ಮಲಯಾಳಂನಲ್ಲಿ ತಯಾರಾದ ‘ದೃಶ್ಯಂ’, ‘ದೃಶ್ಯಂ 2’ ಸರಣಿ ಸಿನಿಮಾಗಳು ಭಾರತದ ಇತರೆ ಭಾಷೆಗಳಿಗೆ ರೀಮೇಕಾಗಿ ಯಶಸ್ವಿಯಾಗಿದ್ದವು. ಇದೀಗ ಈ ಚಿತ್ರವನ್ನು ಕೊರಿಯಾ, ಇಂಗ್ಲಿಷ್‌ ಸೇರಿದಂತೆ ಇತರೆ ಹತ್ತು ಭಾಷೆಗಳಲ್ಲಿ ನಿರ್ಮಿಸುವ ಸಿದ್ಧತೆ ನಡೆದಿದೆ.

2013ರಲ್ಲಿ ತೆರೆಕಂಡಿದ್ದ ‘ದೃಶ್ಯಂ’ ಮಲಯಾಳಂ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಸಿನಿಮಾದಲ್ಲಿ ಮೋಹನ್ ಲಾಲ್ ಮತ್ತು ಮೀನಾ ಮುಖ್ಯ ಭೂಮಿಕೆಯಲ್ಲಿದ್ದು, ಅನ್ಸಿಬಾ ಹಾಸನ್, ರೋಷನ್‌ ಬಶೀರ್‌, ಎಸ್ತರ್‌ ಅನಿಲ್‌, ಆಶಾ ಶರತ್‌ ಇತರ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. 2021ರಲ್ಲಿ ‘ದೃಶ್ಯಂ 2’ ಬಂದಿತ್ತು. ಈ ಯಶಸ್ವೀ ಸರಣಿ ಸಿನಿಮಾಗಳು ಮುಂದೆ ಕನ್ನಡ, ತೆಲುಗು, ತಮಿಳು, ಹಿಂದಿ ಮಾತ್ರವಲ್ಲದೆ ಸಿಂಹಳ, ಚೈನೀಸ್‌ ಬಾಷೆಗಳಿಗೂ ರೀಮೇಕಾಗಿದ್ದವು. ಎಲ್ಲಾ ಭಾಷೆಗಳಲ್ಲೂ ಪ್ರೇಕ್ಷಕರು ಸಿನಿಮಾವನ್ನು ಇಷ್ಟಪಟ್ಟು ನೋಡಿದ್ದರು. ಇದೀಗ ಸರಣಿ ಸಿನಿಮಾಗಳು ಕೊರಿಯಾ ಮತ್ತು ಇಂಗ್ಲಿಷ್‌ ಭಾಷೆಗಳಲ್ಲೂ ಬರಲಿವೆ. ಈ ಬಗ್ಗೆ ಮಾತನಾಡಿರುವ Panorama Studiosನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಮಂಗತ್ ಪಾಠಕ್, ‘ದೃಶ್ಯಂ ಕಥಾಹಂದರ, ನಿರೂಪಣೆ ಆಕರ್ಷಕವಾಗಿದೆ. ಈ ಕಥೆಯನ್ನು ವಿಶ್ವದಾದ್ಯಂತ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ನಾವು ಕಾತುರರಾಗಿದ್ದೇವೆ. ಹಾಲಿವುಡ್‌ಗಾಗಿ ಇಂಗ್ಲಿಷ್‌ನಲ್ಲಿ ಈ ಕಥೆಯನ್ನು ರಚಿಸಲು Gulfstream Pictures ಮತ್ತು JOAT Filmsನೊಂದಿಗೆ ಸಹಕರಿಸಲು ನಮಗೆ ಸಂತೋಷವಾಗಿದೆ. ಕೊರಿಯಾ ಮತ್ತು ಹಾಲಿವುಡ್ ನಂತರ, ಮುಂದಿನ ಐದು ವರ್ಷಗಳಲ್ಲಿ 10 ದೇಶಗಳಲ್ಲಿ ‘ದೃಶ್ಯಂ’ ಚಿತ್ರವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ’ ಎಂದಿದ್ದಾರೆ.

ನಿಶಿಕಾಂತ್ ಕಾಮತ್ ನಿರ್ದೇಶಿಸಿದ್ದ ಹಿಂದಿ ರೀಮೇಕ್‌ ‘ದೃಶಂ’ 2015ರಲ್ಲಿ ತೆರೆಕಂಡು ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಚಿತ್ರದಲ್ಲಿ ಅಜಯ್ ದೇವಗನ್, ತಬು, ಶ್ರಿಯಾ ಶರಣ್‌, ಇಶಿತಾ ದತ್ತಾ, ಮೃಣಾಲ್ ಜಾಧವ್, ರಜತ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಎರಡನೇ ಭಾಗವು 2022ರಲ್ಲಿ ತೆರೆಕಂಡಿತ್ತು. ಚಿತ್ರವನ್ನು ಅಭಿಷೇಕ್‌ ಪಾಠಕ್‌ ನಿರ್ದೇಶಿಸಿದ್ದು, ಜೀತು ಜೋಸೆಫ್‌ ಚಿತ್ರಕಥೆಯಿತ್ತು. 2022ರಲ್ಲಿ ಈ ಚಲನಚಿತ್ರವು ಚೀನಾದಲ್ಲಿ ಬಿಡುಗಡೆಯಾಗಿ ವಿಶ್ವದಾದ್ಯಂತ ಒಟ್ಟು 147 ಕೋಟಿ ರೂಗಳನ್ನು ಗಳಿಸಿತ್ತು. ಈ ಕುರಿತು ‘ದೃಶ್ಯಂ 2’ ಹಿಂದಿ ಅವತರಣಿಕೆ ನಿರ್ದೇಶಕ ಅಭಿಷೇಕ್ ಪಾಠಕ್, ‘ನಮ್ಮ ಭಾರತೀಯ ಪ್ರೇಕ್ಷಕರಿಂದ ನಾವು ಅಪಾರ ಪ್ರೀತಿಯನ್ನು ಸ್ವೀಕರಿಸಿದ್ದೇವೆ. ಚಿತ್ರದ ಶಕ್ತಿಯು ಅದರ ಕಥೆಯಲ್ಲಿದೆ ಮತ್ತು ಅದನ್ನು ಜಾಗತಿಕವಾಗಿ ಪ್ರೇಕ್ಷಕರು ಆನಂದಿಸಬೇಕೆಂದು ನಾವು ಬಯಸುತ್ತೇವೆ’ ಎಂದಿದ್ದಾರೆ.

LEAVE A REPLY

Connect with

Please enter your comment!
Please enter your name here