ಅಭಿನಯ ಕಲೆ ಸಾನ್ಯಾ ಐಯ್ಯರ್‌ ರಕ್ತದಲ್ಲೇ ಇದೆ. ಅಮ್ಮ, ಚಿಕ್ಕಮ್ಮ ನಟಿಯರು. ಚಿಕ್ಕಮ್ಮ ಚಿತ್ರನಿರ್ದೇಶಕಿಯೂ ಹೌದು. ಆದಾಗ್ಯೂ ಸಾನ್ಯಾ ಬೆಳೆಯುತ್ತಾ ತಮ್ಮದೇ ಆದ ಒಂದು ಹಾದಿ ಕಂಡುಕೊಂಡರು. ಬಾಲನಟಿಯಾಗಿ ಬೆಳ್ಳಿತೆರೆಗೆ ಪರಿಚಯವಾದ ಅವರು ಪುಟ್ಟ ವಯಸ್ಸಿಗೇ ರಾಜ್ಯಪ್ರಶಸ್ತಿ ಪಡೆದ ಪ್ರತಿಭಾವಂತೆ. ಸಾಹಿತ್ಯ, ಆಧ್ಯಾತ್ಮದಲ್ಲೂ ಆಸಕ್ತಿ. ಕಿರುತೆರೆಯಲ್ಲಿ ಪುಟ್ಟಗೌರಿಯಾಗಿ ವೀಕ್ಷಕರಿಗೆ ಇಷ್ಟವಾದ ಸಾನ್ಯಾ Bigg Boss ಸ್ಪರ್ಧಿಯಾಗಿಯೂ ಗಮನ ಸೆಳೆದರು. ಬೆಳ್ಳಿತೆರೆ ಮೇಲೆ ಅವರನ್ನು ನಾಯಕಿಯನ್ನಾಗಿ ನೋಡುವ ದಿನಗಳು ದೂರವೇನೂ ಇಲ್ಲ!

ಮಾತಲ್ಲೇ ಮೋಡಿ ಮಾಡುವ, ನೋಟದಲ್ಲೇ ಸೆಳೆಯುವ ಸುಂದರಿ ಸಾನ್ಯಾ ಐಯ್ಯರ್‌. ಗ್ಲಾಮರ್, ಗಾಸಿಪ್, ಓದು, ಸಾಹಿತ್ಯ, ವರ್ಕೌಟ್ ಹೀಗೆ ನಾನಾ ವಿಷಯಕ್ಕೆ ಆಗಾಗ ಸುದ್ದಿಯಾಗುವ ನಟಿ ಸಾನ್ಯಾ ಅಯ್ಯರ್ ಅಂದರೆ ಅವರ ಅಭಿಮಾನಿಗಳ ಕಣ್ಣೆದುರು ಸುಳಿದು ಹೋಗುವುದೇ ಪುಟ್ಟ ಲಂಗ ತೊಟ್ಟು ಓಡಾಡುತ್ತಿದ್ದ ಗೌರಿ. ಈಗ ಆ ಗೌರಿಗೀಗ ತುಂಬು ಯೌವನ. ತೂಕದ ಮಾತು, ಅಧ್ಯಾತ್ಮದ ಅನುಭೂತಿ, ಸಾಹಿತ್ಯದ ಅಭಿರುಚಿ, ನಟನೆಯ ನಂಟಿನೊಂದಿಗೆ ಪ್ರೇಕ್ಷಕರೆದುರಾಗುತ್ತಾರೆ ಆಗಾಗ. ಬಿಗ್‌ಬಾಸ್ ಒಟಿಟಿಯಿಂದಾಗಿ ಮತ್ತಷ್ಟು ಹತ್ತಿರವಾದರು. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುವ ಅವರು ಆಗಾಗ ರೀಲ್ಸ್ ಮೂಲಕ ಮೋಡಿ ಮಾಡುತ್ತಾರೆ. ವರ್ಕೌಟ್ ವಿಡಿಯೋಗಳ ಹಂಚಿಕೊಳ್ಳುವುದರ ಜತೆಗೆ ಸ್ವರಚಿತ ಕವನಗಳ ಮೂಲಕ ಸಹೃದಯರ ಮನ ತಟ್ಟುತ್ತಾರೆ.

