ಜಾತಿಸಂಘರ್ಷಗಳ ಗೋಜಲಿನ ಹೆಣಿಗೆಗೆ ವಾಸ್ತವಿಕ ಸಮಾಜದ ಪರಿಸರದಲ್ಲಿ ಕ್ರಾಂತಿಕಾರಕ ಬದಲಾವಣೆ/ಪರಿಹಾರಗಳ ಸೂಚಕಗಳು ಇವೆಯೇ? ಇದು ವೈಚಾರಿಕ ವಾಗ್ವಾದ. ಈ ವಾಗ್ವಾದವು ಸಿನಿಮಾದ ದೃಷ್ಯಕಟ್ಟುಗಳಲ್ಲಿ ಒಡಮೂಡಬೇಕಾದ ಬಗೆಯಲ್ಲಿ ಕಟ್ಟಿಕೊಂಡಿಲ್ಲ ಎಂಬುದು ಸಿನಿಮಾದ ಮಿತಿ.
ತಮ್ಮ ಹಿಂದಿನ ಎರಡು ಸಿನಿಮಾಗಳಾದ ‘ಪೆರಿಯುರುಂ ಪೆರುಮಾಳ್’ ಹಾಗು ‘ಕರ್ಣನ್’ಗಳಲ್ಲಿ ಮಾರಿ ಸೆಲ್ವರಾಜು ತಮ್ಮ ಕಲಾವಂತಿಕೆಯ ಕಸುವನ್ನು ಸಾಬೀತು ಮಾಡಿಯಾಗಿದೆ. ಜಾತಿಗ್ರಸ್ತ ಸಮಾಜದಲ್ಲಿ ದಲಿತರ ಬದುಕಿನ ಇರುವಿಕೆಯ ಸಂಕಟಗಳು, ಎದುರಿಸಬೇಕಾದ ಸವಾಲುಗಳು ಹಾಗು ತೋರಬಹುದಾದ ಪ್ರತಿರೋಧದ ಮಾದರಿಗಳನ್ನು ಮಾರಿ ಸೆಲ್ವರಾಜು ಅವರು ಆ ಎರಡು ಸಿನಿಮಾಗಳ ದೃಷ್ಯಕಟ್ಟುಗಳ ದಟ್ಟ ಹೆಣಿಗೆಯಲ್ಲಿ ಕಂಡರಿಸಿದ್ದರು. ಆ ಕಾಣ್ಕೆಯ ಗುಣಕ್ಕಾಗಿಯೇ ಆ ಎರಡು ಸಿನಿಮಾಗಳು ಭಾರತದ ಚಿತ್ರರಂಗದಲ್ಲಿ ತಮ್ಮ ಮೌಲ್ಯಯುತ ಸ್ಥಾನವನ್ನು ಪಡೆದುಕೊಳ್ಳಬಲ್ಲ ಧೀಮಂತ ಸಿನಿಮಾಗಳಾಗಿವೆ.
ಒಬ್ಬ ಕಲಾವಿದನಾಗಿ ತನ್ನ ಕಲಾಗಾರಿಕೆಯ ಹಿರಿಮೆಯನ್ನು ತೋರಿ ವಿರಮಿಸುವುದು ಕಲಾವಿದರ ಗುಣವಲ್ಲ. ಅವರು ಕಲೆಯ ಹಲವು ಪ್ರಕಾರಗಳಲ್ಲಿ ತಮ್ಮ ಸಿದ್ಧಿಯನ್ನು ಸಾಧಿಸುತ್ತ ತಮ್ಮ ಕಲಾವಂತಿಕೆಯನ್ನು ಜೀವಂತ ಇಟ್ಟುಕೊಳ್ಳಬೇಕಾಗುತ್ತದೆ. ಒಂದು ವ್ಯವಹಾರವಾದ ಸಿನಿಮಾದಲ್ಲಂತೂ ಚಲಾವಣೆಯಲ್ಲಿ ಇರಲು ಯಾವ ಪ್ರಕಾರದ ಸಿನಿಮಾವಾದರೂ ಸೈ, ನನ್ನ ಛಾಪು ತೋರಬಲ್ಲೆ ಎಂಬ ಛಾತಿಯಿಂದ ಕಣದಲ್ಲಿ ಉಳಿಯಬೇಕಾಗುತ್ತದೆ. ಮಾರಿಯವರು ತಮ್ಮ ಮೂರನೇ ಸಿನಿಮಾ ‘ಮಾಮ್ಮನ್ನನ್’ ಮೂಲಕ ‘ರಾಜಕೀಯ ರೋಚಕ’ ಸಿನಿಮಾ ಪ್ರಕಾರದಲ್ಲಿ ತಮ್ಮ ಕಸುಬುದಾರಿಕೆ ತೋರಿಸಲು ಯತ್ನಿಸಿದ್ದಾರೆ.
ಕಳೆದ ಮೂರು ದಶಕಗಳ ತಮಿಳು ಸಿನಿಮಾಗಳಲ್ಲಿ ವಿಜೃಂಭಿಸಿದ ಮೇಲು ಹಾಗು ಮಧ್ಯಮ ಜಾತಿಗಳ ಯಜಮಾನಿಕೆಯ ವೈಭವೀಕರಣ ವಿಧಾನಗಳನ್ನು ಬುಡಮೇಲು ಮಾಡಿ, ದಲಿತರ ಇರುವಿಕೆಯ ಘನತೆ ಹಾಗು ಯಾವ ಜಾತೀಯ ಯಜಮಾನಿಕೆಗಳಿಗೂ ಬಗ್ಗದೆ ರಾಜಕೀಯ ಪ್ರಾತಿನಿಧ್ಯ ಪಡೆಯುವ ಸಂಕಲ್ಪಗಳನ್ನು ಪ್ರಕಟಿಸುವ ಜನಪ್ರಿಯ ಧಾಟಿಯ ಸಿನಿಮಾ ಕಟ್ಟಲು ಮುಂದಡಿ ಇಟ್ಟಿದ್ದಾರೆ. ಭಾರತದ ಸಿನಿಮಾಗಳಲ್ಲಿ ಇರುವ ಜಾತಿ ಪ್ರತಿನಿಧೀಕರಣದ ಯಜಮಾನಿಕೆಯ ಕಲಾ ರಾಜಕೀಯದ ಕಣ್ಣಿಗೆ ಕೈ ಹಾಕಿ, ತಿರುವು ಪಟ್ಟು ಹಾಕುವ ಮಾರಿಯವರ ಪ್ರಯತ್ನವು ತನ್ನಷ್ಟಕ್ಕೆ ಒಂದು ಧೀಮಂತ ಪ್ರತಿಸಂಸ್ಕೃತಿಯ ವ್ಯಾಕರಣ ಕಟ್ಟುವಿಕೆಯ ಕಸುಬಾಗಿದೆ. ಅಂಥ ಪ್ರತಿಸಂಸ್ಕೃತಿ ಹಾದಿಯ ಒಂದು ಹೆಜ್ಜೆಯಾಗಿ ‘ಮಾಮ್ಮನ್ನನ್’ ಸ್ವಾಗತಾರ್ಹ ಸಿನಿಮಾ.
ಯಜಮಾನಿಕೆಗೆ ಸೆಡ್ಡು ಹೊಡೆಯುವ ಪ್ರತಿ ಸಂಸ್ಕೃತಿಯ ಕಸುಬುದಾರಿಕೆ ಸುಲುಭದ್ದಲ್ಲ. ಯಜಮಾನ ಸಿನಿಮಾ ವ್ಯಾಕರಣವು ಈಗಾಗಲೇ ನೋಡುಗರ ಬುದ್ಧಿಭಾವಗಳಲ್ಲಿ ಸಹಮತಿ ಪಡೆದು ಅಚ್ಚಾಗಿ ಬಿಟ್ಟಿರುತ್ತದೆ; ಅವರು ಹೊಸದನ್ನು ಹಳೆಯ ಅಚ್ಚಿನಲ್ಲೇ ನೋಡಲು ಬುದ್ಧಿ ರೂಢಿಸಿಕೊಂಡು ಬಿಟ್ಟಿರುತ್ತಾರೆ. ಪ್ರತಿರೋಧಿ ಸಿನಿಮಾ ಮಾಡುವವರು ಯಜಮಾನ ಸಿನಿಮಾಗಳ ಆಟದ ನಿಯಮವನ್ನು ಪಾಲಿಸಿಯೇ ಅವರಿಗೆ ತಿರುಮಂತ್ರ ಹಾಕಬೇಕಾಗಿರುತ್ತದೆ; ಇದು ಕಷ್ಟದ ಕೆಲಸ. ಕ್ರಿಕೆಟ್ ಆಟದಲ್ಲಿ 1970ರ ದಶಕದ ವೆಸ್ಟ್ ಇಂಡಿಸ್ಸಿನ ತಂಡವು ಕಪ್ಪು ಜನರ ಕೆಚ್ಚು ಸ್ಥಾಪಿಸಲು ರೂಪಿಸಿದ ಆಟದ ಪ್ರತಿ ತಂತ್ರಗಳ ಹಾಗೆ, ಹಾಲಿವುಡ್ ಸಿನಿಮಾದಲ್ಲಿ ಸ್ಪೈಕ್ ಲೀ ತೋರಿದ ಪ್ರತಿಕಸುಬುದಾರಿಕೆಯ ಹಾಗೆ, ಭಾರತದ ಸಿನಿಮಾರಂಗದಲ್ಲಿ ಪಾ ರಂಜಿತ್, ನಾಗರಾಜ್ ಮಂಜುಳೆಯವರುಗಳು ಕಟ್ಟಿ ತೋರಿದ ಪ್ರತಿ ಪಟ್ಟುಗಳ ಹಾಗೆ – ಯಜಮಾನರ ಆಟದ ನಿಯಮಗಳನ್ನು ಅನುಸರಿಸಿಯೇ, ಯಜಮಾನಿಕೆಗೆ ತಿರುವು ಪಟ್ಟು ಹಾಕುವ ಕಲೆಯನ್ನು ಕಡೆಗಣಿತ ಜನ ಸಮುದಾಯದ ಕಲಾವಿದರು ಪ್ರದರ್ಶಿಸಿರುವರು. ಈ ಸಾಲಿನಲ್ಲಿ ಮಾರಿ ಸೆಲ್ವರಾಜು ಅವರು ಬಂದು ಸೇರಿದ್ದಾರೆ.
ಯಶಸ್ವಿ ಜನಪ್ರಿಯ ಸಿನಿಮಾಗಳು ಅಚ್ಚುಕಟ್ಟಾಗಿ ಮೂರು ಅಂಕದ ಚಿತ್ರಕಥಾ ರಚನೆ ಕಟ್ಟಿಕೊಂಡಿರುತ್ತವೆ: (1) ಮುಖ್ಯ ಪಾತ್ರಗಳ ಪರಿಸರ, ಅವುಗಳ ಪ್ರಾರಂಭಿಕ ಭಾವ ಗುಣಗಳನ್ನು ಪರಿಚಯಿಸಿ, ಅವುಗಳ ನಡುವೆ ಭಾವ ಸಂಘರ್ಷ ಹುಟ್ಟಿಸಿ ನೋಡುಗರಲ್ಲಿ ರೋಚಕ ಭಾವ ಚೋಧಿಸುತ್ತವೆ (2) ಸಂಘರ್ಷವನ್ನು ಉತ್ತುಂಗಕ್ಕೆ ಒಯ್ದು ಪ್ರೇಕ್ಷಕರನ್ನು ಭಾವಪ್ರಪಾತದಂಚಿಗೆ ತಂದು ನಿಲ್ಲಿಸುತ್ತವೆ (3) ನಿಧಾನಕ್ಕೆ ಸಂಘರ್ಷಕ್ಕೆ ಪರಿಹಾರ ಹೆಣೆದು ನೋಡುಗರಲ್ಲಿ ಭಾವ ಸಂವೇದನೆ ಹದವಾಗುವಂತೆ ಮಾಡುತ್ತವೆ.
