ಅಂಬೇಡ್ಕರ್ ಕೊಟ್ಟ ಸಂವಿಧಾನದ 19.20.21 ಅನುಚ್ಛೇದಗಳು ಹೇಗೆ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಘನತೆ ಕೊಡಬಲ್ಲದು ಮತ್ತು ಯಾವ ಕಾರಣಕ್ಕೆ ಸಂವಿಧಾನ ನಮ್ಮೆಲ್ಲರಿಗೂ ಮುಖ್ಯವಾಗುತ್ತದೆ ಎನ್ನುವುದು ಚಿತ್ರದ ಆಶಯ. ಆದರೆ ಸಂವಿಧಾನ ದೇಶದ ನಾಗರೀಕರೆಲ್ಲರಿಗೂ ಕೊಟ್ಟ ಹಕ್ಕನ್ನೂ ಕೂಡ ಅಂಚಿಗೆ ತಳ್ಳಲ್ಪಟ್ಟವರು ಬೇಡಿ ಬೇಡಿ ಪಡೆಯಬೇಕಾಗಿದೆ ಎನ್ನುವುದು ಚಿತ್ರದ ಕಥೆ. ಚಿತ್ರ ಅದನ್ನು ಅಷ್ಟೇ ಗಂಭೀರವಾಗಿ, ಮನಕ್ಕೆ ನಾಟುವಂತೆ ಹೇಳುತ್ತದೆ. ಈ ಚಿತ್ರವನ್ನು ಗೆಲ್ಲಿಸಲೆಂದು ಇದನ್ನು ನೋಡಬೇಕಿಲ್ಲ, ಈ ಚಿತ್ರವನ್ನು ನೋಡಲೇಬೇಕಿರುವುದು ನಾವು ಇದನ್ನು ಮಿಸ್ ಮಾಡಿಕೊಳ್ಳಬಾರದು ಎನ್ನುವ ಕಾರಣಕ್ಕೆ.

ಒಬ್ಬ ನಿವೃತ್ತ ಪೊಲೀಸ್ ಅಧಿಕಾರಿ. ಹಳೆಯದೊಂದು ಕೇಸಿನ ತೀರ್ಪು ಆ ದಿನ ಇರುವುದರಿಂದ ಬೆಂಗಳೂರಿನಿಂದ ಮಂಗಳೂರಿಗೆ ಪಯಣಿಸುತ್ತಿದ್ದಾರೆ. ಅವರ ಜೇಬಿನಲ್ಲಿರುವ ಡೈರಿಯಲ್ಲಿ ಕೇಸಿನ ವಿವರಗಳು, ಪಕ್ಕದ ಸೀಟಿನಲ್ಲಿ ಮೊಮ್ಮಗಳು. ಸಮುದ್ರ ನೋಡುವ ಆಸೆಯಿಂದ ಅಜ್ಜನ ಜೊತೆಗೆ ಹೊರಟಿದ್ದಾಳೆ. ಅಜ್ಜ ಅವಳಿಗೆ ಕೇಸಿನ ಕಥೆ ಹೇಳುತ್ತಾರೆ, ಗಟ್ಟಿಯಾಗಿ ದಬಾಯಿಸಿ ಕೇಳದೆ ಇದ್ದರೆ ಆರೋಪಿಗಳು ನಿಜ ಹೇಳುವುದಿಲ್ಲ ಎನ್ನುವುದನ್ನು ಅವರು ಪದೇಪದೇ ಹೇಳುವಾಗ, ಆತ ಅದನ್ನು ಹೇಳುತ್ತಿರುವುದು ಮೊಮ್ಮಗಳಿಗೋ ಅಥವಾ ತನ್ನನ್ನು ತಾನು ನಂಬಿಸಲೋ ಅನ್ನಿಸುತ್ತದೆ. ದಾರಿಯಲ್ಲಿ ಒಂದೆಡೆ ಗಾಡಿ ನಿಂತಾಗ ರೆಸ್ಟ್ ರೂಮಿಗೆ ಹೋಗಿ ಬಂದ ಮೊಮ್ಮಗಳು ಅದನ್ನು ಸ್ವಚ್ಚವಾಗಿಟ್ಟಿಲ್ಲ ಎಂದು ಹೋಟೆಲಿನವರನ್ನು ಬೈದಾಗ, ಬಳಸಿಯಾದ ಮೇಲೆ ನಮ್ಮ ನಂತರ ಹೋಗುವವರಿಗಾಗಿ ಅದನ್ನು ಸ್ವಚ್ಚವಾಗಿ ಉಳಿಸಿ ಬರುವುದು ಜನಗಳದ್ದೂ ಕರ್ತವ್ಯ ಎಂದು ಮೊಮ್ಮಗಳಿಗೆ ನಾಗರೀಕ ಕರ್ತವ್ಯದ ಪಾಠ ಹೇಳುತ್ತಾರೆ. ಪ್ರಯಾಣಿಕರೊಬ್ಬರು ಜೋರು ಮಾಡಿದಾದ ಮೊಮ್ಮಗಳು ಒರಟಾಗಿ ಉತ್ತರಿಸಿದರೂ ಇವರು ತಾಳ್ಮೆಯಿಂದಲೇ ಮಾತಾಡಿ, ಕ್ಷಮೆ ಕೇಳುತ್ತಾರೆ.