ಹುಟ್ಟಿಂದಲೇ ಜತೆಗಿತ್ತು ಬಣ್ಣದ ನಂಟು
ಕಿರುತೆರೆ ನಟಿ ದೀಪಾ ಅಯ್ಯರ್ ಮಗಳಾದ ಸಾನ್ಯಾ ಅವರಿಗೆ ನಟನೆಯ ಜಗತ್ತು ಅಮ್ಮನ ಮಡಿಲಲ್ಲಿರುವಾಗಲೇ ಪರಿಚಿತವಾಗಿತ್ತು. ಪ್ರೀತಿಯ ಚಿಕ್ಕಮ್ಮ ರೂಪ ಐಯ್ಯರ್ ನಿರ್ದೇಶನದ ಹಾದಿಯ ಗುರುತು ಅಂಬೆಗಾಲಿಡುವಾಗಲೇ ಸಿಕ್ಕಿ ಬಿಟ್ಟಿತ್ತು. ನಟನೆ, ನಿರ್ದೇಶನದ ಸೊಗಡಿನ ಕುಟುಂಬದ ಮುದ್ದಿನ ಮಗಳಾದ ಸಾನ್ಯಾ ನಟನೆಗೆ ಇಳಿದಾಗ ನರ್ಸರಿ ಓದುವ ಮಗು. ತಾಯಿ ದೀಪಾ ಐಯ್ಯರ್ ಅವರು ಶೂಟಿಂಗ್‌ಗೆ ಹೋಗುವಾಗಲೆಲ್ಲ ಮಗಳನ್ನು ಕರೆದುಕೊಂಡು ಹೋಗುತ್ತಿದ್ದರಂತೆ. ಅಲ್ಲೆಲ್ಲ ಅಭಿಮಾನಿಗಳು ದೀಪಾ ಅವರನ್ನು ಸುತ್ತುವರಿಯುತ್ತಿದ್ದದ್ದು, ಆಟೋಗ್ರಾಫ್ ಕೇಳುತ್ತಿದ್ದನ್ನು ನೋಡಿದಾಗಲೆಲ್ಲ ಆಕರ್ಷಕ ಎನಿಸುತ್ತಿತ್ತಂತೆ. ಅವರ ಮೊದಲ ನಟನೆಯ ಜರ್ನಿ ಶುರುವಾಗಿದ್ದೇ DD1ರಲ್ಲಿ. ಆಗ ಸಾನ್ಯಾ ಯುಕೆಜಿಯಲ್ಲಿದ್ದರು. ಹೀಗೆ ಒಂದಾದ ಮೇಲೊಂದು ಧಾರಾವಾಹಿ, ಸಿನಿಮಾಗಳಲ್ಲಿ ಅಭಿನಯಿಸುತ್ತಾ ಬಂದವರು ಸಾನ್ಯಾ. ‘ಹಲವಾರು ಧಾರಾವಾಹಿಗಳಲ್ಲಿ ಬಾಲ ಕಲಾವಿದೆಯಾಗಿ ಅಭಿನಯಿಸುತ್ತಾ ನಟನೆಯ ಬಗೆಗಿನ ಆಕರ್ಷಣೆ ಪ್ಯಾಷನ್‌ ಆಗಿ ಬದಲಾಯ್ತು. ಆದರೆ ಪಾತ್ರ ಮಾಡ್ತಾ ಮಾಡ್ತಾ ಅರ್ಥ ಆಯ್ತು, ನಾನು ನಾನಾಗೇ ಇದ್ದುಕೊಂಡು ಇನ್ನೊಂದು ಪಾತ್ರಕ್ಕೆ ಜೀವ ತುಂಬುವುದಿದೆಯಲ್ಲ ಅದೇ ಚಾಲೆಂಜಿಂಗ್ ಅಂತ’ ಎನ್ನುತ್ತಾರೆ ಸಾನ್ಯ.

