ್ತಿಕಾ ಮುರಳೀಧರನ್‌ ಜೊತೆಯಲ್ಲಿ ಡೇಟಿಂಗ್ ಹೋಗುತ್ತಾನೆ. ಹೀಗೆ ಮೋಜು ಮಸ್ತಿಯಲ್ಲಿ ಅರವಿಂದ್ ತನ್ನ ಜೀವನವನ್ನು ಕಳೆಯುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಚಿತ್ರವನ್ನು Clear Water Films INC ಬ್ಯಾನರ್‌ ಅಡಿಯಲ್ಲಿ ಅರವಿಂದ್ ಜಯಬಾಲನ್, ಅಯ್ಯಪ್ಪನ್ ಜ್ಞಾನವೇಲ್ ಮತ್ತು ಕ್ಯಾಪ್ಟನ್ ಮೇಘವಾಣನ್ ಇಸೈವಾಣನ್ ಅವರು ನಿರ್ಮಿಸಿದ್ದಾರೆ. ಲಿಯಾನ್ ಜೇಮ್ಸ್ ಸಂಗೀತ ಸಂಯೋಜಿಸಿದ್ದು, ಬಾಲಸುಬ್ರಮಣ್ಯಂ, ದಿನೇಶ್ ಪುರುಷೋತ್ತಮನ್, ಮತ್ತು ಪ್ರಭು ರಾಘವ್ ಅವರ ಛಾಯಾಗ್ರಹಣ ಮತ್ತು ಗಣೇಶ್ ಶಿವ ಅವರ ಸಂಕಲನವಿದೆ.

ಫೈಟ್‌ ಕ್ಲಬ್‌ | ತಮಿಳು | ಅಬ್ಬಾಸ್ ಎ ರೆಹಮತ್ ನಿರ್ದೇಶನದ ಸಿನಿಮಾವು ಫುಟ್ಬಾಲ್ ಆಟಗಾರನಾಗಲು ಕನಸು ಕಾಣುವ ಚಿಕ್ಕ ಹುಡುಗ ಸೆಲ್ವನ ಸುತ್ತ ಸುತ್ತುತ್ತದೆ. ಆದರೆ ಅವನ ಕನಸುಗಳು ಕೆಲವು ಕಾರಣಗಳಿಂದ ನನಸಾಗದೇ ಉಳಿಯುತ್ತವೆ. ಇದರಿಂದ ಕೋಪಗೊಳ್ಳುವ ಸೆಲ್ವ ಜಗಳ ಮತ್ತು ಗಲಭೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಚಿತ್ರದಲ್ಲಿ ವಿಜಯ್ ಕುಮಾರ್, ಕಾರ್ತಿಕೇಯನ್ ಸಂತಾನಂ ಮತ್ತು ಶಂಕರ್ ಥಾಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು Reel Good Films ಬ್ಯಾನರ್‌ ಅಡಿಯಲ್ಲಿ ಅದಿತ್ಯ ನಿರ್ಮಿಸಿದ್ದಾರೆ. ಕೃಪಾಕರಣ್. ಕೆ‌ ಸಂಕಲನ ನಿರ್ವಹಿಸಿದ್ದಾರೆ.

ಅಘೋರಿ | ತಮಿಳು | ದುರೈಸಾಮಿ ಸುಬ್ರಮಣಿಯನ್ ನಿರ್ದೇಶಿಸಿರುವ ಈ ಚಲನಚಿತ್ರವು ಆತ್ಮ, ದೆವ್ವ, ಭೂತಗಳ ಕುರಿತಾದ ಸಸ್ಪನ್ಸ್-ಥ್ರಿಲ್ಲರ್‌ ಕಥಾಹಂದರ. ಸಿನಿಮಾದಲ್ಲಿ ಸಿದ್ದು ಸಿದ್, ಶೃತಿ ರಾಮಕೃಷ್ಣನ್, ಸಯಾಜಿ ಶಿಂಧೆ, ಮೈಮ್‌ಗೋಪಿ, ವೆಟ್ರಿ, ಮದನ್ ಗೋಪಾಲ್, ಕೆಪಿವೈ ಶರತ್, ಮಾಧವಿ, ರಿಯಾಮಿಕ್ಕ, ಜಗ್ಗುಲಾ ಬಾಬು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವನ್ನು Motion Filmpicture Inc ಬ್ಯಾನರ್‌ ಅಡಿಯಲ್ಲಿ ಸುರೇಶ್‌ ಕೆ ಮೆನನ್‌ ನಿರ್ಮಿಸಿದ್ದಾರೆ. ಅಮಲರಾಜ್ ವಿಜಯಲಕ್ಷ್ಮಿ ಛಾಯಾಗ್ರಹಣ ಚಿತ್ರಕ್ಕಿದೆ.

