ಮಂಸೋರೆ ನಿರ್ದೇಶನದ ಬಹುನಿರೀಕ್ಷಿತ ಹಾಗೂ ನೈಜ ಘಟನೆ ಆಧಾರಿತ ಸಿನಿಮಾ ‘19.20.21’ ನಾಳೆ ಬಿಡುಗಡೆಯಾಗುತ್ತಿದೆ. ಕರಾವಳಿ ಭಾಗದಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾವೆಂದು ಹೇಳಿಕೊಂಡು ಬಂದಿದ್ದ ಕಥೆ ಕೊನೆಗೂ ರಿವೀಲ್ ಆಗಿದೆ.

‘19.20.21’ ನೈಜ ಘಟನೆ ಆಧರಿಸಿದ ಸಿನಿಮಾ ಎಂದು ನಿರ್ದೇಶಕ ಮಂಸೋರೆ ಹೇಳಿದ್ದರು. ಈ ಬಗ್ಗೆ ಸಿನಿಮಾಸಕ್ತರಲ್ಲಿ ಅಪಾರ ಕುತೂಹಲವಿತ್ತು. ಟ್ರೈಲರ್‌ ಬಿಡುಗಡೆಯ ನಂತರ ಈ ಕುತೂಹಲ ಇನ್ನಷ್ಟು ಹೆಚ್ಚಾಗಿತ್ತು. ಇದೀಗ ಸಿನಿಮಾಗೆ ಪ್ರೇರಣೆಯಾದ ನಿಜ ಬದುಕಿನ ಕತೆ ಯಾವುದು ಎನ್ನುವುದು ಬಹಿರಂಗವಾಗಿದೆ. 2012 ಮಾರ್ಚ್ 3ರಂದು ನಕ್ಸಲ್ ನಿಗ್ರಹ ಪಡೆಯಿಂದ ಬಂಧಿತರಾದ ವಿಠಲ್ ಮಲೆಕುಡಿಯ ಹಾಗೂ ಆತನ ತಂದೆ ಲಿಂಗಣ್ಣ ಮಲೆಕುಡಿಯ ಕಾನೂನು ಹೋರಾಟದ ಕಥೆ ಈ ಸಿನಿಮಾ.

ನಕ್ಸಲರೊಂದಿಗೆ ಸಂಪರ್ಕದಲ್ಲಿದ್ದಾರೆಂದು ತಂದೆ – ಮಗನನ್ನು ಬಂಧಿಸಲಾಗಿತ್ತು. ಆ ಸಮಯದಲ್ಲಿ ವಿಠಲ್ ಮಂಗಳೂರಿನ ವಿವಿಯಲ್ಲಿ ಪತ್ರಿಕೋಧ್ಯಮ ಓದುತ್ತಿದ್ದರು. ವಿಠಲ್ ಪರೀಕ್ಷೆ ಬರೆಯುವಾಗ ಪೊಲೀಸರು ಕೈಯಲ್ಲಿದ್ದ ಕೋಳ ಕೂಡ ತೆಗೆದಿರಲಿಲ್ಲ. ಈ ಘಟನೆಗೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ತಮ್ಮ ಮೇಲಿನ ಆರೋಪದ ವಿರುದ್ಧ ಸತತ ಹತ್ತು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದ ವಿಠಲ್ ಅವರಿಗೆ 2021ರಲ್ಲಿ ಕೋರ್ಟ್ ನಿರ್ದೋಷಿ ಎಂದು ತೀರ್ಪು ನೀಡಿತ್ತು. ಆಡಳಿತ ವ್ಯವಸ್ಥೆಯ ಅವ್ಯವಸ್ಥೆ ಹಾಗೂ ವಿಠಲ್ ಅವರ ಕಾನೂನು ಹೋರಾಟದ ರೋಚಕ ಕಥೆಯನ್ನು ಸೋಶಿಯಲ್ ಥ್ರಿಲ್ಲರ್ ಕಹಾನಿಯೊಂದಿಗೆ ತೆರೆ ಮೇಲೆ ತರುತ್ತಿದ್ದಾರೆ ಮಂಸೋರೆ. ಚಿತ್ರದಲ್ಲಿ ವಿಠಲ್ ಮಲೆಕುಡಿಯ ಪಾತ್ರದಲ್ಲಿ ರಂಗಭೂಮಿ ಕಲಾವಿದ ಶೃಂಗ ಬಿ.ವಿ. ನಟಿಸಿದ್ದಾರೆ.

ಉಳಿದಂತೆ ಬಾಲಾಜಿ ಮನೋಹರ್, ಸಂಪತ್, ಎಂ.ಡಿ ಪಲ್ಲವಿ, ಮಹದೇವ್ ಹಡಪದ್, ಉಗ್ರಂ ಸಂದೀಪ್ ಒಳಗೊಂಡ ಪ್ರತಿಭಾವಂತ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಶಿವು ಬಿ. ಕೆ. ಕುಮಾರ್ ಛಾಯಾಗ್ರಹಣ, ರೋಣದ ಬಕ್ಕೇಶ್ ಹಿನ್ನೆಲೆ ಸಂಗೀತ ಚಿತ್ರಕ್ಕಿದ್ದು, ಬಿಂದು ಮಾಲಿನಿ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ಸುರೇಶ್ ಆರ್ಮುಗಂ ಸಂಕಲನ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್ ಜಿ ಸಂಭಾಷಣೆ, ಮಂಸೋರೆ ಮತ್ತು ವೀರೇಂದ್ರ ಮಲ್ಲಣ್ಣ ಚಿತ್ರಕಥೆ, ಕಿರಣ್ ಕಾವೇರಪ್ಪ ಸಾಹಿತ್ಯ ಚಿತ್ರಕ್ಕಿದೆ. ದೇವರಾಜ್. ಆರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸತ್ಯ ಹೆಗ್ಡೆ ಸಹ ನಿರ್ಮಾಣವಿದೆ.

LEAVE A REPLY

Connect with

Please enter your comment!
Please enter your name here