ಮೊದಲ ಸಿನಿಮಾದ ಅನುಭವ
ಬಣ್ಣ ಹಚ್ಚಿ ಗೊತ್ತು, ಕ್ಯಾಮೆರಾ ಎದುರು ನಿಂತು ಸಹ ಗೊತ್ತು. ಆದರೆ ಸಿನಿಮಾ ಅಂದಾಗ ನಡುಗಿದ್ದರಂತೆ. ಹೌದು, ದರ್ಶನ್ ಅವರ ‘ಗಜ’ ಸಿನಿಮಾದಲ್ಲಿ ಅವರ ಅಣ್ಣನ ಮಗಳ ಪಾತ್ರ ಮಾಡಿದ್ದ ಸಾನ್ಯ ‘ಲಂಬು ಲಂಬು ಲಂಬುಜೀ’ ಹಾಡಿನಲ್ಲಿ ದರ್ಶನ್ ಅವರ ಕಾಲುಗಳ ನಡುವೆ ನುಸುಳುವ ಸೀನ್ ಮಾತ್ರ ಮಾಡಲು ಆಗಲೇ ಇಲ್ಲವಂತೆ. ‘ನಾನು ದರ್ಶನ್ ಅವರ ಸಿನಿಮಾಗಳನ್ನು ನೋಡಿದ್ದೆ. ಆದರೆ ಅವರ ಜತೆ ಅಭಿನಯಿಸಲು ಅವಕಾಶ ಸಿಕ್ಕಾಗ, ಅವರನ್ನು ನೇರವಾಗಿ ನೋಡಿದಾಗ ಯಾಕಷ್ಟು ನರ್ವಸ್ ಆದೆನೋ ಗೊತ್ತಿಲ್ಲ. ಆದರೆ ಆ ಸಿನಿಮಾದ ನಾಯಕಿ ನವ್ಯಾ ನಾಯರ್ ನನ್ನನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದ ರೀತಿ ಇನ್ನೂ ಮನದಲ್ಲಿ ಅಚ್ಚುಳಿಯದೆ ಇದೆ. ಇನ್ನೊಂದು ಮರೆಯಲಾಗದ ಅನುಭವ ಅಂದರೆ ‘ಮುಖಪುಟ’ ಸಿನಿಮಾದಲ್ಲಿ ಎಚ್‌ಐವಿ ಪಿಡೀತ ಮಗುವಾಗಿ ನಟಿಸಿದ್ದೆ. ಆ ಸಮಯದಲ್ಲಿ ಅಂತಹ ಮಕ್ಕಳ ಜತೆ ಒಡನಾಡುತ್ತಾ, ಅವರ ಭಾವನೆಗಳನ್ನೆಲ್ಲ ಅಹ್ವಾನಿಸಿಗೊಳ್ಳುತ್ತಾ ನಟಿಸುವುದು ಸವಾಲಾಗಿತ್ತು’ ಎನ್ನುತ್ತಾರೆ.

ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಸಾನಾ ಅವರಿಗೆ ‘ವಿಮುಕ್ತಿ’ ಸಿನಿಮಾ ಉತ್ತಮ ಬಾಲ ನಟಿ ರಾಜ್ಯ ಪ್ರಶಸ್ತಿ ತಂದುಕೊಟ್ಟಿತು. ಈ ಬಗ್ಗೆ ಅವರು ಹೇಳುವಂತೆ ‘ವಿಮುಕ್ತಿ ಸಿನಿಮಾಕ್ಕೆ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಬಂದಿದ್ದು ಅಮೂಲ್ಯ ಗಳಿಗೆ. ಆ ಸಿನಿಮಾ ಕಾಶಿ, ವಾರಾಣಸಿ ಸುತ್ತಮುತ್ತ ಶೂಟ್ ಆಗಿದ್ದು. ಆ ಸಿನಿಮಾದ ಶೂಟ್‌ಗೆ ಅಜ್ಜಿ ಜತೆ ರೈಲಲ್ಲಿ ಹೋಗಿದ್ದು, ಆಟ ಆಡಿದ್ದೆಲ್ಲ ನೆನಪಿದೆ. ಪ್ರಶಸ್ತಿ ಬಂದಾಗ ಅದರ ಮೌಲ್ಯ ಗೊತ್ತಿರಲಿಲ್ಲ. ಇವತ್ತು ತಿರುಗಿ ನೋಡಿದಾಗ ಅದನ್ನು ಪಡೆಯುವುದರ ಹಿಂದಿನ ಶ್ರಮ ಎಷ್ಟು ಎಂಬುದು ಅರಿವಾಗಿದೆ’ ಎನ್ನುತ್ತಾರೆ.

