ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಪ್ರೇಕ್ಷಕರು, ತಾವು ಬಯಸಿದ ಯಾವ ಅಂಶವೂ ‘ರಾಧೆ ಶ್ಯಾಮ್’ನಲ್ಲಿ ಇಲ್ಲ ಅಂತ ತಿಳಿದಿದ್ದೇ ತಡ ಥಿಯೇಟರ್ ಕಡೆ ಬೆನ್ನು ತೋರಿಸಿದ್ದಾರೆ. ಪರಿಣಾಮ ಹೀರೋ ಪ್ರಭಾಸ್‌ಗೆ ಹಿನ್ನೆಡೆಯಾಗಿದೆ. ಹಿಂದೆ ರಾಮ್ ಚರಣ್ ತೇಜಾ ಕೂಡ ಇದೇ ತಪ್ಪು ಮಾಡಿದ್ದರು.
‘ರಾಧೆ ಶ್ಯಾಮ್’ ಪ್ರಭಾಸ್ – ಪೂಜಾ ಹೆಗ್ಡೆ ನಟನೆಯ ಈ ಸಿನಿಮಾ ಮೊನ್ನೆ ಶುಕ್ರವಾರ ರಿಲೀಸ್ ಆಗಿದೆ. ಪ್ರೇಕ್ಷಕರಿಂದ, ವಿಮರ್ಶಕರಿಂದ ಮಿಕ್ಸೆಡ್ ಟಾಕ್ ಪಡೆದುಕೊಂಡ್ರೂ ಸಹ ಮೊದಲ ದಿನ ಬಾಕ್ಸಾಫೀಸ್‍ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಮೊದಲ ದಿನ ಆಂದ್ರ – ತೆಲಂಗಾಣದಲ್ಲಿ 28 ಕೋಟಿ ರೂಪಾಯಿ ಹಣವನ್ನು ಸಿನಿಮಾ ಬಾಚಿತ್ತು. ಆದ್ರೆ ಎರಡನೇ ದಿನ ಈ ಚಿತ್ರದ ಗಳಿಕೆ ಶೇಕಡಾ 60ಕ್ಕಿಂತ ಹೆಚ್ಚು ಕುಸಿದಿದೆ. ಎರಡನೇ ದಿನ ಶನಿವಾರ ತೆಲುಗು ರಾಜ್ಯಗಳಲ್ಲಿ 12 ಕೋಟಿ ರೂಪಾಯಿ ಗಳಿಸಲಷ್ಟೇ ಸಾಧ್ಯವಾಗಿದೆ. ಮೂರನೇ ದಿನ ಭಾನುವಾರ ಸಹ ಕಲೆಕ್ಷನ್‍ನಲ್ಲಿ ಏರಿಕೆಯಾಗಿಲ್ಲ. 350 ಕೋಟಿ ರೂಪಾಯಿ ಬಜೆಟ್‍ನ ‘ರಾಧೆ ಶ್ಯಾಮ್’ ಚಿತ್ರದ ತೆಲುಗು ರಾಜ್ಯಗಳ ವಿತರಣೆ ಹಕ್ಕು 120 ಕೋಟಿಗೆ ಸೇಲ್ ಆಗಿದೆ. ಈಗಿನ ಟ್ರೆಂಡ್ ನೋಡ್ತಿದ್ರೆ ಸಿನಿಮಾವನ್ನು ನಂಬಿ ಹಣ ಕೊಟ್ಟು ಕೊಂಡು ಕೊಂಡಿರೋ ವಿತರಕರು ಲಾಭದ ಮುಖ ನೋಡೋದು ಕಷ್ಟ ಎನ್ನಲಾಗ್ತಿದೆ.
ಅಷ್ಟಕ್ಕೂ ‘ರಾಧೆ ಶ್ಯಾಮ್’ ಫೇಲ್ಯೂರ್‌ಗೆ ಕಾರಣವೇನು ಅಂತ ತಿಳಿಯೋದಿಕ್ಕೂ ಮುನ್ನ 12 ವರ್ಷ ಹಿಂದಕ್ಕೆ ಹೋಗಬೇಕು. ಈಗ ಪ್ರಭಾಸ್ ಮಾಡಿದ್ದ ತಪ್ಪನ್ನೇ ಅಂದು ರಾಮ್‍ಚರಣ್ ಮಾಡಿ, ಬಾಕ್ಸಾಫೀಸ್‍ನಲ್ಲಿ ಸೋಲು ಅನುಭವಿಸಿದ್ರು. ಅಷ್ಟಕ್ಕೂ ರಾಮ್ ಚರಣ್ ಮಾಡಿದ್ದ ತಪ್ಪಾದ್ರೂ ಏನು? ರಾಮ್‍ಚರಣ್ ‘ಚಿರುತ’ ಎಂಬ ಸಿನಿಮಾ ಮೂಲಕ ಟಾಲಿವುಡ್‍ಗೆ ಎಂಟ್ರಿಕೊಟ್ಟು, ‘ಮಗಧೀರ’ನಾಗಿ ಅಬ್ಬರಿಸಿದ್ರು. ಬಾಕ್ಸಾಫೀಸ್‍ನಲ್ಲಿ ಹೊಸ ಇತಿಹಾಸ ಬರೆದಿದ್ರು.
