ನೇರವಾಗಿ ಅಮೆಜಾನ್ ಪ್ರೈಮ್ ಒಟಿಟಿಗೆ ಬಂದ ತಮಿಳು ಚಿತ್ರ ‘ಮಹಾನ್’. ವಿಮರ್ಶಾ ದೃಷ್ಟಿಯಲ್ಲಿ ಹೇಳುವುದಾದರೆ ಒಂದಷ್ಟು ಕುಂದುಕೊರತೆಗಳನ್ನು ಹೆಕ್ಕಿ ತೆಗೆಯಬಹುದು. ಆದರೆ ನನ್ನಂಥ ಸಾಮಾನ್ಯ ಪ್ರೇಕ್ಷಕನಿಗೆ ನೋಡುವ ಹೊತ್ತಿಗೆ ಪರಿಪೂರ್ಣ ಮನರಂಜನೆ ನೀಡಿದೆ.
ಅದು ರಾಜಕೀಯವಿರಲಿ, ಧಾರ್ಮಿಕವಿರಲಿ ಅಥವಾ ಸಾಮಾಜಿಕವಿರಲಿ, ಅಲ್ಲಿ ಯಾವ ಸೈದ್ಧಾಂತಿಕ ನೆಲೆಗಟ್ಟನ್ನು ನಾವು ಆಯ್ಕೆ ಮಾಡಿರುತ್ತೇವೋ ಆ ಸಿದ್ಧಾಂತಗಳೇ ನಮ್ಮ ವ್ಯಕ್ತಿತ್ವ ರೂಪಿಸುತ್ತದೆ. ಕೊನೆಗೆ ಆ ಸಿದ್ಧಾಂತಗಳೇ ನಮ್ಮನ್ನು ಆಪೋಶನ ತೆಗೆದುಕೊಳ್ಳುತ್ತದೆ ಎಂಬುದೂ ಅಷ್ಟೇ ಸತ್ಯ. ಯಾವುದೇ ಗ್ಯಾಂಗ್‌ಸ್ಟರ್ ಸಿನಿಮಾ ಅಂಥದ್ದೊಂದು ಸಿದ್ಧಾಂತಗಳ ಬದ್ಧತೆ, ಭದ್ರತೆ ಮತ್ತು ಅಭದ್ರತೆಗಳ ಸುತ್ತಲೇ ಸಾಗಬೇಕು. ಕುತೂಹಲಕಾರಿ ಚಿತ್ರಕತೆಯ ಜತೆಗೆ ವೈಭವೀಕೃತ ಸಂಗೀತ ಹಾಗೂ ಹೊಡೆದಾಟದ ಮಸಾಲಾ ಅತ್ಯಗತ್ಯ ಸಾಮಗ್ರಿಗಳು. ಗ್ಯಾಂಗ್‌ಸ್ಟರ್ ಸಿನಿಮಾಕ್ಕೆ ಇರಬೇಕಾದ ಅಷ್ಟೂ ಗುಣಗಳ ಜತೆಗೆ ತಮಿಳು ನಿರ್ದೇಶಕ ಕಾರ್ತಿಕ ಸುಬ್ಬರಾಜನ್ ಟ್ರೇಡ್‌ಮಾರ್ಕಿನ ಟ್ವಿಸ್ಟುಗಳಿರುವ ಸಿನಿಮಾ ‘ಮಹಾನ್’. ನಿಜಜೀವನದ ಅಪ್ಪ ಮಗನಾದ ವಿಕ್ರಂ ಹಾಗೂ ಧ್ರುವ ಅಪ್ಪ ಮತ್ತು ಮಗನ ಪಾತ್ರದಲ್ಲೇ ನಟಿಸಿರುವುದು ಈ ಸಿನಿಮಾದ ತೆರೆಯಾಚೆಗಿನ ಹೈಲೈಟ್.