ಕನ್ನಡ ಪ್ರೇಮ
ಕನ್ನಡದಲ್ಲಿ ಸುಂದರವಾಗಿ ಮಾತಾಡುವುದಷ್ಟೇ ಅಲ್ಲ, ಕನ್ನಡದಲ್ಲಿ ಕವನ ಬರೆಯುವ ಸಾನ್ಯ ಯುವ ಕವಯತ್ರಿ. ಆಗಾಗ ಕವನಗಳ ಮೂಲಕ ಅಭಿಮಾನಿಗಳ ಹೃದಯ ಗೆಲ್ಲುವ ತಾಕತ್ತು ಅವರಿಗಿದೆ. ಕನ್ನಡ ಅಂದರೆ ಅಪ್ಪಟ ಅಭಿಮಾನ ತೋರುವ ಸಾನ್ಯ ಅವರ ಮನೆಯ ವಾತಾವರಣ ಕನ್ನಡಮಯವಾಗಿತ್ತಂತೆ. ತಮಗೆ ಸುಂದರವಾಗಿ ಕನ್ನಡ ಕಲಿಸಿದ ವೃತ್ತಿಯಲ್ಲಿ ಶಾಲಾ ಶಿಕ್ಷಕಿಯಾಗಿದ್ದ ಅಜ್ಜಿಯನ್ನು ನೆನಪಿಸಿಕೊಳ್ಳುತ್ತಾರೆ. ಕನ್ನಡದ ಬಗೆಗಿನ ಒಲವು ಮೂಡಿಸಿದ್ದೇ ಅಜ್ಜಿ ಎನ್ನುವ ಅವರು ತಾವು ಕಲಿತ ಶಾಲೆಯ ದಿನಗಳನ್ನು ಸಹ ನೆನಪಿಸಿಕೊಳ್ಳುತ್ತಾರೆ. ಶಾಲೆಯಲ್ಲಿ ತಮ್ಮ ನಟನೆಗೆ ಶಿಕ್ಷಕರ ಸಹಕಾರ, ಸ್ನೇಹಿತರ ಪ್ರೋತ್ಸಾಹ ಸಾಕಷ್ಟು ಇತ್ತು ಎನ್ನುತ್ತಾರೆ. ನಟನೆಯ ನಡುವೆ ಓದನ್ನು ನಿರ್ಲಕ್ಷಿಸದ ಅವರು ಓದಿಗಾಗಿಯೇ ಸಮಯ ಮೀಸಲಿಡುತ್ತಿದ್ದರಂತೆ. ಶೂಟಿಂಗ್‌ನಲ್ಲಿದ್ದರೂ ಬ್ರೇಕ್ ಸಿಕ್ಕಾಗೆಲ್ಲ ತರಗತಿಗೆ ಸಂಬಂಧಿಸಿದ ಓದಿನತ್ತ ಇವರ ಗಮನ ಇರುತ್ತಿತ್ತು. ಬದುಕಿನಲ್ಲಿ ವಿದ್ಯೆ ಅತ್ಯಗತ್ಯ ಎಂದು ಅರಿತಿದ್ದ ಅವರು ಓದನ್ನು ಮಾತ್ರ ಅರ್ಧಕ್ಕೆ ನಿಲ್ಲಿಸಲೇ ಇಲ್ಲ.

ನಟನೆಗೆ ಬಾಲ್ಯ ಬಲಿಯಾಯ್ತ?
ಮಕ್ಕಳು ಸೆಲೆಬ್ರಿಟಿಗಳಾದಾಗ ಅಥವಾ ನಟನೆ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಾಗ ಅವರ ಬಾಲ್ಯದ ಸಹಜ ಆಟ, ಹಠ ಎಲ್ಲವೂ ತಪ್ಪಿ ಹೋಗುತ್ತದೆ ಎಂದೇ ಹಲವರು ಭಾವಿಸುತ್ತಾರೆ. ಆದರೆ ಸಾನ್ಯ ಮಾತ್ರ ತಮ್ಮ ಬಾಲ್ಯವನ್ನು ಕಿಂಚಿತ್ತೂ ಮಿಸ್ ಮಾಡಿಕೊಂಡವರೇ ಅಲ್ಲ. ‘ಶಾಲೆ ಹಾಗೂ ನಟನೆ ಮ್ಯಾನೇಜ್ ಮಾಡಬೇಕಿದ್ದರೂ ನಾನು ಬಾಲ್ಯ ಕಳೆದುಕೊಂಡಿಲ್ಲ. ಬೀದಿ ಬೀದಿ ಸುತ್ತಿಕೊಂಡು ಆಟ ಆಡಿಕೊಂಡು ಇದ್ದೆ’ ಎನ್ನುತ್ತಾರೆ.

