ನಮ್ಮ ಸುಂದರವಾದ ಬದುಕು ಯಾರದೋ ತ್ಯಾಗದ ಫಲವಾಗಿರುತ್ತದೆ. ಅವರು ಯಾರೆಂದು ನಮಗೆ ಗೊತ್ತೂ ಇರುವುದಿಲ್ಲ. ಪಾಲಕ್ಕಾಡಿನಲ್ಲಿ ಜಿಲ್ಲಾಧಿಕಾರಿಯನ್ನು ಬಂಧಿಸಿದ ನಾಲ್ವರು ಆಮೇಲೇನಾದರು ಎಂಬುದಿದೆಯಲ್ಲಾ.. ಅಲ್ಲಿರುವುದು ನಿಜವಾದ ಸಿನಿಮಾ. ‘ಪಡ’ ಮಲಯಾಳಂ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ನಮ್ಮ ಸಮಾಜ ಎಷ್ಟೋ ಸ್ಥರಗಳಲ್ಲಿದೆ. ಇಲ್ಲಿ ವಿಭಿನ್ನ ಜನಜೀವನಗಳಿವೆ. ಇಲ್ಲಿ ಎಷ್ಟೋ ಸಲ ಯಾವುದೋ ಸ್ಥರದ ಜನರಿಗೆ ಆಗುವ ಮಹಾಮೋಸಗಳು ನಾಗರಿಕ ಸಮಾಜಕ್ಕೆ ಗೊತ್ತೂ ಆಗುವುದಿಲ್ಲ. ಗೊತ್ತಾದರೂ ಏನೂ ಮಾಡಲಾಗುವುದಿಲ್ಲ. ಆದರೆ ಈ ಗೊತ್ತಾಗುವಿಕೆಯಿಂದ ಕೆಲವೊಮ್ಮೆ ನಾಗರಿಕ ಸಮಾಜಕ್ಕೂ ಅನ್ಯಾಯಕ್ಕೆ ಕಾರಣರಾದವರಿಗೂ ಸ್ವಲ್ಪ ನಾಚಿಕೆಯಾದರೂ ಆಗಬಹುದು. ಕೆಲವೊಮ್ಮೆ ಸಮಸ್ಯೆಗೆ ಪರಿಹಾರ ಸಿಕ್ಕರೂ ಸಿಗಬಹುದು.

ಹಾಗೆ ಏಕಕಾಲಕ್ಕೆ ಸಿಟ್ಟು ತರಿಸುವ ಮತ್ತು ನಾಚಿಕೆಯುಂಟು ಮಾಡುವ ಸಿನಿಮಾ ‘ಪಡ’. 1996ರಲ್ಲಿ ನಡೆದ ಸತ್ಯ ಘಟನೆ ಆಧಾರಿತ ಸಿನಿಮಾ ಇದು. ಆದಿವಾಸಿ ಜನರ ಭೂಮಿಗೆ ಸಂಬಂಧಿಸಿದಂತೆ ಆದ ಕಾಯ್ದೆಯನ್ನು ಬದಲಿಸಬೇಕೆಂದು ಬಯಸಿದ ನಾಲ್ವರ ಗುಂಪು ಪಾಲಕ್ಕಾಡಿನ ಜಿಲ್ಲಾಧಿಕಾರಿಯನ್ನು ಅವರ ಕಛೇರಿಯಲ್ಲೇ ಬಂಧನದಲ್ಲಿಡುತ್ತದೆ. ಇವರ ಕೈಲಿ ಬಾಂಬ್ ಇದ್ದುದರಿಂದ ಹೆದರಿ, ಜಿಲ್ಲಾಧಿಕಾರಿಗಳ ಜೀವದ ದೃಷ್ಟಿಯಿಂದ ಅವರ ಬೇಡಿಕೆಗಳಿಗೆ ಸರ್ಕಾರ ಕಿವಿಗೊಡುತ್ತದೆ. ಸರ್ಕಾರದ ಮುಖ್ಯಾಧಿಕಾರಿ ಪಾತ್ರದಲ್ಲಿ ಇರುವ ಪ್ರಕಾಶ್ ರಾಜ್, ಜೋಜೋ ಜಾರ್ಜ್ ಒಳಗೊಂಡ ನಾಲ್ವರ ಬೇಡಿಕೆಗಳೇನೆಂದು ಕೇಳುತ್ತಾರೆ. ಆದರೆ ಹಾಗೆ ಕಾಯ್ದೆಯನ್ನು ಬದಲಿಸುವ ಅಧಿಕಾರ ಅಧಿಕಾರಿಗಳಿಗಿರುವುದಿಲ್ಲವೆಂದೂ ಅದಕ್ಕೆ ಮತ್ತೆ ಅಸ್ಸೆಂಬ್ಲಿ ನಡೆಯಬೇಕೆಂದು ಹೇಳುತ್ತಾರೆ. ಇವರು ಕೇಳುವುದಿಲ್ಲ.