ಇದು ನಿವೃತ್ತರಾದ ಪೊಲೀಸ್ ಅಧಿಕಾರಿ, ಆದರೆ ಅವರು ಅಧಿಕಾರದಲ್ಲಿದ್ದಾಗ ಹೇಗಿರುತ್ತಾರೆ? ಯೂನಿಫಾರಂ ಅದು ಹೇಗೆ ವ್ಯಕ್ತಿತ್ವಕ್ಕೆ ಅಂತಹ ಜರ್ಬು ತರುತ್ತದೆ? ತಮಗಿಂತ ಮೇಲಿನವರೆದುರಲ್ಲಿ ನೇರ ನಿಂತು ಸಲಾಮು ಹಾಕುವ ಆ ಅಧಿಕಾರ, ತನ್ನ ಸ್ಥಾನದಿಂದ ಕೆಳಗೆ, ತುಂಬಾ ಕೆಳಗೆ ಇರುವವರನ್ನು ಹೇಗೆ ನಡೆಸಿಕೊಳ್ಳುತ್ತದೆ? ಅದಿರಲಿ ಆದರೆ ವಿಚಾರಣೆ ಎಲ್ಲಾ ಮುಗಿದ ಮೇಲೆ, ತನ್ನ ಸಾಕ್ಷಿಯೂ ಆದ ಮೇಲೆ, ಈ ಅಧಿಕಾರಿ ತೀರ್ಪು ಕೇಳಲು ಅಷ್ಟು ದೂರ, ತನ್ನದೇ ಹಣ ಹಾಕಿಕೊಂಡು ಪ್ರಯಾಣ ಮಾಡುತ್ತಿರುವ ಕಾರಣವಾದರೂ ಏನು, ಅದೂ ಕೇಸು ಬಹುಮಟ್ಟಿಗೆ ಕೈ ಜಾರಿದೆ ಎಂದು ಗೊತ್ತಾದ ಮೇಲೂ? ಆತ ಚುಕ್ತಾ ಮಾಡಬೇಕಿರುವ ಬಾಕಿ ಏನಾದರೂ ಉಳಿದಿದ್ಯ? ‘19.20.21’ ಚಿತ್ರದ ಒಂದು ಸಂಕೀರ್ಣ ಪಾತ್ರ ಇದು, ಇದನ್ನು ಕೃಷ್ಣ ಹೆಬ್ಬಾಲೆ ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಚಿತ್ರದ ಕಡೆಯಲ್ಲಿ ವಕೀಲರನ್ನು ಅಭಿನಂದಿಸುವಾಗ, ಅದು ಕ್ಷಮಾಯಾಚನೆಯೂ ಹೌದೆ? ನಿವೃತ್ತ ಅಧಿಕಾರಿಯ ಜೊತೆಗೆ ಮೊಮ್ಮಗಳನ್ನು ಕಳಿಸುವ ಮೂಲಕ ಕತೆಗಾರ/ನಿರ್ದೇಶಕ ಮನ್ಸೋರೆ ಆ ಪಾತ್ರವನ್ನು ಮಾನವೀಯಗೊಳಿಸಿರುವ ರೀತಿ ಗಮನಿಸಬೇಕು. ಆದರೆ ಚಿತ್ರದ ಮುಖ್ಯ ಪಾತ್ರ ಮತ್ತು ಚಿತ್ರದ ಉಳಿದ ಮಿಕ್ಕ ಪೂರಕ ಪಾತ್ರಗಳ ಬಗ್ಗೆ ಮಾತನಾಡದೆ ನಾನು ಈ ಪಾತ್ರದ ಮೂಲಕವೇ ಏಕೆ ನನ್ನ ಬರಹವನ್ನು ಪ್ರಾರಂಭಿಸುತ್ತಿದ್ದೇನೆ? ಸಿನಿಮಾದ ಕಟ್ಟುವಿಕೆಯಲ್ಲಿ, ಜೊತೆಗೆ ಪ್ರತಿ ಪಾತ್ರದ ಕಟ್ಟುವಿಕೆಯಲ್ಲಿ ನಿರ್ದೇಶಕರು ತೆಗೆದುಕೊಂಡಿರುವ ಎಚ್ಚರಕ್ಕೆ ಇವೆಲ್ಲವೂ ಅಳತೆಗೋಲಾಗುತ್ತವೆ.

ಕಾಡಿನ ಉತ್ಪತ್ತಿಯನ್ನು ತರುವಾಗ ಅಡ್ಡಗಟ್ಟುವ ಅರಣ್ಯ ಇಲಾಖೆಯವರು ಇವರನ್ನು ಹೊಡೆದಾಗ, ತಕ್ಷಣವೇ ಮಗುವನ್ನು ಮುಚ್ಚಿಟ್ಟುಕೊಳ್ಳುವ ತಾಯಿಯ ತತ್ ಕ್ಷಣದ ಪ್ರತಿಕ್ರಿಯೆಯಲ್ಲಿ, ಹುಡುಗನನ್ನು UAPA ದಡಿ ಬಂಧಿಸಿದ್ದಾರೆ ಎಂದ ಮರುಕ್ಷಣ ರಫಿ ಕೊಡುವ ಪ್ರತಿಕ್ರಿಯೆಯಲ್ಲಿ, ಅರಣ್ಯ ಇಲಾಖೆಯವರು ಎದುರಾದಾಗ ಮಾತೇ ಇಲ್ಲದೆ ತನ್ನ ಪುಸ್ತಕಗಳ ಚೀಲವನ್ನು ತಪಾಸಣೆಗೆ ಚಾಚುವ ಮಂಜುವಿನ ಚರ್ಯೆಯಲ್ಲಿ, ಮನೆಯ ಮುಂದೆ ಒಣಹಾಕಿದ ಅರಣ್ಯ ಉತ್ಪನ್ನಗಳನ್ನು ಕಂಡು ‘ಇಂದೆನಗೆ ಆಹಾರ ಸಿಕ್ಕಿತು’ ಎಂದು ಬಂದ ಇಲಾಖೆಯವರು ಅಲ್ಲಿರುವವರು ಮಾಧ್ಯಮದವರು ಎಂದು ತಿಳಿದ ಕೂಡಲೇ ಜಾರಿಕೊಂಡಾಗ ಅಪ್ಪ ಮತ್ತು ಮಗ ಕೊಡುವ ಪ್ರತಿಕ್ರಿಯೆಯಲ್ಲಿ… ಇಂತಹ ಎಷ್ಟೋ ಸನ್ನಿವೇಶಗಳು ವಿವರಗಳಿಗೆ ಕೊಟ್ಟ ಪ್ರಾಮುಖ್ಯತೆಯ ಬಗ್ಗೆ ಹೇಳುತ್ತವೆ. ಹಾಗಾಗಿಯೇ ಇಲ್ಲಿ ಚಿತ್ರದ ವಸ್ತು ಮತ್ತು ಆಶಯದಷ್ಟೇ ಅದರ ನಿರೂಪಣೆಯೂ ಮುಖ್ಯವಾಗುತ್ತದೆ.

ವಿಠ್ಠಲ ಮಲೆಕುಡಿಯ ಅವರ ಕೇಸು ಮತ್ತು ಅದರ ವಿವರಗಳೆಲ್ಲವೂ ನಮ್ಮ ಕಣ್ಣ ಮುಂದೆಯೇ ನಡೆದವು. ಕೈಗೆ ಸಂಕೋಲೆ ಹಾಕಿಕೊಂಡು ಪರೀಕ್ಷೆ ಬರೆದ ಹುಡುಗನ ಚಿತ್ರ ನಮ್ಮೆಲ್ಲರ ಅಂತಃಸಾಕ್ಷಿಗೆ ನಿರಂತರ ಸವಾಲು ಹಾಕುತ್ತಿತ್ತು. ಆದರೆ ಅವೆಲ್ಲಾ ಮಾಧ್ಯಮಗಳು ನಮಗೆ ಹೇಳಿದ ಕಥೆಗಳು. ಆದರೆ ಇಲ್ಲಿ ವಿಠ್ಠಲ ಅವರೇ ನಮಗೆ ಕಥೆ ಹೇಳುತ್ತಾರೆ. ಅದು ಈ ಚಿತ್ರದ ವಿಶೇಷ. ಈ ರೀತಿಯ ಸಿನಿಮಾಗಳು ಬೇರೆ ಭಾಷೆಯಲ್ಲಿ ಬಂದಿವೆ. ಆದರೆ ಇನ್ನೊಂದು ಕಾರಣಕ್ಕೆ ಈ ಸಿನಿಮಾ ನಮಗೆ ಮುಖ್ಯವಾಗುತ್ತದೆ. ಈ ತರಹದ ವಸ್ತುಗಳಿರುವ ಸಿನಿಮಾ ಬಂದಾಗ ಅವರ ಬದುಕಿನ ಬಾಹ್ಯದಿಂದ ಬಂದ ಒಂದು ಏಜೆನ್ಸಿ ಅವರಿಗೆ ನೆರವಾಗಿ, ಅವರ ಕಷ್ಟಕಾರ್ಪಣ್ಯಗಳನ್ನು ತೊಡೆಯುತ್ತದೆ. ಆದರೆ ಆ ದಿಕ್ಕಿನಲ್ಲಿ ಆ ಬಾಹ್ಯ ಏಜೆನ್ಸಿಯ ಸಾಹಸದ, ಹೀರೋಯಿಸಂನ ವೈಭವೀಕರಣ ನಡೆದು, ಅದನ್ನು ಸಾಬೀತು ಪಡಿಸಲು ಶೋಷಿತರೇ ಪೂರಕ ಪಾತ್ರ ವಹಿಸಬೇಕಾಗಿ ಬಂದು, ಆ ಹೀರೋನ ಹೀರೋಯಿಸಂ ಮುಂದೆ ಅವರ ನೋವುಗಳು ಹಿಂದೆ ಸರಿದುಬಿಡುತ್ತದೆ.

ಆದರೆ ಈ ಚಿತ್ರದಲ್ಲಿ ಕಥೆಯ ಕೇಂದ್ರ ಮಂಜು ಮತ್ತು ಮಂಜು ಮಾತ್ರ. ಲಾಯರ್ ಸುರೇಶ್ ಹೆಗಡೆ, ಸಾಮಾಜಿಕ ಹೋರಾಟಗಾರ ರಫಿ, ಪತ್ರಕರ್ತ ವಿಜಯ್ ಎಲ್ಲರೂ ಮಂಜುವಿನ ಹೋರಾಟಕ್ಕೆ ಜೊತೆಯಾಗುತ್ತಾರೆ, ಆದರೆ ಎಲ್ಲೂ ಅವರು ಹೀರೋಗಳಾಗದಂತೆ ಕಥೆ ಎಚ್ಚರ ವಹಿಸುತ್ತದೆ. ಹೋಗಲಿ ವಿಠ್ಠಲನನ್ನಾದರೂ ‘ಸಿನಿಮೀಯ’ವಾಗಿ ಹೀರೋ ಮಾಡುತ್ತದೆಯೇ ಎಂದರೆ ಅದೂ ಇಲ್ಲ. ವಿಠ್ಠಲ ನಿಜಕ್ಕೂ ಇಲ್ಲಿ ಹೀರೋ ಹೌದು, ಆದರೆ ಅವನು ಹೀರೋ ಆಗುವುದು ಹೊಡೆದಾಟ ಮಾಡಿದ್ದಕ್ಕಲ್ಲ, ತಾಳಿದ್ದಕ್ಕೆ, ಮಣಿಯದೇ ಇದ್ದದ್ದಕ್ಕೆ, ಇಡೀ ಸರ್ಕಾರ, ವ್ಯವಸ್ಥೆ ಎಲ್ಲವೂ ಎದುರು ನಿಂತರೂ ನ್ಯಾಯಾಂಗದ ಮೇಲೆ ನಂಬಿಕೆಯಿಟ್ಟು, ‘ಸಂವಿಧಾನ ಬದ್ಧವಾಗಿ’ ಹೋರಾಡಿದ್ದಕ್ಕೆ. ಹಾಗಾಗಿ ಮಂಜು, ವಿಠ್ಠಲ್ ಎಲ್ಲರ ಹೀರೋಗಳಾಗುತ್ತಾರೆ. ಏಕೆಂದರೆ ಸಾಮಾನ್ಯನಿಗೂ ಇದು ಸಾಧ್ಯ ಎಂದಾಗಲೇ ಅದು ಮಿಕ್ಕೆಲ್ಲರಿಗೂ ‘ನಾವೂ ಹಾಗೆ ಮಾಡಬಹುದು’ ಎನ್ನುವ ಭರವಸೆ ಬಿತ್ತುತ್ತದೆ. ಇದು ಸಿನಿಮಾದ ಸೈದ್ಧಾಂತಿಕ ಗೆಲುವು.

ಶೇಕ್ಸ್‌ಪಿಯರ್‌ನ ‘ದ ಟೆಂಪೆಸ್ಟ್’ ನಾಟಕದಲ್ಲಿ ಒಂದು ದೃಶ್ಯ ಬರುತ್ತದೆ. ಹಡಗು ಸುಳಿಗೆ ಸಿಕ್ಕಿ ದ್ವೀಪದ ಪಾಲಾದವನೊಬ್ಬ ಆ ದ್ವೀಪದ ಮೂಲನಿವಾಸಿಗೆ ಬಾ ನಿನಗೆ ನಾಗರೀಕ ಭಾಷೆ ಕಲಿಸುತ್ತೇನೆ ಎಂದು ಹೇಳಿ ಅದಕ್ಕೆ ಬದಲಾಗಿ ಆತ ತನ್ನ ಕೆಲಸದಾಳಾಗಬೇಕು ಎಂದು ಹೇಳುತ್ತಾನೆ. ತನಗೆ ಅಗತ್ಯವೇ ಇಲ್ಲದ ‘ನಾಗರೀಕ’ ಭಾಷೆ ಕಲಿಯಲು ಆ ಮೂಲನಿವಾಸಿ ಆಯುಷ್ಯದುದ್ದಕ್ಕೂ ತನ್ನ ದ್ವೀಪವನ್ನು ಅತಿಕ್ರಮಿಸಿ ಬಂದವನ ಗುಲಾಮಗಿರಿ ಮಾಡಬೇಕಾಗುತ್ತದೆ. ಆದಿವಾಸಿಗಳ ಕಥೆ ಸಹ ಅದಕ್ಕಿಂತ ಭಿನ್ನವಾದುದಲ್ಲ. ಸರಕಾರ ಅವರ ಸಮ್ಮತಿಯನ್ನಿರಲಿ, ಅಭಿಪ್ರಾಯವನ್ನೂ ತೆಗೆದುಕೊಳ್ಳದೆ ಕೈಗೊಂಡ ಒಂದು ನಿರ್ಣಯದ ಕಾರಣಕ್ಕೆ ಅವರು ತಮ್ಮದೇ ಮನೆಯಲ್ಲಿ ಅತಿಕ್ರಮವಾಸಿಗಳಾಗಿ ಬಿಡುತ್ತಾರೆ.

ಅವರು ಕಾಡಿನ ಮಕ್ಕಳು, ಕಾಡಿನ ತಂದೆ ತಾಯಿಯರೂ ಹೌದು. ಅವರದೇ ನೆಲದ ವಸ್ತುಗಳನ್ನು ತೆಗೆದುಕೊಂಡ ಕಾರಣಕ್ಕೆ ಅವರನ್ನು ‘ಅಪರಾಧಿಗಳು’ ಎಂದು ಘೋಷಿಸುವ ವ್ಯವಸ್ಥೆ ಅದೇ ಕಾಡಿನ ಮರಗಳನ್ನು ಕಡಿದುಕೊಂಡು ಹೋಗಲು ಲಕ್ಷಾಂತರ ರೂ.ಗಳ ಟೆಂಡರ್ ಕರೆಯುತ್ತದೆ. ಅವರದೇ ಮನೆಯ ಮಕ್ಕಳು ಮನೆಗೆ ಹಿಂದಿರುಗಬೇಕಾದರೆ ಪೊಲೀಸ್ ಅನುಮತಿ ಪಡೆಯಬೇಕು ಎಂದು ಹೇಳಿ, ತಾನು ಕಾಡಿನೊಳಗೆ ಪ್ರವಾಸೋದ್ಯಮ ಮಾಡಿ, ಗೇಟಿನ ಬಳಿ ಟಿಕೆಟ್ ಕೇಳುತ್ತದೆ. ಅವರು ಕಾಡಿನ ಉತ್ಪನ್ನಗಳನ್ನು ತೆಗೆದುಕೊಂಡರೆ ಬಡಿಯುತ್ತದೆ, ಆಮೇಲೆ ಅದನ್ನು ತಾನೇ ಉಪಭೋಗಿಸುತ್ತದೆ. ಅದು ಅವರ ಮನೆಗೂ ನುಗ್ಗಿ ಬಡಿಯುತ್ತದೆ. ಕಡೆಗೆ ಅವರು ತಮ್ಮ ಭಾಷೆ ತುಳುವಿನಲ್ಲಿ ಮಾತನಾಡಿದರೆ ಅದಕ್ಕೂ ಬಡಿಯುತ್ತದೆ. ಅವರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲ, ತಮ್ಮ ಮೇಲಾಗುತ್ತಿರುವುದು ದೌರ್ಜನ್ಯ ಎನ್ನುವ ಅರಿವೂ ಇಲ್ಲ.

