ದಢಾರನೆ ಕಣ್ಮುಂದೆ ಬರುವ ಪ್ರೇತವನ್ನು ಅತಿಕಡಿಮೆ ಪ್ರಮಾಣದಲ್ಲಿ ಬಳಸಿ ಹೆದರಿಸುವ ಚಿತ್ರ Sony Livನಲ್ಲಿ ಕಳೆದ ಶುಕ್ರವಾರದಿಂದ ಸ್ಟ್ರೀಂ ಆಗುತ್ತಿರುವ ‘ಭೂತಕಾಲಂ’

ಹಳೆಯ ನೆನಪುಗಳು ಕಬ್ಬಿಣಕ್ಕೆ ಹಿಡಿದ ತುಕ್ಕಿನಂತೆ. ಒಮ್ಮೆ ಆವರಿಸಿದರೆ ಮೇಲ್ನೋಟಕ್ಕೆ ಕಾಣುವುದಕ್ಕಿಂತ ಹೆಚ್ಚು ಒಳಗೆ ಕೊರೆದಿರುತ್ತದೆ. ಉಕ್ಕಿನಂಥ ಉಕ್ಕನ್ನೇ ನಿಧಾನವಾಗಿ ಶಿಥಿಲವಾಗಿಸುತ್ತದೆ. ಜೀವಮಾನವಿಡೀ ದುಡಿದರೂ ತೀರಿಸಲಾಗದ ಸಾಲ ಮಾಡಿಟ್ಟು ಗಂಡ ಸತ್ತಿರುವಾಗ ಹೆಂಡತಿಗೆ ಇರಬಹುದಾದದ್ದು ಒಂದೇ ಆಸೆ. ಮಗ ಅವನಪ್ಪನಂತೆ ಆಗದಿರಲಿ‌ ಎಂದು. ಅಂಥ ಸನ್ನಿವೇಶದಲ್ಲಿ ಇರುವ ತಾಯಿ-ಮಗನನ್ನಿಟ್ಟು ಮಾಡಲಾದ ಮಲಯಾಳ ಹಾರರ್ ಸಿನಿಮಾ ‘ಭೂತಕಾಲಂ’. ಜನರನ್ನು ಹೆದರಿಸುವುದು ಭೂತ-ಪ್ರೇತಗಳಿಂದ ಮಾತ್ರ ಸಾಧ್ಯ. ಆದಾಗ್ಯೂ ಈ ಹಾರರ್ ಚಿತ್ರದ ಬಹುಭಾಗ ತಾಯಿ-ಮಗನ ನಡುವೆ ದೀರ್ಘಕಾಲದಿಂದ ಬೆಳೆದ ಮಾನಸಿಕ ಅಂತರದ ಬಗ್ಗೆ ಹೇಳುತ್ತೆ. ಖಿನ್ನತೆಯೆಂಬ ಯೋಚನಾರ್ಹ‌ ವಿಚಾರ ಕೇಂದ್ರಿತವಾಗಿದೆ.‌ ಇದು ಭೂತಚೇಷ್ಟೆಯ ಸಿನಿಮಾವಲ್ಲ ಎಂದು ಪ್ರೇಕ್ಷಕನನ್ನು ಆಲೋಚನೆಗೆ ಹಚ್ಚಿ ಕೊನೆಗೆ ತಿರುವು ಕೊಡುವ ಕ್ಲೈಮ್ಯಾಕ್ಸನ್ನು ತೀವ್ರಗೊಳಿಸುತ್ತದೆ.

