ಮಾಡೆಲಿಂಗ್‌ ಮೂಲಕ ಗ್ಲಾಮರ್‌ ಜಗತ್ತಿಗೆ ಪರಿಚಯವಾದ ನಟಿ ಸುಶ್ಮಿತಾ ದಾಮೋದರ್‌ ‘ಡಾರ್ಕ್‌ ಫ್ಯಾಂಟಸಿ’ ಕನ್ನಡ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಈ ಚಿತ್ರದ ಬಿಡುಗಡೆಗೆ ಮುನ್ನವೇ ಅವರಿಗೆ ‘ಚಾಯ್‌ ಕಹಾನಿ’ ತೆಲುಗು ಸಿನಿಮಾಗೆ ಅವಕಾಶ ಒದಗಿಬಂದಿದೆ.

ಮಾಡಲಿಂಗ್ ಕ್ಷೇತ್ರದಿಂದ ಸಿನಿಮಾಗೆ ಬಂದ ಹಲವರು ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಸುಶ್ಮಿತಾ ದಾಮೋದರ್. ಎಂಬಿಎ ಮುಗಿಸಿ 2017ರಲ್ಲಿ ಮಾಡಲಿಂಗ್ ಲೋಕ ಪ್ರವೇಶಿಸಿದ್ದ ಸುಶ್ಮಿತಾ, ಅದೇ ವರ್ಷ ‘ಮಿಸ್ ಬೆಂಗಳೂರು’ ಟೈಟಲ್ ಪಡೆದರೆ 2018ರಲ್ಲಿ ‘ಮಿಸ್ ಕರ್ನಾಟಕ’ ಸ್ಪರ್ಧೆಯಲ್ಲಿ ಮೊದಲ ರನ್ನರ್ ಆಪ್ ಆಗಿದ್ದರು. 2019ರಲ್ಲಿ ಅಂತಾರಾಷ್ಟ್ರೀಯ ರೂಪದರ್ಶಿ ಸ್ಪರ್ಧೆಯಲ್ಲಿಯೂ ಭಾಗವಹಿಸಿ ಭಾರತವನ್ನು ಪ್ರತಿನಿಧಿಸಿದ್ದರು. ಅವರಿಗೆ ಸಿನಿಮಾನಟಿಯಾಗಿ ಗುರುತಿಸಿಕೊಳ್ಳುವ ಇರಾದೆಯಿತ್ತು. ‘ಡಾರ್ಕ್‌ ಫ್ಯಾಂಟಸಿ’ ಕನ್ನಡ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.