ಸಾಮಾನ್ಯನೊಬ್ಬ ಗ್ಯಾಂಗ್‌ಸ್ಟರ್ ಆಗಲು ಒಂದು ಸಕಾರಣ ಬೇಕು. ಸನ್ನಿವೇಶಗಳಿಂದಲೇ ಆತ ತಪ್ಪುದಾರಿ ಹಿಡಿಯುತ್ತಾನೆ ಎಂದಾಗಲೇ ಅಲ್ಲೊಬ್ಬ ಹೀರೋ ಇರಲು ಸಾಧ್ಯ. ಹಾಗಾಗಿ ಸೂಕ್ತ ಸನ್ನಿವೇಶ ಸೃಷ್ಟಿಸುವಲ್ಲೇ ಇಂಥ ಸಿನಿಮಾಗಳ ಜಯ, ಅಪಜಯ ನಿಂತಿರುತ್ತದೆ. ಗೂಂಡಾಗಿರಿ, ಹಸಿದವರ ಮೇಲೆ ಉಳ್ಳವರ ದಬ್ಬಾಳಿಕೆ, ಸಮಾಜದ ಕೆಟ್ಟ ಕಟ್ಟುಪಾಡುಗಳೇ ಹೆಚ್ಚಾಗಿ ಅಂಥ ಸನ್ನಿವೇಶಗಳಾಗಿ ಬಂದಿರುವಾಗ ಗಾಂಧೀವಾದ ಬಳಸಿ ಸನ್ನಿವೇಶ ಸೃಷ್ಟಿಸಿರುವುದು ‘ಮಹಾನ್’ ವಿಶೇಷ.
ಚಿತ್ರ ಆರಂಭವಾಗುವುದೇ ಸಂಪೂರ್ಣ ಪಾನ ನಿಷೇಧವೆಂಬ ಗಾಂಧಿ ಸಿದ್ಧಾಂತದ ಮೇಲೆ. ವಿಕ್ರಂ ಇಲ್ಲಿ ಉತ್ಕಟ ಗಾಂಧೀವಾದಿಯ ಮಗ. ಆಗಸ್ಟ್ ಹದಿನಾರಕ್ಕೆ ಹುಟ್ಟಿದ ಮಗನಿಗೆ ಆಗಸ್ಟ್ ಹದಿನೈದು ಎಂದೇ ಪ್ರಮಾಣಪತ್ರ ಮಾಡಿಸಿದ ದೇಶಭಕ್ತ. ಬೆಳೆಯುವ ಮಗ ಸಹವಾಸ ದೋಷದಿಂದ ಇಸ್ಪೀಟು ಆಡಿ ಸಿಕ್ಕಿಬಿದ್ದಾಗ ಆಕಾಶ ಭೂಮಿ ಒಂದಾಗುತ್ತದೆ. ಇನ್ನೆಂದೂ ಆ ದಾರಿ ತುಳಿಯುವುದಿಲ್ಲ ಎಂದು ಪ್ರಮಾಣ ಮಾಡಿದ ಗಾಂಧಿ ಮಹಾನ್ ನಲುವತ್ತರ ಪ್ರಾಯದವರೆಗೆ ಸಿದ್ಧಾಂತಕ್ಕೆ ಕಟಿಬದ್ಧನಾಗಿಯೇ ಇರುತ್ತಾನೆ. ಹೀಗಿರುವಾಗ ಆತನಿಗೆ ಗಾಂಧೀವಾದಿಯ ಮಗಳನ್ನೇ ಹುಡುಕಿ ಮದುವೆ ಮಾಡಿಸಿದ್ದು ನಿರೀಕ್ಷಿತವೇ. ಹೆಂಡತಿ ನಾಚಿ (ಸಿಮ್ರಾನ್) ಕೂಡ ಅತೀವ ಗಾಂಧೀವಾದಿ. ಹೊಡಿ-ಬಡಿ ಹಾಗೂ ಕಾಮವನ್ನು ತೋರಿಸುವ ಇಂಗ್ಲೀಷ್ ಸಿನಿಮಾಗಳು ಒತ್ತಟ್ಟಿಗಿರಲಿ, ಅದರ ಪೋಸ್ಟರನ್ನೂ ನೋಡಬಾರದು ಎಂದು ಕಡಿವಾಣ ಹಾಕಿ ಮಗನನ್ನು ಬೆಳೆಸುವ ತಾಯಿ ಆಕೆ.