ರಾಜಮೌಳಿ ನಿರ್ದೇಶನದ ‘ಮಗಧೀರ’ ಯಾವ ಮಟ್ಟಿಗೆ ಹಿಟ್ ಆಗಿತ್ತು ಅಂದರೆ, ರಾಮ್‍ಚರಣ್‍ಗೆ ನ್ಯಾಷನಲ್ ಸ್ಟಾರ್ ಪಟ್ಟವನ್ನು ತಂದುಕೊಟ್ಟಿತ್ತು. ಹಿಂದಿಯಲ್ಲೂ ರಾಮ್‍ಚರಣ್‍ಗೆ ಅವಕಾಶಗಳು ಹರಿದುಬಂದಿದ್ವು. ಹೀಗಿರುವಾಗಲೇ ರಾಮ್‍ಚರಣ್ ಎಕ್ಸ್‌ಪೆರಿಮೆಂಟ್‌ಗೆ ಕೈ ಹಾಕಿದ್ರು. ‘ಮಗಧೀರ’ ಸಕ್ಸಸ್ ಬೆನ್ನಲ್ಲೇ ‘ಆರೇಂಜ್’ ಎಂಬ ಸಿನಿಮಾ ಮಾಡಿದ್ರು. ಇದು ಯಾವ ಮಸಾಲೆ ಎಲಿಮೆಂಟ್ಸ್ ಇಲ್ಲದ. ಪಕ್ಕಾ ಕ್ಲಾಸ್, ಪ್ಯೂರ್ ಲವ್‍ಸ್ಟೋರಿಯನ್ನು ಒಳಗೊಂಡಿತ್ತು.
ಮಗಧೀರದಂತಹ ಸಿನಿಮಾ ನೋಡಿ ಅದೇ ರೇಂಜ್‍ನ ಎಕ್ಸ್‌ಪೆಕ್ಟೇಷನ್ ಇಟ್ಕೊಂಡಿದ್ದ ರಾಮ್‍ಚರಣ್ ಅಭಿಮಾನಿಗಳು ಥಿಯೇಟರ್‌ಗೆ ನುಗ್ಗಿದ್ರು. ಆದ್ರೆ ಆರೇಂಜ್ ನಿರೀಕ್ಷೆಗಳನ್ನು ಹುಸಿಗೊಳಿಸಿತ್ತು. ಬಾಕ್ಸಾಫೀಸ್‍ನಲ್ಲಿ ಮಕಾಡೆ ಮಲಗಿತ್ತು. ಈಗ ಪ್ರಭಾಸ್ ಸಹ ಅಂಥದ್ದೇ ತಪ್ಪು ಮಾಡಿದ್ದಾರೆ. ‘ಬಾಹುಬಲಿ’, ‘ಸಾಹೋ’ನಂತಹ ಹೈ ವೋಲ್ಟೇಜ್ ಆಕ್ಷನ್ ಸಿನಿಮಾಗಳನ್ನು ಕೊಟ್ಟ ನಂತರ ತೀರಾ ಕ್ಲಾಸ್ ಸಿನಿಮಾ ಮಾಡಿದ್ದಾರೆ.
ತೆಲುಗು ಸಿನಿಮಾಗಳು ಅಂದ್ರೆ? ಅಲ್ಲಿ ಮಾಸ್ ಎಲಿಮೆಂಟ್ಸ್ ಇರಲೇಬೇಕು. ಅದ್ರಲ್ಲೂ ಸ್ಟಾರ್ ಸಿನಿಮಾಗಳು ಅಂದ್ರೆ, ಅಲ್ಲಿ ಭರಪೂರ ಮನರಂಜನೆ ಇರಲೇಬೇಕು. ಹೀಗಿರುವಾಗ ತಮ್ಮ ಮಾಸ್ ಇಮೇಜನ್ನು ಬದಿಗೊತ್ತಿ. ತೀರಾ ಕ್ಲಾಸ್ ಸಿನಿಮಾ. ಯಾವುದೇ ಫೈಟ್ಸ್ ಕೂಡ ಇಲ್ಲದ ಸಿನಿಮಾವನ್ನು ಮಾಡಿದ್ರೆ? ತೆಲುಗು ಆಡಿಯೆನ್ಸ್ ಮೆಚ್ಚುಗೆ ಸಿಗುತ್ತಾ? ‘ರಾಧೆಶ್ಯಾಮ’ನಿಗೆ ಇದೇ ಆಗಿದೆ. ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಪ್ರೇಕ್ಷಕರು, ತಾವು ಬಯಸಿದ ಯಾವ ಅಂಶವೂ ‘ರಾಧೆ ಶ್ಯಾಮ್’ನಲ್ಲಿ ಇಲ್ಲ ಅಂತ ತಿಳಿದಿದ್ದೇ ತಡ ಥಿಯೇಟರ್ ಕಡೆ ಬೆನ್ನು ತೋರಿಸಿದ್ದಾರೆ. ಪರಿಣಾಮ ‘ರಾಧೆ ಶ್ಯಾಮ್’ ನಂಬಿ ಹಣ ಹಾಕಿದ ಪ್ರೊಡ್ಯೂಸರ್ ಸೇಫ್ ಆಗಿದ್ರೂ ಸಹ ಡಿಸ್ಟ್ರಿಬ್ಯೂಟರ್‌ಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.