ಸುಶ್ಮಿತಾಗೆ ಆರಂಭದಲ್ಲಿ ಕಿರುತೆರೆಯ ಸಾಕಷ್ಟು ಅವಕಾಶಗಳು ಅರಸಿ ಬಂದಿದ್ದವು. ಆದರೆ, ಅದ್ಯಾವುದನ್ನೂ ಒಪ್ಪದೆ ಸಿನಿಮಾ ಅವಕಾಶಕ್ಕಾಗಿ ಕಾಯುತ್ತಿದ್ದರು. ಕಾಲೇಜು ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸಿದ ಹಿನ್ನೆಲೆ ಇರುವ ಸುಶ್ಮಿತಾಗೆ ಆಗ ಸಿಕ್ಕ ಅವಕಾಶವೇ ಫಣೀಶ್ ಭಾರದ್ವಾಜ್ ನಿರ್ದೇಶನದ ‘ಡಾರ್ಕ್​ ಫ್ಯಾಂಟಸಿ’ ಸಿನಿಮಾ. ಇದೀಗ ಚಿತ್ರೀಕರಣ ಪೂರ್ಣಗೊಳಿಸಿರುವ ಸುಶ್ಮಿತಾ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದಾರೆ. ಇತ್ತ ಅದೇ ನಿರ್ದೇಶಕರ ಮತ್ತೊಂದು ಸಿನಿಮಾ ‘ಆಡಿಸಿದಾತ’ದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಅವರದಾಗಿದೆ. ಪುನೀತ್ ನಿಧನದ ಬಳಿಕ ಆ ಪ್ರಾಜೆಕ್ಟ್ ಆರಂಭ ವಿಳಂಬವಾಗಿತ್ತು. ಇದೀಗ ಮತ್ತೆ ‘ಆಡಿಸಿದಾತ’ ಸಿನಿಮಾ ಕೆಲಸ ಶುರುವಾಗಿದ್ದು, ಶೀಘ್ರದಲ್ಲಿಯೇ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಚೊಚ್ಚಲ ಸಿನಿಮಾ ಬಿಡುಗಡೆಗೆ ಮುನ್ನವೇ ಮತ್ತೊಂದು ಚಿತ್ರದ ಅವಕಾಶ ಪಡೆದಿರುವ ಸುಶ್ಮಿತಾ ತೆಲುಗಿನ ‘ಚಾಯ್ ಕಹಾನಿ’ ಸಿನಿಮಾಗೆ ಸಹಿ ಹಾಕಿದ್ದಾರೆ. ಕಮರ್ಷಿಯಲ್ ಕತೆ ಇರುವ ಈ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟಿಸಲಿದ್ದಾರೆ. ಇದಷ್ಟೇ ಅಲ್ಲ ಶಾಲಾ ದಿನಗಳಿಂದಲೂ ನೃತ್ಯದ ಮೇಲೆ ಆಸಕ್ತಿ ಹೊಂದಿರುವ ಸುಶ್ಮಿತಾ, ಡಾನ್ಸ್​ನಲ್ಲಿಯೂ ಅಷ್ಟೇ ಪರಿಣತಿ ಹೊಂದಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ‘ಪ್ರೇಮಂ ಪೂಜ್ಯಂ’ ಸಿನಿಮಾಕ್ಕೆ ಹಿನ್ನೆಲೆ ಸಂಗೀತ ಮಾಡಿದ ಎಂ.ಎಸ್​. ತ್ಯಾಗರಾಜ್ ಅವರ ‘ಟ್ರುಥ್ ಆರ್ ಡೇರ್’ ಆಲ್ಬಂ ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಅನನ್ಯಾ ಭಟ್ ಹಾಡಿಗೆ ಧ್ವನಿ ನೀಡಿದ್ದು, ಇನ್ನೇನು ಶೀಘ್ರದಲ್ಲಿಯೇ ಈ ಹಾಡು ಬಿಡುಗಡೆಯಾಗಲಿದೆ.

”ಸಣ್ಣ ಪುಟ್ಟ ಪಾತ್ರಗಳು ಸಾಕಷ್ಟು ಬರುತ್ತಿವೆ. ಆದರೆ, ನಾನು ನಟನೆಗೆ ಸ್ಕೋಪ್‌ ಇರುವಂತಹ ಪಾತ್ರಗಳ ಹುಡುಕಾಟದಲ್ಲಿದ್ದೇನೆ. ಜನರನ್ನು ತಲುಪಲು ಅವರ ಮನಸ್ಸಿನಲ್ಲಿ ಉಳಿಯುವಂಥ ಪಾತ್ರ ಬೇಕಿದೆ. ಈಗಾಗಲೇ ನಟಿಸಿದ ಎರಡು ಸಿನಿಮಾಗಳಲ್ಲಿ ಅಂತಹ ಅಂಶಗಳಿವೆ. ಕನ್ನಡ, ಹಿಂದಿ ಧಾರಾವಾಹಿಗಳಿಗೂ ಕರೆ ಇದೆ. ಆದರೆ, ನನ್ನ ಗುರಿ ಸಿನಿಮಾ. ಇದೆಲ್ಲದರ ಜತೆಗೆ ವರನಟ ಡಾ.ರಾಜಕುಮಾರ್‌ ಕುಟುಂಬದವರ ಆಶೀರ್ವಾದವೂ ಬೆನ್ನಿಗಿದೆ. ರಾಜಕುಮಾರ್‌ ಪುತ್ರಿ ಲಕ್ಷ್ಮೀ ಅಕ್ಕ ಮತ್ತು ಎಸ್​.ಎ.ಗೋವಿಂದರಾಜು ಅವರ ಸಲಹೆ, ಸೂಚನೆಗಳೊಂದಿಗೆ ಚಿತ್ರರಂಗದಲ್ಲಿ ಮುಂದುವರೆಯುತ್ತಿದ್ದೇನೆ” ಎನ್ನುತ್ತಾರೆ ಸುಶ್ಮಿತಾ.

LEAVE A REPLY

Connect with

Please enter your comment!
Please enter your name here