ಹೀಗಿರುವಾಗ ಆ ಸಮುದಾಯದಿಂದ ಬಂದ ಮಂಜು ಪತ್ರಿಕೋದ್ಯಮ ಕಲಿಯುತ್ತಾನೆ. ತನ್ನ ಜನರ ಮೇಲಾಗುತ್ತಿರುವ ಅನ್ಯಾಯ ಅವನ ಅರಿವಿಗೆ ಬರುತ್ತದೆ. ‘ಚುನಾವಣೆಯನ್ನು ಏಕೆ ಬಹಿಷ್ಕರಿಸಬಾರದು?’ ಎಂದು ಒಂದು ಕರಪತ್ರ ಬರೆಯುತ್ತಾನೆ. ಅದೂ ನಂತರ ಅವನ ವಿರುದ್ಧದ ಸಾಕ್ಷಿಯಾಗುತ್ತದೆ. ವಿದ್ಯಾರ್ಥಿಗಳಿಗೆ ರಾಜಕೀಯ ಏಕೆ ಎಂದು ಕೇಳುವವರೆಲ್ಲಾ ಮರೆಯುವುದು ಜಗತ್ತಿನ ದೇಶಗಳ ಹಲವಾರು ಸಾಮಾಜಿಕ ಮತ್ತು ರಾಜಕೀಯ ಹೋರಾಟಗಳು ಸಫಲವಾಗಿರುವುದರಲ್ಲಿ ವಿದ್ಯಾರ್ಥಿಗಳದೂ ಕೊಡುಗೆ ಇದೆ ಎನ್ನುವುದನ್ನು, ಪ್ರಶ್ನಿಸಲು ಧೈರ್ಯ ಮಾಡದ ವಿದ್ಯಾರ್ಥಿಗಳು ಸಮಾಜಕ್ಕೆ ಏನೂ ಕೊಡಲಾರರು ಎನ್ನುವುದನ್ನು. ಮಂಜುವನ್ನು ಮತ್ತು ಆತನ ತಂದೆ ರಾಮಣ್ಣನನ್ನು ನಕ್ಸಲ್ ಎಂದು ಸಿದ್ಧ ಮಾಡಿ ತೋರಿಸಲು ಸರಕಾರದ ವ್ಯವಸ್ಥೆ ಪಣ ತೊಟ್ಟು ನಿಂತುಬಿಡುತ್ತದೆ. ಓದುವ ಹುಡುಗನ ಮೇಲೆ ಸೆಡಿಶನ್ – ದೇಶದ್ರೋಹದ ಆರೋಪ ಹೊರಿಸಿ ಬಂಧಿಸುತ್ತದೆ. ಆ ಆರೋಪಕ್ಕೆ ಅವನನ್ನು ಒಪ್ಪಿಸಲು ಅವನಿಗೆ ‘ದೇಹದ ಮೇಲೆ ಗುರುತು ಕಾಣಿಸದಂತಹ’ ಹಿಂಸೆ ಕೊಡುತ್ತದೆ. ಹಗಲು ರಾತ್ರಿ ನಿದ್ರೆ ಮಾಡಲು ಬಿಡದಂತೆ ಕೊಡುವ ಹಿಂಸೆಯ ಭೀಕರತೆ ಎಂಥದ್ದು ಎಂದು ಪ್ರೇಕ್ಷಕರಿಗೆ ಹೇಳಬೇಕು, ಆದರೆ ರಕ್ತ ತೋರಿಸುವಂತಿಲ್ಲ, ಅದನ್ನು ಮಂಜುವಿನ ಪರಿಸ್ಥಿತಿಯ ಮೂಲಕವೇ ಹೇಳಬೇಕು. ‘ಜಾಮೀನು ಇರಲಿ ಸರ್, ಒಂದು ರಾತ್ರಿ ನಿದ್ದೆ ಮಾಡಲು ಕೋರ್ಟ್ ಅನುಮತಿ ಕೊಡಬಹುದಾ ನೋಡಿ’ ಎಂದು ಮಂಜು ವಕೀಲರ ಬಳಿ ಬೇಡುವಾಗ ಅದು ಆತ್ಯಂತಿಕವಾದ ಹಿಂಸೆ ಅನ್ನಿಸಿಬಿಡುತ್ತದೆ.

