ಆಂಗ್ಲೇತರ ಮಾಧ್ಯಮದಿಂದ ಬಂದ ವಿದ್ಯಾರ್ಥಿಗಳು, ತಮ್ಮ ಜಗತ್ತನ್ನು ವಿಸ್ತರಿಸಿಕೊಳ್ಳಲು ಹೊರಟಾಗ ಎದುರಿಸುವ ಸಮಸ್ಯೆಗಳು ಹಲವಾರು. ತಮ್ಮ ಛಲ, ಪರಿಶ್ರಮದಿಂದಲೇ ಯಶಸ್ಸನ್ನು ತಮ್ಮದಾಗಿಸಿಕೊಳ್ಳುವರೂ ಸಾಕಷ್ಟಿದ್ದಾರೆ. ಅವರ ಯಶಸ್ಸಿನ ತೂಕಕ್ಕೆ ಬೇರೆಯದೇ ಮೌಲ್ಯವಿದೆ. ಹಾಗಂತ ’12th ಫೇಲ್’ ಈ ಹಾದಿಯಲ್ಲಿ ನಡೆಯುವವರಿಗೆ ಯಶಸ್ಸು ಗಳಿಸಲು ಸ್ಪೂರ್ತಿ ತುಂಬುವ ಬಗ್ಗೆ ಮಾತ್ರ ಗಮನ ಹರಿಸಿಲ್ಲ, ಚಿತ್ರ ಮೊದಲಿನಿಂದಲೂ ಪ್ರಾಮಾಣಿಕತೆಯ ಬಗ್ಗೆಯೂ ಹೇಳುತ್ತಾ ಹೋಗುತ್ತದೆ.

’12th ಫೇಲ್’ ನೋಡಿ ಹೊರಬಂದ ತಕ್ಷಣ ನಾನು ಮಾಡಿದ ಮೊದಲ ಕೆಲಸ ವಿಕ್ರಾಂತ್ ಮಾಸ್ಸಿ ವಯಸ್ಸೇನು ಎಂದು ಹುಡುಕಿದ್ದು. ನಲವತ್ತು ಸಮೀಪಿಸುತ್ತಿರುವ ಹೀರೋಗಳಿಂದ ಕಾಲೇಜು ಯುವಕನ ಪಾತ್ರ ಮಾಡಿಸುವುದು ಹೊಸ ಸಂಗತಿಯೇನಲ್ಲ. ಆದರೆ, ಆ ಹೀರೋಗಳನ್ನು ಅಂತಹ ಪಾತ್ರಗಳಲ್ಲಿ ಅರಗಿಸಿಕೊಳ್ಳಲು ಬಹುತೇಕ ಪ್ರೇಕ್ಷಕರಿಗೆ ಸಾಧ್ಯವಾಗುವುದಿಲ್ಲ ಎನ್ನುವುದೂ ಅಷ್ಟೇ ಸತ್ಯ. ಹೀಗಾಗಿ, ಎಷ್ಟೋ ವರ್ಷಗಳಿಂದ ತೆರೆಯ ಮೇಲೆ
ಕಾಣಿಸಿಕೊಳ್ಳುತ್ತಿರುವ ವಿಕ್ರಾಂತ್ ಮಾಸ್ಸಿ, ನನ್ನ ಲೆಕ್ಕಾಚಾರದಂತೆ ಕನಿಷ್ಟ 30 ವರ್ಷ ದಾಟಿರಲೇಬೇಕಿತ್ತು ಮತ್ತು ನನ್ನ ಅಂದಾಜು ಸರಿಯೂ ಆಗಿತ್ತು. ವಿಕ್ರಾಂತ್‌ ಗೆ ಈಗ 36 ವರ್ಷ. ಹಾಗಿದ್ದೂ, ಈ ಸಿನಿಮಾದಲ್ಲಿ ಪಕ್ಕಾ 12ನೇ ತರಗತಿ ಹುಡುಗನಂತೆಯೇ ಕಾಣುತ್ತಾರೆ! ವಿಕ್ರಾಂತ್ ದೇಹಾಕೃತಿ ಈ ವಿಷಯದಲ್ಲಿ ನೆರವಾಗಿರಬಹುದಾದರೂ, ಅವರ ಬಾಡಿ ಲ್ಯಾಂಗ್ವೇಜ್, ಮುಖ ಭಾವ, ಆ ಸಣ್ಣ ವಯಸ್ಸಿಗೆ ಇರಬಹುದಾದ ಮುಗ್ಧತೆ, ಎಳಸುತನ ಇವೆಲ್ಲವನ್ನೂ ಸಾಧಿಸಲು ಅಸಾಧ್ಯ ಪ್ರತಿಭೆ ಇರುವ ನಟನಿಂದ ಮಾತ್ರ ಸಾಧ್ಯ. ’12th ಫೇಲ್’ ಆ ಮಟ್ಟಿನಲ್ಲಿ ಹೃದಯವನ್ನು ತಟ್ಟುವುದಕ್ಕೆ ವಿಕ್ರಾಂತ ಮಾಸ್ಸಿಯ ಈ ಪ್ರತಿಭೆಯೂ ಒಂದು ಪ್ರಮುಖ ಕಾರಣ.

