ಬಹುಭಾಷಾ ಚಿತ್ರವೊಂದು ಸೆಟ್ಟೇರುತ್ತಿದ್ದು ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಪ್ರಮುಖ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ದಕ್ಷಿಣ ಭಾರತ ಹಾಗೂ ಹಿಂದಿ ಚಿತ್ರರಂಗದ ಖ್ಯಾತನಾಮರು ಚಿತ್ರದ ಪೋಷಕ ಪಾತ್ರಗಳಲ್ಲಿರುತ್ತಾರೆ ಎನ್ನುವುದು ವಿಶೇಷ.
‘ಜೊತೆಜೊತೆಯಲಿ’ ಸೀರಿಯಲ್ ಮೂಲಕ ಮನೆಮಾತಾಗಿರುವ ಮೇಘಾ ಶೆಟ್ಟಿ ಬಹುಭಾಷಾ ಚಿತ್ರವೊಂದರ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ‘ಜಿಲ್ಕಾ ಸಿನಿಮಾದೊಂದಿಗೆ ಕನ್ನಡ, ಹಿಂದಿ ಮತ್ತು ಮರಾಠಿ ಚಿತ್ರರಂಗಗಳಲ್ಲಿ ಛಾಪು ಮೂಡಿಸಿರುವ ಕವೀಶ್ ಶೆಟ್ಟಿ ಹೀರೋ ಆಗಿ ನಟಿಸುವುದು ಖಾತ್ರಿಯಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ ತಯಾರಾಗಲಿರುವ ಈ ಚಿತ್ರಕ್ಕಿನ್ನೂ ಶೀರ್ಷಿಕೆ ನಿಗಧಿಯಾಗಿಲ್ಲ. ಕನ್ನಡ, ತೆಲುಗು ಮತ್ತು ತಮಿಳು ಬಹುಭಾಷಾ ಸಿನಿಮಾಗಳ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಿರುವ ಸಡಗರ ರಾಘವೇಂದ್ರ ಈ ನೂತನ ಚಿತ್ರದ ಸಾರಥ್ಯ ವಹಿಸಲಿದ್ದಾರೆ.
“ನಮ್ಮ ಸಂಸ್ಥೆಯ ಮೂಲಕ ನಿರ್ಮಾಣವಾಗುವ ಮೊದಲನೇ ಚಿತ್ರಕ್ಕೆ ಒಂದು ಅದ್ಧೂರಿತನದ ಅದ್ಭುತ ಕಥೆಯನ್ನೇ ಆಯ್ಕೆ ಮಾಡಿದ್ದೇವೆ. ಕನ್ನಡ, ಮರಾಠಿ ಮತ್ತು ಇತರ ಭಾಷೆಗಳ ಸ್ಟಾರ್ ನಟರ ದಂಡು ಈ ಚಿತ್ರದಲ್ಲಿ ಇರಲಿದೆ ಮತ್ತು ಪ್ರತಿಯೊಂದು ವಿಭಾಗದಲ್ಲೂ ಚಿತ್ರರಂಗದ ನುರಿತ ತಂತ್ರಜ್ಞರ ದೊಡ್ಡ ತಂಡ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದೆ” ಎನ್ನುತ್ತಾರೆ ನಿರ್ಮಾಪಕ ವಿಜಯ್ ಕುಮಾರ್ ಶೆಟ್ಟಿ. ವಿಜಯ್ ಕುಮಾರ್ ಶೆಟ್ಟಿ ಮತ್ತು ರಮೇಶ್ ಕೊಠಾರಿ ತಮ್ಮ ಕ್ಲಾಸಿಕ್ ಸ್ಟುಡಿಯೋ ಅಂಗಸಂಸ್ಥೆಯ ಅಡಿಯಲ್ಲಿ ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಎನ್ನುವ ನಿರ್ಮಾಣ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಇವರೊಂದಿಗೆ ಮರಾಠಿ ಚಿತ್ರರಂಗದ ಪ್ರತಿಷ್ಠಿತ ದೀಪಕ್ ರಾಣೆ ಫಿಲ್ಮ್ಸ್ ಕೈ ಜೋಡಿಸಿದ್ದಾರೆ. ಸದ್ಯದಲ್ಲೇ ಚಿತ್ರದ ಶೀರ್ಷಿಕೆ ಅನಾವರಣಗೊಳ್ಳಲಿದ್ದು, ನವೆಂಬರ್‌ನಲ್ಲಿ ಶೂಟಿಂಗ್ ಶುರುವಾಗಲಿದೆ.