ನಾ ನಾ | ತಮಿಳು | ‘ಸಲೀಂ’ ಖ್ಯಾತಿಯ ಎನ್ ವಿ ನಿರ್ಮಲಕುಮಾರ್ ಬರೆದು ನಿರ್ದೇಶಿಸಿರುವ ಈ ಸಿನಿಮಾವು ಅಪರಾಧಿಯೊಬ್ಬನ ಸುತ್ತ ಸುತ್ತುತ್ತದೆ. ಚಿತ್ರದಲ್ಲಿ ಶಶಿಕುಮಾರ್, ಶರತ್‌ಕುಮಾರ್ ಮತ್ತು ಭಾರತಿರಾಜ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಾ ಶುಕ್ಲಾ, ರೇಷ್ಮಾ ವೆಂಕಟೇಶ್, ಬಕ್ಸ್ (ಭಗವತಿ ಪೆರುಮಾಳ್), ಪ್ರದೀಪ್ ರಾವತ್, ಎಸ್‌ಕೆ ಕಾನಿಷ್ಕ್, ದೆಹಲಿ ಗಣೇಶ್, ರಾಮ, ಸಂಜಯ್ ಸ್ವರೂಪ್, ಹರಿಪ್ರಿಯಾ, ಜಯಂತಿ ಮತ್ತು ಪಾಂಡಿ ಕಣ್ಣನ್‌ ಇತರೆ ಪಾತ್ರಗಳಲ್ಲಿ ನಟಿಸಿದ್ದಾರೆ.

ವಿವೇಶಿನಿ | ತಮಿಳು | ಭವನ್ ರಾಜಗೋಪಾಲನ್ ಚಿತ್ರಕಥೆ ರಚಿಸಿ, ನಿರ್ದೇಶಿಸಿರುವ ಈ ಸಸ್ಪೆನ್ಸ್‌ ಥ್ರಿಲ್ಲರ್ ಚಿತ್ರದಲ್ಲಿ ನಾಸರ್, ಕಾವ್ಯ, ಮೇಖಾ ರಾಜನ್, ಸುರೇಶ್ ಚಕ್ರವರ್ತಿ, ವನೆಸ್ಸಾ ಸ್ಟೀವನ್ಸನ್, ಸೂರಜ್, ವಿಶಾಲ್ ರಾಜನ್, ವಿಘ್ನೇಶ್ರನ್, ನಿವೇತಾ, ಗ್ಯಾರಿ ಕಾರ್ಡಿಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸುದರ್ಶನ್‌ ಸಂಕಲನ, ರಿಷಬ್‌ ನಾಗೇಂದ್ರ ಸಂಗೀತ ಸಂಯೋಜನೆಯಿದೆ. ಓಂ ನಾರಾಯಣ ಛಾಯಾಗ್ರಹಣ ನಿರ್ವಹಿಸಿದ್ದಾರೆ.