ಪುಟ್ಟ ಗೌರಿ ಕೊಟ್ಟ ಬ್ರೇಕ್
ಸಾನ್ಯಾ ಅವರನ್ನು ‘ಪುಟ್ಟ ಗೌರಿ ಮದುವೆ’ ಧಾರಾವಾಹಿಯ ಮೂಲಕವೇ ಜನ ಗುರುತಿಸುತ್ತಾರೆ. ಆದರೆ ಅದಕ್ಕೂ ಮುಂಚೆ ಸಾಕಷ್ಟು ಧಾರಾವಾಹಿ, ಸಿನಿಮಾ ಮಾಡಿದ್ದರೂ ಅವರನ್ನು ಜನ ಅಷ್ಟಾಗಿ ಗುರುತಿಸಿಲ್ಲ. ಈ ಬಗ್ಗೆ ಅವರು ಹೇಳುವುದು ಏನು ಅಂದರೆ ‘ತುಂಬ ಜನ ಪುಟ್ಟಗೌರಿಯೇ ನನ್ನ ಮೊದಲ ಧಾರಾವಾಹಿ ಎಂದುಕೊಂಡಿದ್ದಾರೆ. ಆದರೆ ಅದಕ್ಕೂ ಮುನ್ನ ಬಣ್ಣದ ಜಗತ್ತಿನಲ್ಲಿ ಸಾಕಷ್ಟು ವಿಹರಿಸಿದ್ದೇನೆ, ಶ್ರಮಿಸಿದ್ದೇನೆ. ಅದ್ಯಾವಾಗಲೂ ಸಿಗದ ಯಶಸ್ಸನ್ನು ಪುಟ್ಟಗೌರಿ ಮದುವೆ ತಂದುಕೊಟ್ಟಿತು. ನನಗೆ ಬ್ರೇಕ್ ಕೊಟ್ಟ ಧಾರಾವಾಹಿ ಇದು’ ಎನ್ನುತ್ತಾರೆ. ಐದನೇ ತರಗತಿ ನಂತರ ನಟನೆಯಿಂದ ಕೊಂಚ ದೂರ ಇರಬೇಕು. ಓದಿನ ಕಡೆ ಗಮನ ನೀಡಬೇಕು ಎಂದುಕೊಂಡಿದ್ದ ಸಾನ್ಯಾ ಅವರನ್ನು ‘ಪುಟ್ಟ ಗೌರಿ ಮದುವೆ’ ಸೆಳೆಯಿತು. ಬಾಲ್ಯದಲ್ಲೇ ಮದುವೆಯಾಗಿ ಅತ್ತೆ ಮನೆಗೆ ಹೋಗಿ ಅಲ್ಲಿ ತನ್ನ ಬದುಕನ್ನು ಹೇಗೆ ರೂಪಿಸಿಕೊಳ್ಳುತ್ತಾಳೆ ಎಂಬ ಸವಾಲಿನ ಹಾಗೂ ಸಾಮಾಜಿಕ ಸಂದೇಶ ಒಳಗೊಂಡ ಧಾರಾವಾಹಿ ಒಪ್ಪಿಕೊಳ್ಳದೆ ಇರಲು ಆಗಲಿಲ್ಲ ಎನ್ನುತ್ತಾರೆ.

