ಪ್ರಿಯದರ್ಶನ್ ನಿರ್ದೇಶನದ ಮಹತ್ವಾಕಾಂಕ್ಷೆಯ ಮಲಯಾಳಂ ಸಿನಿಮಾ ‘ಮರಕ್ಕರ್’ ಟ್ರೈಲರ್ ಅನ್ನು ಚಿತ್ರದ ಹೀರೋ ಮೋಹನ್‌ಲಾಲ್ ಇಂದು ಬಿಡುಗಡೆಗೊಳಿಸಿದ್ದಾರೆ. ದುಬಾರಿ ವೆಚ್ಚದ ಈ ಸಿನಿಮಾದ ಅಗಾಧತೆಯನ್ನು ಹೇಳುವ ಆಕರ್ಷಕ ದೃಶ್ಯಾವಳಿಗಳು ಟ್ರೈಲರ್‌ನಲ್ಲಿವೆ.
ನಟ ಮೋಹನ್‌ಲಾಲ್ ಇಂದು ತಮ್ಮ ‘ಮರಕ್ಕರ್ ಅರೇಬಿಕಡಲಿಂಟೆ ಸಿಂಹಂ’ ಮಲಯಾಳಂ ಚಿತ್ರದ ಟ್ರೈಲರ್ ಬಿಡುಗಡೆಗೊಳಿಸಿದ್ದಾರೆ. ಈ ಆಕ್ಷನ್ ಪ್ಯಾಕ್ಡ್ ಟ್ರೈಲರ್ ಚಿತ್ರದ ವೈಭವ, ಅಗಾಧತೆಯನ್ನು ಸಾರುತ್ತಿದೆ. ಚಿತ್ರದಲ್ಲಿ ಮೋಹನ್‌ಲಾಲ್ ಅವರು ‘ಕುಂಜಾಲಿ ಮರಕ್ಕರ್’ ಪಾತ್ರ ನಿರ್ವಹಿಸುತ್ತಿದ್ದಾರೆ. ಕೊಟ್ಟಕ್ಕಲ್ ಕೋಟೆಯನ್ನು ರಕ್ಷಿಸಲು ಪೋರ್ಚುಗೀಸರೊಂದಿಗೆ ಕಾದಾಡುವ ದೊರೆ ಆತ. ಕಾಸ್ಟ್ಯೂಮ್, ಯುದ್ಧ ಸಾಮಗ್ರಿಗಳು ಸೇರಿದಂತೆ ಪೀರಿಯಡ್ ಚಿತ್ರಣ ಕಟ್ಟಿಕೊಡುವಲ್ಲಿನ ನಿರ್ದೇಶಕ ಪ್ರಿಯದರ್ಶನ್ ಶ್ರಮ ಇಲ್ಲಿನ ಪ್ರತೀ ದೃಶ್ಯದಲ್ಲಿ ಎದ್ದು ಕಾಣುತ್ತದೆ. ನೂರು ಕೋಟಿ ದುಬಾರಿ ಬಜೆಟ್‌ನಲ್ಲಿ ಸಿನಿಮಾ ತಯಾರಾಗಿದೆ. ಇದು ಇಲ್ಲಿಯವರೆಗಿನ ದುಬಾರಿ ಬಜೆಟ್‌ನ ಮಲಯಾಳಂ ಸಿನಿಮಾ.
ಕೇರಳ ಚಿತ್ರಮಂದಿರ ಮಾಲೀಕರು ಹಾಗೂ ನಿರ್ಮಾಪಕ ಆಂಟೋನಿ ಪೆರಂಬವೂರ್ ಮಧ್ಯೆಯ ಮಾತುಕತೆಯಲ್ಲಿ ಗೊಂದಲ ಏರ್ಪಟ್ಟಿತ್ತು. ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಸನ್ನದ್ಧರಾಗಿದ್ದರು. ಸರ್ಕಾರದ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ತಿಳಿಯಾಗಿ ಕೊನೆಗೆ ಸಿನಿಮಾ ಥಿಯೇಟರ್‌ಗೆ ಬರುತ್ತಿದೆ. ಪ್ರಣವ್ ಮೋಹನ್‌ಲಾಲ್, ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಪ್ರಭು, ಮಂಜು ವಾರಿಯರ್, ಕೀರ್ತಿ ಸುರೇಶ್, ಸುಹಾಸಿನಿ ಚಿತ್ರದ ಪ್ರಮುಖ ತಾರೆಯರು. ಈ ಸಿನಿಮಾ ಅತ್ಯುತ್ತಮ ಪ್ರಾದೇಷಿಕ ಭಾಷಾ ಸಿನಿಮಾ, ಅತ್ಯುತ್ತಮ ಸ್ಪೆಷಲ್ ಎಫೆಕ್ಟ್, ಅತ್ಯುತ್ತಮ ವಸ್ತ್ರವಿನ್ಯಾಸಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದೆ. ಡಿಸೆಂಬರ್ 2ರಂದು ಸಿನಿಮಾ ತೆರೆಕಾಣುತ್ತಿದೆ. ಮೂಲ ಮಲಯಾಳಂ ಸೇರಿದಂತೆ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ.