ಭರತ್ ಕುಮಾರ್ ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವ ‘ಮೆಜಸ್ಟಿಕ್ 2’ ಸಿನಿಮಾದ ಹಾಡಿಗೆ ನಟಿ ಮಾಲಾಶ್ರೀ ಹೆಜ್ಜೆ ಹಾಕಿದ್ದಾರೆ. ರಾಮು ಚಿತ್ರದ ನಿರ್ದೇಶಕ. ರೌಡಿಯಿಸಂ, ತಾಯಿ ಸೆಂಟೆಮೆಂಟ್ ಜೊತೆ ಪ್ರೇಮಕತೆಯನ್ನೂ ಚಿತ್ರಕಥೆಯಲ್ಲಿ ಬೆಸೆದಿದ್ದಾರೆ ನಿರ್ದೇಶಕ ರಾಮು.
‘ಈ ಚಿತ್ರದಲ್ಲಿ ನನ್ನದು ಸ್ಪೆಷಲ್ ಎಂಟ್ರಿ. ನಿರ್ದೇಶಕ ರಾಮು ಅವರು ನಮ್ಮ ರಾಮು ಫಿಲಂಸ್ ಬ್ಯಾನರ್‌ನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಸಿನಿಮಾಗೆ ಸ್ಟೆಪ್ ಹಾಕಬೇಕು ಎಂದು ಕೇಳಿಕೊಂಡರು. ತ್ರಿಭುವನ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದೇನೆ. ಇದು ಮಾರಮ್ಮ ದೇವಿ ಸಾಂಗ್. ನನ್ನ ಸ್ಟೆಪ್ಸ್ ನೋಡಿ ನನಗೇ ಖುಷಿಯಾಯ್ತು. ಹಿಂದಿನ ದಿನಗಳನ್ನು ನೆನಪಿಸಿತು. ಐ ರಿಯಲೀ ಎಂಜಾಯ್ಡ್’ ಎನ್ನುತ್ತಾರೆ ನಟಿ ಮಾಲಾಶ್ರೀ. ರಾಮು ನಿರ್ದೇಶನ ‘ಮೆಜಸ್ಟಿಕ್ 2’ ಸಿನಿಮಾದ ಹೀರೋ ಇಂಟ್ರಡಕ್ಷನ್ ಸಾಂಗ್‌ಗೆ ಅವರು ಹೆಜ್ಜೆ ಹಾಕಿದ್ದಾರೆ. ‘ಮೆಜಸ್ಟಿಕ್ 2’ ಚಿತ್ರದಲ್ಲಿ ಮೆಜೆಸ್ಟಿಕ್ ಏರಿಯಾದಲ್ಲಿನ ಕರಾಳ ದಂಧೆಗಳು, ಅಕ್ರಮ ಚಟುವಟಿಕೆಗಳು ಹೇಗೆ ನಡೆಯುತ್ತವೆ ಎನ್ನುವುದನ್ನು ಅಲ್ಲಿಯೇ ಹುಟ್ಟಿ ಬೆಳೆದ ಹುಡುಗನೊಬ್ಬನ ಕತೆಯ ಮೂಲಕ ನಿರ್ದೇಶಕ ರಾಮು ಹೇಳಲು ಪ್ರಯತ್ನಿಸಿದ್ದಾರೆ.
ಈ ಚಿತ್ರದ ಮೂಲಕ ಚಿತ್ರನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಹೀರೋ ಇಂಟ್ರಡಕ್ಷನ್ ಸಾಂಗ್ ಚಿತ್ರೀಕರಣ ಆರ್ ಎಸ್ ಗೌಡ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಅಣ್ಣಮ್ಮ ದೇವಿ ಜಾತ್ರೆಯ ಅದ್ದೂರಿ ಸೆಟ್‌ನಲ್ಲಿ ಚಿತ್ರಸಲಾಯ್ತು. ಹಾಡಿನಲ್ಲಿ ಮಾಲಾಶ್ರೀ, ನಾಯಕ ಭರತ್ ಕುಮಾರ್ ಹಾಗೂ ನೂರಾರು ಡಾನ್ಸರ್ಸ್ ಪಾಲ್ಗೊಂಡಿದ್ದರು. ತ್ರಿಭುವನ್ ಮಾಸ್ಟರ್ ನೃತ್ಯ ಸಂಯೋಜನೆಯಲ್ಲಿ ಹಾಡು ಚಿತ್ರೀಕರಣಗೊಂಡಿತು. ‘ಚಿತ್ರದಲ್ಲಿ ಎರಡು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡುತ್ತಿದ್ದೇನೆ. ಈಗಾಗಲೇ ಒಂದು ಹಾಡನ್ನು ಶೂಟ್ ಮಾಡಿದ್ದೇವೆ. ಮಾಲಾಶ್ರೀ ಅವರ ಜೊತೆ ತುಂಬಾ ಹಾಡುಗಳನ್ನು ಮಾಡಿದ್ದೇನೆ. ಈಗ ಮತ್ತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ’ ಎನ್ನುವುದು ಕೊರಿಯೋಗ್ರಾಫರ್ ತ್ರಿಭುವನ್ ಅವರ ಮಾತು.
ಚಿತ್ರದುರ್ಗ ಮೂಲದ ಹೆಚ್ ಆನಂದಪ್ಪ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ‘ಈಗಾಗಲೇ ಚಿತ್ರದ ಶೇ 80ರಷ್ಟು ಚಿತ್ರೀಕರಣ ಮುಕ್ತಾಯಗೊಂಡಿದೆ. ಮಾಲಾಶ್ರೀ ಅವರು ಚಿತ್ರದಲ್ಲಿ ನಟಿಸುತ್ತಿರುವುದು ನಮ್ಮ ಸುಯೋಗ. ಬರುವ ದೀಪಾವಳಿ ಹಬ್ಬದ ವೇಳೆಗೆ ಚಿತ್ರವನ್ನು ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ’ ಎನ್ನುತ್ತಾರೆ. ‘ನನ್ನ ಮೊದಲ ಚಿತ್ರದಲ್ಲೇ ಲೆಜೆಂಡರಿ ಆಕ್ಟರ್ ಮಾಲಾಶ್ರೀ ಅವರೊಂದಿಗೆ ಅಭಿನಯಿಸುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಮೇಡಂ ಅವರಿಂದ ತುಂಬಾ ಕಲಿತೆ. ಮೆಜೆಸ್ಟಿಕ್‌ನಲ್ಲೇ ಹುಟ್ಟಿಬೆಳೆದ ಹುಡುಗನಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈಗಿನ ಮೆಜೆಸ್ಟಿಕ್ ಹೇಗಿರುತ್ತೆ ಎಂದು ಚಿತ್ರದಲ್ಲಿ ನೋಡಬಹುದು. ಈ ಪಾತ್ರಕ್ಕಾಗಿ ತುಂಬಾ ತಯಾರಿ ಮಾಡಿಕೊಂಡಿದ್ದೆನೆ’ ಎನ್ನುತ್ತಾರೆ ಹೀರೋ ಭರತ್. ಸಂಹಿತಾ ವಿನ್ಯಾ ಚಿತ್ರದ ನಾಯಕಿ. ವಿನು ಮನಸು ಸಂಗೀತ, ವೀನಸ್ ಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.