ಡ್ಯಾನ್ಸ್ ಅಂದರೆ ಭಯ!
ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಡಾನ್ಸ್ ಮೂಲಕ ಸೆಳೆಯುವ ಸಾನ್ಯ ಡಾನ್ಸ್ ರಿಯಾಲಿಟಿ ಶೋಗಳಲ್ಲೂ ಮಿಂಚಿದವರು. ಅಂತಹ ಡಾನ್ಸರ್‌ಗೆ ನೃತ್ಯ ಅಂದರೆ ಭಯ ಅಂದರೆ ನಂಬುತ್ತೀರ? ‘ನನಗೆ ಬಾಲ್ಯದಿಂದಲೂ ನೃತ್ಯ ಅಂದರೆ ಅಷ್ಟಕಷ್ಟೆ. ನನಗೆ ನೃತ್ಯ ಮಾಡಲು ಬರುವುದಿಲ್ಲ ಎಂಬ ಹಿಂಜರಿಕೆ ಇತ್ತು. ‘ಪುಟ್ಟ ಗೌರಿ ಮದುವೆ’ ಧಾರಾವಾಹಿ ಸಂದರ್ಭದಲ್ಲಿ ಆಗಾಗ ನಡೆಯುವ ಚಾನೆಲ್‌ನ ಇವೆಂಟ್‌ಗಳಿಗೆ ಡಾನ್ಸ್ ಮಾಡಬೇಕಾಗುತ್ತಿತ್ತು. ಆದರೆ ಕೋರಿಯಾಗ್ರಫರ್ ಕಣ್ಣಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದೆ. ಆ ಮಟ್ಟಿಗೆ ನೃತ್ಯ ಅಂದರೆ ಭಯ ಅಂತಿದ್ದವಳನ್ನು ಡಾನ್ಸ್ ರಿಯಾಲಿಟಿ ಶೋ ಹೇಗೆ ಹುಡುಕಿಕೊಂಡು ಬಂತು ಅಂತಲೇ ಗೊತ್ತಿಲ್ಲ’ ಎನ್ನುತ್ತಾರೆ.

‘ಡ್ಯಾನ್ಸಿಂಗ್ ಸ್ಟಾರ್‌’ಗೆ ಕರೆ ಬಂದಾಗ ದಂಗಾಗಿ ಹೋಗಿದ್ದರಂತೆ. ಇಂಥದ್ದೊಂದು ಅವಕಾಶ ಡ್ಯಾನ್ಸ್ ಬಗೆಗಿನ ಭಯ ಹೋಗಲಾಡಿಸಲಿಕ್ಕಾಗಿಯೇ ಬಂದಿರಬಹುದು ಎಂದುಕೊಂಡೇ ಹೆಜ್ಜೆ ಹಾಕಿ ಸೈ ಎನಿಸಿಕೊಂಡರು. ನೃತ್ಯವೇ ಗೊತ್ತಿಲ್ಲದವರು ಇದೇ ವೇದಿಕೆಯಲ್ಲಿ ಫಿನಾಲೆ ತಲುಪಿದ್ದೇ ದೊಡ್ಡ ವಿಷಯವಾಗಿತ್ತಂತೆ. ಇಂದು ಅದೇ ನೃತ್ಯ ಅವರ ಫಿಟ್‌ನೆಸ್ ಗುರು. ವರ್ಕೌಟ್ ಕ್ರೇಜ್ ಸಿಕ್ಕಾಪಟ್ಟೆ ಇದೆ ಅವರಿಗೆ. ಜಿಮ್‌ನಲ್ಲಿ ದೇಹ ದಂಡಿಸುವುದರ ಜತೆ ನೃತ್ಯ ಕೂಡ ಅವರ ವರ್ಕೌಟ್‌ನ ಭಾಗವಾಗಿ ಹೋಗಿದೆ.