ಶಾಂತಲಾ | ತೆಲುಗು | ಶೇಷು ಪೆದ್ದಿ ರೆಡ್ಡಿ ನಿರ್ದೇಶಿಸಿರುವ ಈ ಸಿನಿಮಾವು ಹಳ್ಳಿಯ ಒಬ್ಬ ಅನಾಥ ಯುವತಿ ಶಾಂತಲಾಳ ಸುತ್ತ ಸುತ್ತುತ್ತದೆ. ಆಕೆ ಪ್ರತಿಭಾನ್ವಿತ ನೃತ್ಯಗಾರ್ತಿ ಆಗಿರುತ್ತಾಳೆ. ಆ ಹಳ್ಳಿಯ ಜಮೀನ್ದಾರನೊಬ್ಬನಿಂದ ಅನ್ಯಾಯಕ್ಕೆ ಒಳಗಾಗುವ ಅವಳು ಯಾವ ರೀತಿ ಹೋರಾಟ ನಡೆಸುತ್ತಾಳೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. Indo American Arts ಬ್ಯಾನರ್‌ ಅಡಿಯಲ್ಲಿ ಡಾ ಇರಿಂಕಿ ಸುರೇಶ್ ಚಿತ್ರ ನಿರ್ಮಿಸಿದ್ದು, ಇರಿಂಕಿ ಸುಬ್ಬಲಕ್ಷ್ಮಿ ಪ್ರಸ್ತುತ ಪಡಿಸಿದ್ದಾರೆ. ವಿಶಾಲ್ ಚಂದ್ರ ಶೇಖರ್ ಸಂಗೀತ ಸಂಯೋಜಿಸಿದ್ದಾರೆ.

ಪಿಂಡಂ | ತೆಲುಗು | ‘ರೋಜಾ ಪೂಲು’, ‘ಒಕರಿಕಿ ಒಕರು’ ಸಿನಿಮಾಗಳ ಖ್ಯಾತಿಯ ಶ್ರೀರಾಮ್ ಮತ್ತು ಕನ್ನಡತಿ ಖುಷಿ ರವಿ (ದಿಯಾ) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ. ಈ ಹಾರರ್‌ ಚಲನಚಿತ್ರವನ್ನು ಸಾಯಿಕಿರಣ್ ದೈದಾ ನಿರ್ದೇಶಿಸಿದ್ದಾರೆ. ಶ್ರೀನಿವಾಸ್ ಅವಸರಾಳ, ಈಶ್ವರಿ ರಾವ್ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಲನಚಿತ್ರವನ್ನು Kalaahi Media ಬ್ಯಾನರ್‌ ಅಡಿಯಲ್ಲಿ ಯಶವಂತ ದಗ್ಗುಮಟಿ ನಿರ್ಮಿಸಿದ್ದಾರೆ. ಸಾಯಿಕಿರಣ್ ದೈದಾ, ಕವಿ ಸಿದ್ಧಾರ್ಥ ಮತ್ತು ಟೋಬಿ ಓಸ್ಬೋರ್ನ್ ಚಿತ್ರಕಥೆ ರಚಿಸಿದ್ದಾರೆ. ಚಿತ್ರದಲ್ಲಿ ರವಿವರ್ಮ, ಮಾಣಿಕ್ ರೆಡ್ಡಿ, ಬೇಬಿ ಚೈತ್ರ, ಬೇಬಿ ಈಶಾ, ವಿಜಯಲಕ್ಷ್ಮಿ ಮತ್ತು ಶ್ರೀಲತಾ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಕೃಷ್ಣ ಸೌರಭ್ ಸೂರಂಪಳ್ಳಿ ಸಂಗೀತ ಸಂಯೋಜಿಸಿದ್ದು, ಸತೀಶ್ ಮನೋಹರನ್ ಛಾಯಾಗ್ರಹಣ ಮತ್ತು ಸಿರೀಶ್ ಪ್ರಸಾದ್ ಸಂಕಲನ ನಿರ್ವಹಿಸಿದ್ದಾರೆ.

