ಚಿತ್ರದ ಸೌಂಡ್ ಡಿಸೈನ್ ಎಷ್ಟು ಸೂಕ್ಷ್ಮವಾಗಿದೆ ಎಂದರೆ… ಪ್ರೇಮಗೀತೆಯಲ್ಲಿ ಹಿರೋಯಿನ್ ಗೆಜ್ಜೆ ಸದ್ದು, ಆಸ್ಪತ್ರೆ ದೃಶ್ಯವೊಂದರಲ್ಲಿನ ಸೊಳ್ಳೆಯ ಗುಯ್ಯಗುಡುವಿಕೆ ನಮ್ಮ ಕಿವಿಯೊಳಗೇ ಕೇಳಿಸಿದಂತೆ ಭಾಸವಾಗುತ್ತದೆ. ನಾಲ್ಕು ಪ್ರೇಮಕಥೆಗಳೊಂದಿಗೆ ಸುತ್ತುವ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ. SonyLIV ನಲ್ಲಿ ಸ್ಟ್ರೀಮ್ ಆಗುತ್ತಿದೆ ಮಲಯಾಳಂ ಸಿನಿಮಾ ‘ಮಧುರಂ’.
ಮಲಯಾಳಂನಲ್ಲಿ ಮಧುರಂ ಎಂದರೆ ಸಿಹಿ ಎಂದರ್ಥ. ಪ್ರೀತಿ ನಿಜವಾಗಿದ್ರೆ ಅದೂ ಸಿಹಿನೇ, ನಿಜವಾದ ಪ್ರೀತಿ.. ಪ್ರೀತಿಯನ್ನಷ್ಟೆ ಬಯಸಿದಾಗ ಅದೂ ಸಿಹಿಯೇ ಎನ್ನುವುದು ‘ಮಧುರಂ’ ಸಿನಿಮಾದ ಸಾರಾಂಶ. ನಿರ್ದೇಶಕ ಅಹಮದ್ ಕಬೀರ್ ತಮ್ಮ ಈ ಚಿತ್ರದಲ್ಲಿ ಪ್ರೀತಿಯನ್ನು ಬೇರೆಯದ್ದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಮಲಯಾಳಂನ ಪ್ರೇಮ ಕಥೆಯಾಧಾರಿತ ಸಿನಿಮಾಗಳು ಎಂದಾಗ ಪ್ರೇಮಂ, ಎನ್ನು ನಿಂಟೆ ಮೊಯಿದ್ದೀನ್, ಅನ್ನಯುಂ ರಸೋಲಂ, ಅನಾರ್ಕಲಿ, ಮಾಯಾನದಿ.. ಮುಂತಾದ ಚಿತ್ರಗಳು ನೆನಪಾಗುತ್ತವೆ. ಈ ಯಾದಿಯಲ್ಲಿ ‘ಮಧುರಂ’ ತುಸು ಭಿನ್ನ ಪ್ರಯೋಗ. ಕತೆ, ಚಿತ್ರಕಥೆ, ಹಿನ್ನೆಲೆ ಸಂಗೀತ ಎಲ್ಲವೂ ಒಂದು ರೀತಿ ಹೊಸತು. 8d ಸೌಂಡ್ ಎಫೆಕ್ಟ್‌ನೊಂದಿಗೆ ಖಾಲಿ ಗೋಡೆಯ ಮೇಲೆ ಟೈಟಲ್ ಕಾರ್ಡ್ ತೊರುತ್ತಾ, ಮೊದಲ ದೃಶ್ಯದಲ್ಲಿ ಪ್ರೇಮಿಯೊಬ್ಬ ತನ್ನ ಪ್ರೇಯಸಿಯ ಹುಟ್ಟುಹಬ್ಬಕ್ಕೆ ಅರ್ಧರಾತ್ರಿಯಲ್ಲಿ ಅವಳ ಮನೆಯ ಬಳಿ ಬಂದು ಬಿರಿಯಾನಿ ಮೇಲೆ ಕ್ಯಾಂಡಲ್ ಹಚ್ಚಿ ಬರ್ತ್‌ಡೇ ಸೆಲೆಬ್ರೇಟ್ ಮಾಡುತ್ತಾನೆ. ಚಿತ್ರದ ಮೂರನೇ ದೃಶ್ಯಕ್ಕೆ ನಿರ್ದೇಶಕರು ಪ್ರೇಕ್ಷಕರನ್ನು ಸೀದಾ ಆಸ್ಪತ್ರೆಗೆ ತಂದು ಬಿಡುತ್ತಾರೆ.
