2024ರ ಅಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಸಿನಿಮಾ ಆಗಿ ‘2018’ (ಮಲಯಾಳಂ) ಆಯ್ಕೆಯಾಗಿದೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ನೇತೃತ್ವದ 16 ಸದಸ್ಯರ ಆಯ್ಕೆ ಸಮಿತಿ ಭಾರತದ 20 ಸಿನಿಮಾಗಳ ಪೈಕಿ ‘2018’ ಚಿತ್ರವನ್ನು ಆಯ್ಕೆ ಮಾಡಿದೆ.
ಟೊವಿನೋ ಥಾಮಸ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘2018’ ಮಲಯಾಳಂ ಚಿತ್ರವು 2024ರ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ. ಚಿತ್ರವನ್ನು ಜೂಡ್ ಆಂಥೋನಿ ಜೋಸೆಫ್ ಬರೆದು, ನಿರ್ದೇಶಿಸಿದ್ದಾರೆ. 2024ಕ್ಕೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಮಾಡಲಾದ ಸಿನಿಮಾವೆಂದು ಚಲನಚಿತ್ರ ಮತ್ತು ಫೆಡರೇಶನ್ ಆಫ್ ಇಂಡಿಯಾ (Film and Federation of India) ಪ್ರಕಟಿಸಿದೆ. ಹವಾಮಾನ ಬದಲಾವಣೆಯ ನ್ಯೂನತೆಗಳ ಕುರಿತು ಮೂಡಿ ಬಂದಿದ್ದ ಈ ಸಿನಿಮಾವು ಕೇರಳ ಪ್ರವಾಹವನ್ನು ಆಧರಿಸಿದೆ. ವಿನಾಶಕಾರಿ ಪ್ರವಾಹದ ಸಮಯದಲ್ಲಿ ಜನರು ಬದುಕುಳಿದ ಕಥೆಯ ಸುತ್ತ ಚಿತ್ರಕಥೆ ಸುತ್ತುತ್ತದೆ. ಈ ನಾಮನಿರ್ದೇಶನಕ್ಕಾಗಿ 20ಕ್ಕೂ ಹೆಚ್ಚು ಚಲನಚಿತ್ರಗಳು ಸ್ಪರ್ಧೆಯಲ್ಲಿದ್ದವು.
‘2018’ ಚಿತ್ರದಲ್ಲಿ ಕುಂಚಕೋ ಬೋಬನ್, ಆಸಿಫ್ ಅಲಿ, ವಿನೀತ್ ಶ್ರೀನಿವಾಸನ್, ಅಪರ್ಣಾ ಬಾಲಮುರಳಿ, ಕಲೈಯರಸನ್, ನರೇನ್, ಲಾಲ್, ಇಂದ್ರನ್ಸ್, ಸುಧೀಶ್, ಗಿಲು ಜೋಸೆಫ್, ವಿನಿತಾ ಕೋಶಿ, ಅಜು ವರ್ಗೀಸ್, ತನ್ವಿ ರಾಮ್, ಶಿವದಾ, ಗೌತಮಿ ನಾಯರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. Kavya Film Company & P K Prime Production ಬ್ಯಾನರ್ ಅಡಿಯಲ್ಲಿ ವೇಣು ಕುನ್ನಪ್ಪಿಳ್ಳಿ, ಸಿ ಕೆ ಪದ್ಮಕುಮಾರ್ ಮತ್ತು ಆಂಟೊ ಜೋಸೆಫ್ ಚಿತ್ರ ನಿರ್ಮಿಸಿದ್ದಾರೆ. ಅಖಿಲ್ ಪಿ ಧರ್ಮಜನ್ ಛಾಯಾಗ್ರಹಣ ಚಿತ್ರಕ್ಕಿದೆ. ಚಲನಚಿತ್ರದ ಆಯ್ಕೆ ಸಮಿತಿಯ ಅಧ್ಯಕ್ಷರಾದ ಗಿರೀಶ್ ಕಾಸರವಳ್ಳಿ ಅವರು, ‘ಹವಾಮಾನ ಬದಲಾವಣೆ ಮತ್ತು ಜನರ ಕಷ್ಟಗಳನ್ನು ಸಮಾಜವು ಅರ್ಥಮಾಡಿಕೊಂಡ ಪರಿ ಹಾಗೂ ಅಭಿವೃದ್ಧಿಯ ಪರಿಕಲ್ಪನೆಯ ಸಂಬಂಧಿತ ವಿಷಯವನ್ನು ಒಳಗೊಂಡಿರುವುದರಿಂದ ಈ ಚಲನಚಿತ್ರವನ್ನು ಆಯ್ಕೆ ಮಾಡಲಾಗಿದೆ’ ಎಂದು ತಿಳಿಸಿದ್ದಾರೆ. ‘ದಿ ಕೇರಳ ಸ್ಟೋರಿ’, ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’, ‘ಮಿಸಸ್ ಚಟರ್ಜಿ Vs ನಾರ್ವೆ’ (ಹಿಂದಿ), ‘ಬಳಗಂ’ (ತೆಲುಗು), ‘ವಾಲ್ವಿ’ (ಮರಾಠಿ), ‘ಬಾಪ್ಲಿಯೋಕ್’ (ಮರಾಠಿ) ಮತ್ತು ‘ಆಗಸ್ಟ್ 16, 1947’ ( ತಮಿಳು) ಸ್ಪರ್ಧೆಯಲ್ಲಿದ್ದ ಇತರೆ ಸಿನಿಮಾಗಳು. ಗಿರೀಶ್ ಕಾಸರವಳ್ಳಿ ನೇತೃತ್ವದಲ್ಲಿ 16 ಸದಸ್ಯರನ್ನೊಳಗೊಂಡ ಆಯ್ಕೆ ಸಮಿತಿಯ ಎದುರು ಈ ಎಲ್ಲಾ ಸಿನಿಮಾಗಳು ಪ್ರದರ್ಶನಗೊಂಡಿದ್ದವು.