ಒಂದು ಸಿಂಪಲ್ ಕಥೆಗೆ ಅದ್ಭುತ ಚಿತ್ರಕಥೆ ಹೆಣೆದು ವೀಕ್ಷಕರನ್ನು ಗೆದ್ದಿದೆ ಚಿತ್ರತಂಡ. ಒಂದು ಪಾತ್ರವನ್ನು ಹೇಗೆ ಬರೆಯಬೇಕು ಹಾಗೂ ಆ ಪಾತ್ರ ಹೇಗೆ ವರ್ತಿಸಬೇಕು ಎಂಬುದನ್ನು ಡೀಟೇಲ್ಡ್ ಆಗಿ ಬರೆದಿದ್ದಾರೆ. ‘ಮಧುರಂ’ ಮಲಯಾಳಂ ಸಿನಿಮಾ Sony LIVನಲ್ಲಿ ಸ್ಟ್ರೀಮ್ ಆಗುತ್ತಿದೆ.
ಆತನ ಹೆಸರು ಸಾಬು. ಚಿತ್ರದ ಆರಂಭದಲ್ಲೇ ಕೊಚ್ಚಿಯಲ್ಲಿರುವ ಒಂದು ಸರ್ಕಾರಿ ಆಸ್ಪತ್ರೆಗೆ ತನ್ನ ಮಡದಿಯನ್ನು ಚಿಕಿತ್ಸೆಗಾಗಿ ತಂದು ಅಡ್ಮಿಟ್ ಮಾಡುತ್ತಾನೆ. ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿರುವ ಪ್ರತಿಯೊಬ್ಬ ರೋಗಿಗಳನ್ನು ನೋಡಿಕೊಳ್ಳಲು ಬರುವ ರೋಗಿಯ ಸಂಬಂಧಿಕರು ಯಾರೇ ಆಗಿರಬಹುದು ಅವರು ಉಳಿದುಕೊಳ್ಳಲು 50ರಿಂದ 60 ಜನ ತಂಗುವಂತ ಒಂದು ದೊಡ್ಡ ಹಾಲ್ ಇರುತ್ತದೆ. ಈತ ತನ್ನ ಮಡದಿಯನ್ನು ಅಡ್ಮಿಟ್ ಮಾಡಿದ ನಂತರ ಉಳಿದುಕೊಳ್ಳಲು ಆ ಹಾಲ್‌ಗೆ ಹೋಗುತ್ತಾನೆ. ಅಲ್ಲಿ ಇವನಿಗೆ ಸಿಗುವ 5ರಿಂದ 6 ಜನ ಬೇರೆ ಬೇರೆ ಊರುಗಳಿಂದ ತಮ್ಮವರ ಚಿಕಿತ್ಸೆಗಾಗಿ ಬಂದವರು. ಒಬ್ಬ ತನ್ನ ತಾಯಿಯ ಚಿಕಿತ್ಸೆಗಾಗಿ, ಒಬ್ಬ ತನ್ನ 60 ವಯಸ್ಸಿನ ಮಡದಿಯ ಚಿಕಿತ್ಸೆಗಾಗಿ, ಒಬ್ಬ ತನ್ನ ಅಪ್ಪನ ಚಿಕಿತ್ಸೆಗಾಗಿ, ಮತ್ತೊಬ್ಬಳು ತನ್ನ ಅಕ್ಕನ ಚಿಕಿತ್ಸೆಗಾಗಿ.. ಹೀಗೆ. ಇವರೆಲ್ಲರ ಜೊತೆ ಇವನಿಗೆ ಆಗುವ ಒಡನಾಟ, ಬಾಂಧವ್ಯ, ಪ್ರೀತಿ ಹಾಗೂ ಅವರಿಗೆಲ್ಲ ಇರುವ ಸಣ್ಣ ಸಣ್ಣ ಕತೆಗಳೇ ಈ ಸಿನೆಮಾದ ಕಥಾವಸ್ತು.