ಅಮ್ಮನಾಗಿ ರೇವತಿ ಮತ್ತು ಮಗನಾಗಿ ಶೇನ್ ನಿಗಮ್ ಬಣ್ಣ ಹಚ್ಚಿರುವ ಈ ಚಿತ್ರ ಮೇಲ್ನೋಟಕ್ಕೆ ಅಮ್ಮ-ಮಗನ ಕತೆ. ನಿರ್ಮಾಪಕರಾಗಿ ಶೇನ್ ನಿಗಮ್ ತಾಯಿ ಸುನೀಲಾ ಹಬೀಬ್ ಇರುವ ಕಾರಣ ಮತ್ತೂ ಒಂದು ರೀತಿಯಲ್ಲಿ ತಾಯಿ-ಮಗನ ಚಿತ್ರ. 2019ರಲ್ಲಿ ಕೇರಳ ಚಿತ್ರ ನಿರ್ಮಾಪಕರ ಒಕ್ಕೂಟದ ಜತೆ ವಿವಾದವಾಗಿ ಆತ ದೊಡ್ಡ ಪರದೆಯ‌ ಮೇಲೆ ಕಾಣಿಸಿಕೊಂಡಿರಲಿಲ್ಲ. ಅಶಿಸ್ತು ಮತ್ತು ಮಾದಕ ವ್ಯಸನ ಒಕ್ಕೂಟ ಆತನ ಮೇಲೆ ಹೊರಿಸಿದ ಆರೋಪ. ಹಾಗಾಗಿ ಕೊಂಚ ಅಶಿಸ್ತಿನಂತೆಯೂ, ಕೊಂಚ ವ್ಯಸನಿಯಂತೆಯೂ ಮೇಲ್ನೋಟಕ್ಕೆ ಕಾಣುವ ಪಾತ್ರವನ್ನು ಇಲ್ಲಿ‌ ಉತ್ತರ ರೂಪದಲ್ಲಿ ಆಯ್ಕೆ ಮಾಡಿದ್ದಿರಬಹುದು.

ಆಶಾ ನರ್ಸರಿ ಟೀಚರ್. ಅಮ್ಮನ ಒತ್ತಾಸೆಯಿಂದ ಎಂಬಿಬಿಎಸ್ ಸೇರಿ ಅದನ್ನು ಪೂರ್ತಿಗೊಳಿಸಲಾಗದೆ‌ ಕೊನೆಗೆ ಫಾರ್ಮಸಿ ಡಿಪ್ಲೊಮಾ ಮಾಡಿದ ಹುಡುಗ ವಿನು. ಮಗ ಒಳ್ಳೆಯ ಕೆಲಸಕ್ಕೆ ಸೇರಬೇಕೆಂಬ ಆಸೆಯಿದ್ದರೂ ಅವನನ್ನು ದೂರದೂರಿಗೆ ಕಳಿಸಲು ತಾಯಿಗೆ ಮನಸ್ಸಿಲ್ಲ. ಸೇಲಂನಲ್ಲಿ ಕೆಲಸಕ್ಕಿದ್ದವನನ್ನು ಅಜ್ಜಿಯ ಅನಾರೋಗ್ಯದ ನೆಪ ಹೇಳಿ ಮನೆಗೆ ಕರೆಸಿ ಒಂದೂವರೆ‌ ವರ್ಷ ಕಳೆದಿದೆ. ಶುಶ್ರೂಷೆಗೆ ಸಹಾಯ ಮಾಡುವುದರ ಹೊರತು ಅವನಿಗೀಗ ಬೇರೆ ಕೆಲಸವಿಲ್ಲ. ಈ ನಡುವೆ ಆಶಾಗೆ ಖಿನ್ನತೆಯಿದೆ, ಅದಕ್ಕಿಂತಲೂ ಹೆಚ್ಚಿರುವುದು ಮುಗ್ಧತೆ. ‘ಅನಗತ್ಯ ಚಿಂತೆ ಮಾಡಬೇಡಿ, ಒಂದಷ್ಟು ವಾಕ್ ಮಾಡಿ, ಐಸ್‌ಕ್ರೀಂ ತಿನ್ನಿ, ಎಲ್ಲಾ ಸರಿಹೋಗುತ್ತದೆ’ ಎಂಬ ಡಾಕ್ಟರ್ ಸಲಹೆಯನ್ನು ಚಾಚೂ ತಪ್ಪದೆ ಪಾಲಿಸುವಾಕೆ. ಚೀಟಿಯಲ್ಲಿ ಬರೆದುಕೊಟ್ಟ ಔಷಧ ತಿನ್ನುವಂತೆ ಕಡಲ ದಂಡೆಯಲ್ಲಿ ಒಬ್ಬಳೇ ಕೂತು ಐಸ್‌ಕ್ರೀಂ ತಿನ್ನುವ ಮುಗ್ಧೆ ಅವಳು. ಇಂಥ ಪಾಪದ ಅಮ್ಮನ ಪಾತ್ರವನ್ನು ಎಷ್ಟು ಅಚ್ಚುಕಟ್ಟಾಗಿ ನಿಭಾಯಿಸಬಹುದೋ ಅಷ್ಟು ಚಂದ ನಿರ್ವಹಿಸಿದ್ದಾರೆ ರೇವತಿ.