ಇವೆಲ್ಲವನ್ನೂ ಪಾತ್ರಗಳ ಗುಣಲಕ್ಷಣಗಳ ಏರಿಳಿತದ ಮೂಲಕ, ಪಾತ್ರ ಸಂಘರ್ಷಗಳ ಏರಿಳಿತವನ್ನು ನಿಯಂತ್ರಿಸುವ ದೃಷ್ಯ ರಚನೆಗಳ ಮೂಲಕ ಸಾಧಿಸಬೇಕಾಗುತ್ತದೆ. ‘ಮಾಮ್ಮನ್ನನ್’ನಲ್ಲಿ ಪಾತ್ರಗಳ ಪರಿಸರ ನಿರೂಪಣೆ, ಅವುಗಳ ನಡುವಿನ ಸಂಘರ್ಷಗಳನ್ನು ಬಹಳ ಕಸುವಿನ ದೃಷ್ಯಕಟ್ಟುಗಳಲ್ಲಿ ಮಾರಿ ಸೆಲ್ವರಾಜು ನಿರೂಪಿಸುತ್ತಾರೆ; ಬಹಳ ಸಕ್ಷಮವಾಗಿಯೇ ಸಂಘರ್ಷದ ಉತ್ತುಂಗಕ್ಕೆ ಪ್ರೇಕ್ಷಕರ ಭಾವ ಆರೋಹಣ ಸೃಷ್ಟಿಸುತ್ತಾರೆ. ಆದರೆ ಸಂಘರ್ಷಕ್ಕೆ ಪರಿಹಾರ ರಚಿಸಿ ಭಾವ ಅವರೋಹಣ ಗತಿ ನಿಯಂತ್ರಿಸುವಲ್ಲಿ ಸಡಿಲವಾಗಿಬಿಟ್ಟಿದ್ದಾರೆ. ಇಲ್ಲಿ ಭಾವ ಸಂಘರ್ಷವು ಗೋಜಲಿನ ಜಾತಿ ಸಂಘರ್ಷವಾಗಿ ಇರುವುದರಿಂದ, ಪರಿಹಾರವು ಪ್ರೇಕ್ಷಕರ ಸಾಮಾಜಿಕ ಅನುಭವದ ವಾಸ್ತವಿಕ ಮಿತಿಗಳ ಒಳಗೇ ಇರಬೇಕು ಅಥವ ಅದನ್ನು ಮೀರಿ ಪ್ರೇಕ್ಷಕರನ್ನು ಪ್ರತಿ ವಾಸ್ತವದ ಜಗತ್ತಿಗೆ ಕೊಂಡು ಹೋಗಬೇಕು. ಈ ಆಯ್ಕೆಯ ಬಗ್ಗೆ ಮಾರಿಯವರಿಗೆ ಖಚಿತತೆ ಇದ್ದಂತಿಲ್ಲ. ಹಾಗಾಗಿ ಪಾತ್ರಗಳ ಗುಣಲಕ್ಷಣಗಳಲ್ಲಿ ಏರಿಳಿತಗಳಿಲ್ಲದೆ ಭಾವ ಅವರೋಹಣವು ತೆಳುವಾಗಿದೆ.
ಸಿನಿಮಾದ ಮೂರು ಮುಖ್ಯ ಪಾತ್ರಗಳಾದ ಮಾಮ್ಮನನ್, ರತ್ನವೇಲು ಹಾಗು ಅತಿವೀರನ್ ಪಾತ್ರಗಳ ಆರಂಭದಲ್ಲಿ ಕಟ್ಟಿಕೊಟ್ಟ ಗುಣ ಲಕ್ಷಣಗಳಲ್ಲಿ ಹೆಚ್ಚಿನ ಭಾವಪಲ್ಲಟಗಳಿಲ್ಲದ ಕಾರಣವಾಗಿ, ಕಥನದ ಭಾವಸಂಘರ್ಷಗಳು ಆಯಾ ಪಾತ್ರಗಳ ಸ್ಥಾಯಿಭಾವವನ್ನು ಬೆಳಗಿಸುವಲ್ಲಿ ದುಡಿಯುತ್ತವೆ ಹೊರತಾಗಿ ಸಂಘರ್ಷ ಪರಿಹಾರದ ಮೂರನೇ ಅಂಕಕ್ಕೆ ಲಂಗರು ಆಗುವಂತಹ ಭಾವ ಪಲ್ಲಟಗಳನ್ನು ಕಾಣುವುದಿಲ್ಲ. ಜಾತಿಸಂಘರ್ಷಗಳ ಗೋಜಲಿನ ಹೆಣಿಗೆಗೆ ವಾಸ್ತವಿಕ ಸಮಾಜದ ಪರಿಸರದಲ್ಲಿ ಕ್ರಾಂತಿಕಾರಕ ಬದಲಾವಣೆ/ಪರಿಹಾರಗಳ ಸೂಚಕಗಳು ಇವೆಯೇ? ಇದು ವೈಚಾರಿಕ ವಾಗ್ವಾದ. ಈ ವಾಗ್ವಾದವು ಸಿನಿಮಾದ ದೃಷ್ಯಕಟ್ಟುಗಳಲ್ಲಿ ಒಡಮೂಡಬೇಕಾದ ಬಗೆಯಲ್ಲಿ ಕಟ್ಟಿಕೊಂಡಿಲ್ಲ ಎಂಬುದು ಸಿನಿಮಾದ ಮಿತಿ. ಇದು ಗಟ್ಟಿ ಕಾಳಿನ ರೊಟ್ಟಿಯಾದರೂ ಬೇಯದ ಕಾರಣ ಹಸಿಯಾಗಿ ತಟ್ಟೆಗಿಟ್ಟ ಅನುಭವವಾಗುತ್ತದೆ.