ಇಂಥ ಪರಿಸ್ಥಿತಿಯಲ್ಲಿರುವ ಗಾಂಧಿ ಮಹಾನನಿಗೆ ಸ್ವತಂತ್ರವಾದ ಒಂದು ದಿನ ಸಿಗುವುದು ತನ್ನ ನಲವತ್ತನೇ ವಯಸ್ಸಿಗೆ. ಹೆಂಡತಿ-ಮಗ ಶಾಲಾ ಪ್ರವಾಸಕ್ಕೆ ಹೋದ ಆ ಒಂದು ದಿನವೇ ತನ್ನ ಹುಟ್ಟುಹಬ್ಬವೂ ಬರುವ ಕಾರಣ ಬಚ್ಚಿಟ್ಟ ಆಸೆ ಈಡೇರಿಕೆಗೆ ಆ ದಿನವನ್ನು ಬಳಸಿಕೊಳ್ಳಲು ಆತ ನಿರ್ಧರಿಸುತ್ತಾನೆ, ಕುಡಿದು ಸಿಕ್ಕಿಬೀಳುತ್ತಾನೆ. ಹೆಂಡತಿ ನಾಚಿಯ ದೃಷ್ಟಿಯಲ್ಲಿ ಅದು ಅಕ್ಷಮ್ಯ ಅಪರಾಧ. ಹಾಗಾಗಿ ಅವನನ್ನು ಬಿಟ್ಟು ದೂರ ಹೋಗಿಯೇ ಬಿಟ್ಟಲ್ಲಿಂದ ಗಾಂಧಿ ಮಹಾನ್‌ನ ಬದುಕಿನ ತಿರುವು ಆರಂಭ.
ಇಂಥ ಕತೆಯಲ್ಲಿ ತಾರ್ಕಿಕ ಅಂಶ ಎಷ್ಟಿವೆ ಎಂಬುದಕ್ಕಿಂತ ಸಿನಿಮೀಯ ಅಂಶ ಎಷ್ಟು ಕರಾರುವಾಕ್ಕಾಗಿ ಬಂದಿದೆ ಎಂಬುದು ಮುಖ್ಯ. ಪ್ರತಿ ತಿರುವೂ ಸಿನಿಮೀಯವಾಗಿ ಇರುವುದರ ಜತೆಗೆ ನೋಡುವ ಆ ಕ್ಷಣದಲ್ಲಿ ದೃಶ್ಯಗಳು ನಮ್ಮನ್ನು ನಂಬಿಸುತ್ತವೆ. ಗಾಂಧಿ ಮಹಾನ್‌ನ ಪರಿವರ್ತನೆ ಬಿಂಬಿಸುವಲ್ಲಿ Rap ಸಂಗೀತ ಬಳಕೆ ಮಾಡಿರುವುದು ಹೊಂದಿಕೆಯಾಗುವುದರ ಜತೆಗೆ ವಿಶೇಷತೆ ನೀಡಿದೆ. ಉಳಿದ ಕಡೆಗಳಲ್ಲಿ ಜಾನಪದ ಧಾಟಿಯ ಹಾಡುಗಳು ಬರುವ ಕಾರಣ ಸ್ಕಿಪ್ ಮಾಡದೆ ನೋಡಿಸುತ್ತದೆ. ಅಕಸ್ಮಾತ್ ಮುಂದಕ್ಕೆ ಹೋದರೂ ಹಾಡಿನಲ್ಲೇ ಕತೆಯೂ ನಡೆದಿದೆ ಎಂದು ಗೊತ್ತಾಗಿ ಮತ್ತೆ ಹಿಂದಕ್ಕೆ ಬರಲೇಬೇಕು.