ಅಧ್ಯಾತ್ಮ ಸೆಳೆತ
ಮಹಿಳಾ ಪ್ರಧಾನ ಕುಟುಂಬದಲ್ಲೇ ಜನಿಸಿದ ಸಾನ್ಯಾ ಅವರ ಅಜ್ಜಿ, ತಾಯಿ ಹಾಗೂ ಚಿಕ್ಕಮ್ಮನ ಬದುಕು ಕೂಡ ಸರಳವಾಗಿರಲಿಲ್ಲ. ಕೌಟುಂಬಿಕವಾಗಿ ಸಾಕಷ್ಟು ಏಳುಬೀಳು ಕಂಡಿರುವ ಕುಟುಂಬದ ನಡುವೆ ಹೆಣ್ತನದ ನೋವು, ನಲಿವು, ಸ್ವತಂತ್ರ ಬದುಕು, ಸಾಧಿಸುವ ಛಲ ಕೂಡ ಅವರ ಕೌಟುಂಬಿಕ ವಾತಾವರಣವೇ ಅವರಿಗೆ ಕಲಿಸಿಕೊಟ್ಟಿದೆ. ‘ಮಹಿಳೆಯರ ಪರ ನಿಂತಾಗ ಮಹಿಳಾವಾದ ಎನ್ನುತ್ತಾರೆ. ಇದನ್ನು ಕೆಲವರು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಅದು ಸಮಾನತೆ ಅಷ್ಟೆ. ಚಿಕ್ಕ ವಯಸ್ಸಿನಲ್ಲೇ ನನ್ನ ಅಮ್ಮ, ಚಿಕ್ಕಮ್ಮ ತಂದೆ ಕಳೆದುಕೊಂಡು ಹೋರಾಡಿದ್ದಾರೆ. ಅಜ್ಜಿ ಮೂರು ಹೆಣ್ಣುಮಕ್ಕಳನ್ನು ಬೆಳೆಸಿದ್ದಾರೆ. ಬದುಕು ಎದುರಿಸುವ ಗಟ್ಟಿತನ ತುಂಬಿದ್ದು ನನ್ನ ಅಜ್ಜಿ ಹಾಗೂ ನನ್ನ ಅಮ್ಮ, ಚಿಕ್ಕಮ್ಮ’ ಎನ್ನುತ್ತಾರೆ.https://youtu.be/hv3jwlDODtc

ಸಾನ್ಯಾ ಅವರ ಹರೆಯದ ಬದುಕಿನಲ್ಲೂ ಒಂದಷ್ಟು ಏಳುಬೀಳು. ಮನಸ್ಸು ಹಿಡಿತಕ್ಕೆ ಸಿಗುತ್ತಿರಲಿಲ್ಲ. ಆಗಾಗ ಕಾಡುತ್ತಿದ್ದ ಹತಾಶೆ ಬದುಕಿನಲ್ಲಿ ಆಸಕ್ತಿಯನ್ನೇ ಕಸಿದುಕೊಂಡು ಬಿಟ್ಟಿತ್ತು. ಈ ಕುರಿತಾಗಿ ಅಮ್ಮನ ಬಳಿ ತಮ್ಮ ತೊಳಲಾಟ ಹೇಳಿಕೊಂಡಾಗ ಅವರು ರೇಖಿಯ ಬಗ್ಗೆ ಹೇಳಿದ್ದರಂತೆ. ಬದುಕಿನ ಬಗ್ಗೆ ಯಾರೇ ಸಲಹೆಕೊಟ್ಟರೂ, ಸಂತೈಸಿದರೂ ನಾನು ಬದಲಾಗಲಾರೆ. ನನ್ನನ್ನು ನಾನೇ ಸಂತೈಸಿಕೊಳ್ಳಬೇಕು ಎಂದುಕೊಂಡವರು ಧ್ಯಾನ, ಅಧ್ಯಾತ್ಮ ಬದುಕಿನತ್ತ ಹೆಚ್ಚೆಚ್ಚು ಗಮನ ಹರಿಸಿದರಂತೆ. ಮೊದಲೆಲ್ಲ ಧ್ಯಾನ ಅಂದರೆ ಹೀಯಾಳಿಸುತ್ತಿದ್ದವರಿಗೆ ಅವರ ಮನದ ಏರಿಳಿತವನ್ನು ಸಮತೋಲನಕ್ಕೆ ತರಲು ಇದೇ ಅಧ್ಯಾತ್ಮ ಜಗತ್ತು ಸಹಕಾರಿ ಆಗಿದೆಯಂತೆ. ಕತ್ತಲಿಂದ ಬೆಳಕಿನೆಡೆ ನಡೆಯಲು ಮಾರ್ಗ ತೋರಿದೆಯಂತೆ.

LEAVE A REPLY

Connect with

Please enter your comment!
Please enter your name here