ಐಪಿಎಸ್ ಆಫೀಸರ್ ಮನೋಜ್ ಕುಮಾರ್ ಶರ್ಮಾ ಅವರ ಕುರಿತ ಅನುರಾಗ್ ಪಾಠಕ್ ಬರೆದಿರುವ ’12th ಫೇಲ್’ ಕೃತಿಯನ್ನು ಆಧರಿಸಿ ಅದೇ ಹೆಸರಿನಲ್ಲಿ ನಿರ್ಮಿಸಲಾಗಿರುವ ಸಿನಿಮಾ ಇದು. ಚಿತ್ರೀಕರಣದಲ್ಲಿ ನಿಜ ವ್ಯಕ್ತಿಗಳು ಮತ್ತು ನೈಜ ಸ್ಥಳಗಳನ್ನು ಬಳಸಿಕೊಳ್ಳಲಾಗಿದೆ ಎಂಬುದು ಇದರ ಮತ್ತೊಂದು ಹೆಗ್ಗಳಿಕೆ. ಡಕಾಯಿತರಿಂದಾಗಿಯೇ (ಕು)ಖ್ಯಾತಿ ಗಳಿಸಿರುವ ಛಂಬಲ್ ಕಣಿವೆಯೊಂದರ ಹಳ್ಳಿಯ, ಬಡ ಹುಡುಗ ಮನೋಜ್ ಕುಮಾರ್ ದ್ಯೇಯ ಒಂದೇ. ಹೇಗಾದರೋ 12ನೇ ತರಗತಿ ಮುಗಿಸಿ, ಸರ್ಕಾರದ ಯಾವುದಾದರೂ ಇಲಾಖೆಯಲ್ಲಿ ಜವಾನನ ನೌಕರಿ ಪಡೆಯುವುದು. ತನ್ನ ಪ್ರಾಮಾಣಿಕತೆಯ ಕಾರಣದಿಂದಾಗಿಯೇ ಕೆಲಸ ಕಳೆದುಕೊಂಡು ಕೋರ್ಟ್ ಅಲೆಯುತ್ತಿರುವ ಅಪ್ಪನ ಕಡೆಯಿಂದ ಆರ್ಥಿಕ ನೆರವೂ ಇಲ್ಲದ, ಕುಟುಂಬವನ್ನು ಸಾಕುವ ಹೊಣೆ ಇರುವ ಮನೋಜ್‌ ಕಾಣಬಹುದಾದ ದೊಡ್ಡ ಕನಸು ಇಷ್ಟೇ.

ಮತ್ತು ಆತನ ಅರಿವಿನ ವ್ಯಾಪ್ತಿಯಲ್ಲಿರುವ ಜಗತ್ತೂ ಅಷ್ಟೇ. ಆದರೆ, ಯುಪಿಎಸ್‌ಸಿ ಎಂಬ ಪದದ ಪರಿಚಯವೇ ಇಲ್ಲದ ಮನೋಜ್ ಕೊನೆಗೆ ಐಪಿಎಸ್ ಅಧಿಕಾರಿಯಾಗುವ ಕನಸು ಕಾಣುವುದು, ಎಲ್ಲಾ ದೊಡ್ಡ ಸಂಕಷ್ಟಗಳನ್ನು ದಾಟಿ ಅದನ್ನು ಸಾಧಿಸುವುದು ಒಂದು ಪಕ್ಕಾ ಅಂಡರ್‌ಡಾಗ್ ಸ್ಟೋರಿ. ಇಂತಹ ಸ್ಫೂರ್ತಿದಾಯಕ ಕತೆಗಳು ನಮಗೆ ಹೊಸದೇನಲ್ಲ. ಆದರೆ, ಅದನ್ನು ತೆರೆಯ ಮೇಲೆ ನಿರ್ದೇಶಕರು ತಂದಿರುವ ರೀತಿ, ಅದರಲ್ಲಿರುವ ಪ್ರಾಮಾಣಿಕತೆ,
ಅತಿಯಲ್ಲದ ಡ್ರಾಮಾ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಫೇರೀಟೇಲ್ ಎನಿಸದೆ, ನೈಜತೆಗೆ ಹತ್ತಿರವೆನಿಸುವ ನಿರೂಪಣೆ ಈ ಸಿನಿಮಾವನ್ನು ವಿಶೇಷವಾಗಿಸುತ್ತದೆ.