ಆದರೆ ಇವೆಲ್ಲಾ ವಿಚಾರಗಳನ್ನು ಚಿತ್ರಕತೆ ನಂತರದ ಹಂತದ ವಿವರಣೆಗೆ ಇರಿಸಿದೆ. ಅರಂಭದಲ್ಲೇ ಬರುವ ಅಜ್ಜಿಯ ಸಾವು ಪ್ರೇತ ಬಾಧೆಯ ಬಗ್ಗೆ‌ ಸಾಕಷ್ಟು ಆಲೋಚಿಸಲು ಪ್ರೇಕ್ಷಕನಿಗೆ ಮೂಲಧಾತು ಒದಗಿಸುತ್ತದೆ. ಅದಕ್ಕೆ ಇಂಬು‌ ನೀಡುವುದು ಆಕೆ ಬಳಸುತ್ತಿದ್ದ ಗಾಲಿ ಕುರ್ಚಿ ಮತ್ತು ಕನ್ನಡಕ. ಒಂದಷ್ಟು ಮಟ್ಟಿಗೆ ಅವುಳನ್ನು ಬಳಸಿದರೂ ಚಿತ್ರಕತೆ ಹೆಚ್ಚು ವಾಲುವುದು ವಿನುವಿನ ಪಾತ್ರ ಪರಿಚಯದ ಕಡೆಗೆ. ಹಾಗೆಂದು ಆತನದ್ದು ವಿಶೇಷ ಪಾತ್ರವಲ್ಲ, ಕೊನೆಗೆ ವಿಕ್ಷಿಪ್ತವಾಗಬೇಕಾದ ಅನಿವಾರ್ಯತೆಯಲ್ಲೂ ಇಲ್ಲ. ಆತ ಯೌವ್ವನಾವಸ್ಥೆಯ ಪ್ರತಿನಿಧಿ. ಯೌವ್ವನವೇ ಖಿನ್ನತೆ ಮತ್ತು ತೀವ್ರತೆಗಳ ನಡುವಿನ ಕಿರುದಾರಿಯ ಪಯಣ. ಹಾಗಾಗಿ ಆತನದ್ದು ಖಿನ್ನತೆಯೋ, ತೀವ್ರತೆಯೋ ಅಥವಾ ಭ್ರಮೆಯೋ ಎಂಬ ಗೊಂದಲಕ್ಕೆ ನಮ್ಮನ್ನು ಉದ್ದೇಶಪೂರ್ವಕವಾಗಿ ದೂಡುವ ಪಾತ್ರ. ಶೇನ್ ನಿಗಮ್ ಆ ಸೂಕ್ಷ್ಮತೆಗಳನ್ನು ಅರಿತು ನಿಭಾಯಿಸಿದ್ದಾರೆ.

