ಮಣಿರತ್ನಂ ನಿರ್ದೇಶನದಲ್ಲಿ ಕಮಲ ಹಾಸನ್‌ ನಟಿಸಲಿರುವ ‘KH234’ ನೂತನ ತಮಿಳು ಸಿನಿಮಾ ಸೆಟ್ಟೇರಿದೆ. ನೂತನ ಸಿನಿಮಾದ ಪ್ರೋಮೊ ಬಿಡುಗಡೆಯಾಗಿದ್ದು, ಅದರಲ್ಲಿ ಚಿತ್ರಕ್ಕೆ ಯಾರೆಲ್ಲಾ ತಂತ್ರಜ್ಞರು ಕೆಲಸ ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ. ಎ ಆರ್‌ ರೆಹಮಾನ್‌ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

ಕಮಲ ಹಾಸನ್ ಮುಖ್ಯಭೂಮಿಕೆಯಲ್ಲಿ ನಟಿಸಲಿರುವ ಮಣಿರತ್ನಂ ಚಿತ್ರಕಥೆ ಬರೆದು ನಿರ್ದೆಶಿಸುತ್ತಿರುವ ‘KH234’ ಚಿತ್ರದ ಪ್ರೋಮೋವನ್ನು ಚಿತ್ರತಂಡ ತನ್ನ X ಖಾತೆಯಲ್ಲಿ ಹಂಚಿಕೊಂಡಿದೆ. ಮಣಿರತ್ನಂ ನಿರ್ದೇಶನದ ಕಮಲ್‌ ಅವರ ‘ನಾಯಕನ್‌’ ಚಿತ್ರವು ಅಕ್ಟೋಬರ್‌ 21, 1987ರಲ್ಲಿ ತೆರೆಕಂಡು ಖ್ಯಾತಿ ಗಳಿಸಿತ್ತು. ಚಿತ್ರದ ಪ್ರೋಮೋ ಕ್ಲಿಪ್‌ನಲ್ಲಿ ಚಿತ್ರಕ್ಕೆ ಯಾರೆಲ್ಲಾ ತಂತ್ರಜ್ಞರು ಕೆಲಸ ಮಾಡಲಿದ್ದಾರೆ ಎನ್ನುವ ಮಾಹಿತಿ ಇದೆ. ಎ ಆರ್ ರೆಹಮಾನ್ ಸಂಗೀತ ಸಂಯೋಜನೆ, ಹಿರಿಯ ಛಾಯಾಗ್ರಾಹಕ ರವಿ ಕೆ ಚಂದ್ರನ್ ಛಾಯಾಗ್ರಹಣ, ‘ಲಿಯೋ’ ಮತ್ತು ‘ಕೈಥಿ’ ಚಿತ್ರಗಳ ಸ್ಟಂಟ್ ಕೊರಿಯೋಗ್ರಾಫರ್ಸ್‌ ಅನ್ಬರಿವ್ ನೃತ್ಯ ಸಂಯೋಜನೆ, ಶ್ರೀಕರ್ ಪ್ರಸಾದ್ ಸಂಕಲನ ಚಿತ್ರಕ್ಕಿರಲಿದೆ. ಅಮೃತಾ ರಾಮ್ ಅವರು ಕಮಲ್ ಹಾಸನ್ ಸ್ಟೈಲಿಂಗ್ ಮಾಡಲಿದ್ದು, ಅಂಬಾಡಿ ರಂಜಿತ್ ಇತರ ಪಾತ್ರವರ್ಗದ ಸದಸ್ಯರ ಸ್ಟೈಲಿಂಗ್ ನಿಭಾಯಿಸಲಿದ್ದಾರೆ. ಏಕಾ ಲಖಾನಿ ವೇಷಭೂಷಣ ನಿರ್ವಹಿಸಲಿದ್ದು, ಚಿತ್ರದ ಪೋಸ್ಟರ್‌ಗಳನ್ನು ಗೋಪಿ ಪ್ರಸನ್ನ ವಿನ್ಯಾಸಗೊಳಿಸಲಿದ್ದಾರೆ.

ಪ್ರೋಮೋದಲ್ಲಿ ನಟಿ ಖುಶ್ಬೂ ಮತ್ತು ಚಿತ್ರನಿರ್ದೇಶಕ ಸುಂದರ್ ಸಿ ದಂಪತಿ ಪುತ್ರಿ ಆನಂದಿತಾ ಸುಂದರ್ ಕೂಡ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಅಧಿಕೃತ ಪಾತ್ರವರ್ಗವನ್ನು ನವೆಂಬರ್‌ 7ರಂದು ಘೋಷಿಸಲಾಗುವುದು. ಈ ಚಿತ್ರಕ್ಕಾಗಿ ನಟರಾದ ಜಯಂ ರವಿ, ದುಲ್ಕರ್ ಸಲ್ಮಾನ್, ತ್ರಿಷಾ ಮತ್ತು ನಯನತಾರಾ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದೆ. ಚಿತ್ರವನ್ನು Raaj Kamal Films International, Madras Talkies ಮತ್ತು Red Giant Movies ಬ್ಯಾನರ್‌ ಅಡಿಯಲ್ಲಿ ಕಮಲ್ ಹಾಸನ್, ಮಣಿರತ್ನಂ, ಆರ್ ಮಹೇಂದ್ರನ್ ಮತ್ತು ಶಿವ ಅನಂತ್ ಅವರು ನಿರ್ಮಿಸುತ್ತಿದ್ದಾರೆ. ಕಮಲ್‌ ಹಾಸನ್‌ ನಟನೆಯ ‘ಇಂಡಿಯನ್ 2’ ಚಿತ್ರೀಕರಣ ಮುಗಿದಿದ್ದು, ಅವರು ಇತರ ಮೂರು ದೊಡ್ಡ ಯೋಜನೆಯ ಭಾಗವಾಗಿದ್ದಾರೆ. ನಾಗ್ ಅಶ್ವಿನ್ ಅವರ ‘ಕಲ್ಕಿ 2898AD’, ಮತ್ತು H ವಿನೋತ್ ಅವರ ‘KH233’ ಚಿತ್ರಗಳಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

LEAVE A REPLY

Connect with

Please enter your comment!
Please enter your name here