ದಲಾರಿ | ತೆಲುಗು | ಗೋಪಾಲ್ ರೆಡ್ಡಿ ಕೆ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಬೇನಾಮಿ ವ್ಯವಹಾರಗಳ ದೊಡ್ಡ ಜಾಲದೊಳಗೆ ವೆಂಕಟ್ ರೆಡ್ಡಿ ಎಂಬುವವನು ಎದುರಿಸುತ್ತಿರುವ ಸವಾಲುಗಳನ್ನು ತೋರಿಸಲಾಗಿದೆ. ಚಿತ್ರದಲ್ಲಿ ಶಕಲಕ ಶಂಕರ್, ರಾಜೀವ್ ಕಣಕಾಲ, ಶ್ರೀತೇಜ್, ಅಕ್ಸಾ ಖಾನ್, ರೂಪಿಕಾ, ಗಿರಿಧರ್, ಗೆಟಪ್ ಸೀನು, ಆಟೋ ರಾಮ್ ಪ್ರಸಾದ್, ರಾಚಾ ರವಿ ಮತ್ತು ಪೃಧ್ವಿರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾವನ್ನು Akruthi Creations ಬ್ಯಾನರ್‌ ಅಡಿಯಲ್ಲಿ ನಿರ್ಮಿಸಲಾಗಿದೆ. ಗೌರ ಹರಿ ಸಂಗೀತ ಸಂಯೋಜಿಸಿದ್ದಾರೆ.

ತಿಕ ಮಕ ತಂಡ | ತೆಲುಗು | ವೆಂಕಟ್ ಚಿತ್ರಕಥೆ, ಸಂಭಾಷಣೆ ರಚಿಸಿ ನಿರ್ದೇಶಿಸಿರುವ ಸಿನಿಮಾವು ಅವಳಿ ಸಹೋದರರ ಕಥೆಯನ್ನು ಹೇಳಿದೆ. ಜೊತೆಗೊಂದು ಸುಂದರ ಪ್ರೇಮಕಥೆಯೂ ಚಿತ್ರದಲ್ಲಿದೆ. ಸುರೇಶ ಬೊಬ್ಬಿಲಿ ಸಂಗೀತ ಸಂಯೋಜಿಸಿರುವ ಚಿತ್ರದಲ್ಲಿ ರಾಮಕೃಷ್ಣ, ಹರಿಕೃಷ್ಣ, ವೆಂಕಟ್, ಅನ್ನಿ, ರೇಖಾ ನಿರೋಷಾ, ಶಿವನಾರಾಯಣ, ಬಾಬಿ ಬೇಡಿ, ಯಾದಮ್ಮರಾಜು, ಬುಲೆಟ್ ಭಾಸ್ಕರ್, ರಾಕೆಟ್ ರಾಘವ, ರಾಮ ಚಂದ್ರ, ಗೌರಿ ಶಂಕರ್, ಸುಜಾತ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಓರಪ್ಪರ ಕಲ್ಯಾಣಂ ವಿಶೇಷಂ | ಮಲಯಾಳಂ | ಅನೀಶ್ ಪುತ್ತನಪುರ ನಿರ್ದೇಶನ ಮತ್ತು ಸುನೋಜ್ ಕೆ ಕತೆ ರಚಿಸಿರುವ ಸಿನಿಮಾವನ್ನು Screen view Productions ಮತ್ತು Vakery cinemas ಬ್ಯಾನರ್‌ ಅಡಿಯಲ್ಲಿ ಅಜಯನ್ ವಟಕ್ಕಾಯಿಲ್, ಮನೋಜ್ ಕುಮಾರ್ ಕರುವಾತ್, ಪುರುಷೋತ್ತಮನ್ ಇ ಪಿಣರಾಯಿ ನಿರ್ಮಿಸಿದ್ದು, ಅರವಿಂದಾಕ್ಷನ್ ಕಣ್ಣೋತ್, ಸಜೇಶ್ ವಕೇರಿ ಸಹ ನಿರ್ಮಾಣ ಮಾಡಿದ್ದಾರೆ. ಚಿತ್ರವು ಒಂದು ಅವಿಭಕ್ತ ಕುಟುಂಬದ ಸುತ್ತ ಸುತ್ತುತ್ತದೆ. ಅದರಲ್ಲಿ ಒಬ್ಬ ತಂದೆ ಮತ್ತು ಅವನ ಹೆಣ್ಣು ಮಕ್ಕಳು ಅವರ ಮದುವೆ, ಜೀವನ ಹೀಗೆ ಕೌಟುಂಬಿಕ ಮನೋರಂಜನೆಯನ್ನು ಈ ಸಿನಿಮಾ ಒಳಗೊಂಡಿದೆ. ಶಮೀರ್ ಜಿಬ್ರಾನ್ ಛಾಯಾಗ್ರಹಣ, ಪಿಸಿ ಮೋಹನನ್ ಸಂಕಲನ, ಹರಿಕುಮಾರ್ ಹರೇರಾಮ್ ಛಾಯಾಗ್ರಹಣ ಚಿತ್ರಕ್ಕಿದೆ.