ಆಸ್ಪತ್ರೆ ಎಂದೊಡನೆ ನೆನಪಾಗುವ ರೋಗಿಗಳು, ಡಾಕ್ಟರ್‌ಗಳನ್ನು ಹೊರತುಪಡಿಸಿ ಒಂದಷ್ಟು ಪಾತ್ರಗಳು ಇಲ್ಲಿ ಕಾಡುತ್ತವೆ. ಆಸ್ಪತ್ರೆಯ ಸಿಬ್ಬಂದಿಗಳು ಕರೆದಾಗೆಲ್ಲ ಹೋಗಿ ಮೆಡಿಸಿನ್, ಊಟ, ತಿಂಡಿ ಇತ್ಯಾದಿಗಳ ಆರೈಕೆಗೆಂದು ಒಂದೆಡೆ ಉಳಿದಿರುವ ರೋಗಿಗಳ ಮನೆಮಂದಿಯಂತೆ ತೆರೆದುಕೊಳ್ಳುವ ಪಾತ್ರಗಳನ್ನ ಒಂದೆಡೆ ಸೇರಿಸಿ ಕಥೆಗೆ ಪೂರಕವಾದ ಚಿತ್ರಕಥೆ ಹೆಣೆಯಲಾಗಿದೆ. ತನ್ನ ಸುತ್ತಮುತ್ತಲಿನವರಿಗೆಲ್ಲ ಸ್ಪೂರ್ತಿ ತುಂಬುತ್ತಾ ಎಲ್ಲರೊಂದಿಗೆ ಸದಾ ಲವಲವಿಕೆಯಿಂದಿರುವ ಸಾಬು, ಹೊಂದಾಣಿಕೆ ಇಲ್ಲದೆ ಸಂಸಾರದಲ್ಲಿ ನೆಮ್ಮದಿ ಕಳೆದುಕೊಂಡ ಕೆವಿನ್, ಪೋಸ್ಟ್ ಮಾಸ್ಟರ್ ರವಿಯಟ್ಟ, ಬಿಸಿರಕ್ತದ ಯುವಕ ತಾಜ್ ಪಾತ್ರಗಳ ಪ್ರೇಮಕಥೆಗಳನ್ನು ನಿರ್ದೇಶಕರು ಆಸ್ಪತ್ರೆಯ ವಾತಾವರಣದಲ್ಲೇ ಪ್ರೇಕ್ಷಕರಿಗೆ ಮುಖಾಮುಖಿಯಾಗಿಸುತ್ತಾರೆ. ಅಲ್ಲಿ ಸೃಷ್ಟಿಯಾಗುವ ಎಮೋಷನ್, ಡ್ರಾಮಾಗಳು ಮನಸಿಗೆ ತಟ್ಟುತ್ತವೆ.
ಚಿತ್ರದುದ್ದಕ್ಕೂ ಬಾಯಲ್ಲಿ ನೀರಿಳಿವಂತೆ ಅನೇಕ ತಿಂಡಿತಿನಿಸುಗಳನ್ನು ತೋರಿಸಲಾಗಿದೆ! ಮತ್ತೊಂದೆಡೆ ಆಸ್ಪತ್ರೆ ವಾತಾವರಣವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುತ್ತಾರೆ. ದೂರದೂರಿನ ಹಡಗೊಂದರಲ್ಲಿ ಸಹಾಯಕ ಶೆಫ್ ಆಗಿ ಕೆಲಸ ಮಾಡುವ ಸಾಬು, ರಜೆಯಲ್ಲಿ ಊರಿಗೆ ಬಂದಾಗೆಲ್ಲ ಹೋಟೆಲೊಂದರಲ್ಲಿ ಸಮಯ ಕಳೆಯುತ್ತಿರುತ್ತಾನೆ. ಆ ಹೋಟೆಲಿಗೆ ಬಿರಿಯಾನಿ ಪ್ರಿಯೆ, ಹಪ್ಪಳದ ವ್ಯಾಪಾರಿಗಳ ಮನೆಮಗಳು ಚಿತ್ರಳ ಪ್ರವೇಶದೊಂದಿಗೆ ಅಲ್ಲೊಂದು ಲವ್‌ಸ್ಟೋರಿ ಹುಟ್ಟುತ್ತದೆ. ಇನ್ನೊಂದೆಡೆ ಹೆಂಡತಿ ಹಾಗೂ ಅಮ್ಮನ ಗಲಭೆ ಮಧ್ಯೆ ರೋಸಿ ಹೋಗಿ ಸುಂದರಿಯೂ, ಗುಣವತಿಯೂ ಆದ ಹೆಂಡತಿ ‘ಚೆರಿ’ ಮೇಲೆ ಪ್ರೀತಿಯಿದ್ದರೂ ಡಿವೋರ್ಸ್ ನೀಡಲು ನಿರ್ಧರಿಸಿರುವ ಕೆವಿನ್. ಸಾಬು ಪರಿಚಯದ ನಂತರ ‘ಪ್ರೀತಿ’ ಅರ್ಥವಾಗಿ ಅವನ ನಿರ್ಧಾರಗಳು ಬದಲಾಗುವ ರೀತಿ, ರವಿಯಟ್ಟನ ನಲವತ್ತು ವರ್ಷಗಳ ಸಂಸಾರಿಕ ಜೀವನದ ಹಿಂದಿನ ಹಿತ ಪ್ರೇಮಕಥೆ, ಆಗಷ್ಟೆ ಕಂಡ ‘ನೀತು’ಳ ಸೊಬಗಿಗೆ ಮನಸೋಲುವ ತಾಜ್‌ನ ಎಳೆಪ್ರೇಮ.. ಹೀಗೆ ಪ್ರೀತಿಯ ಕವಲುಗಳು ಭಿನ್ನ ವಯೋಮಾನದ ಪ್ರೇಕ್ಷಕರನ್ನು ಸೆಳೆಯುತ್ತವೆ.
