ಮಹೇಶ್‌ ಭಟ್‌ ನಿರ್ಮಾಣದ ‘ರಂಜಿ‌ಷ್‌ ಹಿ ಸಹೀ’ ವೆಬ್‌ ಸರಣಿ ಟೀಸರ್‌ ಬಿಡುಗಡೆಯಾಗಿದೆ. ತಾಹಿರ್‌ ರಾಜ್‌ ಭಾಸಿನ್‌, ಅಮೃತಾ ಪುರಿ ಮತ್ತು ಅಮಲಾ ಪೌಲ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸರಣಿ ಶೀಘ್ರದಲ್ಲೇ Voot Selectನಲ್ಲಿ ಸ್ಟ್ರೀಮ್‌ ಆಗಲಿದೆ.

ಬಾಲಿವುಡ್‌ನ ಖ್ಯಾತ ನಿರ್ದೇಶಕ, ನಿರ್ಮಾಪಕ ಮಹೇಶ್‌ ಭಟ್‌ Voot Select ಗಾಗಿ ನಿರ್ಮಿಸಿರುವ ‘ರಂಜಿ‌ಷ್‌ ಹಿ ಸಹೀ’ ವೆಬ್‌ ಸರಣಿಯ ಮೊದಲ ಟೀಸರ್‌ ರಿಲೀಸ್‌ ಆಗಿದೆ. ಟೀಸರ್‌ ನೋಡಿದಾಗ ಮಹೇಶ್‌ ಭಟ್‌ ಸಿನಿಮಾದ ಸ್ಟಾಂಪ್‌ ಸ್ಪಷ್ಟವಾಗಿ ಕಾಣಿಸುತ್ತದೆ. ಸಿನಿಮಾರಂಗದ ಹಿನ್ನೆಲೆಯಲ್ಲಿ ನಡೆಯುವ ಕತೆ. ಪುಷ್ಪದೀಪ್‌ ಭಾರದ್ವಾಜ್‌ ನಿರ್ದೇಶಿಸಿರುವ ಸರಣಿಯ ಪ್ರಮುಖ ಪಾತ್ರಗಳಲ್ಲಿ ತಾಹಿರ್‌ ರಾಜ್‌ ಭಾಸಿನ್‌, ಅಮೃತಾ ಪುರಿ ಮತ್ತು ಅಮಲಾ ಪೌಲ್‌ ನಟಿಸಿದ್ದಾರೆ. ಚಿತ್ರರಂಗದಲ್ಲಿ ತನ್ನ ಅಸ್ವಿತ್ವ ಕಂಡುಕೊಳ್ಳಲು ಹೋರಾಟ ನಡೆಸುವ ಚಿತ್ರನಿರ್ದೇಶಕನ ಪಾತ್ರ ತಾಹಿರ್‌ ಅವರದ್ದು. ಅವರ ಪತ್ನಿಯ ಪಾತ್ರದಲ್ಲಿ ಅಮೃತಾ ಪುರಿ ಇದ್ದಾರೆ. ಚಿತ್ರನಟಿಯಾಗಿ ಅಮಲಾ ಪೌಲ್‌ ಕಾಣಿಸಿಕೊಂಡಿದ್ದು, ನಿರ್ದೇಶಕ (ತಾಹಿರ್‌) ಆಕೆಯಲ್ಲಿ ಅನುರಕ್ತವಾಗುತ್ತಾನೆ.

ಸರಣಿಯ ಅಫಿಷಿಯಲ್‌ ಸಿನಾಪ್ಸಿಸ್‌ ಹೀಗೆ ಹೇಳುತ್ತದೆ – “ಸುವರ್ಣಯುಗ ಎಂದೇ ಕರೆಸಿಕೊಂಡಿದ್ದ 70ರ ದಶಕದ ಹಿಂದಿ ಸಿನಿಮಾರಂಗದ ಹಿನ್ನೆಲೆಯಲ್ಲಿ ಕತೆ ನಡೆಯುತ್ತದೆ. ಯಶಸ್ಸಿಗಾಗಿ ಎದುರು ನೋಡುತ್ತಿರುವ ಚಿತ್ರನಿರ್ದೇಶಕ ಶಂಕರ್‌ (ತಾಹಿರ್‌), ದಿವಾ ಆಮ್ನಾ (ಅಮಲಾ ಪೌಲ್‌) ಮತ್ತು ಶಂಕರ್‌ ಪತ್ನಿ ಅಂಜು (ಅಮೃತಾ) ಅವರ ಸುತ್ತ ಕತೆ ಸಾಗುತ್ತದೆ. ಕೈಹಿಡಿದ ಪತ್ನಿ ಮತ್ತು ಪ್ರೇಮಿಸುತ್ತಿರುವ ಚಿತ್ರನಟಿ.. ಇಬ್ಬರ ಸಂಬಂಧಗಳ ಸುಳಿಯಲ್ಲಿ ಸಿಲುಕಿರುವ ಚಿತ್ರನಿರ್ದೇಶಕ ಮತ್ತು ಮೂವರ ಮಾನಸಿಕ ತಳಮಳಗಳನ್ನು ಕಟ್ಟಿಕೊಡಲಾಗಿದೆ”. ‘ರಂಜಿ‌ಷ್‌ ಹಿ ಸಹೀ’ ವೆಬ್‌ ಸರಣಿ Voot Selectನಲ್ಲಿ ಸ್ಟ್ರೀಮ್‌ ಆಗಲಿದ್ದು, ಶೀಘ್ರದಲ್ಲೇ ದಿನಾಂಕ ಘೋಷಣೆಯಾಗಲಿದೆ.

LEAVE A REPLY

Connect with

Please enter your comment!
Please enter your name here