ನ್ಯಾಯಾಧೀಶರನ್ನೂ, ಮಾಧ್ಯಮದವರನ್ನೂ, ಪೋಲೀಸರನ್ನೂ ಕರೆಸಿ ರಾತ್ರೋರಾತ್ರಿ ತೀರ್ಮಾನಕ್ಕೆ ಬರುತ್ತಾರೆ. ಆದರೆ ಸಮಸ್ಯೆ ಏನೂ ಪೂರ್ತಿ ಬಗೆ ಹರಿಯುವುದಿಲ್ಲ. ಬಹುಶಃ ಅವರಿಗಿನ್ನೂ ಭೂಮಿ ಸಿಕ್ಕಿಲ್ಲ. ಪಾಲಕ್ಕಾಡ್‌ನಲ್ಲಿ ಮಾತ್ರವಲ್ಲ ಇಂತಹ ಸಮಸ್ಯೆಗಳು ಬೇರೆ ಬೇರೆ ಪ್ರದೇಶಗಳಲ್ಲಿದ್ದವು ಆಗ. ಈಗಲೂ ಇವೆ. ಮತ್ತು ಎಲ್ಲ ಸಮಯದಲ್ಲೂ ಸರ್ಕಾರದ್ದೇ ತಪ್ಪೂ ಆಗಿರುವುದಿಲ್ಲ. ಆದರೆ ಗೌರವದಿಂದ ಬದುಕುವ ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುವ ವ್ಯವಸ್ಥೆಯನ್ನು ಯಾರೂ ಸಹಿಸಬಾರದು. ಅದು ಅಕ್ಷಮ್ಯ.

ನಮ್ಮ ಸುಂದರವಾದ ಬದುಕು ಯಾರದೋ ತ್ಯಾಗದ ಫಲವಾಗಿರುತ್ತದೆ. ಅವರು ಯಾರೆಂದು ನಮಗೆ ಗೊತ್ತೂ ಇರುವುದಿಲ್ಲ. ಪಾಲಕ್ಕಾಡಿನಲ್ಲಿ ಜಿಲ್ಲಾಧಿಕಾರಿಯನ್ನು ಬಂಧಿಸಿದ ನಾಲ್ವರು ಆಮೇಲೇನಾದರು ಎಂಬುದಿದೆಯಲ್ಲಾ.. ಅಲ್ಲಿರುವುದು ನಿಜವಾದ ಸಿನಿಮಾ. ಅಥವಾ ನಿಜವಾಗಿ ನಾಚಿಕೆಪಡಬೇಕಾದ ವಿಷಯ! ಎಲ್ಲರ ಹಾಗೆ ಮನೆ, ಮಕ್ಕಳು, ಸೈಟು, ಮದುವೆ ಅಂತ ಸ್ವಾರ್ಥದಿಂದಿರೋದು ಬಿಟ್ಟು ಯಾವುದೋ ಸಮುದಾಯಕ್ಕಾಗಿ ದುಡಿವ ಇಂಥವರು ಮನುಷ್ಯತ್ವದ ಮೇಲೆ ನಂಬಿಕೆ ಹುಟ್ಟಿಸುವಂತವರು. ಅಂಥವರ ಇರುವಿಕೆಯನ್ನು ಸಿನಿಮಾ ಮಾಡಿ ಪರಿಚಯಿಸುವ ‘ಪಡ’ದ ನಿರ್ದೇಶಕ ಕಲಮಲ್ಗೆ ಧನ್ಯವಾದ ಹೇಳಲೇಬೇಕು. ಮತ್ತು ಈ ಸಿನಿಮಾ 25 ವರ್ಷದ ನಂತರವೂ ಪ್ರಸ್ತುತ ಅನಿಸುವುದಕ್ಕೆ ನಾವು ನಾಚಿಕೆಯನ್ನೂ ಪಡಬೇಕು.

ತಮಿಳಿನ ‘ಅರುವಿ’, ಕನ್ನಡದ ‘ಆಕ್ಟ್ 1978’, ‘ಪಡ’ ಎಲ್ಲವೂ ಒಂದೇ ಮಾದರಿಯ ಸಿನಿಮಾಗಳು. ನ್ಯಾಯಯುತ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಆಡಳಿತದ ಮೇಲೆ ಒತ್ತಡ ತರುವ ಹಲವು ವಿಧಾನಗಳಿವು. ಜನರು ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಹೀಗೆ ಕಟ್ಟಿಹಾಕಲಿ ಅನಿಸುತ್ತದೆ. ಆದರೆ ಈ ಮಾದರಿ ದುರುಪಯೋಗವಾಗಬಾರದಷ್ಟೆ. ಸಿನಿಮಾದ ಕಡೆಯಲ್ಲಿ ನಿಜಜೀವನದ ವ್ಯಕ್ತಿಗಳನ್ನು ತೋರಿಸಿದಾಗ ಜೀವಹಿಂಡಿದಂತಾಗುತ್ತದೆ. ಉದ್ದೇಶಕ್ಕಾಗಿ ಬದುಕಿದ ಅವರಿಗೆಲ್ಲ ದೊಡ್ಡ ನಮಸ್ಕಾರ. ‘ಪಡ’ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here