ಹಾಗೆ ನೋಡಿದರೆ, ವಿನೋದ್ ಛೋಪ್ರಾ ಫಿಲ್ಮ್ ಬ್ಯಾನರ್‌ನಲ್ಲಿ ನಿರ್ಮಾಣವಾಗುವ ಚಿತ್ರಗಳೆಂದರೆ ನೆನಪಾಗುವುದು ದೊಡ್ಡ ಬಜೆಟ್‌ನ, ತೆರೆಯನ್ನು ಸುಂದರವಾಗಿ ಅಲಂಕರಿಸುವ, ಚಂದದ ಹೀರೋ, ಹೀರೋಯಿನ್‌ಗಳ ಸ್ವಪ್ನ ಲೋಕ. ಅಲ್ಲಿ ಭಯೋತ್ಪಾನೆಗೂ ಒಂದು ಅದ್ಧೂರಿತನವಿರುತ್ತದೆ! ಪ್ರೀತಿ ಪ್ರೇಮಕ್ಕೆ ದೃಶ್ಯ ವೈಭವದಂತಿರುತ್ತದೆ. ಆದರೆ, ಇಲ್ಲಿ ಅಂತಹ ಎಲ್ಲಾ ಸಿನಿಮ್ಯಾಟಿಕ್ ಮೌಲ್ಯವರ್ಧನೆಯನ್ನು, ಕತೆಯನ್ನು ಚಂದವಾಗಿಸುವ, ಜೀವನಕ್ಕಿಂತ ದೊಡ್ಡದಾಗಿಸುವ ಎಲ್ಲಾ ತಾಂತ್ರಿಕ ಸಂಗತಿಗಳನ್ನು ಬದಿಗಿಟ್ಟು ವಿಧು ವಿನೋದ್ ಛೋಪ್ರಾ ನೆಲ ಮಟ್ಟಕ್ಕೆ ಇಳಿದ್ದಾರೆ. ಉದಾಹರಣೆಗೆ, ಅವರದೇ ಬ್ಯಾನರ್‌ನ ‘ತ್ರೀ ಈಡಿಯಟ್ಸ್‌’ (ವಿಧು ನಿರ್ದೇಶನದ ಚಿತ್ರವಲ್ಲವಾದರೂ) ಚಿತ್ರದೊಂದಿಗೆ ’12th ಫೇಲ್’ ಸಾಕಷ್ಟು ಸಾಮಾನ್ಯ ಅಂಶಗಳನ್ನು ಹಂಚಿಕೊಂಡಿದೆ. ಆದರೂ ಎರಡೂ ಚಿತ್ರಗಳ ಟ್ರೀಟ್‌ಮೆಂಟ್ ಪೂರ್ತಿ ಭಿನ್ನವಾಗಿದೆ.

ಈ ಎರಡೂ ಚಿತ್ರಗಳಲ್ಲಿ ನಾಯಕನ ಸ್ನೇಹಿತ ಚಿತ್ರದ ನಿರೂಪಕ. ‘ತ್ರೀ ಈಡಿಯಟ್ಸ್‌’ನಲ್ಲಿ ಕಂಡು ಬರುವ ಶರ್ಮನ್ ಜೋಶಿ ಮನೆಯ ಬಡತನದಲ್ಲೊಂದು ಹಾಸ್ಯವಿತ್ತು. 12th ಫೇಲ್‌ನಲ್ಲಿರುವ ಅದೇ ರೀತಿಯ ಬಡತನಕ್ಕೊಂದು ಗಂಭೀರತೆಯಿದೆ. ಹಾಗಂತ ಅದು ಹೃದಯ ವಿದ್ರಾವಕವಾಗಿ, ಅಸಾಮಾನ್ಯ ದುರಂತಗಳಿಂದ ಕೂಡಿಲ್ಲ. ನಾವು ನೋಡಿರುವ, ಅನುಭವಿಸಿರುವ ನೈಜ ಬಡತನವಿದೆ. ‘ತ್ರೀ ಈಡಿಯಟ್ಸ್‌’ ನಾಯಕನಿಗೆ ಯಶಸ್ಸು ಗಳಿಸುವುದು, ತುಂಬಾ ಕಠಿಣದ ಹಾದಿಯಂತೆ ಎನಿಸುವುದಿಲ್ಲ. ಅವನಲ್ಲೊಂದು ಮಾನವರನ್ನು ಮೀರಿದ ಯಾವುದೋ ಮ್ಯಾಜಿಕಲ್ ಶಕ್ತಿ ಇದ್ದಂತೆ ಕಾಣುತ್ತದೆ. ಆದರೆ, ’12th ಫೇಲ್‌’ನ ಮನೋಜ್ ಅಪ್ಪಟ ಮನುಷ್ಯ. ಆಸೆ, ಕನಸು, ಬಯಕೆ, ಹಸಿವು, ಸೋಲು, ಶ್ರಮ, ನಿರಾಶೆ, ಹತಾಶೆ ದುಡಿಮೆಯಿಂದ ಸೃಷ್ಟಿಯಾದ ಅಪ್ಪಟ ಮನುಷ್ಯ. ಎರಡೂ ಚಿತ್ರದ ಕೊನೆಯಲ್ಲಿ ಬರುವ ಸಂದರ್ಶನದ ದೃಶ್ಯದಲ್ಲಿ ಮಾತ್ರ ಸಾಕಷ್ಟು ಸಾಮ್ಯತೆ ಇದೆ.

