ನವೀನ್ ರೆಡ್ಡಿ ನಿರ್ದೇಶನದಲ್ಲಿ ಸಂಪತ್ ಮೈತ್ರೇಯ ಮತ್ತು ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಮೂರನೇ ಕೃಷ್ಣಪ್ಪ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಕೋಲಾರ ಭಾಗದ ಭಾಷೆಯ ಜೊತೆಗೆ ಹಳ್ಳಿ ಸೊಗಡಿನ ಚಿತ್ರಣದೊಂದಿಗೆ ಟ್ರೇಲರ್ ಗಮನ ಸೆಳೆಯುತ್ತದೆ.
ವಿಶಿಷ್ಟ ಶೀರ್ಷಿಕೆಯಿಂದಲೇ ಗಮನ ಸೆಳೆದಿದ್ದ ‘ಮೂರನೇ ಕೃಷ್ಣಪ್ಪ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸರಳ ಕತೆ, ಕೋಲಾರ ಭಾಷೆ, ಗ್ರಾಮೀಣ ಸೊಗಡಿನಿಂದಾಗಿ ಟ್ರೇಲರ್ ಆಪ್ತವಾಗುತ್ತದೆ. ನಿರ್ದೇಶಕ ನವೀನ್ ರೆಡ್ಡಿ ಟ್ರೇಲರ್‌ನಲ್ಲೇ ಒಂದು ಚಿಕ್ಕ ಕತೆ ಹೇಳುವ ಸೃಜನಶೀಲತೆ ಮೆರೆದಿದ್ದಾರೆ. ನಟ ಲೂಸ್ ಮಾದ ಯೋಗಿ ಹಿನ್ನೆಲೆ ದನಿಯಲ್ಲಿ ಟ್ರೇಲರ್ ಶುರುವಾಗುತ್ತದೆ. ಇತ್ತೀಚೆಗೆ ಪೋಷಕ ಕಲಾವಿದರ ಪಾತ್ರಗಳ ಮೂಲಕ ಕತೆ ಹೇಳುವ ಪ್ರಯೋಗಗಳ ಪಟ್ಟಿಗೆ ಈ ಚಿತ್ರವೂ ಸೇರ್ಪಡೆಯಾಗುವ ಸೂಚನೆ ಸಿಗುತ್ತದೆ.
ರೆಡ್ ಡ್ರ್ಯಾಗನ್ ಫಿಲಂಸ್ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ‘ಮೂರನೇ ಕೃಷ್ಣಪ್ಪ’ ಸಿನಿಮಾಗೆ ಮೋಹನ್ ರೆಡ್ಡಿ ಜಿ ಮತ್ತು ರವಿಶಂಕರ್ ಹಣ ಹೂಡಿದ್ದಾರೆ. ಆನೇಕಲ್ ಭಾಗದ ಭಾಷೆಯ ಸೊಬಗಿನೊಂದಿಗೆ ಕಥೆ ಹೆಣೆಯಲಾಗಿದೆ. ಸಂಪತ್ ಮೈತ್ರೀಯಾ ನಾಯಕನಾಗಿ ನಟಿಸಿದ್ದು, ಪ್ರಮುಖ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ. ಶ್ರೀಪ್ರಿಯಾ ನಾಯಕಿ. ತುಕಾಲಿ ಸಂತೋಷ್, ಉಗ್ರಂ ಮಂಜು ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾಗೆ ಆನಂದ್ ರಾಜವಿಕ್ರಮ್ ಸಂಗೀತ ನೀಡಿದ್ದು, ಶ್ರೀಕಾಂತ್ ಸಂಕಲವಿದೆ. ಯೋಗಿ ಛಾಯಾಗ್ರಹಣ ಮಾಡಿದ್ದಾರೆ. ಇದೇ ಮೇ 24ಕ್ಕೆ ಸಿನಿಮಾ ತೆರೆಕಾಣಲಿದೆ.