ಹೆಚ್ಚಾಗಿ ದೆವ್ವ ಹಿಡಿಯುವುದು ಬೆಟ್ಟದ ಮೇಲಿರುವ‌‌ ಒಂಟಿ ಮನೆಗೆ. ಆದರೆ ಇಲ್ಲಿ ಆ ಮನೆ ಇರುವುದು ಪಟ್ಟಣದ ವಸತಿ ಪ್ರದೇಶದಲ್ಲೇ. ಹಾಗಾಗಿ ನೋಡುಗನನ್ನು ಪ್ರೇತಬಾಧೆಗಿಂತ ಹೆಚ್ಚು ಕಾಡುವುದು ದೆವ್ವ ಮನೆಗೆ ಹಿಡಿದಿದೆಯೋ? ಮನಸ್ಸಿನ ಒಳಗಿದೆಯೋ? ಎಂಬ ಊಹೆ. ಮೊದಲಿಗೆ ಇದು ತಾಯಿಯ ಮಾನಸಿಕ ಖಾಯಿಲೆ ಎಂಬಂತೆ ಕಾಣಿಸಿಕೊಂಡರೆ ನಂತರ ಮಗನ ಸರದಿ. ಈ ಹಂತದಲ್ಲಿ ಖಿನ್ನತೆ ಗುಣಪಡಿಸುವ ಮನಶ್ಶಾಸ್ತ್ರಜ್ಞನ ಅನುಭವಕ್ಕೇ ದೆವ್ವ ಕಾಣುವುದು ಹಾರರ್ ಸಿನಿಮಾಗಳ ರೆಡಿಮೇಡ್ ಚಿತ್ರಕತೆ. ಆದರೆ ಇಲ್ಲಿ ಹಾಗನಿಸುವುದಿಲ್ಲ. ತಾರ್ಕಿಕವಾಗಿ ವಸ್ತು ಅದೇ ಆದರೂ ಅದನ್ನು ‘ಭೂತಕಾಲಂ’ ಪೋಷಿಸುವ ರೀತಿ ಭಿನ್ನ.

ಕತೆ-ನಿರ್ದೇಶನ ಮಾಡಿದ ರಾಹುಲ್ ಸದಾಶಿವನ್ 2011ರ ಇಂಗ್ಲೀಷ್ ಸಿನಿಮಾ ‘ಟೇಕ್ ಶೆಲ್ಟರ್‌’ನಿಂದ ಸ್ಪೂರ್ತಿ ಪಡೆದಂತಿದೆ. ಹಾಗೆಂದು ಹಾಲಿವುಡ್‌ನ ಹಾರರ್‌ ಸೂತ್ರಕ್ಕೆ ಜೋತುಬೀಳದೆ ಭಾರತೀಯ ಚಿತ್ರವನ್ನಾಗಿಸಿದ್ದು ಹೆಚ್ಚುಗಾರಿಕೆ. ಹೆಸರು ಮತ್ತು ಪೋಸ್ಟರ್ ಇದೊಂದು ದೆವ್ವದ ಸಿನಿಮಾವೆಂದು ಬಿಂಬಿಸಿದ್ದರೂ ಪ್ರತಿ ಐದು ನಿಮಿಷಕ್ಕೊಮ್ಮೆ ಧಗ್ಗನೆ ಹೆದರಿಸುವ ದೃಶ್ಯಗಳು ಇಲ್ಲಿಲ್ಲ. ಏಕೆಂದರೆ ನಿರ್ದೇಶಕ ಇಲ್ಲಿ ಭಯಾನಕತೆಯ ಸೆರಗಲ್ಲಿ ಹೇಳಹೊರಟಿರುವುದು ಖಿನ್ನತೆಯೆಂಬ ಸೂಕ್ಷ್ಮ ವಿಚಾರ. ಅದನ್ನು ಪರಿಣಾಮಕಾರಿಯಾಗಿ ದಾಟಿಸಲು ಹಾರರ್‌ನ ಲೇಪನ ಪ್ರಯೋಗಿಸಿದ್ದಾರಷ್ಟೆ. ಉತ್ತಮ ಛಾಯಾಗ್ರಹಣ ಅದನ್ನು ಸರಿದೂಗಿಸಿದೆ.