ಮೂಲತಃ ತನ್ನ ತೀಕ್ಷ್ಣ ಬುದ್ದಿ, ಉತ್ತಮ ಮಾರ್ಕೆಟಿಂಗ್‌ನಿಂದಲೇ ಮದ್ಯದ ದೊರೆಯಾಗುವ ಕಾಮರ್ಸ್ ಮೇಷ್ಟ್ರು ಗಾಂಧಿ ಅಗತ್ಯ ಕಡೆಗಳಲ್ಲಿ ಪ್ರತಿಸ್ಪರ್ಧಿಗಳ ಸದೆಬಡಿದು ಮುನ್ನುಗ್ಗುವುದೂ ಇದ್ದೇ ಇದೆ. ಹಾಗೆಂದು ಹಿಂಸೆಯನ್ನೇ ವೈಭವೀಕರಿಸಿಲ್ಲ, ಗುಂಡು ಹೊಡೆಯುವುದೂ ಹಿಂಸೆಯ ವರ್ಗಕ್ಕೇ ಸೇರಿದರೂ ಎದೆಯಿಂದ ತೂರಿ ಬೆನ್ನಿನಿಂದ ಆಚೆ ಬರುವ ಕತ್ತಿ ಇದ್ದಾಗಷ್ಟೇ ಈ ವರ್ಗದ ಸಿನಿಮಾಗಳಲ್ಲಿ ಹಿಂಸೆ ಎಂದು ಪರಿಗಣಿಸುವುದು ಸಮಂಜಸ. ನಾಯಕನ ಬಾಹುಬಲ ಚಿತ್ರಿಸಲು ಚಿತ್ರಕತೆಯನ್ನೇ ಅಸ್ತ್ರವಾಗಿ ಬಳಕೆ ಮಾಡಲಾಗಿದೆ.
ಅಷ್ಟಕ್ಕೂ ಇಲ್ಲಿ ಗ್ಯಾಂಗ್‌ಸ್ಟರ್‌ಗಿಂತ ಹೆಚ್ಚು ಹಿಂಸೆಯಲ್ಲಿ ತೊಡಗುವುದು ಪೊಲೀಸ್ ಪಾತ್ರ. ಮದ್ಯ ದಂಧೆಯನ್ನು ಬುಡಸಹಿತ ಕಿತ್ತೊಗೆಯುವ ಗುರಿಯೊಂದಿಗೆ ಬರುವ ದಾದಾಭಾಯ್ ನೌರೋಜಿಗೆ (ಧ್ರುವ) ಹಿನ್ನೆಲೆ ಕತೆಯಿದೆ, ದ್ವೇಷಕ್ಕೆ ಸಕಾರಣವಿದೆ. ಅದನ್ನು ಸದುಪಯೋಗ ಪಡಿಸುವ ರಾಜಕಾರಣಿಯೂ ಇದ್ದಾನೆ ಎಂದಾಗ ಇದೊಂದು ಫಾರ್ಮುಲಾ ಚಿತ್ರವೆಂದು ಅನಿಸಬಹುದು. ಆದರೆ ಇದು ಫಾರ್ಮುಲಾವನ್ನೇ ಆಂತರ್ಯದಲ್ಲಿ ಇಟ್ಟುಕೊಂಡರೂ ಬಾಹ್ಯದಲ್ಲಿ ಹಾಗನ್ನಿಸದ ಚಿತ್ರ.