ಚಿತ್ರದ ಬಹುಮುಖ್ಯ ಸನ್ನಿವೇಶಗಳಲ್ಲಿ ಒಂದು, ಮಂಜು ಪರೀಕ್ಷೆ ಬರೆಯಲು ಪೊಲೀಸರು ಅವನನ್ನು ಸಂಕೋಲೆಗಳಲ್ಲಿ ಕರೆತರುವುದು. ಕೋರ್ಟ್ ಅವನಿಗೆ ಪರೀಕ್ಷೆ ಬರೆಯಲು ಅನುಮತಿ ಕೊಟ್ಟಿರುತ್ತದೆ. ಆದರೂ ‘ಮೇಲಿನಿಂದ ಒತ್ತಡ’ ಇದೆ ಎನ್ನುವ ನೆಪ ಹೇಳಿ ಆಡಳಿತ ಮಂಡಳಿ ಅವನಿಗೆ ಪರೀಕ್ಷೆ ಬರೆಯಲು ಬಿಡುವುದಿಲ್ಲ. ಮೇಲೆ ಹೇಳಿದ ಆ ಪೊಲೀಸ್ ಅಧಿಕಾರಿಯ ಮುಖದಲ್ಲಿ ಸಂತೋಷ ಉಕ್ಕುತ್ತಿರುತ್ತದೆ. ಆ ಒಂದು ಕ್ಷಣದಲ್ಲಿ ರಫಿ ತೆಗೆದುಕೊಳ್ಳುವ ನಿರ್ಧಾರದಲ್ಲಿ ಇಡೀ ಸನ್ನಿವೇಶ ತಿರುವು ಪಡೆಯುತ್ತದೆ. ‘ಹೋರಾಟಗಾರ’ರನ್ನು ಉಚಾಯಿಸಿ ಮಾತನಾಡುವ ಒಂದು ಕೆಟ್ಟ ಸಂಪ್ರದಾಯವೇ ಸೃಷ್ಟಿಯಾಗಿರುವಾಗ, ಹಾಗೆ ಹೋಗಿ ಪೊಲೀಸ್ ವಾಹನದ ಮುಂದೆ ನೆಲದ ಮೇಲೆ, ರೈಲು ಕಂಬಿಗಳ ಮೇಲೆ ಮಲಗಬಲ್ಲವರಿಂದ, ಘೋಷಣೆ ಕೂಗುವವರಿಂದ, ಅಧಿಕಾರದೆದುರಿಗೆ ಸೆಡ್ಡುಹೊಡೆದು ನಿಲ್ಲುವವರಿಂದಲೇ ಅಧಿಕಾರದ ಹೂಂಕಾರಕ್ಕೆ ಅಲ್ಪಸ್ವಲ್ಪವಾದರೂ ಅಂಕುಶ ಇದೆ ಎನ್ನುವುದನ್ನು ನಾವು ಮರೆಯಬಾರದು. ಕಡೆಗೆ ಸಮಯಕ್ಕೆ ಸರಿಯಾಗಿ ರಫಿ, ವಿಜಯ್ ಮತ್ತು ವಕೀಲರು ತೆಗೆದುಕೊಳ್ಳುವ ಕ್ರಮಗಳಿಂದ ಒತ್ತಡಕ್ಕೆ ಒಳಗಾದ ಆಡಳಿತ ಮಂಜುವನ್ನು ಪರೀಕ್ಷೆ ಬರೆಯಲು ಬಿಡುತ್ತದೆ. ಅದು ಸಿನಿಮಾ ಎನ್ನುವ ಎಚ್ಚರ ಇದ್ದರೂ, ಆ ಕ್ಷಣದಲ್ಲಿ ಚಪ್ಪಾಳೆ ಹೊಡೆಯದೆ ಇರಲಾಗುವುದಿಲ್ಲ. ಏಕಕಾಲಕ್ಕೆ ನಾವು ವೀಕ್ಷಕರೂ, ಚಿತ್ರದೊಳಗೇ ಇರುವ ಪಾತ್ರಧಾರಿಗಳೂ ಆಗಿಬಿಡುತ್ತೇವೆ. ಮಂಜುವಿನ ಕೈ ಸಂಕಲೆ ಕಳಚುವುದು ಅಂತಹುದೇ ಇನ್ನೊಂದು ಕ್ಷಣ. ಅಲ್ಲಿ ಕ್ಯಾಮೆರಾ ಮಂಜುವಿನ ಮುಖವನ್ನಲ್ಲ, ಅವನ ಸ್ವತಂತ್ರ ಕೈಗಳನ್ನು ಮಾತ್ರ ಫೋಕಸ್ ಮಾಡುತ್ತದೆ.

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೋಡಿ, ಇಷ್ಟಪಟ್ಟ ಒಂದು ಚಿತ್ರ ‘ಕೇಪರ್ ನಾಂ’. ಇಡೀ ಚಿತ್ರದುದ್ದಕೂ ನಗುವನ್ನೇ ಕಾಣದ ಆ ಪುಟ್ಟ ಹುಡುಗ ಕಡೆಯ ದೃಶ್ಯದಲ್ಲಿ ನಗುತ್ತಾನೆ. ನಮ್ಮ ಮನಸ್ಸು ಒಂದು ದಿವ್ಯದಲ್ಲಿ ಮುಳುಗೇಳುತ್ತದೆ. ಇಲ್ಲೂ ಅಷ್ಟೇ ಕಡೆಯಲ್ಲಿ ಒಂದೂ ಮಾತನಾಡದೆ, ಮಂಜು ನಗುತ್ತಾನೆ, ಉಮ್ಮಳಿಸುತ್ತಾನೆ, ಮತ್ತೆ ನಗುತ್ತಾನೆ, ನಮ್ಮ ಕರುಳು ಕತ್ತರಿಸಿದಂತಾಗುತ್ತದೆ.