ಬುಲೆಟ್‌ ಡೈರೀಸ್‌ | ಮಲಯಾಳಂ | ಧ್ಯಾನ್‌ ಶ್ರೀನಿವಾಸನ್‌ ಎಂಬುವವನ ಬುಲೆಟ್‌ ಬೈಕಿನ ಸುತ್ತ ಚಿತ್ರಕಥೆ ಸಾಗುತ್ತದೆ. ಅವನಿಗೆ ತನ್ನ ಬುಲೆಟ್‌ ಬೈಕಿನ ಮೇಲೆ ಅಪಾರವಾದ ಪ್ರೀತಿ ಇರುತ್ತದೆ. ಆದ್ದರಿಂದ ಅವನು ತನ್ನ ಬೈಕನ್ನು ವಿಶೇಷ ರೀತಿಯಲ್ಲಿ ನೋಡಿಕೊಳ್ಳುತ್ತಿರುತ್ತಾನೆ. ಚಿತ್ರವನ್ನು ಸಂತೋಷ್ ಮಂಡೂರ್ ಬರೆದು ನಿರ್ದೇಶಿಸಿದ್ದಾರೆ. B3m Creations ಬ್ಯಾನರ್‌ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ಫೈಸಲ್ ಅಲಿ ಛಾಯಾಗ್ರಹಣ, ರಂಜನ್ ಅಬ್ರಹಾಂ ಸಂಕಲನ ಚಿತ್ರಕ್ಕಿದೆ.

ಅಚ್ಯುಂತೇ ಅವಸಾನ ಶೇಷಂ | ಮಲಯಾಳಂ | ಅಜಯ್ ಬರೆದು ನಿರ್ದೆಶಿಸಿರುವ ಈ ಚಿತ್ರವು ವಾಯು ಮಾಲಿನ್ಯದ ಕುರಿತು ಜಾಗೃತಿ ಮೂಡಿಸುವ ಕಥೆಯನ್ನು ಒಳಗೊಂಡಿದೆ. ತನ್ನ ಜೀವವನ್ನು ಉಳಿಸಿಕೊಳ್ಳಲು ಆಮ್ಲಜನಕದ ಸಿಲಿಂಡರ್ ಅನ್ನು ಅವಲಂಬಿಸಿರುವ ಅಚ್ಯುತನ್ ಎಂಬ ಪಾತ್ರದ ಸುತ್ತ ಚಿತ್ರಕಥೆ ಸುತ್ತುತ್ತದೆ. ಈ ಸಿನಿಮಾವನ್ನು ಲೀನು ಮೇರಿ ಆಂಟನಿ ನಿರ್ಮಿಸಿದ್ದು, ಸಾಬು ಪ್ರೆಸ್ಟೋ ಮತ್ತು ತರುಣ್ ಕುಮಾರ್ ಬಫ್ನಾ ಸಹ ನಿರ್ಮಾಣವಿದೆ. ಚಲನಚಿತ್ರದಲ್ಲಿ ಪಾಲಿ ವಲ್ಸನ್, ಅನಿಲ್ ಕೆ ಶಿವರಾಮ್, ಜೋಸೆಫ್ ಚಿಲಂಬನ್ ಮತ್ತು ಕಿರಣ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

LEAVE A REPLY

Connect with

Please enter your comment!
Please enter your name here