‘ಯಾವಾಗಲಾದರೂ ಏನಾದರೂ ಹೇಳಿಕೊಳ್ಳಬೇಕು‌ ಎಂದಿದ್ದರೆ ನನ್ನಲ್ಲಿಗೆ ಬನ್ನಿ‌’ ಎಂದು ಆಶಾ ಬಳಿ ಆಶಾದಾಯಕವಾಗಿ ಮಾತನಾಡುವ ಡಾಕ್ಟರ್ ಈಕೆ ಇನ್ನೊಮ್ಮೆ ಹೋಗುವಾಗ ಅಲ್ಲಿಂದ ವರ್ಗವಾಗಿರುತ್ತಾಳೆ. ‘ಹೇಳಿ ನಿಮಗೆ ಏನಾಗುತ್ತದೆ‌?’ ಎಂದು ಹೊಸ ವೈದ್ಯ ಕೂತು ಕೇಳಿದಲ್ಲಿಗೇ ಈಕೆ ಕೂತಲ್ಲಿಂದ ಎದ್ದು ನಡೆಯುವ ದೃಶ್ಯ ಮಾನಸಿಕ ಆರೋಗ್ಯ ಕೇಂದ್ರಗಳ ವೈಫಲ್ಯ ಮತ್ತು ಮಿತಿಗಳ ದೃಶ್ಯರೂಪಕ. ಹಾಗೆಯೇ ಇನ್ನೇನು ತಾನು ಉತ್ತರ ಕಂಡುಕೊಂಡೆ ಎಂದು ಮನಶ್ಶಾಸ್ತ್ರಜ್ಞನಿಗೆ ಅನಿಸುವ ಹೊತ್ತಿಗೇ ಚಿಕಿತ್ಸೆಯ ಮಾದರಿ ಬದಲು ಮಾಡಲು ಕುಟುಂಬದವರು ನಿರ್ಧರಿಸುವುದು ಸಮಸ್ಯೆಯ ಇನ್ನೊಂದು ಮಗ್ಗುಲಿನ ಚಿತ್ರಣ.

ಕೊನೆಯಲ್ಲಿ ಹೆದರಿಸುವ ಪ್ರೇತಬಾಧೆಯ ಕ್ಲೈಮ್ಯಾಕ್ಸ್‌ನ ಹಿನ್ನೆಲೆಯಲ್ಲಿಯೂ ಅಡಗಿ ಕೂತಿರುವುದು ಖಿನ್ನತೆಯ‌ ವಿಚಾರವೇ. ಇಬ್ಬರ ನಡುವಿನ ಅಂತರದಲ್ಲಿ ಅಂತ್ಯವಿಲ್ಲದೆ ಕಾಡುವ ಅಗೋಚರ ಶಕ್ತಿಗಳು ಪರಿಸ್ಪರ ಅರಿತಾಗ ನಿಭಾಯಿಸುವ ಮಟ್ಟಕ್ಕೆ ಬರುತ್ತದೆ ಎಂಬಲ್ಲಿ ಪ್ರತಿಮೆ ರೂಪದಲ್ಲಿ ಬಳಕೆಯಾಗಿರುವುದು ಪ್ರೇತಾತ್ಮಗಳು. ಕಟ್ಟ ಕಡೆಗೆ ಮನೆ ಖಾಲಿ‌ ಮಾಡಿಕೊಂಡು ಹೊರಡುವಾಗ ಸುದೀರ್ಘ ಆಲೋಚನೆಯಲ್ಲಿ ಇರುವ ಮಗನಲ್ಲಿ ‘ಏನು ಯೋಚಿಸ್ತಿದ್ದೀಯ?’ ಎಂದು ತಾಯಿ‌ ಕೇಳುತ್ತಾಳೆ. ‘ಏನಿಲ್ಲ. ಮುಂದೆ ಈ ಮನೆಗೆ ಬರುವವರ ಬಗ್ಗೆ ಯೋಚಿಸ್ತಿದ್ದೆ’ ಎಂದು ಮಗ ಹೇಳುವುದು ಬರಿಯ ಸಂಭಾಷಣೆಯಲ್ಲ. ಖಿನ್ನತೆಯೆಂಬ ಮನೆಗೆ ಹೋಗಿ ಸೇರುವವರ ಬಗೆಗಿನ ಸಾಂಕೇತಿಕ ಹೇಳಿಕೆ.

LEAVE A REPLY

Connect with

Please enter your comment!
Please enter your name here