ಚಿತ್ರದ ಕಡೆಯಲ್ಲಿರುವ ವಾದದ ಮುಕ್ತಾಯದ ಕೋರ್ಟ್ ದೃಶ್ಯದಲ್ಲಿ ಬಾಲಾಜಿ ಮನೋಹರ್ ಎಲ್ಲರನ್ನೂ ಆವರಿಸಿಕೊಂಡು ಬಿಡುತ್ತಾರೆ. ಅದಕ್ಕಿಂತ ಸರಳವಾಗಿ, ಅದಕ್ಕಿಂತ ಅಧಿಕಾರಯುತವಾಗಿ, ಅದಕ್ಕಿಂತ ಪ್ರಭಾವಶಾಲಿಯಾಗಿ ಸಂವಿಧಾನದ ಬಗ್ಗೆ ಮಾತನಾಡಲಾಗದು ಎನ್ನುವಂತಿದೆ ಆ ದೃಶ್ಯ. ಅದೊಂದು ದೀರ್ಘವಾದ ದೃಶ್ಯ. ಆದರೆ ಅಲ್ಲೆಲ್ಲೂ ಚಿತ್ರದ ಕಟ್ಟುವಿಕೆ ಸಡಿಲವಾಗಿಲ್ಲ. ಆದಾದ ನಂತರ, ತೀರ್ಪು ಬಂದ ಮೇಲೆ ಕ್ಯಾಮೆರಾ ಅದೆಷ್ಟು ಗಂಭೀರವಾಗಿ, ಸಂಯಮದಿಂದ ನಡೆದುಕೊಳ್ಳುತ್ತದೆ ಎಂದರೆ ಅದೂ ನಮ್ಮಂತೆ ದೂರ ನಿಂತು ಅವರನ್ನು ಅವರ ಜಗತ್ತಿನಲ್ಲಿ ಬಿಡುತ್ತದೆ.

ಕಥೆ, ಸಂಭಾಷಣೆ ಬರೆದ ಮಂಸೋರೆ, ವೀರೇಂದ್ರ ಮಲ್ಲಣ್ಣ ಮತ್ತು ಅವಿನಾಶ್, ಕ್ಯಾಮೆರಾವನ್ನು ಅದ್ಭುತವಾಗಿ ನಿಯಂತ್ರಿಸಿರುವ ಶಿವ ಬಿ.ಕೆ. ಕುಮಾರ್, ಬಿಂದುಮಾಲಿನಿ ಅವರ ಹಾಡುಗಳು, ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತ ಎಲ್ಲೂ ತಾವು ಭಿನ್ನವಾಗಿ ನಿಲ್ಲಲು ಯತ್ನಿಸದೆ, ಇಡೀ ಸಿನಿಮಾಕ್ಕೆ ಪೂರಕವಾಗಿ ಬಂದಿದೆ, ಹಾಗಾಗಿ ಸಿನಿಮಾ ಸಹ ಗೆಲ್ಲುತ್ತದೆ.

ಚಿತ್ರದ ಶೂಟಿಂಗ್ ಶುರುವಾಗುವ ಮೊದಲೇ ಮಂಸೋರೆ ಅರ್ಧ ಗೆದ್ದಿರುತ್ತಾರೆ. ಒಂದು, ಅವರಲ್ಲಿದ್ದ ಗಟ್ಟಿ ಕಥೆಯಾದರೆ, ಇನ್ನೊಂದು ಅವರ ಪಾತ್ರವರ್ಗ. ಯಾರನ್ನು ಹೆಸರಿಸುವುದು, ಯಾರನ್ನು ಬಿಡುವುದು? ಬಹುತೇಕರು ರಂಗಭೂಮಿಯಿಂದ ಬಂದವರು. ಅವರಿಗೆ ಸಿಕ್ಕ ಸ್ಕ್ರೀನ್ ಟೈಂ ಅವರಿಗೊಂದು ವಿಷಯವೇ ಅಲ್ಲ. ಸಿಕ್ಕ ನಿಮಿಷಗಳಲ್ಲೇ ಅವರೆಲ್ಲಾ ತಮ್ಮ ಅಭಿನಯದ ಛಾಪು ಮೂಡಿಸುತ್ತಾರೆ. ಶೃಂಗ ಇಡೀ ಚಿತ್ರದಲ್ಲಿ ಎಲ್ಲೂ ಕಾಣಿಸುವುದೇ ಇಲ್ಲ, ಅಲ್ಲಿ ಕಾಣಿಸುವುದು ಕೂಡುಮಲೆಯ ಮಂಜು ಮತ್ತು ಅವನ ದುಗುಡ ತುಂಬಿದ ಮುಖ ಮಾತ್ರ. ಅದೆಷ್ಟು ತೂಕ ಹೊತ್ತಿರಬಹುದು ಆ ಹೆಗಲುಗಳು… ಮಹದೇವ್ ಹಡಪದ್ ಅವರ ದೇಹಭಾಷೆ, ಹಿಂಜರಿಕೆ, ಅಭಿನಯದ ಕಾರಣಕ್ಕೆ ಎಲ್ಲೂ ಅವರನ್ನು ಕೂಡುಮಲೆಯಿಂದ ಪ್ರತ್ಯೇಕಿಸಿ ನೋಡಲಾಗುವುದೇ ಇಲ್ಲ. ನಟರಂಗದ ರಾಜೇಶ್ ಮತ್ತು ವೆಂಕಟೇಶ ಪ್ರಸಾದ್ ನಾವು ವಿಠ್ಠಲನ ಪ್ರಕರಣದುದ್ದಕ್ಕೂ ಕಂಡ ಪಾತ್ರಗಳು, ಈಗಲೂ ಕಾಣುವ ಪಾತ್ರಗಳು. ಅವರಿಬ್ಬರ ಅಭಿನಯದಲ್ಲಿನ nuances ಅದ್ಭುತ. ಪಲ್ಲವಿ, ಸಂಪತ್, ಆ ಮಹಿಳಾ ಅಡ್ವೊಕೇಟ್….. ಮನ್ಸೋರೆಯ ಪರವಾಗಿ ಒಂದು ಸೈನ್ಯವೇ ಇದ್ದಂತೆ ಅನ್ನಿಸುತ್ತದೆ.

ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಕೊಟ್ಟ ಸಂವಿಧಾನದ 19.20.21 ಅನುಚ್ಛೇದಗಳು ಹೇಗೆ ಸಮಾಜದ ಕಟ್ಟಕಡೆಯ ಮನುಷ್ಯನಿಗೂ ಘನತೆ ಕೊಡಬಲ್ಲದು ಮತ್ತು ಯಾವ ಕಾರಣಕ್ಕೆ ಸಂವಿಧಾನ ನಮ್ಮೆಲ್ಲರಿಗೂ ಮುಖ್ಯವಾಗುತ್ತದೆ ಎನ್ನುವುದು ಚಿತ್ರದ ಆಶಯ. ಆದರೆ ಸಂವಿಧಾನ ದೇಶದ ನಾಗರೀಕರೆಲ್ಲರಿಗೂ ಕೊಟ್ಟ ಹಕ್ಕನ್ನೂ ಕೂಡ ಅಂಚಿಗೆ ತಳ್ಳಲ್ಪಟ್ಟವರು ಬೇಡಿ ಬೇಡಿ ಪಡೆಯಬೇಕಾಗಿದೆ ಎನ್ನುವುದು ಚಿತ್ರದ ಕಥೆ. ಚಿತ್ರ ಅದನ್ನು ಅಷ್ಟೇ ಗಂಭೀರವಾಗಿ, ಮನಕ್ಕೆ ನಾಟುವಂತೆ ಹೇಳುತ್ತದೆ. ಆದರೆ ಕಡೆಯ ದೃಶ್ಯದಲ್ಲಿ ವಕೀಲರು, ಆ ಹುಡುಗಿಗೆ ಸಂವಿಧಾನದ ಪ್ರತಿ ಕೊಡುವ ದೃಶ್ಯವನ್ನು ಮಾತ್ರ ಬಿಡಬಹುದಿತ್ತೇನೋ, ಅದು ಆ ಸನ್ನಿವೇಶದ ಭಾವವನ್ನು ಕಲಕಿಬಿಡುತ್ತದೆ. ಅಂದ ಹಾಗೆ ಆ ಹುಡುಗಿ ಕೇಸ್ ಗೆದ್ದಿದ್ದಕ್ಕಾಗಿ ಮಂಜುವನ್ನು ಅಭಿನಂದಿಸುತ್ತಾಳೆ, ಪಕ್ಕದಲ್ಲೇ ಮಂಜುವಿನ ಎಲ್ಲಾ ಕಾರ್ಪಣ್ಯಕ್ಕೂ ನೇರ ಕಾರಣಕರ್ತನಾದ ಆ ಹುಡುಗಿಯ ತಾತ ಪೊಲೀಸ್ ಅಧಿಕಾರಿ. ಮಂಜು ಒಂದೆರಡು ಕ್ಷಣ ಹಿಂಜರೆಯುತ್ತಾನೆ. ನಂತರ ಕೈಚಾಚುತ್ತಾನೆ. ಬೆನ್ನುಹುರಿಯಲ್ಲಿ ಮಂಜಿನ ನದಿ ಹರಿದಂತಾಗುತ್ತದೆ.

ಇಂತಹ ಒಂದು ಚಿತ್ರ ಮಾಡಲು ನಿರ್ಧರಿಸಿದ ಮಂಸೋರೆ ಮತ್ತು ಇಂತಹ ಚಿತ್ರಕ್ಕೆ ಹಣಹೂಡಿದ ನಿರ್ಮಾಪಕರು ಇಬ್ಬರದೂ ಧೈರ್ಯವೇ. ಈ ಚಿತ್ರದ ಗೆಲುವು ಇಂತಹ ಇನ್ನಷ್ಟು ಚಿತ್ರಗಳು ಬರಲು ಬೇಕಾಗುವಂತಹ ವಾತಾವರಣ ಸೃಷ್ಟಿಸುತ್ತದೆ. ಈ ಚಿತ್ರವನ್ನು ಗೆಲ್ಲಿಸಲೆಂದು ಇದನ್ನು ನೋಡಬೇಕಿಲ್ಲ, ಈ ಚಿತ್ರವನ್ನು ನೋಡಲೇಬೇಕಿರುವುದು ನಾವು ಇದನ್ನು ಮಿಸ್ ಮಾಡಿಕೊಳ್ಳಬಾರದು ಎನ್ನುವ ಕಾರಣಕ್ಕೆ.

LEAVE A REPLY

Connect with

Please enter your comment!
Please enter your name here