ಈ ಹಿಂದೆ ಬಂದಿದ್ದ ‘ಹೋಂ’ ಮಲಯಾಳಂ ಸಿನೆಮಾ ನಿಮಗೆ ಇಷ್ಟವಾಗಿದ್ದರೆ, ಖಂಡಿತ ನಿಮಗೆ ಈ ಚಿತ್ರವೂ ಇಷ್ಟವಾಗುತ್ತದೆ. ಒಂದು ಸಿಂಪಲ್ ಕಥೆಗೆ ಅದ್ಭುತ ಚಿತ್ರಕಥೆ ಹೆಣೆದು ವೀಕ್ಷಕರನ್ನು ಗೆದ್ದಿದೆ ಚಿತ್ರತಂಡ. ಮೊದಲನೆಯದಾಗಿ ಈ ಚಿತ್ರದಲ್ಲಿ ಬರೆದಿರುವ ಪಾತ್ರಗಳ ಬಗ್ಗೆ ಹೇಳಲೇಬೇಕು. ಒಂದು ಪಾತ್ರವನ್ನು ಹೇಗೆ ಬರೆಯಬೇಕು ಹಾಗೂ ಆ ಪಾತ್ರ ಹೇಗೆ ವರ್ತಿಸಬೇಕು ಎಂಬುದನ್ನು ಬಹಳ ಡೀಟೇಲ್ ಆಗಿ ಬರಿದ್ದಿದ್ದಾರೆ. ಪ್ರತಿ ಪಾತ್ರಗಳಿಗೂ ಈ ಗುಣವಿದೆ. ಮೇಲೆ ಹೆಸರಿಸಿದ ಪಾತ್ರಗಳ ಹೊರತಾಗಿ ಬೇರೆ ಬೇರೆ ರೀತಿಯ ಪಾತ್ರಗಳೂ ಚಿತ್ರದಲ್ಲಿವೆ. ಉದಾಹರಣೆಗೆ ಸದಾ ತನ್ನ ಫೋನ್ ಚಾರ್ಜಿಂಗ್‌ಗಾಗಿ ಕಿರಿಕ್ ಮಾಡುವ ಒಂದು ಪಾತ್ರ. ಸೀರಿಯಲ್ ನೋಡಿಕೊಂಡು ಆಳುವ ಆಂಟಿಯರು, ಒಗಟು ಹೇಳುವ ಒಬ್ಬ ವ್ಯಕ್ತಿ.. ಹೀಗೆ ಪ್ರತಿ ಪಾತ್ರಗಳು ನಮ್ಮನ್ನು ಕಾಡುತ್ತವೆ. ಇನ್ನು ಟೆಕ್ನಿಕಲ್ ವಿಷಯದಲ್ಲಿ ಚಿತ್ರ ಬಹಳ ಸ್ಟ್ರಾಂಗ್ ಆಗಿದೆ. ಮೊದಲು ಕ್ಯಾಮೆರಾ ಕೆಲಸದ ಬಗ್ಗೆ ಹೇಳಲೇಬೇಕು. ಚಿತ್ರದ ಪ್ರತೀ ಫ್ರೇಮ್ ಸುಂದರವಾಗಿ ಅಷ್ಟೇ ನೈಜತೆಯಿಂದ ಕೂಡಿದೆ. ಧ್ವನಿ ವಿನ್ಯಾಸವೂ ಸೊಗಸು. ಪ್ರತಿಯೊಂದು ಶಬ್ದವನ್ನು ಅದ್ಭುತವಾಗಿ ಮಿಕ್ಸಿಂಗ್ ಮಾಡಲಾಗಿದೆ. ಹಿನ್ನೆಲೆ ಸಂಗೀತ ಕೆಲವೊಂದು ಕಡೆ ನಮ್ಮ ಕಣ್ಣನ್ನು ಒದ್ದೆ ಮಾಡುತ್ತದೆ. ಸಿನಿಮಾಸಕ್ತರು ತಪ್ಪದೇ ನೋಡಬೇಕಾದ ಸಿನಿಮಾ.
ಸಿನಿಮಾ : ಮಧುರಂ | ನಿರ್ದೇಶನ : ಅಹಮ್ಮದ್ ಕಬೀರ್ | ಸಂಗೀತ : ಹೇಶಂ ಅಬ್ದುಲ್ ವಹಾಬ್ | ತಾರಾಬಳಗ : ಅರ್ಜುನ್ ಅಶೋಕನ್, ನಿಖಿಲಾ ವಿಮಲ್, ಜೋಜು ಜಾರ್ಜ್, ಶ್ರುತಿ ರಾಮಚಂದ್ರನ್