ಇಂತಹ ಮನೋಜ್ ಪಾತ್ರವನ್ನು ತೆರೆಯ ಮೇಲೆ ಜೀವಂತವಾಗಿಸಿರುವುದು ಮೊದಲೇ ಹೇಳಿದಂತೆ ವಿಕ್ರಾಂತ್ ಮಾಸ್ಸಿ. ತಮ್ಮನ್ನು ಸಂಪೂರ್ಣವಾಗಿ ಆ ಪಾತ್ರಕ್ಕೆ ಸಮರ್ಪಿಸಿಕೊಂಡಿರುವ ವಿಕ್ರಾಂತ್ ಅವರ ಮುಖ ಮತ್ತು ಕಣ್ಣು ನೂರಾರು ಭಾವಗಳನ್ನು ಲೀಲಾಜಾಲವಾಗಿ ಮತ್ತು ತೀರಾ ಸಹಜವಾಗಿ ಅಭಿವ್ಯಕ್ತಿಸುತ್ತದೆ. ಅವರಿಗೆ ಸಮರ್ಥವಾದ ಜೊತೆ ನೀಡಿದ್ದಾರೆ ನಾಯಕಿ ಮೇಧಾ ಶಂಕರ್. ವಿಧು, ಹಿನ್ನೆಲೆ ಸಂಗೀತ ಅಥವಾ ಛಾಯಾಗ್ರಹಣವನ್ನು ದೃಶ್ಯವನ್ನು ಸುಂದರವಾಗಿಸುವುದಕ್ಕಾಗಲೀ ಅಥವಾ ಭಾವಗಳನ್ನು ಅತಿಯಾಗಿ ಉದ್ದೀಪಿಸುವುದಕ್ಕಾಗಲೀ ಬಳಸಿಲ್ಲ. ಕತೆ, ಅಭಿನಯ, ಮತ್ತು ದೃಶ್ಯ ಸಂಯೋಜನೆಯೇ ಚಿತ್ರಕ್ಕೆ ಬೇಕಾದ ಎಲ್ಲಾ ಭಾವಾನಾತ್ಮಕತೆಯನ್ನು ತುಂಬುತ್ತದೆ. ಛಾಯಾಗ್ರಾಹಕ ರಂಗರಾಜನ್ ರಾಮಭದ್ರನ್ ಕ್ಯಾಮರಾ ಚಲಿಸುತ್ತಲೇ ಇರುತ್ತದೆ. ಮನೋಜ್ ಕಿರಿದಾದ, ಕತ್ತಲ ಕೂಪದಂತಿರುವ, ಹಿಟ್ಟಿನ ಧೂಳಿನಿಂದ ತುಂಬಿರುವ ಗಿರಣಿಯಲ್ಲೇ, ಹಿಟ್ಟಿನಿಂದ ಆವೃತ್ತನಾಗಿ 24 ಗಂಟೆಯನ್ನೂ ಕಳೆಯುವಾಗಿನ ಇಕ್ಕಟ್ಟನ್ನು, ದೊಡ್ಡ ಗುಂಪಿನಲ್ಲಿ ದಿಕ್ಕುಗೆಟ್ಟು ನಿಂತಾಗಿನ ಏಕಾಂಗಿತನವನ್ನು, ಮಸ್ಸೂರಿಯ ಚಂದದ ಪ್ರಕೃತಿಯ ಮಧ್ಯೆ ಪ್ರೇಮ ಅರಸಿ ಬಂದು ಕಳೆದು ಹೋದವನ ನಿರಾಶೆಯನ್ನು ಸಮರ್ಥವಾಗಿ ತೆರೆಗೆ ಅನುವಾದಿಸುತ್ತದೆ.