ನಾಲ್ಕು ಪ್ರೇಮಕಥೆಗಳೊಂದಿಗೆ ಸುತ್ತುವ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ. ಈ ಹಿಂದಿನ ಸಿನಿಮಾಗಳಲ್ಲಿ ಜೋಜು ಜಾರ್ಜ್ ಒರಟು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ತಮ್ಮ ಅಭಿನಯ ಕೌಶಲ್ಯದಿಂದಲೇ ತುಸು ಬೇರೆಯ ರೀತಿಯಲ್ಲಿ, ಕೆಲವೊಮ್ಮೆ ರೊಮ್ಯಾಂಟಿಕ್ ಆಗಿ ಕಾಣಿಸುತ್ತಾರೆ. ಚಿತ್ರದ ಸೌಂಡ್ ಡಿಸೈನ್ ಎಷ್ಟು ಸೂಕ್ಷ್ಮವಾಗಿದೆ ಎಂದರೆ… ಪ್ರೇಮಗೀತೆಯಲ್ಲಿ ಹಿರೋಯಿನ್ ಗೆಜ್ಜೆ ಸದ್ದು, ಆಸ್ಪತ್ರೆ ದೃಶ್ಯವೊಂದರಲ್ಲಿನ ಸೊಳ್ಳೆಯ ಗುಯ್ಯಗುಡುವಿಕೆ ನಮ್ಮ ಕಿವಿಯೊಳಗೇ ಕೇಳಿಸಿದಂತೆ ಭಾಸವಾಗುತ್ತದೆ. ಚಿತ್ರದಲ್ಲಿ ಆಹಾರದ್ದೂ ಒಂದು ಪಾತ್ರವಿದೆ. ವೆಜ್, ನಾನ್‌ವೆಜ್ ಕುರಿತು ಪ್ರಸ್ತಾಪವಾಗುವ ಕೆಲವು ಸನ್ನಿವೇಶಗಳು ಚಿತ್ರದಲ್ಲಿ ತೀರಾ ಸಹಜವೆನ್ನುವಂತೆ ಪ್ರಸ್ತಾಪವಾಗುತ್ತವೆ. ಅವರಿಚ್ಛೆಯ ಆಹಾರ ಸೇವಿಸುವುದು ಅವರ ವೈಯಕ್ತಿಕ ಆಯ್ಕೆ, ಹಕ್ಕು ಎನ್ನುವ ಮೆಸೇಜನ್ನು ನಿರ್ದೇಶಕರು ವಾಚ್ಯವೆನಿಸದೆ ಗೌರವಯುತವಾಗಿ ಪ್ರೇಕ್ಷಕರಿಗೆ ದಾಟಿಸಿದ್ದಾರೆ. ಚಿತ್ರಕ್ಕೆ ಪೂರಕವಾದ ಛಾಯಾಗ್ರಹಣ, ಎಡಿಟಿಂಗ್, ಮ್ಯೂಸಿಕ್ ಇದೆ. ಚಿತ್ರ ಮುಗಿದ ಮೇಲೂ ಹಕ್ಕಿಯಂತೆ ಸದ್ದು ಮಾಡುವ ‘ಚಿತ್ರ’ (ಶ್ರುತಿ ರಾಮಚಂದ್ರನ್), ಅದ್ಬುತ ಪ್ರೇಮಿಯಾಗಿ ‘ಸಾಬು’ (ಜಿಜೋ ಜಾರ್ಜ್) ಮನಸಿನಲ್ಲುಳಿಯುತ್ತಾರೆ.