ಬಹಳ ದಿನಗಳ ನಂತರ ಮಾಲಾಶ್ರೀ ಅವರು ಆಕ್ಷನ್‌ – ಥ್ರಿಲ್ಲರ್‌ ‘ಮಾರಕಾಸ್ತ್ರ’ ಚಿತ್ರದೊಂದಿಗೆ ತೆರೆಗೆ ಮರಳುತ್ತಿದ್ದಾರೆ. ಸಾಹಸ ನಿರ್ದೇಶಕ ಥ್ರಿಲ್ಲರ್‌ ಮಂಜು ಅವರು ಮಾಲಾಶ್ರೀ ಅವರಿಗಾಗಿ ಚಿತ್ರದಲ್ಲಿ ವಿಶೇಷ ಸ್ಟಂಟ್ಸ್‌ ಸಂಯೋಜಿಸಿದ್ದಾರೆ. ಹರ್ಷಿಕಾ ಪೂಣಚ್ಚ ಕ್ರೈಂ ರಿಪೋರ್ಟರ್‌ ಪಾತ್ರದಲ್ಲಿ ನಟಿಸಿದ್ದು, ಸದ್ಯದಲ್ಲೇ ಸಿನಿಮಾ ತೆರೆಕಾಣಲಿದೆ.

‘ನನ್ನನ್ನು ಆಕ್ಷನ್‌ ಕ್ವೀನ್‌ ಮಾಡಿದ್ದೇ ಥ್ರಿಲ್ಲರ್‌ ಮಂಜು. ಕೌಟುಂಬಿಕ, ಟಾಂಬಾಯ್‌ ಪಾತ್ರಗಳನ್ನು ಮಾಡುತ್ತಿದ್ದ ನನಗೆ ಅವರು ಚಾಲೆಂಜಿಂಗ್‌ ಸ್ಟಂಟ್ಸ್‌ ಸಂಯೋಜಿಸಿದರು. ನನ್ನ ಪೊಲೀಸ್‌ ಪಾತ್ರಗಳಿಗೆ ಅವರು ಸಂಯೋಜಿಸಿದ ಆಕ್ಷನ್‌ಗಳು ನನ್ನನ್ನು ಆಕ್ಷನ್‌ ಕ್ವೀನ್‌ ಆಗಿಸಿದವು’ ಎನ್ನುತ್ತಾರೆ ಮಾಲಾಶ್ರೀ. ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಮಾರಕಾಸ್ತ್ರ’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಈ ಚಿತ್ರದ ನಿರ್ದೇಶಕ ಗುರುಮೂರ್ತಿ ಸುನಾಮಿ ಅವರ ಸಿನಿಮಾ ಪ್ರೀತಿಗೆ ಮಾರುಹೋಗಿ ತಾವು ಪಾತ್ರ ಮಾಡಲು ಒಪ್ಪಿದ್ದಾಗಿ ಹೇಳುತ್ತಾರೆ ಮಾಲಾಶ್ರೀ. ಆರಂಭದಲ್ಲಿ ಮಾಲಾಶ್ರೀ ಅವರ ಪಾತ್ರಕ್ಕೆ ಹನ್ನೊಂದು ದಿನಗಳ ಶೂಟಿಂಗ್‌ ಎಂದಿದ್ದರಂತೆ. ಕೊನೆಗೆ ಪಾತ್ರ ಬೆಳೆದು ಅರವತ್ತು ದಿನಗಳ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ ಮಾಲಾಶ್ರೀ. ಅವರಿಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದಾರೆ.

ಬಳ್ಳಾರಿ ಮೂಲದ ಗುರುಮೂರ್ತಿ ಅವರಿಗೆ ‘ಮಾರಕಾಸ್ತ್ರ’ ಚೊಚ್ಚಲ ನಿರ್ದೇಶನದ ಸಿನಿಮಾ. ಆಕ್ಷನ್‌ – ಥ್ರಿಲ್ಲರ್‌ ಆದರೂ ಕೌಟುಂಬಿಕ ಮೌಲ್ಯಗಳನ್ನು ಚಿತ್ರದಲ್ಲಿ ಹೇಳಿದ್ದೇವೆ ಎನ್ನುತ್ತಾರೆ. ನಿರ್ಮಾಪಕ ನಟರಾಜ್‌ ಅವರು ಈ ಸಿನಿಮಾಗೆ ಹಣ ಹೂಡಿದ್ದು ಆಕಸ್ಮಿಕವಷ್ಟೆ. ಆಕಸ್ಮಾತ್‌ ಆಗಿ ನಿರ್ದೇಶಕರನ್ನು ಭೇಟಿ ಮಾಡಿದ ನಟರಾಜ್‌ ಚಿತ್ರದ ಕತೆ ಇಷ್ಟವಾಗಿ ನಿರ್ಮಾಣ ಮಾಡಲು ನಿರ್ಧರಿಸಿದರಂತೆ. ಚಿತ್ರದ ಒಂದು ದೇಶಭಕ್ತಿ ಹಾಡನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಲೊಕೇಶನ್‌ಗಳಲ್ಲಿ ಸುಮಾರು ಮೂವತ್ತೆರೆಡು ದಿನಗಳ ಕಾಲ ಚಿತ್ರಿಸಲಾಗಿದೆ. ನಟಿ ಹರ್ಷಿಕಾ ಪೂಣಚ್ಚ ಅವರು ಚಿತ್ರದಲ್ಲಿ ಕ್ರೈಂ ರಿಪೋರ್ಟರ್‌ ಆಗಿ ಕಾಣಿಸಿಕೊಂಡಿದ್ದಾರೆ. ಆನಂದ್‌ ಆರ್ಯ, ಭರತ್‌ ಸಿಂಗ್‌, ಉಗ್ರಂ ಮಂಜು, ಶಿವಮಣಿ ಚಿತ್ರದ ಇತರೆ ಪ್ರಮುಖ ಕಲಾವಿದರು. ಮಂಜು ಕವಿ ಚಿತ್ರಕ್ಕೆ ಗೀತ ಸಂಗೀತ ನೀಡಿದ್ದರೆ ಸತೀಶ್‌ ಬಾಬು ಹಿನ್ನೆಲೆ ಸಂಗೀತಕ್ಕೆ ಕೆಲಸ ಮಾಡಿದ್ದಾರೆ. ಛಾಯಾಗ್ರಹಣ ಅರುಣ್‌ ಸುರೇಶ್‌ ಅವರದು. ಮೂಲ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ಸಿನಿಮಾ ತೆರೆಕಾಣಲಿದೆ.

Previous articleನಿವೇದಿತಾ ಶಿವರಾಜಕುಮಾರ್‌ ನಿರ್ಮಾಣದ ಸಿನಿಮಾ ‘ಫೈರ್‌ ಪ್ಲೈ’ | ವಂಶಿ ನಟನೆ, ನಿರ್ದೇಶನ
Next article‘ಸಪ್ತ ಸಾಗರದಾಚೆ ಎಲ್ಲೋ’ | ರಕ್ಷಿತ್‌ ಶೆಟ್ಟಿ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ

LEAVE A REPLY

Connect with

Please enter your comment!
Please enter your name here