ಶಂತನು ಮೊಯಿತ್ರಾ ಸಂಗೀತ ತೀರಾ ಮೆಲುವಾಗಿ, ಭಾರತೀಯ ವಾದ್ಯಗಳನ್ನು ಬಳಸಿಕೊಂಡು, ಹಳೆಯ ಜಗತ್ತಿನ ಮುದ ನೀಡುತ್ತದೆ. ವಿಧು ವಿನೋದ್ ಛೋಪ್ರಾ ನಿರ್ಮಿಸಿದ ಮತ್ತು ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡಿದ ಹಲವಾರು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಲೇ ಬಂದಿದ್ದರೂ, ಅವರ ನಿರ್ದೇಶನದ ಸಿನಿಮಾವೊಂದು ಯಶಸ್ಸು ಕಂಡು ದಶಕಗಳೇ ಸಂದಿದೆ. ಈಗ ಬಿಡುಗಡೆಯಾಗಿರುವ 12th ಫೇಲ್ ಚಿತ್ರ ವಿನೋದ್ ಛೋಪ್ರಾ ಅವರ ನಿರ್ದೇಶನದ ಜಾದುವನ್ನು ಮತ್ತೆ ನೆನಪಿಸುವಂತಿದೆ.

ಆಂಗ್ಲೇತರ ಮಾಧ್ಯಮದಿಂದ ಬಂದ ವಿದ್ಯಾರ್ಥಿಗಳು, ತಮ್ಮ ಜಗತ್ತನ್ನು ವಿಸ್ತರಿಸಿಕೊಳ್ಳಲು ಹೊರಟಾಗ ಎದುರಿಸುವ ಸಮಸ್ಯೆಗಳು ಹಲವಾರು. ಅವರು ಬಹುತೇಕ ಆರ್ಥಿಕವಾಗಿ ಹಿಂದುಳಿದ ವರ್ಗದವರೂ ಆಗಿರುತ್ತಾರಾದ್ದರಿಂದ ಕಷ್ಟಗಳು ದುಪ್ಪಟ್ಟಾಗುತ್ತವೆ. ಅಷ್ಟಿದ್ದೂ ತಮ್ಮ ಛಲ, ಪರಿಶ್ರಮದಿಂದಲೇ, ಮರು ಯತ್ನದಿಂದ ಯಶಸ್ಸನ್ನು ತಮ್ಮದಾಗಿಸಿಕೊಳ್ಳುವರೂ ಸಾಕಷ್ಟಿದ್ದಾರೆ. ಅವರ ಯಶಸ್ಸಿನ ತೂಕಕ್ಕೆ ಬೇರೆಯದೇ ಮೌಲ್ಯವಿದೆ. ಹಾಗಂತ ’12th ಫೇಲ್’ ಈ ಹಾದಿಯಲ್ಲಿ ನಡೆಯುವವರಿಗೆ ಯಶಸ್ಸು ಗಳಿಸಲು ಸ್ಪೂರ್ತಿ ತುಂಬುವ ಬಗ್ಗೆ ಮಾತ್ರ ಗಮನ ಹರಿಸಿಲ್ಲ, ಚಿತ್ರ ಮೊದಲಿನಿಂದಲೂ ಪ್ರಾಮಾಣಿಕತೆಯ ಬಗ್ಗೆಯೂ ಹೇಳುತ್ತಾ ಹೋಗುತ್ತದೆ. ಹೀಗಾಗಿ, ಚಿತ್ರದ ಕೇಂದ್ರದಲ್ಲಿರುವುದು ಪ್ರಾಮಾಣಿಕತೆಯ ಹಾದಿಯಲ್ಲಿ ನಡೆದು ನೊಂದವರಿಗೆ ಸ್ಪೂರ್ತಿ. ಚಿತ್ರವು ಕೊನೆಯಲ್ಲಿ ‘ಬೆರಳೆಣಿಕೆಯ’ ಪ್ರಾಮಾಣಿಕ ಅಧಿಕಾರಿಗಳಿಗೆ ಕೃತಜ್ಞತೆ ಹೇಳುವಾಗ ಮಾತ್ರ, ವಾಸ್ತವ ಮನಸ್ಸಿಗೆ ರಾಚುತ್ತದೆ.

LEAVE A REPLY

Connect with

Please enter your comment!
Please enter your name here