ಇಡೀ ಸಿನಿಮಾದಲ್ಲಿ ಮಜಬೂತಾಗಿರುವುದು ವಿಕ್ರಂ ಅಭಿನಯ. 40ರ ಪ್ರಾಯದಲ್ಲಿ ಪಾಪದವನಂತೆಯೂ, 50ರಲ್ಲಿ ದೊರೆಯಂತೆಯೂ, 60ರ ವಯಸ್ಸಿನಲ್ಲಿ ಸುಸ್ತಾದ ತಂದೆಯಂತೆಯೂ ಕಾಣುವ ವಿಕ್ರಂ ನಟನೆ ಎಲ್ಲಾ ಹಂತಗಳಲ್ಲೂ ಗೆದ್ದಿದೆ. ಆದರೆ ಅದೇ ಭರವಸೆ ಧ್ರುವ್ ಅಭಿನಯದಲ್ಲಿ ಮೂಡುವುದಿಲ್ಲ. ವಿಕ್ರಂನಷ್ಟೇ ಇಷ್ಟಪಡಬಹುದಾದ ನಟನೆ ತೋರಿರುವುದು ಬಾಬ್ಬಿ ಸಿಂಹ. ರಾಕಿ ಪಾತ್ರಧಾರಿ ಸನತ್ ನಟನೆಗೆ ಹೋಲಿಸಿದಾಗಂತೂ ಧ್ರುವ ನಟನೆಯಲ್ಲಿ ಅತಿರೇಕದ ಅಂಶ ಹೆಚ್ಚೇ ಇರುವುದು ಕಣ್ಣಿಗೆ ರಾಚುತ್ತದೆ. ಕೊನೆಯ ಹತ್ತು ನಿಮಿಷಕ್ಕೂ ಮೊದಲಿನ ಇಪ್ಪತ್ತು ನಿಮಿಷ ಬೋರು ಹೊಡೆಸುವಲ್ಲಿ ನಿರ್ದೇಶಕನದ್ದು ಅರ್ಧ ಪಾಲಿದ್ದರೆ ಉಳಿದರ್ಧ ಧ್ರುವನದ್ದು.
ವಿಮರ್ಶಾದೃಷ್ಟಿಯಲ್ಲಿ ಹೇಳುವುದಾದರೆ ಒಂದಷ್ಟು ಕುಂದು ಕೊರತೆಗಳನ್ನು ಹೆಕ್ಕಿ ತೆಗೆಯಬಹುದು. ಗಾಂಧೀವಾದ ಪಾನನಿಷೇಧಕ್ಕಷ್ಟೇ ಸೀಮಿತವೇ ಎಂದು ಪ್ರಶ್ನೆ ಹಾಕಬಹುದು. ಆದರೆ ಯಾವ ಹಂತದಲ್ಲೂ ಗಾಂಧೀವಾದವನ್ನು ಒರೆಗೆ ಹಚ್ಚುವುದು ಈ ಸಿನಿಮಾದ ಉದ್ದೇಶವೂ ಅಲ್ಲ. ಅಲ್ಲದೆ ಯಾವುದೇ ಸಿದ್ಧಾಂತದ ಅತಿರೇಕದ ಆಚರಣೆ ತದ್ವಿರುದ್ಧ ಪರಿಣಾಮ ಬೀರುವ ಸಾಧ್ಯತೆಯೂ ಅತಾರ್ಕಿಕವೇನಲ್ಲ. ಹಾಗಾಗಿ ನನ್ನಂಥ ಸಾಮಾನ್ಯ ಪ್ರೇಕ್ಷಕನಿಗೆ ನೋಡುವ ಹೊತ್ತಿಗೆ ಪರಿಪೂರ್ಣ ಮನರಂಜನೆ ನೀಡಿದೆ. ಜತೆಗೆ ಸಿನಿಮೀಯ ಟ್ವಿಸ್ಟುಗಳು ಬರುವಾಗ ಇದನ್ನು ಒಟಿಟಿಯಲ್ಲಿ ಒಬ್ಬನೇ ನೋಡುವುದಕ್ಕಿಂತ ಥಿಯೇಟರಿನಲ್ಲಿ ಸಾಮೂಹಿಕ ಸ್ಪಂದನೆಯ ಅನುಭವದಲ್ಲೇ ನೋಡಬೇಕಿತ್ತು ಎಂದೂ ಅನಿಸಿದೆ. ಆ ಮಟ್ಟಿಗೆ ಇದೊಂದು ಅಗ್ದಿ ಕಮರ್ಷಿಯಲ್ ಚಿತ್ರ.